ಅಚ್ಛೇದಿನ್ ಎಂಬ ಬಿಜೆಪಿ ಘೋಷವಾಕ್ಯವನ್ನೂ ಎರವಲು ಪಡೆಯಲು ಹೊರಟಿರುವ ರಾಹುಲ್ ಗಾಂಧಿ ಇನ್ಯಾವ ಹೊಸ ಬ್ರಾಂಡ್ ಕಟ್ಟಿಯಾರು?

ಚೈತನ್ಯ ಹೆಗಡೆ

ಬಿಜೆಪಿಯ ಅಬ್ಬರದ ಪ್ರಚಾರ ಘೋಷವಾದ ಅಚ್ಛೇದಿನವನ್ನು ಪ್ರಶ್ನಿಸುವುದು ಪ್ರತಿಪಕ್ಷಗಳಿಗೆ ಹಾಗೂ ಟೀಕಾಕಾರರಿಗೆ ಸಹಜ. ಆದರೆ ಯಾವುದೇ ಬ್ರಾಂಡ್ ಅನ್ನು ತಿರಸ್ಕರಿಸುವಾಗ, ಗೇಲಿ ಮಾಡುವಾಗ ಅಂಥದೇ ಆಕರ್ಷಣೆಯ ಪರ್ಯಾಯವನ್ನು ಕೊಡಬೇಕು.

ಅಷ್ಟುಮಾತ್ರದ ಅರಿವಿಲ್ಲದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ಬ್ರಾಂಡ್ ಮರು ಬೆಳಗಿಸುತ್ತಾರಾದರೂ ಹೇಗೆ? ಏಕೆಂದರೆ, ದೆಹಲಿಯಲ್ಲಿ ಕೇಂದ್ರ ಸರ್ಕಾರವನ್ನು ಹಾಗೂ ಅದರ ಆರ್ಥಿಕ ನೀತಿಗಳನ್ನು ಟೀಕಿಸುತ್ತ ಅವರು ಹೇಳಿರುವ ಮಾತು- ‘2019ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲಷ್ಟೇ ಅಚ್ಛೇದಿನ್ ಬರುತ್ತದೆ.’

ಅಲ್ಲಿಗೆ ಅಚ್ಛೇದಿನ್ ಎಂಬ ಪರಿಕಲ್ಪನೆಯಲ್ಲೇ ಬಲವಾದ್ದೊಂದು ಶಕ್ತಿ ಇದೆ ಎಂದು ರಾಹುಲ್ ಗಾಂಧಿ ಒಪ್ಪಿಕೊಂಡಂತಾಯ್ತು. ಆ ಪರಿಕಲ್ಪನೆಯನ್ನು ಮೋದಿ ಸರಿಯಾಗಿ ಅನುಷ್ಠಾನಗೊಳಿಸಿಲ್ಲವಾದ್ದರಿಂದ ಕಾಂಗ್ರೆಸ್ಸಿಗೆ ಅವಕಾಶ ಕೊಡಬೇಕು ಎಂಬ ಧ್ವನಿ ಅನುರಣಿತವಾಗಿದೆ. ಅಲ್ಲಪ್ಪಾ… ಅಚ್ಛೇದಿನ್ ಎಂಬ ಯಾರದ್ದೋ ಪ್ರಾಡಕ್ಟ್ ಅನ್ನು ನೀವೇಕೆ ಮಾರ್ಕೆಟ್ ಮಾಡಬೇಕು? ನಿಮ್ಮ ಉಗ್ರಾಣದಲ್ಲಿ ಏನೂ ಇಲ್ಲ ಎಂದು ಹೇಳಿದಂತಾಗಲಿಲ್ಲವೇ? ಅಚ್ಛೇದಿನ್ ಬರುತ್ತದೆ ಎಂಬುದು ಮೋದಿ ಮತ್ತು ಬಿಜೆಪಿ ಜನರಿಗೆ ಮಾರಿದ ಕನಸು. ಆ ಕನಸೆಂಬ ಪ್ರಾಡಕ್ಟಿನಲ್ಲಿ ಸತ್ವ ಇರದಿದ್ದರೆ ಜನ ತಿರಸ್ಕರಿಸುತ್ತಾರೆ. ಹಾಗೆ ತಿರಸ್ಕರಿಸಿದಾಗ, ನನ್ನಲ್ಲಿ ಮತ್ತೊಂದು ಪ್ರಾಡಕ್ಟ್ ಇದೆ ಅಂತ ಎದುರಾಳಿ ಹೇಳಬೇಕೇ ಹೊರತು, ಮತ್ತದೇ ಅಚ್ಛೇದಿನದ ಜಪವನ್ನೇ ಮಾಡಿದರೆ ಅಲ್ಲಿ ಕಾಣುವುದು ಬೌದ್ಧಿಕ ದಿವಾಳಿತನವಷ್ಟೆ.

