ನೋಟು ಅಮಾನ್ಯ ಪರ್ವದ ಬ್ಯಾಂಕ್ ಡಾಟಾ ಹರವಿಕೊಂಡು ನಡೆಯುತ್ತಿದೆ ಕಾಳಧನದ ಪತ್ತೇದಾರಿಕೆ!

ಡಿಜಿಟಲ್ ಕನ್ನಡ ಟೀಮ್:

₹500, ₹1000ಗಳ ಹಳೆನೋಟುಗಳು ತಿರುಗಿ ಬ್ಯಾಂಕಿಗೆ ಬಂದಿದ್ದಾದರೂ ಯಾವ ಪ್ರಮಾಣದಲ್ಲಿ ಎಂಬುದಕ್ಕೆ ಖಚಿತ ಉತ್ತರಗಳು ಸಿಗುತ್ತಿಲ್ಲ. ಶೇ. 97ರಷ್ಟು ಮೌಲ್ಯದ ಕರೆನ್ಸಿ ಹಿಂದೆ ಬಂದುಬಿಟ್ಟಿದೆಯಾದ್ದರಿಂದ ಕಪ್ಪುಹಣ ಹೋಗಿದ್ದೆಲ್ಲಿಗೆ ಎಂಬ ಪ್ರಶ್ನೆ ಪ್ರಸ್ತುತವಾಗುತ್ತದೆ ಎಂದರು ನೋಟು ಅಮಾನ್ಯ ನೀತಿಯ ವಿರೋಧಿಗಳು.

ಇದಕ್ಕೆ ಪ್ರತಿಕ್ರಿಯೆಯಾಗಿ, ಬ್ಯಾಂಕಿಗೆ ಹಣ ತುಂಬಿದ್ದಾರೆಂದ ಮಾತ್ರಕ್ಕೆ ಅದು ಬಿಳಿಯಾಗಿಬಿಡುವುದಿಲ್ಲ ಎಂಬ ಮಾತು ವಿತ್ತ ಸಚಿವರ ಬಾಯಲ್ಲಿ ಬಂತು. ವಾಸ್ತವದಲ್ಲಿ ಎಷ್ಟು ಕರೆನ್ಸಿ ಹಿಂದಕ್ಕೆ ಬಂದಿದೆ ಎಂಬ ಲೆಕ್ಕ ಇನ್ನೂ ಆಗಿಲ್ಲ ಅಂತು ಆರ್ಬಿಐ.

ಇವತ್ತಿಗೆ ದೊರಕುತ್ತಿರುವ ಚಿತ್ರಣದ ಪ್ರಕಾರ ಆರ್ಬಿಐ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿ ಮತ್ತೊಂದು ಚರ್ಚೆ ಹುಟ್ಟುಹಾಕಲು ಮನಸ್ಸು ಹೊಂದಿಲ್ಲ. ಬದಲಿಗೆ ಈಗಾಗಲೇ ಜಮೆಯಾಗಿರುವ ಹಣದಲ್ಲಿ ತೆರಿಗೆವಂಚಿತ ಹಣದ ಮೂಲ ಪತ್ತೆಗೆ ಆದಾಯ ತೆರಿಗೆ ಅಧಿಕಾರಿಗಳನ್ನು ಕೆಲಸಕ್ಕೆ ಹಚ್ಚಿಸುವುದರಲ್ಲಿ ಸರ್ಕಾರ ಮಗ್ನವಾಗಿದೆ.

