ನೆಲಹಾಸಿನ ಮೇಲೆ ತ್ರಿವರ್ಣ ಧ್ವಜ ಬಳಸಿದ ಅಮೇಜಾನಿಗೆ ಸುಷ್ಮಾ ಏಟು, ವ್ಯಾಪಕ ಪ್ರಶಂಸೆ

ಡಿಜಿಟಲ್ ಕನ್ನಡ ಟೀಮ್:

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಖಡಕ್ ಎಚ್ಚರಿಕೆಯ ಬೆನ್ನಲ್ಲೇ ಅಮೇಜಾನ್ ಕಂಪನಿ ತನ್ನ ಇ ಕಾಮರ್ಸ್ ವೆಬ್ ಸೈಟ್ ನಲ್ಲಿ ಮಾರಾಟಕ್ಕಿಟ್ಟಿದ್ದ ಭಾರತದ ತ್ರಿವರ್ಣ ಧ್ವಜದ ಚಿತ್ರವಿರುವ ನೆಲಹಾಸನ್ನು ತೆಗೆದುಹಾಕಿದೆ.

ಅಂತರ್ಜಾಲ ಶಾಪಿಂಗ್ ಕೇಂದ್ರವಾಗಿರುವ ಅಮೇಜಾನ್ ಭಾರತದ ತ್ರಿವರ್ಣ ಧ್ವಜದ ಚಿತ್ರವನ್ನು ನೆಲಹಾಸಿನ ಮೇಲೆ ಮುದ್ರಿಸಿ, ಮಾರಾಟಕ್ಕೆ ಇಟ್ಟಿತ್ತು. ಅಮೇಜಾನಿನ ಕೆನಡಾದ ವೆಬ್ ಸೈಟ್ ನಲ್ಲಿ ತ್ರಿವರ್ಣ ಧ್ವಜದ ನೆಲಹಾಸು ಮಾರಾಟಕ್ಕೆ ಲಭ್ಯವಿತ್ತು. ಈ ಬಗ್ಗೆ ಅತುಲ್ ಭೋಬೆ ಎಂಬುವವರು ಟ್ವಿಟರ್ ಮೂಲಕ  ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ದೂರು ನೀಡಿದ್ದರು.

ತಕ್ಷಣವೇ ಈ ದೂರಿಗೆ ಸ್ಪಂದಿಸಿದ ಸುಷ್ಮಾ, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ‘ಅಮೇಜಾನ್ ತನ್ನ ಈ ತಪ್ಪಿಗೆ ಕ್ಷಮೆ ಕೋರಬೇಕು. ಜತೆಗೆ ತಕ್ಷಣವೇ ಇದನ್ನು ತನ್ನ ವೆಬ್ ಸೈಟಿನಿಂದ ಕಿತ್ತುಹಾಕಬೇಕು. ಇಲ್ಲದಿದ್ದರೆ ಇನ್ನು ಮುಂದೆ ಅಮೇಜಾನಿನ ಯಾವುದೇ ಅಧಿಕಾರಿಗಳಿಗೆ ಭಾರತೀಯ ವಿಸಾ ಸಿಗುವುದಿಲ್ಲ. ಈಗಾಗಲೇ ನೀಡಿರುವ ವಿಸಾಗಳನ್ನು ರದ್ದುಗೊಳಿಸಬೇಕಾಗುತ್ತದೆ’ ಎಂಬ ಎಚ್ಚರಿಕೆ ನೀಡಿದ್ದರು.

ಸುಷ್ಮಾ ಸ್ವರಾಜ್ ಅವರ ಎಚ್ಚರಿಕೆಯ ಬೆನ್ನಲ್ಲೇ ಈಗ ಅಮೇಜಾನ್ ತನ್ನ ವೆಬ್ ಸೈಟಿನಿಂದ ತ್ರಿವರ್ಣ ಧ್ವಜದ ನೆಲಹಾಸನ್ನು ತೆಗೆದುಹಾಕಿದೆ. ಅಮೇಜಾನ್ ಕಂಪನಿಗೆ ಚುರುಕು ಮುಟ್ಟಿಸಿ, ತ್ರಿವರ್ಣ ಧ್ವಜದ ನೆಲಹಾಸನ್ನು ವೆಬ್ ಸೈಟ್ ನಿಂದ ತೆಗೆದುಹಾಕುವಂತೆ ಮಾಡಿದ ಸುಷ್ಮಾ ಸ್ವರಾಜ್ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗುತ್ತಿದೆ.

Leave a Reply