ನೋಟು ಅಮಾನ್ಯ ಪರ್ವದಲ್ಲಿ ಹಾಗೂ ಸಂದರ್ಭ ಸಿಕ್ಕಾಗಲೆಲ್ಲ ಪ್ರಧಾನಿ ನರೇಂದ್ರ ಮೋದಿ ಸಹ ಬಡವ ವರ್ಸಸ್ ಶ್ರೀಮಂತ ಎಂಬ ರೋಚಕತೆಯನ್ನು ಜನರಿಗೆ ಭಾಷಣಗಳ ಮೂಲಕ ಮಾರುತ್ತಿದ್ದಾರೆ. ಹಾಗಂತ ಗರೀಬಿ ಹಠಾವೋ ಎಂಬ ಇಂದಿರಾ ಮಂತ್ರವನ್ನು ಮತ್ತೆ ಉಚ್ಛರಿಸಲಿಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತ ಇನ್ನೇನೋ ನುಡಿಗಟ್ಟು ಕೊಟ್ಟರು.

ಬ್ರಾಂಡ್ ಬಿಲ್ಡಿಂಗ್ ಕಾರ್ಯದಲ್ಲಿ ರಾಹುಲ್ ಗಾಂಧಿ ಮತ್ತವರ ಕಾಂಗ್ರೆಸ್ ಎಷ್ಟು ಹಿಂದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಇವತ್ತಿಗೆ ‘ಅಚ್ಛೇದಿನ’ ತಾನು ಕೊಡುವೆನೆಂಬ ರಾಹುಲ್ ಗಾಂಧಿ ಮತ್ತವರ ಪಂಗಡವು ಅಬ್ ಕಿ ಬಾರ್ ಮೋದಿ ಸರ್ಕಾರ್, ಅಚ್ಛೇದಿನ್ ಆನೇವಾಲಾ ಹೈ ಎಂಬೆಲ್ಲ ಪದಗುಚ್ಛಗಳು ಹೇಗೆ ಸೃಷ್ಟಿಯಾದವೆಂಬುದನ್ನು ಅಭ್ಯಸಿಸಬೇಕು.

ಅಚ್ಛೇದಿನ್ ಘೋಷಕ್ಕೆ ಶ್ರೇಯಸ್ಸು ಪಡೆಯುವವರು ಬಹಳ ಜನ ಇದ್ದಾರಾದರೂ, 2014ರ ಲೋಕಸಭೆ ಪ್ರಚಾರ ಮತ್ತು ಬ್ರಾಂಡ್ ಬಿಲ್ಡಿಂಗ್ ಗಾಗಿ ಬಿಜೆಪಿ ಮುಖ್ಯವಾಗಿ ಎರಡು ಅತಿಮುಖ್ಯ ಜಾಹೀರಾತು ಮತ್ತು ಬ್ರಾಂಡ್ ಕಂಪನಿಗಳನ್ನು ಆಶ್ರಯಿಸಿತ್ತು. ಪ್ರಸೂನ್ ಜೋಶಿ ನಾಯಕತ್ವದ ಮ್ಯಾಕಾನ್, ಪಿಯೂಶ್ ಪಾಂಡೆ ನೇತೃತ್ವದ ಒಗಿಲ್ವಿ ಆ್ಯಂಡ್ ಮೇದರ್. ಇವೆರಡೂ ದೈತ್ಯ ಬಹುರಾಷ್ಟ್ರೀಯ ಬ್ರಾಂಡಿಂಗ್ ಕಂಪನಿಗಳು.