50 ದಿನಗಳ ನೋಟು ಅಮಾನ್ಯ ಪರ್ವದಲ್ಲಿ 3-4 ಲಕ್ಷ ಕೋಟಿಗಳಷ್ಟು ತೆರಿಗೆ ವಂಚಿತ ಹಣ ಬ್ಯಾಂಕುಗಳಿಗೆ ಬಂದಿರಬಹುದೆಂಬುದನ್ನು ಮಾಹಿತಿ ವಿಶ್ಲೇಷಣೆಗಳಿಂದ ಕಂಡುಕೊಂಡಿದ್ದೇವೆ ಎಂದು ಹಿರಿಯ ತೆರಿಗೆ ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಯಥಾಪ್ರಕಾರ ಇದು ಮೂಲಗಳನ್ನು ಉಲ್ಲೇಖಿಸಿದ ವರದಿ. ಕೇಂದ್ರ ಸರ್ಕಾರದ ಮೇಲಿರುವ ಒತ್ತಡವಂತೂ ತುಂಬ ಸ್ಪಷ್ಟ. ಕನಿಷ್ಠ 3 ಲಕ್ಷ ಕೋಟಿ ರುಪಾಯಿಗಳಷ್ಟಾದರೂ ಕಪ್ಪುಹಣ ಸಾಬೀತಾಗದಿದ್ದರೆ ಇಡೀ ನೋಟು ಅಮಾನ್ಯ ಪ್ರಕ್ರಿಯೆಯ ವೆಚ್ಚದ ಮಾದರಿಯ ಕುರಿತೇ ಪ್ರಶ್ನೆಗಳೆದ್ದು ಬಿಡುತ್ತವೆ. ಅಲ್ಲದೇ ನೋಟು ಅಮಾನ್ಯಕ್ಕೆ ಮೋದಿ ಭಾಷಣದಲ್ಲಿ ಮೊದಲ ಸಾಲಿನಲ್ಲಿ ನೀಡಿದ ಕಾರಣವೇ ಕಾಳಧನದ ನಿಗ್ರಹ ಎಂಬುದಾಗಿತ್ತು. ಇದೀಗ 500 ಮತ್ತು 1000 ಹಳೆ ಕರೆನ್ಸಿಗಳಲ್ಲಿ ಇದೆಯೆನ್ನಲಾಗಿದ್ದ ಸುಮಾರು 15 ಲಕ್ಷ ಕೋಟಿ ರುಪಾಯಿಗಳಲ್ಲಿ ಬಹುತೇಕ ಬ್ಯಾಂಕುಗಳಿಗೆ ಮರಳಿದೆ, ಇದಿಲ್ಲಿಗೇ ಮುಕ್ತಾಯ ಎಂತಾದರೆ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿದಂತಾಗುತ್ತದೆ.

ಹಾಗೆಂದೇ ಆದಾಯ ತೆರಿಗೆ ಇಲಾಖೆಯ ಮೂಲಗಳಿಂದ ಮಂಗಳವಾರ ಒಂದಿಷ್ಟು ಅಂಶಗಳು ಹೊರಬಂದು, ಈ ಸರ್ಕಾರ ಕಪ್ಪುಕುಳಗಳನ್ನು ಬಿಡುವುದಿಲ್ಲ ಎಂಬ ಸಂದೇಶ ರವಾನಿಸುವುದಕ್ಕೆ ಶ್ರಮ ತೆಗೆದುಕೊಳ್ಳಲಾಗಿದೆ.

ಈ ಪ್ರಕಾರವಾಗಿ ₹3 ಲಕ್ಷ ಕೋಟಿಯವರೆಗೆ ಕಪ್ಪುಹಣವಿದ್ದಿರಬಹುದು ಎಂಬ ಅನುಮಾನಕ್ಕೆ ಈ ಕಾರಣಗಳನ್ನು ನೀಡಲಾಗುತ್ತಿದೆ.

