ರಾಯಣ್ಣ ಬ್ರಿಗೇಡ್ ವಿರುದ್ಧ ಯಡಿಯೂರಪ್ಪ ಗರಂ, ಕೆಎಸ್ಆರ್ ಟಿಸಿಗೆ ₹ 100 ಕೋಟಿ ಲಾಭ, ಯೋಧರ ಅಳಲು- ವರದಿ ಕೇಳಿದ ಮೋದಿ, ಜಲ್ಲಿಕಟ್ಟು ಆಚರಣೆಗೆ ಅನುಮತಿ ನೀಡಲು ಸುಪ್ರೀಂ ನಕಾರ

ಸ್ವಾಮಿ ವಿವೇಕಾನಂದರ 154ನೇ ಜಯಂತಿ ಅಂಗವಾಗಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಸಚಿವರಾದ ಕೆ.ಜೆ ಜಾರ್ಜ್ ಮತ್ತು ಬಸವರಾಜರಾಯರೆಡ್ಡಿ.

ಡಿಜಿಟಲ್ ಕನ್ನಡ ಟೀಮ್:

‘ರಾಯಣ್ಣ ಬ್ರಿಗೇಡ್ ನಲ್ಲಿ ಭಾಗಿಯಾದ್ರೆ ಪಕ್ಷದಿಂದ ಉಚ್ಛಾಟಿಸ್ತೇನೆ: ಯಡಿಯೂರಪ್ಪ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಲ್ಲಿ ಬಿಜೆಪಿಯ ಯಾವುದೇ ಮುಖಂಡರು, ಕಾರ್ಯಕರ್ತರು ಭಾಗವಹಿಸಬಾರದು. ಪಕ್ಷದ ಆದೇಶ ಉಲ್ಲಂಘಿಸಿ ಬ್ರಿಗೇಡಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಅಂತಹವರನ್ನು ಪಕ್ಷದಿಂದ ಉಚ್ಛಾಟಿಸುತ್ತೇವೆ…’ ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿರುವ ಎಚ್ಚರಿಕೆ.

ಪಕ್ಷದ ಆದೇಶ ತಿರಸ್ಕರಿಸಿ ರಾಯಣ್ಣ ಬ್ರಿಗೇಡ್ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ ಯಡಿಯೂರಪ್ಪನವರು, ಈಶ್ವರಪ್ಪ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ವಿಚಾರ ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದರು.

‘ಪಕ್ಷದ ಹೊರಗೆ ಇಂತಹ ಯಾವುದೇ ಚಟುವಟಿಕೆ ನಡೆಯಬಾರದು ಎಂದು ನಾನು ಮತ್ತು ರಾಜ್ಯ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಮುರಳಿಧರ್ ಇಬ್ಬರೂ ಎಚ್ಚರಿಕೆ ನೀಡಿದ್ದೇವೆ. ಆದರೂ ಈಶ್ವರಪ್ಪ ಸಭೆಗಳನ್ನು ನಡೆಸುತ್ತಿರುವ ಬಗ್ಗೆ ವರಿಷ್ಠರು ಗಮನಿಸುತ್ತಿದ್ದಾರೆ. ಬ್ರಿಗೇಡ್ ಬಗ್ಗೆ ಮುರಳಿಧರ್ ಅವರು ಸಹ ವರಿಷ್ಠರಿಗೆ ಮಾಹಿತಿ ನೀಡುತ್ತಿದ್ದಾರೆ. ಪಕ್ಷದ ವರಿಷ್ಠರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದರು ಯಡಿಯೂರಪ್ಪ.

