ಡಿಜಿಟಲ್ ಕನ್ನಡ ಟೀಮ್:
ನೋಟು ಅಮಾನ್ಯ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ಬೆಂಗಳೂರಿನಲ್ಲಿಂದು ಜನಾಗ್ರಹ ಸಮಾವೇಶ ನಡೆಸಿತು. ನಗರದ ಟೌನ್ ಹಾಲ್ನಿಂದ ಜಿಲ್ಲಾಧಿಕಾರಿಗಳ ಕಚೇರಿಗಳವರೆಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಕೆ.ಜೆ. ಜಾರ್ಜ್, ರೋಷನ್ ಬೇಗ್, ಕೃಷ್ಣ ಬೈರೇಗೌಡ, ಎಂ. ಕೃಷ್ಣಪ್ಪ, ಸೇರಿದಂತೆ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿ ನೋಟು ಅಮಾನ್ಯದ ನಂತರ ಜನಸಾಮಾನ್ಯರಿಗಾಗಿರುವ ತೊಂದರೆ, ಬವಣೆಯ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಗೆ ದೂರು ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಮೆರವಣಿಗೆಯಿಂದ ಕೆಲರಸ್ತೆಗಳಲ್ಲಿ ಸಂಚಾರವೂ ಅಸ್ತವ್ಯಸ್ತವಾಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, 65 ದಿನಗಳು ಕಳೆದರೂ ಪರಿಸ್ಥಿತಿ ಸುಧಾರಿಸಿಲ್ಲ. ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದೆ. ಹೊಸದಾಗಿ ಬಿಟ್ಟಿರುವ 2000 ರೂ. ಖೋಟಾ ನೋಟಿಗೆ ಅವಕಾಶ ಮಾಡಿಕೊಟ್ಟಿದೆ.
ದೇಶದಲ್ಲಿ ಶೇ. 35ರಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಜನರು ತಮ್ಮ ಹಣ ತಾವು ಪಡೆಯಲು ಪರದಾಡುವುದರ ಜೊತೆಗೆ ಉದ್ಯೋಗ ಕಳೆದುಕೊಂಡು ಅತಂತ್ರ ಸ್ಥಿತಿಗೆ ತಲುಪಿದ್ದಾರೆ ಎಂದು ಆರೋಪಿಸಿದರು.
ನೈಕ್ ಫ್ರಾಂಕ್ ಇಂಡಿಯಾದ ರಿಯಲ್ ಎಸ್ಟೇಟ್ ಚಿತ್ರಣ
ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದಿಂದ ರಿಯಲ್ ಎಸ್ಟೇಟ್ ಉದ್ಯಮ ದೊಡ್ಡ ಮಟ್ಟದಲ್ಲಿ ನೆಲಕಚ್ಚಿದ್ದು 4800 ಕೋಟಿ ರೂಗಳನ್ನು ಭಾರೀ ನಷ್ಟವಾಗಿದೆ ಎಂದು ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ಹೇಳಿದೆ.
ಜಗತ್ತಿನ ಐವತ್ತೊಂಬತ್ತು ದೇಶಗಳಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಘಟಕಗಳನ್ನು ಹೊಂದಿರುವ, ಹದಿಮೂರು ಸಾವಿರ ನೌಕರರನ್ನು ಹೊಂದಿರುವ ನೈಟ್ ಫ್ರಾಂಕ್ ಸಂಸ್ಥೆ ಈ ವಿಷಯ ಬಹಿರಂಗ ಪಡಿಸಿದ್ದು, ಈ ರೀತಿ ಕುಸಿದ ಆರ್ಥಿಕತೆಯಿಂದ ಚೇತರಿಸಿಕೊಳ್ಳಲು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಬೇಕು ಎಂದಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ನೈಟ್ ಫ್ರಾಂಕ್ ಸಂಸ್ಥೆಯ ಪ್ರಮುಖರು, ನೋಟು ಅಮಾನ್ಯದ ನಂತರ ಫ್ಲ್ಯಾಟ್ಗಳ ಮಾರಾಟ ಸಂಖ್ಯೆ ಗಣನೀಯ ಕುಸಿದಿದೆ ಎಂದು ವಿವರಿಸಿದರು.
ಇವತ್ತು ಬೆಂಗಳೂರಿನಲ್ಲೇ 1,21,248 ಫ್ಲ್ಯಾಟ್ಗಳು ಮಾರಾಟವಾಗದೆ ಉಳಿದಿದ್ದು ಒಂದು ಫ್ಯ್ಲಾಟ್ಗೆ ಐವತ್ತು ಲಕ್ಷ ರೂ ಎಂದರೂ ಒಟ್ಟಾರೆಯಾಗಿ ಎಷ್ಟು ಹಣ ಚಲನರಹಿತ ಬಂಡವಾಳವಾಗಿ ಉಳಿದಿದೆ ಎಂಬುದು ಅರ್ಥವಾಗುತ್ತದೆ ಎಂದರು.
ಕಳೆದ ಮೂರು ತಿಂಗಳಲ್ಲಿ ಫ್ಲ್ಯಾಟ್ಗಳ ಮಾರಾಟದಲ್ಲಿ ಶೇಕಡಾ ಮೂವತ್ತೈದು ಭಾಗ ಕಡಿಮೆಯಾಗಿದ್ದು, ಹೊಸ ಯೋಜನೆಗಳ ಜಾರಿಯಲ್ಲಿಯೂ ಶೇಕಡಾ ಮೂವತ್ತರಷ್ಟು ಕಡಿಮೆಯಾಗಿದೆ ಎಂದು ವಿವರಿಸಿದರು.
ಈ ಮುಂಚೆ ದೇಶದ ಅತ್ಯಂತ ಸಡಿಲಿಕೆಯುಳ್ಳ, ಆರ್ಥಿಕ ಸ್ನೇಹಿ ರಿಯಲ್ ಎಸ್ಟೇಟ್ ಮಾರುಕಟ್ಟೆಗಳಲ್ಲಿ ಬೆಂಗಳೂರು ಒಂದಾಗಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಉದ್ಯಮ ಗಣನೀಯ ಒತ್ತಡಕ್ಕೆ ಸಿಲುಕಿದ್ದು ಇದೀಗ ನೋಟುಗಳ ಅಮಾನ್ಯ ಕ್ರಮದಿಂದ ಗಂಭೀರ ಆತಂಕಕ್ಕೆ ಒಳಗಾಗಿದೆ ಎಂದರು.
ರಿಯಲ್ ಎಸ್ಟೇಟ್ ಉದ್ಯಮ ಕುಸಿದ ಪರಿಣಾಮವಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ತೆರಿಗೆಯ ಪ್ರಮಾಣದಲ್ಲೂ ಇನ್ನೂರೈವತ್ತು ಕೋಟಿ ರೂಗಳಷ್ಟು ಕುಸಿತವಾಗಿದೆ ಎಂದು ಅವರು ವಿವರಿಸಿದರು.