ಲೋಕಾಯಕ್ತಕ್ಕೆ ಅಖೈರಾದ ನ್ಯಾ. ವಿಶ್ವನಾಥ ಶೆಟ್ಟಿ ಹೆಸರು- ಆರೋಪದ್ದೂ ಕೆಸರು, ಬೆಳೆನಷ್ಟ ಪರಿಹಾರದ ರೂಪುರೇಷೆ, ಆನ್ಲೈನ್ ಬಿಪಿಎಲ್-ಎಪಿಎಲ್ ಯೋಜನೆ ಪ್ರಾರಂಭ

ಹಾಲಿವುಡ್ ಸಿನಿಮಾ ಹಾಗೂ ಅಮೆರಿಕದ ಟಿವಿ ಕಾರ್ಯಕ್ರಮಗಳಿಗೆ ವಾರ್ಷಿಕ ಸನ್ಮಾನದ ಕಾರ್ಯಕ್ರಮವಾದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ನಟಿ ಪ್ರಿಯಾಂಕಾ ಚೋಪ್ರ

ಡಿಜಿಟಲ್ ಕನ್ನಡ ಟೀಮ್:

ಲೋಕಾಯುಕ್ತ ಮುಖ್ಯಸ್ಥರಾಗಿ ನಿ. ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರನ್ನು ನೇಮಕ ಮಾಡುವ ನಿರ್ಧಾರ ಸರ್ಕಾರದ ಮಟ್ಟದಲ್ಲಿ ಹೆಚ್ಚು ಕಡಿಮೆ ನಿರ್ಧಾರವಾಗಿದ್ದು, ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ. ಇದರ ಬೆನ್ನಲ್ಲೇ ಆರೋಪಗಳೂ ರಂಗೇರಿದ್ದು, ಸಮಾಜ ಪರಿವರ್ತನಾ ಸಂಘಟನೆಯ ಹಿರೇಮಠ ಅವರು ಆರೋಪಿಸಿರುವ ಪ್ರಕಾರ ನ್ಯಾ. ವಿಶ್ವನಾಥ ಶೆಟ್ಟಿ ಬೆಂಗಳೂರಿನಲ್ಲಿ ಮನೆ ಹೊಂದಿದ್ದರೂ ನ್ಯಾಯಾಂಗ ನೌಕರ ಸಂಘದ ಬಡಾವಣೆಯಲ್ಲಿ ಸುಳ್ಳು ಮಾಹಿತಿ ಮೂಲಕ ನಿವೇಶನ ಹೊಂದಿದ್ದಾರೆ. ಹೀಗಾಗಿ ಇವರು ಲೋಕಾಯುಕ್ತ ಸ್ಥಾನಕ್ಕೆ ಅರ್ಹರಲ್ಲ ಎಂಬುದು ಇವರ ವಾದ.

ಇದೇನೇ ಇದ್ದರೂ ಹೈಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅಧ್ಯಕ್ಷತೆಯಲ್ಲಿ ನಡೆದ ಲೋಕಾಯುಕ್ತ ಆಯ್ಕೆ ಸಮಿತಿ ಸಭೆಯಲ್ಲಿ ವಿಶ್ವನಾಥ್ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಹಲವು ಕಾಲದಿಂದ ನೆನೆಗುದಿಗೆ ಬಿದ್ದ ಲೋಕಾಯುಕ್ತರ ನೇಮಕಾತಿ ಸಂಬಂಧ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ,ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಹೆಸರು ಎಲ್ಲರಿಂದಲೂ ಪ್ರಸ್ತಾಪವಾಗಿದೆ ಎಂದು ಮೂಲಗಳು ಹೇಳಿವೆ.

ಸಭೆ ಆರಂಭವಾಗುತ್ತಿದ್ದಂತೆ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ್ ಅವರು ಶೆಟ್ಟಿ ಅವರ ಹೆಸರನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಮುಖ್ಯಮಂತ್ರಿಯವರು ಅವರ ನೇಮಕಾತಿಗೆ ಸರ್ಕಾರದ ಒಪ್ಪಿಗೆ ನೀಡಿದರು.

ಮುಖ್ಯಮಂತ್ರಿಯವರು, ವಿಶ್ವನಾಥ್ ಶೆಟ್ಟಿ ಅವರ ಹೆಸರಿಗೆ ಅನುಮೋದನೆ ನೀಡುತ್ತಿದ್ದಂತೆ ಉಳಿದ ಸದಸ್ಯರಾದ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಹಾಗೂ ಕೆ.ಎಸ್.ಈಶ್ವರಪ್ಪ ಕೂಡಾ ಸಮ್ಮತಿಸಿದರು.