ಪ್ರಸೂನ್ ಜೋಶಿ ಮತ್ತು ಪಿಯೂಶ್ ಪಾಂಡೆ ಇಬ್ಬರೂ ಭಾರತದ ಮೇಧಾವಿ ಸೃಜನಶೀಲ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವಂಥವರು. ಇವರ ಜತೆಗೆ ಬಿಜೆಪಿಯ ಯುವ ಚಿಂತನಕೂಟವೂ ಸೇರಿಕೊಂಡು ಪ್ರಚಾರಾಂದೋಲನ ರೂಪಿಸಿತು.

ಇದರ ಹಿಂದಿರುವ ಅಧ್ಯಯನ- ಕಾರ್ಯತಂತ್ರಗಳೆಲ್ಲ ಸಂವಹನ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಜಾಹೀರಾತು ಮತ್ತು ಬ್ರಾಂಡಿಂಗ್ ಕ್ಷೇತ್ರದಲ್ಲಿ ಆಸಕ್ತರಿಗೆ ಒಂದು ಅಧ್ಯಯನ ಪಠ್ಯವಾಗುತ್ತದೆ. ಬಿಜೆಪಿಯ ಜನಪ್ರಿಯತೆಗಿಂತ ಮೋದಿ ಜನಪ್ರಿಯತೆ ಹೆಚ್ಚಾಗಿದೆ ಎಂದು ಕಂಡುಕೊಂಡ ತಂಡವು ಎಲ್ಲವನ್ನೂ ಅದರ ಸುತ್ತಲೇ ನಿರ್ಮಿಸಿ ಅಧ್ಯಕ್ಷೀಯ ಮಾದರಿ ಸೆಣೆಸಾಟವೊಂದನ್ನು ಸೃಷ್ಟಿಸಿತು. ವಾಸ್ತವವಾಗಿ ರಾಹುಲ್ ಗಾಂಧಿ ಆಗಲೇ ಒಳ್ಳೇದಿನ ಕಂಡುಕೊಳ್ಳುವುದಕ್ಕೆ ಎಚ್ಚೆತ್ತುಕೊಳ್ಳಬೇಕಾಗಿತ್ತು. ಇವತ್ತಿಗೆ ಕಾಂಗ್ರೆಸ್ಸಿಗರು ಎಷ್ಟೇ ಸಮರ್ಥನೆ ಮಾಡಿಕೊಂಡರೂ ರಾಹುಲ್ ಗಾಂಧಿ ಜನಕ್ಕೆ ತಾಗಬಲ್ಲ ಬ್ರಾಂಡ್ ಆಗಿ ಉಳಿದೇ ಇಲ್ಲ.

ಅದಿರಲಿ. ಬ್ರಾಂಡಿಂಗ್ ಹೇಗಿತ್ತು ನೋಡಿ.. ಅಬ್ ಕಿ ಬಾರ್, ಬಿಜೆಪಿ ಸರ್ಕಾರ್ ಎನ್ನಲಿಲ್ಲ… ಅಬ್ ಕಿ ಬಾರ್ ಮೋದಿ ಸರ್ಕಾರ್ ಆಯಿತು. ಅದಕ್ಕೂ ಮೊದಲು ಪ್ರಸೂನ್ ಜೋಶಿ, ‘ದೇಶ್ ಕಿ ಪುಕಾರ್, ಮೋದಿ ಸರ್ಕಾರ್’ ಎಂಬ ಟ್ಯಾಗ್ಲೈನ್ ಕೊಟ್ಟಿದ್ದರು. ಆದರೆ, ‘ಅಬ್ ಕಿ ಬಾರಿ, ಅಟಲ್ ಬಿಹಾರಿ’ ಎಂಬ ವಾಕ್ಯ ಈ ಹಿಂದೆ ಜನಪ್ರಿಯತೆ ಪಡೆದುಕೊಂಡಿತ್ತಾದ್ದರಿಂದ, ಬಿಜೆಪಿ ಬ್ರಾಂಡಿಂಗ್ ನ ಮುಂದುವರಿಕೆಯಾಗಿ ಅಬ್ ಕಿ ಬಾರ್ ಮೋದಿ ಸರ್ಕಾರ್ ಅಂತಲೇ ತಿದ್ದಲಾಯಿತು. ಅಚ್ಛೇದಿನ್ ಆನೆವಾಲಾ ಹೈ ಎಂಬ ಘೋಷವಾಕ್ಯ ಸಹ ಇನ್ನೊಂದು ವಾಕ್ಯವನ್ನು ತನ್ನೊಂದಿಗೆ ಬೆಸೆದುಕೊಂಡಿತ್ತು. ಅಚ್ಛೇದಿನ್ ಆನೆವಾಲಾ ಹೈ, ಹಂ ಮೋದಿ ಜೀ ಕೋ ಲಾನೆ ವಾಲೆ ಹೈ.. ಇವಕ್ಕೆಲ್ಲ ಸಾಥ್ ಕೊಡಲು ‘ಜನತಾ ಮಾಫ್ ನಹೀ ಕರೇಗಿ’ ಎಂಬ ರೊಚ್ಚಿಗೇಳಿಸುವ ಸಾಲುಗಳು ಸೃಷ್ಟಿಯಾದವು.

