ಅತ್ಯಾಚಾರ, ಬಲತ್ಕಾರಗಳ ಹಿಂದಿನ ಬಗೆ ಬಗೆಯ ಕೆಟ್ಟ ಯೋಚನಾ ಪದರ

author-geetha‘ಮೂವತ್ತು ವರ್ಷಗಳ ಹಿಂದೆ ಲಂಚ ತೆಗೆದುಕೊಂಡಿದ್ರು… ಎಂಬ ಆರೋಪ ಹೊತ್ತಿದ್ರಲ್ಲಾ ನಾಲ್ಕು ಮಂದಿ, ಮೊನ್ನೆ ಮೊನ್ನೆ ಖುಲಾಸೆ ಆದರಂತೆ…’

‘ಅಂದರೆ?’

‘ಕೇಸು ಸಾಬೀತಾಗಲಿಲ್ಲ. ಸಾಕಷ್ಟು ಪುರಾವೆ ಇರಲಿಲ್ಲ. ಹಾಗಾಗಿ ಆರೋಪಿಗಳು ಮುಕ್ತರಾದರು.’

‘ಓ… ಸರಿ.’

‘ಮೊನ್ನೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಜನ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ಯಾವುದೇ ಪುರಾವೆ ಇಲ್ಲವಂತೆ. ನಮ್ಮ ಪೊಲೀಸರು ನಿದ್ದೆಗೆಟ್ಟು ಅದೆಷ್ಟು ಸಿ.ಸಿ.ಟಿವಿ Footage ನೋಡಿದ್ದಾರೆ. ಪುರಾವೇಯೇ ಇಲ್ಲ…’

‘ಮತ್ತೆ? Molestation ಆಗಲಿಲ್ಲವಂತಾ?’

‘Molest ಆಯ್ತು ಎಂದು ಹೆಣ್ಣು ಮಕ್ಕಳ್ಯಾರಾದರು ಪುರಾವೆಯೊಂದಿಗೆ ದೂರು ಸಲ್ಲಿಸಿದರೆ ತನಿಖೆ ಮಾಡಬಹುದು…’

‘ರಸ್ತೆಯಲ್ಲಿ, ರಾತ್ರಿ ಎರಡುವರೆಗೆ ಹೆಣ್ಣು ಮಗಳೊಬ್ಬಳ Molest ಆದ ಘಟನೆ ರೆಕಾರ್ಡ್ ಆಗಿದೆಯಲ್ಲ…’

‘ಆರು ಮಂದಿನ ಪೊಲೀಸರು ಅರೆಸ್ಟ್ ಮಾಡಿದ್ದಾರಲ್ಲಾ? ಈಗ ಆ ಹುಡುಗಿ ಬಂದು ಸರಿಯಾಗಿ ದೂರು ಕೊಟ್ಟು, Identify ಮಾಡಬೇಕು. ಆದರೆ ಆ ಹುಡುಗಿ ನಾಪತ್ತೆಯಾಗಿಬಿಟ್ಟಿದ್ದಾಳಲ್ಲ…’

‘ಓ… ಇನ್ನೊಂದು ಪ್ರಕರಣ… ಹುಡುಗಿಯ ನಾಲಿಗೆ ಬೇರೆ ಕಚ್ಚಿಬಿಟ್ಟಿದ್ದನಲ್ಲ… ಅದರದೂ ಸಿ.ಸಿ.ಟಿ.ವಿ ದಾಖಲೆ ಇದೆ…’

‘ಅಯ್ಯೊ… ಅದು ಆ ಹುಡುಗಿಯ ಭಾವ ಮಾಡಿದ ಪ್ಲಾನಂತೆ! ಹೀಗೆ ರಸ್ತೆಯಲ್ಲಿ Molest ಆಯ್ತು ಅಂತ ಸುದ್ದಿ ಮಾಡಿ ತನ್ನ ನಾದಿನಿಗೆ ಬೇರೆ ಗಂಡು ಗೊತ್ತಾಗದಂತೆ ಮಾಡಿ, ಹೆಂಡತಿಯನ್ನು ಒಪ್ಪಿಸಿ, ತಾನೇ ಅವಳನ್ನು ವಿವಾಹ ಆಗಬೇಕು ಅಂತ ಹೀಗೆ ನಾಟಕವಾಡಿದ್ದಂತೆ…’

‘ಪಾಪಾ… ಆ ನಾದಿನಿ…’

‘ಪಾಪಾ ಏನಿಲ್ಲ… ಆ ಹುಡುಗಿಗೆ ಗೊತ್ತಿತ್ತಂತೆ… ಇಬ್ಬರೂ ಸೇರಿ ಆಡಿದ ನಾಟಕ…’

‘ಓ… ಸರಿ… ಅವರಿಬ್ಬರಿಗೂ ಈಗ ಜೈಲು ಪಾಲು?’

