ಮೋದಿ ವಿರುದ್ಧದ ಸಹರಾ ಡೈರಿ ಲಂಚಾರೋಪ ಅಸ್ತ್ರ ಠುಸ್, ಪೂರಕ ಸಾಕ್ಷ್ಯವಿಲ್ಲದೇ ತನಿಖೆ ಸಾಧ್ಯವಿಲ್ಲವೆಂದ ಸುಪ್ರೀಂಕೋರ್ಟ್

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭ್ರಷ್ಟಾಚಾರ ಆರೋಪ ಚರ್ಚಿಸುವುದಕ್ಕೆ ಪ್ರತಿಪಕ್ಷಗಳಿಗಿದ್ದ ಒಂದು ಸಣ್ಣ ಅವಕಾಶವೂ ತಪ್ಪಿಹೋಗಿದೆ.

ಸಹರಾ ಡೈರಿಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಅನೇಕ ರಾಜಕಾರಣಿಗಳ ಹೆಸರು ನಮೂದಾಗಿ, ಅವರಿಗೆಲ್ಲ ನೀಡಿರುವ ಲಂಚದ ಮೊತ್ತ ಬರೆಯಲಾಗಿದೆ. ಸಿಬಿಐ ವಶಪಡಿಸಿಕೊಂಡಿದ್ದ ಈ ಡೈರಿ ಆಧಾರವಾಗಿರಿಸಿಕೊಂಡು ಮೋದಿ ವಿರುದ್ಧ ವಿಶೇಷ ತನಿಖಾದಳಕ್ಕೆ ಪ್ರಕರಣ ಒಪ್ಪಿಸಬೇಕು ಎಂದು ಖ್ಯಾತ ನ್ಯಾಯವಾದಿ ಪ್ರಶಾಂತ ಭೂಷಣ್ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ಬುಧವಾರ ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.

ಡೈರಿಯಲ್ಲಿ ಹೆಸರು ನಮೂದಿಸಿದ್ದರು ಎಂಬ ಕಾರಣಕ್ಕಷ್ಟೇ ತನಿಖೆಗೆ ಆದೇಶಿಸುವುದಕ್ಕಾಗುವುದಿಲ್ಲ. ಇದಕ್ಕೆ ಪೂರಕವಾಗಿ, ಲಂಚ ಪಡೆದಿರುವುದಕ್ಕೆ ಸಾಕ್ಷ್ಯಗಳು ಬೇಕಾಗುತ್ತವೆ. ಹಾಗಲ್ಲದೇ ಡೈರಿಯಲ್ಲಿ ಹೆಸರು ಬರೆದಿಟ್ಟಿದ್ದಾರೆನ್ನುವ ಒಂದು ಕಾರಣಕ್ಕೆ ಸಾಂವಿಧಾನಿಕ ಹುದ್ದೆ ಹೊಂದಿದವರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಹಿಂದೆ ಜೈನ್ ಹವಾಲಾ ಪ್ರಕರಣದಲ್ಲಿ ಎಲ್ಕೆ ಎಂಬ ಹೆಸರು ನಮೂದಾಗಿದ್ದರಿಂದ ಎಲ್. ಕೆ. ಆಡ್ವಾಣಿಯವರ ವಿರುದ್ಧವೂ ತನಿಖೆ ನಡೆಸಲಾಗಿತ್ತು. ಅದಕ್ಕೆ ಪೂರಕವಾಗಿ ಏನೊಂದು ಸಾಕ್ಷ್ಯವೂ ಸಿಗಲಿಲ್ಲ ಎಂದು ನೆನಪಿಸಿದ ನ್ಯಾಯಾಲಯ, ಹೀಗೆ ಸಹರಾ ಡೈರಿ ಪುಟಗಳನ್ನಷ್ಟೇ ಇಟ್ಟುಕೊಂಡು ಲಂಚ ಪಡೆದಿದ್ದಾರೆಂದು ಆರೋಪಿಸುವುದಕ್ಕೆ ಆಗುವುದಿಲ್ಲ ಎಂದಿತು.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಉದ್ಯಮ ವಲಯದಿಂದ ಲಂಚ ಪಡೆದಿದ್ದರು ಎಂಬುದು ಪ್ರತಿಪಕ್ಷಗಳ ಆರೋಪವಾಗಿತ್ತು. ವಿಶೇಷವಾಗಿ ನೋಟು ಅಮಾನ್ಯದ ನಂತರ, ಅದು ಉದ್ಯಮ ವಲಯದ ಕೆಲವರಿಗೆ ಅನುಕೂಲವಾಗುವ ನಡೆ ಎಂದು ಪ್ರತಿಪಾದಿಸಿದ್ದ ಕಾಂಗ್ರೆಸ್, ಮೋದಿ ಉದ್ಯಮಿಗಳೊಂದಿಗೆ ಸೇರಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಪ್ರತಿಪಾದಿಸುವುದಕ್ಕೆ ಸಹರಾ ಡೈರಿಯನ್ನು ಬಳಸಿಕೊಂಡಿತ್ತು. ರಾಹುಲ್ ಗಾಂಧಿಯವರ ಈ ಪ್ರತಿಪಾದನೆಗೆ ಪಕ್ಷದಲ್ಲೇ ಒಮ್ಮತವಿರಲಿಲ್ಲ. ಏಕೆಂದರೆ ಅದೇ ಸಹಾರಾ ಡೈರಿಯಲ್ಲೇ ಕಾಂಗ್ರೆಸ್ಸಿನ ಶೀಲಾ ದಿಕ್ಷಿತ್ ಸೇರಿದಂತೆ ಹಲವರ ಹೆಸರೂ ಇತ್ತು.

‘ನ್ಯಾಯಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹಲವು ಪ್ರಕರಣಗಳಲ್ಲಿ ಪ್ರತಿಪಾದಿಸಿದ್ದ ಸುಪ್ರೀಂಕೋರ್ಟ್ ಈಗ ಸಾಂವಿಧಾನಿಕ ಹುದ್ದೆಯಲ್ಲಿದ್ದವರನ್ನು ತನಿಖೆಗೊಳಪಡಿಸಲು ಸಾಕ್ಷ್ಯ ಸಾಲದೆಂದು ಹೇಳಿರುವುದು ದುರಾದೃಷ್ಟಕರ’ ಎಂದು ಪ್ರತಿಕ್ರಿಯಿಸಿದ್ದಾರೆ ನ್ಯಾಯವಾದಿ ಪ್ರಶಾಂತ ಭೂಷಣ್.

Leave a Reply