ಗಡಿಯಲ್ಲಿ ಆಹಾರವಿಲ್ಲದ ಯೋಧರ ದುರವಸ್ಥೆ ಬಿಚ್ಚಿಟ್ಟ ಸೈನಿಕ, ಆತನ ಚಾರಿತ್ರ್ಯ ಪ್ರಶ್ನಿಸಿ ಲೋಪಗಳನ್ನೆಲ್ಲ ಹೂಳಲು ಹೊರಟಿದೆಯೇ ಬಿಎಸ್ಎಫ್?

ಡಿಜಿಟಲ್ ಕನ್ನಡ ಟೀಮ್:

ಗಡಿ ಕಾಯುವ ಯೋಧರಿಗೆ ಕಳಪೆ ಆಹಾರವನ್ನು ಒದಗಿಸಲಾಗುತ್ತಿದೆ. ಇದಕ್ಕೆ ಹಿರಿಯ ಸೇನಾಧಿಕಾರಿಗಳೇ ಕಾರಣ ಅಂತ ದೂಷಿಸಿ ಗಡಿ ಭದ್ರತಾ ಪಡೆ ಯೋಧ ಫೇಸ್ಬುಕ್ ನಲ್ಲಿ ಹಾಕಿರುವ ವಿಡಿಯೋ ವೈರಲ್ ಆಗಿ ಹಲವು ಪ್ರಶ್ನೆಗಳನ್ನು ಎತ್ತಿದೆ.

ಇದಕ್ಕೆ ಗಡಿ ಭದ್ರತಾ ಪಡೆಯ ಉತ್ತರ ಇನ್ನೊಂದು ವ್ಯತಿರಿಕ್ತದಲ್ಲಿದೆ. ಹೀಗೆ ಆರೋಪಿಸುತ್ತಿರುವ ಯೋಧ ಮದ್ಯಪಾನ ವ್ಯಸನಿ, ಕರ್ತವ್ಯದಿಂದ ಸಹ ಹೇಳದೇ ಕೇಳದೇ ತಪ್ಪಿಸಿಕೊಳ್ಳುತ್ತಿದ್ದ ವ್ಯಕ್ತಿ. ಇದೇ ಕಾರಣಕ್ಕಾಗಿ ಈ ಯೋಧ ತೇಜ ಬಹದ್ದೂರ್ ಸಿಂಗ್ ರನ್ನು ಮುಖ್ಯ ಕೇಂದ್ರದಲ್ಲಿ ಹಿರಿಯ ಅಧಿಕಾರಿಗಳ ನಿಗಾದಲ್ಲಿ ಪೋಸ್ಟಿಂಗ್ ನೀಡಲಾಗಿದೆ- ಇದು ಬಿಎಸ್ಎಫ್ ಪ್ರತಿಕ್ರಿಯೆ. ಆರೋಪಿಸಿರುವ ವ್ಯಕ್ತಿಯ ಚರಿತ್ರೆ ಹೀಗಿದ್ದರೂ ವಿಡಿಯೋದಲ್ಲಿ ಆರೋಪಿಸಲಾಗಿರುವ ಪರಿಸ್ಥಿತಿ ಕುರಿತ ತನಿಖೆಗೆ ಡಿಐಜಿ ಶ್ರೇಣಿಯ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂದು ಬಿಎಸ್ಎಫ್ ಹೇಳಿದೆ.

ಸರ್ಕಾರ ಮಾತ್ರ ಈ ಆರೋಪವನ್ನು ಗಂಭೀರವಾಗಿಯೇ ಪರಿಗಣಿಸಿದ್ದು, ಕಳೆದ ರಾತ್ರಿಯೇ ಗೃಹ ಸಚಿವ ರಾಜನಾಥ ಸಿಂಗ್ ಹೀಗೆ ಟ್ವೀಟ್ ಮಾಡಿದ್ದಾರೆ- ‘ಬಿಎಸ್ಎಫ್ ಯೋಧನ ಸ್ಥಿತಿ ಕುರಿತ ವಿಡಿಯೋ ನನ್ನ ಗಮನಕ್ಕೆ ಬಂದಿದೆ. ಬಿಎಸ್ಎಫ್ನಿಂದ ಈ ಬಗ್ಗೆ ವರದಿ ತರಿಸಿಕೊಂಡು ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಗೃಹ ಕಾರ್ಯದರ್ಶಿಗೆ ಸೂಚಿಸಿದ್ದೇನೆ’.

ಗೃಹಖಾತೆ ರಾಜ್ಯ ಸಚಿವ ಕಿರಿಣ್ ರಿಜಿಜು ಸಹ, ‘ಭದ್ರತಾ ಪಡೆಗಳ ಯೋಗಕ್ಷೇಮ ದೊಡ್ಡ ಆದ್ಯತೆ. ಈ ನಿಟ್ಟಿನಲ್ಲಿ ಯಾವುದೇ ಲೋಪಗಳಾಗಿದ್ದರೂ ಕಠಿಣ ಕ್ರಮ ಜರುಗಿಸಲಾಗುತ್ತದೆ’ ಎಂದಿದ್ದಾರೆ.