‘ಭಾವ ಜೈಲು ಪಾಲು… ಹುಡುಗಿ ಪಾಪಾ ಮುಗ್ದೆ ಅವಳನ್ನು ಆತ ದಾರಿ ತಪ್ಪಿಸುತ್ತಿದ್ದ…’

‘ಎರಡು ವರ್ಷದ ಹಿಂದೆ ಶಾಲೆಯೊಂದರಲ್ಲಿ ಚಿಕ್ಕ ಮಗುವಿನ ಮೇಲೆ ದೌರ್ಜನ್ಯವಾಗಿತ್ತು. ನಾವೆಲ್ಲಾ ಗಲಾಟೆ ಮಾಡಿದ್ವಿ… ಆ ಟೀಚರ್ರನ್ನು ಅರೆಸ್ಟ್ ಮಾಡಿದ್ದರು. ಆ ಕೇಸು ಏನಾಯ್ತೋ?’

‘ಯಾರಿಗೆ ಗೊತ್ತು? ಇನ್ನೊಂದು ಶಾಲೆಯಲ್ಲೂ ಹೀಗೇ ಕೇಸಾಗಿತ್ತು… ಪೊಲೀಸರು ವಿಚಾರಣೆ ಮಾಡಿದಾಗ ಗೊತ್ತಾಯಿತು. ಮ್ಯಾನೇಜ್ ಮೆಂಟಿನಲ್ಲಿ ಜಗಳ ಅಂತ… ಆ ಶಾಲೆಯಿದ್ದ ಜಾಗದ ಒಡೆತನದ ಬಗ್ಗೆ ವಿವಾದವಿತ್ತು… ಅದಕ್ಕಾಗಿ ಗುಂಪುಗಳಿದ್ದವು. ಇದು ಯಾರದೋ ಮುಖಕ್ಕೆ ಮಸಿ ಬಳೆಯಲು ಬಳಸಿದ ತಂತ್ರ… ಹಲ್ಲೆ, ಲೈಂಗಿಕ ದೌರ್ಜನ್ಯ ಅಂದರೆ ಸುದ್ದಿಯಾಗುತ್ತದೆ… ಅದಕ್ಕೆ ಹಾಗೆ ಮಾಡಿದ್ರಂತೆ…’

‘ಓ…’

‘ನೀವೇನು ಓ… ಓ… ಅಂದುಕೊಂಡು? ನೆನ್ನೆ ಮೊನ್ನೆ ಹುಟ್ಟಿದವರೇನು ನೀವು?’

ಮಾತನಾಡುತ್ತಿದ್ದವರು ನನ್ನ ಮೇಲೆ ರೇಗಿ ಹೊರಟುಹೋದರು.

ಸುಮ್ಮನೆ ಕುಳಿತೆ. ನಿಜವೇ… ನಮ್ಮ ಸಮಾಜದಲ್ಲಿ ಕಳಂಕ ಹೊತ್ತ ಹೆಣ್ಣಿನ ಸ್ಥಿತಿ ಶೋಚನೀಯವೇ. ಅವಳ ಹೆಸರು ಕೆಡಿಸಿಬಿಟ್ಟರೆ, ಅವಳನ್ನು ಯಾರು ಮದುವೆಯಾಗುವುದಿಲ್ಲ… ಮದುವೆ ಆಗಿದ್ದರೆ ಅದು ಮುರಿದು ಬೀಳುತ್ತದೆ, ಕೆಲಸ ಮಾಡುತ್ತಿದ್ದರೆ, ನೆಮ್ಮದಿಯಾಗಿ ಕೆಲಸ ಮಾಡಲು ಆಗುವುದಿಲ್ಲ… ರಸ್ತೆಯಲ್ಲಿ ತಲೆ ಎತ್ತಿಕೊಂಡು ತಿರುಗಾಡಲು ಆಗುವುದಿಲ್ಲ… ಹಾಗಾಗಿಯೇ ಹೆಣ್ಣು ಮಕ್ಕಳಿಗೆ ಕಷ್ಟಪಾಡುಗಳು ಹೆಚ್ಚು.