ಹಾಗಂತ ಬ್ರಾಂಡಿಂಗ್ ಮಾತ್ರವೇ ಬಿಜೆಪಿಯನ್ನು ಗೆಲ್ಲಿಸಿದ್ದಲ್ಲ. ಆದರೆ ಅದು ಮುಖ್ಯ ಭಾಗ. ಈ ಜಾಹೀರಾತು ಏಜೆನ್ಸಿಗಳು ಮಾಡಿದ್ದೇನೆಂದರೆ ಎರಡು ತಿಂಗಳುಗಳ ಕಾಲ ಎಲ್ಲ ಮಾಧ್ಯಮಗಳಲ್ಲೂ ಮೋದಿ ಸುತ್ತಲಿನ ಆಕರ್ಷಕ ಸಾಲುಗಳೇ ಪ್ರಜ್ವಲಿಸಿಕೊಂಡಿರುವಂತೆ ನೋಡಿಕೊಂಡವು. ಅಷ್ಟೇ ಸೃಜನಾತ್ಮಕ ಜಾಹೀರಾತುಗಳನ್ನು ಸೃಷ್ಟಿಸಿದವು. ಉದಾಹರಣೆಗೆ ಪಿಯೂಶ್ ಪಾಂಡೆ ಸೃಷ್ಟಿಸಿದ ಆ್ಯನಿಮೇಷನ್ ಜಾಹೀರಾತೊಂದು ಕ್ರಿಕೆಟ್ ಕಾಮೆಂಟ್ರಿಯೊಂದಿಗೆ ಶುರುವಾಗುತ್ತದೆ. ‘ಇನ್ನೇನು ಪಂದ್ಯ ಪ್ರಾರಂಭವಾಗಲಿದೆ. ಕಫ್ತಾನರಿಬ್ಬರೂ ಟಾಸ್ ನಿರ್ಧಾರಕ್ಕೆ ಬಂದಿದ್ದಾರೆ. ಅರೇ ಇನ್ನೊಂದು ಪಾಳೆಯದ ಕಫ್ತಾನನೆಲ್ಲಿ? ಇನ್ನೊಂದು ತಂಡಕ್ಕೆ ನಾಯಕನೇ ಇಲ್ಲ..’ ಎನ್ನುವ ಮೂಲಕ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕೆ ಬಂದೇ ಇಲ್ಲ, ಲೆಕ್ಕಕ್ಕೇ ಇಲ್ಲ ಎಂಬ ಸಂದೇಶ ನೀಡಿತು.

ಪ್ರಸೂನ್ ಮತ್ತು ಪಿಯೂಶ್ ಇಬ್ಬರೂ ಒಂದು ಮಾತನ್ನು ಖಡಾಖಂಡಿತವಾಗಿ ಹೇಳುತ್ತಾರೆ. ‘ಉತ್ಪನ್ನ ಚೆನ್ನಾಗಿದ್ದರೆ ಮಾತ್ರ ಜನ ಅದನ್ನು ಕೊಳ್ಳುತ್ತಾರೆ. ಜಾಹೀರಾತುಗಳು ಈ ಉತ್ಪನ್ನ ಕೊಳ್ಳುವಿಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆಯೇ ಹೊರತು, ಉತ್ಪನ್ನವೇ ಗಟ್ಟಿ ಇಲ್ಲದೇ ಜಾಹೀರಾತಿನಿಂದ ಗೆಲ್ಲಲಾಗುವುದಿಲ್ಲ.’ ಇದನ್ನು ಪ್ರಸೂನ್ ಜೋಶಿ ಮತ್ತೂ ಚೆನ್ನಾಗಿ ಹೇಳುತ್ತಾರೆ- ‘ಅತ್ಯುತ್ತಮ ಜಾಹೀರಾತು ಕೆಟ್ಟ ಉತ್ಪನ್ನವೊಂದನ್ನು ಬಹುಬೇಗ ಕೊಂದುಬಿಡುತ್ತದೆ.’