ಲೋಕಾಯುಕ್ತಕ್ಕೆ ಈ ಹಿಂದೆ ನಡೆದ ಸಭೆಗಳಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗದ ಕಾರಣ ಕಳೆದ ಎರಡು ವರ್ಷದಿಂದ ಲೋಕಾಯುಕ್ತ ಹುದ್ದೆ ಖಾಲಿ ಉಳಿದಿತ್ತು.

ಶೆಟ್ಟಿ ಅವರು ರಾಜ್ಯ ಹೈ ಕೋರ್ಟ್‍ನಲ್ಲಿ ನಿರಂತರವಾಗಿ 10 ವರ್ಷಗಳ ಕಾಲ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ,ನೂತನ ಲೋಕಾಯುಕ್ತ ಹುದ್ದೆಗೆ ಮೂವರು ನ್ಯಾಯಮೂರ್ತಿಗಳ ಹೆಸರು ಪ್ರಸ್ತಾಪವಾಗಿದ್ದು ಈ ಪೈಕಿ ಒಬ್ಬರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಲಾಗುವುದು ಎಂದು ವಿವರಿಸಿದರು.

ಲೋಕಾಯುಕ್ತ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ, ಎನ್.ಕೆ. ಪಾಟೀಲ್ ಮತ್ತು ಬೈರಾರೆಡ್ಡಿ ಅವರ ಹೆಸರುಗಳು ಇಂದಿನ ಸಭೆಯಲ್ಲಿ ಪ್ರಸ್ತಾಪವಾಗಿವೆ ಎಂದು ಅವರು ಸ್ಪಷ್ಟ ಪಡಿಸಿದರು.

ವಿಶ್ವನಾಥ ಶೆಟ್ಟಿ, ಎನ್.ಕೆ.ಪಾಟೀಲ್ ಹಾಗೂ ಆನಂದಭೈರಾರೆಡ್ಡಿ  ಹೀಗೆ ಮೂರು ಹೆಸರುಗಳಿಗೂ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳು ಒಪ್ಪಿದ್ದಾರೆ ಎಂದರು. ಈ ಮೂರು ಹೆಸರುಗಳ ಪೈಕಿ ಒಂದು ಹೆಸರನ್ನು ನೂತನ ಲೋಕಾಯುಕ್ತರ ಹುದ್ದೆಗೆ ಶಿಫಾರಸು ಮಾಡಿ ರಾಜ್ಯಪಾಲರಿಗೆ ರವಾನಿಸಲಾಗುವುದು ಎಂದು ಅವರು ಹೇಳಿದರು.

ಉಳಿದಂತೆ ತಿಳಿಯಬೇಕಾದ ಸುದ್ದಿಗಳು

  •  ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ನೀರಿಲ್ಲದೆ ಬೆಳೆ ಕಳೆದುಕೊಂಡ ರೈತರಿಗೆ ಬೆಳೆ ಪರಿಹಾರವಿಲ್ಲ ಎಂದು ಸ್ಪಷ್ಟಪಡಿಸಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಮಳೆಯಿಲ್ಲದೆ ಬೆಳೆ ಕಳೆದುಕೊಂಡ ಒಣಭೂಮಿ ರೈತರಿಗೆ ಹೆಕ್ಟೇರ್‍ಗೆ 6350 ರೂ. ಪರಿಹಾರ ನೀಡುವುದಾಗಿ ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳೆ ಕಳೆದುಕೊಂಡ ರೈತರಿಗೆ ಈ ಪ್ರಮಾಣದಲ್ಲಿ ಪರಿಹಾರೂ ನೀಡಿದರೂ, ಮೂರು ಸಾವಿರ ಕೋಟಿ ರೂ. ಅಗತ್ಯವಿದೆ. ಆದರೆ ಕೇಂದ್ರ ಸರ್ಕಾರ ಬೆಳೆ ಪರಿಹಾರಕ್ಕಾಗಿ 1782.44 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದು, ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಳೆ ನಡೆಯುವ ಸಚಿವ ಸಂಪುಟದ ಉಪಸಮಿತಿ ಹಾಗೂ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚೆ ಮಾಡಿ, 1300 ಕೋಟಿ ರೂ.ಗಳನ್ನು ಒದಗಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.  ನೀರಾವರಿ ಪ್ರದೇಶದಲ್ಲಿ ಬೆಳೆ ಹಾನಿಯಾಗಿಲ್ಲ. ಕೆಲವು ಪ್ರದೇಶಗಳಲ್ಲಷ್ಟೇ ನೀರಿಲ್ಲದೆ, ಬೆಳೆ ಒಣಗಿದೆ. ಈ ಬಗ್ಗೆ ಸರ್ಕಾರಕ್ಕೆ ಇನ್ನು ಯಾವುದೇ ವರದಿ ಬಂದಿಲ್ಲ ಎಂದರು.