ನಮ್ಮ ಮಾವನವರು, ಟ್ರಿಪಲ್ ಮರ್ಡರ್ ರಾಮನಾಥ ಅಂತ ಒಂದುಕೇಸಿನ ಬಗ್ಗೆ ಹೇಳುತ್ತಿದ್ದರು. ಆ ರಾಮನಾಥ ಎಂಬುವವನು ಮೂರು ಮಂದಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿದ್ದಂತೆ. ಅವನಿಗೆ ಇಬ್ಬರು ತಂಗಿಯರು. ಕೊಲೆಗಾರನ ತಂಗಿಯರು ಎಂದು ಅವರಿಬ್ಬರಿಗೂ ಮದುವೆಯಾಗಲಿಲ್ಲವಂತೆ. ಹದಿನಾಲ್ಕು ವರ್ಷ ಜೈಲು ಅನುಭವಿಸಿ ಬಂದ ಅವನಿಗೆ, ಅವನ ಮೂವತ್ತೆಂಟನೇ ವಯಸ್ಸಿನಲ್ಲಿ ಇಪ್ಪಾತ್ತಾರು ವರ್ಷದ ಹುಡುಗಿಯ ಜೊತೆ ಮದುವೆಯಾಯಿತಂತೆ… ಸಂಸಾರ ನಂತರ ಮಕ್ಕಳು ಮಾಡಿಕೊಂಡು ಅವನು ಹಾಯಾಗಿದ್ದನಂತೆ.. ಅವನ ಹಿಂದೆ ಹುಟ್ಟಿದ ತಪ್ಪಿಗೆ ಅವನ ತಂಗಿಯರಿಬ್ಬರೂ ಅವಿವಾಹಿತರಾಗಿ ಅವರಿವರ ಮನೆ ಚಾಕರಿ ಮಾಡಿಕೊಂಡು ಕಷ್ಟಪಟ್ಟರಂತೆ.

ಕಥೆಯೆಂದುಕೊಂಡರೂ ಸಂಕಟವಾಗುತ್ತದೆ.

ಲೈಂಗಿಕ ದೌರ್ಜನ್ಯವೆಸಗುವುದು, ರೇಪ್ ಮಾಡುವುದು (ಮಾನಹರಣ, ಮಾನಭಂಗ… ಎಂಬ ಪದಗಳ ಬಳಕೆ ನನಗೆ ಇಷ್ಟವಿಲ್ಲ… ಮಾನ ಇರುವುದು ಬರೀ ಅಷ್ಟಕ್ಕೆ ಎಂಬಂತ ಭಾವ ಕೊಡುತ್ತದೆ.) ಜೊತೆಗೆ ರೇಪ್ ಆಗುವುದು ಒಂದು ಹೆಣ್ಣನ್ನು ನೋಡಿ ಒಬ್ಬ ಗಂಡಸಿಗೆ ಬಯಕೆ ಕೆರಳಿತು ಎಂಬುದಕಷ್ಟೇ ಅಲ್ಲ.