  • ನೋಟು ಅಮಾನ್ಯದ ನಂತರ ಸುಮಾರು 60 ಲಕ್ಷ ಬ್ಯಾಂಕ್ ಖಾತೆಗಳಲ್ಲಿ ಏಕಾಏಕಿ ₹2 ಲಕ್ಷಕ್ಕಿಂತ ಹೆಚ್ಚು ಜಮೆಯಾಗಿದೆ. ಇದರ ಮೊತ್ತ 7.34 ಲಕ್ಷ ಕೋಟಿ ರುಪಾಯಿಗಳು.
  • ನವೆಂಬರ್ 9ರ ನಂತರ ಈಶಾನ್ಯ ರಾಜ್ಯಗಳಲ್ಲಿ ಕೆಲವು ಬ್ಯಾಂಕ್ ಖಾತೆಗಳಿಗೆ ಬಂದು ಜಮೆಯಾಗಿರುವ ಒಟ್ಟಾರೆ ₹10,700 ಕೋಟಿಗಳ ಮೂಲವನ್ನು ಆದಾಯ ತೆರಿಗೆ ಇಲಾಖೆ ಪರಿಶೀಲನೆ ಮಾಡುತ್ತಿದೆ.
  • ಸಹಕಾರಿ ಬ್ಯಾಂಕುಗಳ ವಿವಿಧ ಶಾಖೆಗಳಲ್ಲಿ ಸಂಗ್ರಹವಾಗಿರುವ ₹16,000 ಕೋಟಿ ಠೇವಣಿಯ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳು ತನಿಖೆ ನಡೆಸುತ್ತಿವೆ.
  • ನೋಟು ಅಮಾನ್ಯದ ನಂತರ ₹80000 ಕೋಟಿ ಮೊತ್ತದ ಸಾಲ ತೀರಿಕೆಯಾಗಿದೆ. ಇಷ್ಟು ಮೊತ್ತ ನಗದಿನಲ್ಲೇ, ಹಳೆ ನೋಟುಗಳಲ್ಲೇ ತೀರಿಕೆ ಆಗಿರುವುದರ ಬಗ್ಗೆಯೂ ಸಂಶಯದ ವಿಶ್ಲೇಷಣೆಗಳಾಗುತ್ತಿವೆ.
  • ಡಾರ್ಮಂಟ್ ಬ್ಯಾಂಕ್ ಖಾತೆಗಳಲ್ಲಿ ಜಮೆಯಾಗಿರುವ ₹25000 ಕೋಟಿ ನಗದು.
  • 2-2.5 ಲಕ್ಷ ರುಪಾಯಿಗಳವರೆಗಿನ ಜಮಾದಲ್ಲಿ ₹42000 ಕೋಟಿಯಷ್ಟು ಮೊತ್ತ ಒಂದೇ ಪಾನ್ ನಂಬರ್, ವಿಳಾಸಗಳಿಗೆ ತಾಳೆಯಾಗುತ್ತಿದ್ದು, ಬ್ಯಾಂಕುಗಳಿಂದ ದೊರೆತಿರುವ ವಿವರವನ್ನು ಆದಾಯ ತೆರಿಗೆ ಡಾಟಾಬೇಸ್ ಜತೆ ಪರಿಶೀಲಿಸಲಾಗುತ್ತಿದೆ.
  • ಜನಧನ ಯೋಜನೆಯಲ್ಲಿ ಒಂದು ಲಕ್ಷ ರುಪಾಯಿಗಳಿಗಿಂತ ಹೆಚ್ಚು ಜಮೆಯಾಗಿರುವ ಖಾತೆಗಳ ಪೈಕಿ ಇಂಟೆಲಿಜೆನ್ಸ್ ವರದಿ ಆಧಾರದಲ್ಲಿ ಕೆಲವನ್ನು ಪರಿಶೀಲಿಸಲಾಗುತ್ತದೆ.

ಹೀಗೆ 50 ದಿನಗಳ ನೋಟು ಅಮಾನ್ಯ ಪರ್ವದ ಬ್ಯಾಂಕ್ ಡಾಟಾಗಳನ್ನಿಟ್ಟುಕೊಂಡು ವಿಶ್ಲೇಷಣೆ- ಪತ್ತೇದಾರಿ ಕೆಲಸಗಳು ಶುರುವಾಗಿವೆ. ಇಲ್ಲಾದರೂ ಕಾಳಧನ ಸಿಕ್ಕೀತಾ ಎಂಬುದೊಂದು ಕಾತರದ ಪ್ರಶ್ನೆ.

Leave a Reply