ರಾಜ್ಯಾದ್ಯಂತ ಇರುವ ಸೊಪ್ಪಿನ ಬೆಟ್ಟಗಳನ್ನು ಡೀಮ್ಡ್ ಅರಣ್ಯ ಭೂಮಿಯ ವ್ಯಾಪ್ತಿಯಿಂದ ಕೈ ಬಿಡುವ ಸಂಬಂಧ ಅಗತ್ಯ ಕಾನೂನು ಮಾಡಲಾಗುವುದು ಎಂದ ಅವರು,ಇದೇ ರೀತಿ ಬಾಕಿ ಉಳಿದಿರುವ ನಾಲ್ಕು ಲಕ್ಷ ಬಗರ್‍ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಮಾರ್ಚ್ ಅಂತ್ಯದೊಳಗಾಗಿ ಬಗೆಹರಿಸುವುದಾಗಿ ವಿವರಿಸಿದರು.

  • ಆನ್‍ಲೈನ್ ಮೂಲಕ ಎಪಿಎಲ್ ಕಾರ್ಡು ಪಡೆಯುವ ನೂತನ ಯೋಜನೆಗೆ ರಾಜ್ಯ ಸರ್ಕಾರ ಇಂದಿಲ್ಲಿ ಚಾಲನೆ ನೀಡಿದ್ದು, ಪಡಿತರ ಚೀಟಿ ಅಂಗಡಿಗಳಲ್ಲೇ ಬಿಪಿಎಲ್ ಕಾರ್ಡುಗಳ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ವಿವರ ನೀಡುತ್ತ ರಾಷ್ಟ್ರದಲ್ಲೇ ಮೊದಲ ಬಾರಿಗೆ ಮನೆಯಲ್ಲೇ ಕುಳಿತು ಆನ್‍ಲೈನ್ ಮೂಲಕ ಆಧಾರ್ ಸಂಖ್ಯೆ ನಮೂದಿಸಿ, ಎಪಿಎಲ್ ಕಾರ್ಡು ಪಡೆಯುವ ಯೋಜನೆ ಜಾರಿಗೆ ಬಂದಿದೆ. ಮುಂದಿನ 15 ದಿನಗಳಲ್ಲಿ ಬಿಪಿಎಲ್ ಕಾರ್ಡು ಕೂಡಾ ಆನ್‍ಲೈನ್ ಮೂಲಕವೇ ಪಡಿತರ ಚೀಟಿ ವಿತರಿಸುವ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.

ಎಪಿಎಲ್ ಕಾರ್ಡುದಾರರು ಅರ್ಜಿ ತುಂಬಿದ ತಕ್ಷಣವೇ ತಾತ್ಕಾಲಿಕ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದು. ನಂತರ 15 ದಿನಗಳಲ್ಲಿ ಅವರ ಮನೆಯ ಬಾಗಿಲಿಗೆ ಅಸಲಿ ಪಡಿತರ ಚೀಟಿ ಅಂಚೆ ಮೂಲಕ ರವಾನೆಯಾಗಲಿದೆ. ಬಿಪಿಎಲ್ ಕಾರ್ಡುಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಿ, ಪಡೆಯಬಹುದು. 20 ರೂ ಶುಲ್ಕ ನೀಡಿ, ಬಿಪಿಎಲ್ ಕಾರ್ಡುಗೆ ಅರ್ಜಿ ಸಲ್ಲಿಸಿದರೆ 15 ದಿನಗಳಲ್ಲಿ ಕಾರ್ಡು ದೊರೆಯಲಿದೆ ಎಂದು ತಿಳಿಸಿದ್ದಾರೆ.

Leave a Reply