ತುಂಡುಡುಗೆ ತೊಟ್ಟ ಹೆಂಗಸಿಗೆ ಏನು ಬೇಕಾದರೂ ಮಾಡಬಹುದು ಎಂಬ ಕಲ್ಪನೆ, ಧಿಕ್ಕರಿಸಿದ ಹೆಣ್ಣಿಗೆ ಪಾಠ ಕಲಿಸಲು, ಸೇಡು ತೀರಿಸಿಕೊಳ್ಳಲು, ಅವಳ ಕುಟುಂಬದ ಮಾನ ಕಳೆಯಲು, ಆಸ್ತಿಯ ವಿಷಯವಾಗಿ ಜಗಳವಿದ್ದರೆ, ಹುಡುಗಿಯ ಗಂಡ, ಅಪ್ಪ ಅಥವಾ ಸಹೋದರರ ಮೇಲೆ ದ್ವೇಷವಿದ್ದರೆ ಅಥವಾ ಅವಳನ್ನು ಮದುವೆಯಾಗಬೇಕು ಎಂಬ ಬಯಕೆ ಇದ್ದರೆ… (ನಾಯಿ ಮುಟ್ಟಿದ ಮಡಿಕೆ ನಾಯಿಗೇ ಅರ್ಪಣೆ!) ಗಂಡಸು ಏನು ಮಾಡಿದರೂ ನಡೆಯುತ್ತದೆ ಎಂಬ ಭಾವವಿದ್ದರೆ… ಕಾನೂನು ಹಾಗೂ ಪೊಲೀಸರ ಭಯ ಇಲ್ಲದಿದ್ದರೆ… ಹೀಗೆ ಕಾರಣಗಳ ಪಟ್ಟಿ ಮಾಡುತ್ತಾ ಹೋಗಬಹುದು.

ಇಲ್ಲಿನ ಸಮಾಜದ, ವ್ಯವಸ್ಥೆಯ, ಪರಿಸರದ ಅರಿವೇ ಇಲ್ಲದೆ, ‘ಅಮೆರಿಕೆಯಲ್ಲಿ ಒಂಟಿಯಾಗಿ ಓಡಾಡುತ್ತೇನೆ. ಇಲ್ಲಿ ಕಷ್ಟ’ ಎನ್ನುವ ಮಹಿಳೆಯರನ್ನು ನೋಡಿದರೂ ರೇಗುತ್ತದೆ. ಕುಡಿದು ಗಾಡಿ ಓಡಿಸಿದ ಮಗನನ್ನು ಬಿಡಿಸಿಕೊಳ್ಳಲು ತಮ್ಮ Contact ಬಳಸಿಕೊಳ್ಳುವ, ನಮ್ಮ ನಾಡಿನ ಸೊಗಡಿನ ಪರಿಚಯವೇ ಇಲ್ಲದೆ, ಇಂಗ್ಲೀಷ್ ಮಿಡಿಯಾದಲ್ಲಿ ಪತ್ರಿಕೆಗಳಲ್ಲಿ ‘Bangalore is unsafe’ ಎಂಬಂತಹ ಹೇಳಿಕೆ ಕೊಡುವ, ಲೇಖನ ಬರೆಯುವವರನ್ನು ಕಂಡರೂ ರೇಗುತ್ತದೆ.

‘ಅಮೆರಿಕ, ಇಂಗ್ಲೆಂಡಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಬಲತ್ಕಾರದ ಪ್ರಕರಣಗಳು ಕಡಿಮೆ…’ ಎಂದು ಸಮರ್ಥಿಸಿಕೊಳ್ಳುವವರೂ ಇದ್ದಾರೆ. ಹೆಣ್ಣಿನ ಬಲತ್ಕಾರದ ಸಂಖ್ಯೆ ದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ಮಾನದಂಡ ಆಗಿರುವುದು ನಿಜ.

ಹಾಗೇನಿಲ್ಲ.. ನಮ್ಮ ದೇಶದಲ್ಲಿ report ಆಗುವುದಿಲ್ಲ. ಪ್ರಕರಣ ದಾಖಲಿಸಿದರೆ ಹುಡುಗಿಗೆ ಅವಳ ಮನೆಯವರಿಗೇ ಕಷ್ಟ. ಅವಳಿಗೆ ಮದುವೆಯಾಗುವುದಿಲ್ಲ. ರೇಪ್ ಮಾಡಿದವನಿಗಿಂಥ ರೇಪ್ ಆದ ಹುಡುಗಿಯೇ ಅಪರಾಧಿ. ಅವಳು ಹಾಕಿರುವ ಉಡುಗೆ, ಅವಳು ಮನೆಯಿಂದಾಚೆ ಇದ್ದ ಸಮಯ, ಕಾರಣ ಎಲ್ಲ ಮುಖ್ಯವಾಗಿಬಿಡುತ್ತದೆ. ಎಷ್ಟು ವರ್ಷಗಳಾದರೂ ತನಿಖೆ ಮುಗಿಯುವುದಿಲ್ಲ… ಆರೋಪಿಗೆ ಶಿಕ್ಷೆಯಾಗುವುದಿಲ್ಲ. ಪುರಾವೆ, ದಾಖಲೆ ಎಂದು ದೂರು ದಾಖಲಿಸಿದವರಿಗೇ ಕಷ್ಟ. ತ್ವರಿತವಾಗಿ ಸಿಗದ ನ್ಯಾಯಕ್ಕೆ ಬೆಲೆಯಿಲ್ಲ..