2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇನು ಬ್ರಾಂಡಿಂಗ್ ಗೆ ಹಣ ಚೆಲ್ಲಲಿಲ್ಲ ಎಂದಲ್ಲ. ಡೆಂಟ್ಸು ಎಂಬ ಬಹುರಾಷ್ಟ್ರೀಯ ಏಜೆನ್ಸಿಗೆ ಅದೂ ಕೋಟ್ಯಂತರ ರುಪಾಯಿಗಳ ಗುತ್ತಿಗೆ ಕೊಟ್ಟಿತ್ತು. ಮೋದಿ ಅಬ್ಬರ ಹೆಚ್ಚಾಗುತ್ತಿದ್ದಂತೆ ‘ಮೈ ನಹೀ, ಹಮ್’ ಅಂತೊಂದು ಪ್ರಚಾರಾಂದೋಲನ ಮಾಡಿತು ಕಾಂಗ್ರೆಸ್. ಮೋದಿ ತಾನೇ ತಾನು ಎನ್ನುತ್ತಿದ್ದಾರೆ ಆದರೆ ತಮ್ಮದು ಸಮಷ್ಟಿ ದೃಷ್ಟಿಕೋನ ಎಂಬುದು ಅಲ್ಲಿ ನೀಡಹೊರಟಿದ್ದ ಸಂದೇಶ. ನೀಡುತ್ತಿದ್ದ ಸಂದೇಶಕ್ಕೆ ತೀರ ವ್ಯತಿರಿಕ್ತವಾಗಿ ಅದು ರಾಹುಲ್ ಗಾಂಧಿಯವರನ್ನು ಮುಂದೆ ನಿಲ್ಲಿಸಿ, ಅವರ ಬೆನ್ನಿಗೆ ಸಾಮಾನ್ಯರೆಲ್ಲ ನಿಂತಂತೆ ಚಿತ್ರಿಸಿತು. ಸಾಮಾನ್ಯರ ಹೆಸರಲ್ಲಿ ತಮ್ಮ ಬ್ರಾಂಡ್ ಕಟ್ಟಲು ಹೋದ ಬಾಲಿಶ ಪ್ರಯತ್ನ ಅಲ್ಲಿ ಕಾಣುತ್ತಿತ್ತು. ಯಾವ ಸೃಷ್ಟಿಶೀಲತೆಯೂ ಇರಲಿಲ್ಲ.

ಉತ್ಪನ್ನ ಗಟ್ಟಿಗೊಳಸದೇ ಘೋಷಷವಾಕ್ಯಗಳಿಗಷ್ಟೇ ಹಪಾಹಪಿಸಿದರೇನು ಬಂತು? ಒಂದೊಮ್ಮೆ ಬಿಜೆಪಿಯ ಚುನಾವಣಾ ಕಾರ್ಯತಂತ್ರ ಹೆಣೆಯುತ್ತಿದ್ದ ಪ್ರಶಾಂತ್ ಕಿಶೋರ್ ಅವರನ್ನು ಈ ಬಾರಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸೆಳೆದುಕೊಂಡಿತು. ಆದರೆ ಪ್ರಶಾಂತ್ ಕಿಶೋರ್ ಗೂ ಪಕ್ಷಕ್ಕೂ ತಾಳಮೇಳವೇ ಆಗಲಿಲ್ಲ. ಚುನಾವಣೆ ಘೋಷಣೆ ಆಗುವುದಕ್ಕೂ ಮೊದಲೇ ಪ್ರಶಾಂತ್ ಇದ್ದೂ ಇಲ್ಲದಂತಾಗಿದ್ದಾರೆ.

2019ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ‘ಅಚ್ಛೇದಿನ’ ತರುತ್ತದೆ ಎಂಬ ರಾಹುಲ್ ಗಾಂಧಿಯ ಹೇಳಿಕೆಯಲ್ಲೂ ಮತ್ತದೇ ವಿಚಾರ ಬಡತನ ರಾಚುತ್ತಿದೆ.

Leave a Reply