ಯೋಧ ತೇಜ್ ಯಾದವ್ ತಮ್ಮ ವಿಡಿಯೋದಲ್ಲಿ ಹೇಳಿರುವುದು ಇಷ್ಟು- ‘ಅತಿ ಕಠಿಣ ಹವಾಮಾನದಲ್ಲಿ ನಿರಂತರ 11 ಗಂಟೆಗಳ ಕಾಲ ದಿನವೂ ಸೇವೆ ಸಲ್ಲಿಸುವ ಯೋಧರನ್ನು ಅತಿ ಕೆಟ್ಟದಾಗಿ ನೋಡಿಕೊಳ್ಳಲಾಗುತ್ತಿದೆ. ಮಾಧ್ಯಮವಾಗಲೀ, ಮಂತ್ರಿಗಳಾಗಲೀ ತಮ್ಮ ಸ್ಥಿತಿಯ ಅರಿವಿಲ್ಲದವರಂತಿದ್ದಾರೆ. ನಮ್ಮ ಸ್ಥಿತಿಗೆ ಯಾವುದೇ ಸರ್ಕಾರಗಳನ್ನು ದೂರುವುದಿಲ್ಲ. ಅವರು ಸವಲತ್ತುಗಳನ್ನು ಕೊಡುತ್ತಿದ್ದಾರೆ. ಆದರೆ ಹಿರಿಯ ಅಧಿಕಾರಿಗಳು ಅವನ್ನೆಲ್ಲ ನಮ್ಮವರೆಗೆ ಪೂರೈಸುತ್ತಿಲ್ಲ.’

‘ಬೆಳಗಿನ ಉಪಹಾರಕ್ಕೆ ಕೇವಲ ಒಂದು ಪರಾಟಾ ನೀಡುತ್ತಾರೆ. ಅದಕ್ಕೆ ನಂಜಿಕೊಳ್ಳಲು ಕರಿ, ಉಪ್ಪಿನಕಾಯಿ ಏನೂ ಇಲ್ಲ. ಮಧ್ಯಾಹ್ನದ ದಾಲ್ ನಲ್ಲಿ ಬರಿ ಅರಿಶಿನ ಮತ್ತು ಉಪ್ಪಷ್ಟೇ ಇರುತ್ತವೆ. ಪ್ರಧಾನಿಯವರು ಈ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಈ ವಿಡಿಯೋ ಪೋಸ್ಟ್ ಮಾಡಿದ ನಂತರ ನಾನು ಬದುಕಿರುತ್ತೇನೋ ಇಲ್ಲವೋ. ಹೀಗಾಗಿ ಈ ಸಂಗತಿಯನ್ನು ನೀವೆಲ್ಲ ಹೆಚ್ಚು ಹಂಚಿ, ಮಾಧ್ಯಮಗಳ ತನಿಖೆಗೆ ಅನುಕೂಲವಾಗುವಂತೆ ಮಾಡಿ.’

ಟಿಪ್ಪಣಿ- ಇಲ್ಲಿ ಬಿಎಸ್ಎಫ್ ಸರಿಯೋ ಯೋಧ ಸರಿಯೋ ಎಂಬ ಪ್ರಶ್ನೆಗಳ ಆಚೆಗೆ ಖಂಡಿತ ತನಿಖೆಯ ಅಗತ್ಯವಿದೆ. ಈ ಹಿಂದೆಯೂ ಬಿಎಸ್ಎಫ್ ನಲ್ಲಿ ಯೋಧರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳಿವೆ. ಆರೋಪಿಸಿರುವ ಯೋಧನ ಚಾರಿತ್ರ್ಯದ ಪ್ರಶ್ನೆ ಈಗಷ್ಟೇ ಜ್ಞಾನೋದಯವಾಗಿದ್ದೇನು? ಕೊನೆಪಕ್ಷ ಯೋಧನ ಮಾತುಗಳಲ್ಲಿ ಸರ್ಕಾರದ ಬಗ್ಗೆ ವಿಶ್ವಾಸವಿದೆ. ಇದನ್ನು ಗಮನಕ್ಕೆ ತಂದು ಸರಿಪಡಿಸೀತೆಂಬ ಭರವಸೆ ಇದೆ. ಸಿನಿಕತೆಯೇನೂ ಆವರಿಸಿಲ್ಲ. ಇದು ಆ ಯೋಧನೊಬ್ಬನದೇ ಮಾತು ಅಂದುಕೊಳ್ಳದೇ ವಿಶ್ವಾಸ ಉಳಿಸಿಕೊಳ್ಳುವ ಕ್ರಮ ಕ್ಷಿಪ್ರವಾಗಿಯೇ ಜರುಗಬೇಕಿದೆ. ಅದಲ್ಲದೇ ಸುಮ್ಮನೇ ಸೈನಿಕರ ತ್ಯಾಗದ ಕತೆಗಳನ್ನು ವೀರಾವೇಶದಿಂದ ಚಪ್ಪರಿಸಿದರೇನು ಬಂತು?

Leave a Reply