ಎಷ್ಟು ನಿಜವೋ ಗೊತ್ತಿಲ್ಲ ನನ್ನ ಸ್ನೇಹಿತೆ ಹೇಳಿದ್ದು…

ಸೌದಿಯಲ್ಲಿ ರೇಪ್ ಮಾಡಿದವನಿಗೆ ಕ್ರೂರ ಶಿಕ್ಷೆಯಿದೆಯಂತೆ. ಆದರೆ ರೇಪ್ ಆದ ಮಹಿಳೆ, ಅವಳು ಒಂಟಿಯಾಗಿ ಹೋಗಿದಕ್ಕೆ ಸಕಾರಣ ಕೊಡಬೇಕು… ಹಾಗೂ ಇಬ್ಬರು ಪುರುಷರು Witnessಗಳಾಗಿ ಬರಬೇಕು. ಕಾನೂನು ಹೀಗಿರುವಾಗ ಅಲ್ಲಿ ರೇಪ್ ಗಳು ದಾಖಲಾಗುವುದೇ ಇಲ್ಲ. ದಾಖಲಾಗದ್ದು ಇಲ್ಲವೇ ಇಲ್ಲ… ಘಟಿಸಿಯೇ ಇಲ್ಲ.

Justice delayed is justice denied ಎಂಬ ನುಡಿಗಟ್ಟು ಈ ವಿಚಾರದಲ್ಲಿ ಅತ್ಯಂತ ಸೂಕ್ತ. ನ್ಯಾಯಾಲಯಕ್ಕೆ ಹೋದರೆ ನ್ಯಾಯ ಸಿಕ್ಕಿ ಅಪರಾಧಿಗೆ ಶಿಕ್ಷೆಯಾಗುವ ಹೊತ್ತಿಗೆ ಆ ಹೆಣ್ಣಿನ ಜೀವನ ಮುಗಿದೇ ಹೋಗಿರುತ್ತದೆ. She will be punished for no fault of her. ಅದಕ್ಕಾಗಿ ಅವಳಿಗೆ ಅನುಕೂಲವಾಗಲಿ, rape ಮಾಡುವ ಗಂಡಸಿಗೆ ಘೋರ ಶಿಕ್ಷೆ ಎಂದು ಕಾನೂನುಗಳನ್ನು Women centric (ಸ್ತ್ರೀ ಪರ) ಮಾಡಲಾಗಿದೆ ನಮ್ಮ ದೇಶದಲ್ಲಿ. ಅದು ಮತ್ತೆ ಹಲವಾರು ಹೊಸ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ.

ಆ ಕಾನೂನಿನ ಉಪಯೋಗ (ದುರ್ಬಳಕೆ) ಪಡೆದುಕೊಂಡು ಗಂಡಸರ ಮೇಲೆ ಸೇಡು ತೀರಿಸಿಕೊಳ್ಳಲು, ಅವರಿಂದ ಹಣ ಕೀಳಲು (blackmail) ಬಳಸಿಕೊಳ್ಳಲಾಗುತ್ತಿದೆ. ಮುಂದಿನ ಲೇಖನದಲ್ಲಿ ಅದರ ಬಗ್ಗೆ ವಿಷಧವಾಗಿ ಬರೆಯುತ್ತೇನೆ.

ಕಾನೂನು ಬೇರೆ, ನ್ಯಾಯ ಬೇರೆ ಆಗಬಾರದು. ಹೆಣ್ಣಿಗೊಂದು, ಗಂಡಿಗೊಂದು ನ್ಯಾಯ ಆಗಬಾರದು. ತನಗೊಂದು ಪರರಿಗೊಂದು ನ್ಯಾಯ ಆಗಬಾರದು.

ನ್ಯಾಯ ಸತ್ಯ, ಪ್ರಶ್ನಾತೀತವಾಗಿರಬೇಕು.

Leave a Reply