ನೋಟು ಅಮಾನ್ಯದಿಂದ ಅರ್ಥವ್ಯವಸ್ಥೆ ಕುಸಿದಿಲ್ಲವೆಂಬುದಕ್ಕೆ ಭರಪೂರ ತೆರಿಗೆ ಸಂಗ್ರಹವೇ ಸಾಕ್ಷಿ ಎಂದ ವಿತ್ತ ಸಚಿವ ಜೇಟ್ಲಿ

 

ಡಿಜಿಟಲ್ ಕನ್ನಡ ಟೀಮ್:

ಈ ವರ್ಷ ನೇರ ಹಾಗೂ ಪರೋಕ್ಷ ತೆರಿಗೆಗಳೆರಡೂ ಅಪಾರವಾಗಿ ಸಂಗ್ರಹವಾಗಿವೆ. ಅಂದಮೇಲೆ ನೋಟು ಅಮಾನ್ಯ ನಕಾರಾತ್ಮಕ ಪರಿಣಾಮ ಬೀರಿದೆ, ಅರ್ಥವ್ಯವಸ್ಥೆ ನಿಧಾನಗತಿಗೆ ಬಿದ್ದಿದೆ ಎಂಬ ಆರೋಪಗಳಿಗೆ ಅರ್ಥವೇನಿದೆ? – ಇದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸಮರ್ಥನೆ.

2016ರ ಏಪ್ರಿಲ್- ಡಿಸೆಂಬರ್ ಅವಧಿಗೆ ಸಂಗ್ರಹವಾಗಿರುವ ನೇರ ತೆರಿಗೆ ಪ್ರಮಾಣ 5.53 ಲಕ್ಷ ಕೋಟಿ ರುಪಾಯಿಗಳು. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 12.01 ಹೆಚ್ಚಳ. ಇನ್ನು ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಶೇ. 25ರ ಏರಿಕೆ ಆಗಿದ್ದು, 6.30 ಲಕ್ಷ ಕೋಟಿ ರುಪಾಯಿಗಳು ಪಾವತಿಯಾಗಿವೆ.

ಹೀಗೆ ದೊಡ್ಡ ಚಿತ್ರವನ್ನು ಒದಗಿಸಿರುವ ಜೇಟ್ಲಿ, ನೋಟು ಅಮಾನ್ಯದಿಂದಲೂ ವ್ಯತಿರಿಕ್ತ ಪರಿಣಾಮ ಆಗಿಲ್ಲ ಎಂದು ಹೇಳುವುದಕ್ಕೆ ಡಿಸೆಂಬರಿನ ಅಂಕಿಅಂಶವನ್ನೂ ತೋರಿಸಿದ್ದಾರೆ.

ಹಿಂದಿನ ಡಿಸೆಂಬರಿಗೆ ಹೋಲಿಸಿದರೆ ಪರೋಕ್ಷ ತೆರಿಗೆ ಸಂಗ್ರಹ ಪ್ರಮಾಣ ಈ ಡಿಸೆಂಬರಿನಲ್ಲಿ ಶೇ. 14.2 ಏರಿದೆ. ಉತ್ಪಾದನಾ ವಲಯದೊಂದಿಗೆ ತಳಕು ಹಾಕಿಕೊಂಡಿರುವ ಅಬಕಾರಿ ತೆರಿಗೆಯು ನೋಟು ಅಮಾನ್ಯ ಪರ್ವದ ಡಿಸೆಂಬರಿನಲ್ಲೇ ಶೇ. 31.6ರಷ್ಟು ಹೆಚ್ಚಿದೆ. ಇದೇ ತಿಂಗಳಲ್ಲಿ ಸೇವಾ ತೆರಿಗೆಯಲ್ಲಿ ಆಗಿರುವ ಹೆಚ್ಚಳ ಶೇ. 12.4. ಚಿನ್ನದ ಆಮದು ಇಳಿದಿದ್ದರಿಂದ ಕಸ್ಟಮ್ ಸುಂಕ ಮಾತ್ರ ಶೇ. 6.3ರಷ್ಟು ಇಳಿಕೆ ಕಂಡಿರುವುದಾಗಿ ಜೇಟ್ಲಿ ವಿವರಿಸಿದ್ದಾರೆ.

ಈ ವರ್ಷದ ನವೆಂಬರಿನೊಂದಿಗೆ ತುಲನೆ ಮಾಡಿದಾಗ, ನೋಟು ರದ್ದು ಘೋಷಿಸಿದ ನಂತರವೇ ಡಿಸೆಂಬರಿನಲ್ಲಿ ಪರೋಕ್ಷ ತೆರಿಗೆ ಸಂಗ್ರಹ ಶೇ. 12.8ರಷ್ಟು ಹೆಚ್ಚಿದೆ ಎಂದಿರುವ ಜೇಟ್ಲಿ, ಈ ಅವಧಿಯಲ್ಲಿ ಹೆಚ್ಚಿನ ರಾಜ್ಯಗಳಲ್ಲಿ ವ್ಯಾಟ್ ಸಹ ಚೆನ್ನಾಗಿ ಪಾವತಿಯಾಗಿದ್ದು ನೋಟು ಅಮಾನ್ಯದ ಪ್ರತಿಕೂಲ ಪರಿಣಾಮ ಆಗಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.

ಇನ್ನೊಂದೆಡೆ, ಜನವರಿ 20ರ ಗಡುವಿನ ಒಳಗೆ ನೋಟು ಅಮಾನ್ಯದ ಬಗ್ಗೆ ಸಂಸದೀಯ ಸಮಿತಿ ಎತ್ತಿರುವ ನಿರ್ದಿಷ್ಟ ಪ್ರಶ್ನೆಗಳಿಗೆ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಹಾಗೂ ಆರ್ಥಿಕ ಸಚಿವಾಲಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಸಲ್ಲಿಸುವ ಉತ್ತರ ತೃಪ್ತಿಯಾಗದಿದ್ದರೆ, ಪಬ್ಲಿಕ್ ಎಕೌಂಟ್ ಕಮಿಟಿಯು ಪ್ರಧಾನಿ ಮೋದಿಯವರನ್ನೂ ಪ್ರಶ್ನೆಗಾಗಿ ಕರೆಯಲಿದೆ ಎಂದು ಸಮಿತಿ ಅಧ್ಯಕ್ಷ, ಕಾಂಗ್ರೆಸ್ಸಿಗ ಕೆ. ವಿ. ಥಾಮಸ್ ಹೇಳಿದ್ದಾರೆ.

Leave a Reply