ಈ ವರ್ಷ ಕೆಎಸ್ಆರ್ ಟಿಸಿಗೆ ₹ 100 ಕೋಟಿಗೂ ಹೆಚ್ಚು ಲಾಭ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ₹ 100 ಕೋಟಿಗೂ ಹೆಚ್ಚು ಲಾಭ ಪಡೆದಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, ಲಾಭದ ಜತೆಗೆ ಹಲವು ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಸಂಸ್ಥೆ ಲಿಮ್ಕಾ ದಾಖಲೆ ಪುಸ್ತಕಕ್ಕೂ ಸೇರ್ಪಡೆಯಾಗಿದೆ ಎಂದರು. ‘ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳಲ್ಲಿನ ನಷ್ಟದ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಸವಲತ್ತು ಕಲ್ಪಿಸುವ ಉದ್ದೇಶದಿಂದ ಹೊಸದಾಗಿ 5273 ಬಸ್ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ನೋಟ್ ಬ್ಯಾನ್, ನೌಕರರ ವೇತನ ಹೆಚ್ಚಳ, ಡೀಸೆಲ್ ದರ ಹೆಚ್ಚಳ, ಸಾರಿಗೆ ಮುಷ್ಕರ, ರಾಜ್ಯ ಬಂದ್ ಗಳಿಂದಾಗಿ ಸಂಸ್ಥೆಗೆ ಲಾಭದಲ್ಲಿ ₹ 55 ಕೋಟಿಯಷ್ಟು ಕಡಿಮೆಯಾಗಿದೆ’ ಎಂದರು.

ಯೋಧರ ವಿಡಿಯೋ ಪ್ರಕರಣ: ವರದಿ ಕೇಳಿದ ಮೋದಿ

ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂಬ ಬಿಎಸ್ಎಫ್ ಯೋಧನ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಿರುವುದಕ್ಕೆ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಪತ್ನಿ ಶರ್ಮಿಳಾ ಯಾದವ್ ಸಂತೋಷ ವ್ಯಕ್ತಪಡಿಸಿದ್ದು, ‘ಈ ವಿಷಯದಲ್ಲಿ ಪ್ರಧಾನಿಗಳು ಮಧ್ಯಪ್ರವೇಶಿಸಬೇಕು ಎಂದು ನನ್ನ ಪತಿ ನಿರೀಕ್ಷೆಯಾಗಿತ್ತು. ಈಗ ಮೋದಿಯವರ ಮಧ್ಯಪ್ರವೇಶದಿಂದ ಯೋಧರ ಪರಿಸ್ಥಿತಿ ಸುಧಾರಣೆಯಾದರೆ ಸಾಕು’ ಎಂದಿದ್ದಾರೆ.

ಬಹದ್ದೂರ್ ಯಾದವ್ ಅವರ ಬೆನ್ನಲ್ಲೇ ಸಿಆರ್ ಪಿಎಫ್ ಯೋಧ ಜೀತ್ ಸಿಂಗ್ ಎಂಬಾತ ಸಹ ವಿಡಿಯೋ ಮೂಲಕ ತಮ್ಮ ಸಂಕಷ್ಟಗಳನ್ನು ತೋಡಿಕೊಂಡಿದ್ದಾರೆ. ನಾವು ಸಿಆರ್ ಪಿಎಫ್ ನಲ್ಲಿ ಎಲ್ಲ ರೀತಿಯ ಸೇವೆಯನ್ನು ಸಲ್ಲಿಸುತ್ತೇವೆ. ನಮಗೆ ಬೇರೆಯವರಿಗೆ ಸಿಗುವ ರೀತಿಯಲ್ಲಿ ರಜೆ ಸಿಗುವುದಿಲ್ಲ. ಕುಟುಂಬದ ಜತೆ ಕಾಲ ಕಳೆಯಲು ಸಾಧ್ಯವಿಲ್ಲ. ನಮಗೆ ಪಿಂಚಣಿ ಸಿಗುವುದಿಲ್ಲ, ಸೈನಿಕರಿಗೆ ಸಿಗುವಂತೆ ಮೀಸಲು ಸಿಗುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಈ ವಿಡಿಯೋಗೆ ಸಿಆರ್ ಪಿಎಫ್ ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಜೀತ್ ಸಿಂಗ್ ಅವರು ಸಿಆರ್ ಪಿಎಫ್ ಯೋಧರ ಸೌಲಭ್ಯಕ್ಕಾಗಿ ಧ್ವನಿ ಎತ್ತಿದ್ದಾರೆ ಹೊರತು ಸಂಸ್ಥೆ ವಿರುದ್ಧ ದೂರಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಜಲ್ಲಿಕಟ್ಟಿಗೆ ಅನುಮತಿ ನೀಡಲು ಸುಪ್ರೀಂ ನಕಾರ

ಈ ಬಾರಿಯ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆ ಮಾಡಲು ಅನುಮತಿ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸಂಕ್ರಾಂತಿ ಹಬ್ಬ ಸಮೀಪಿಸಿರುವ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿರುವ ಜಲ್ಲಿಕಟ್ಟು ಆಚರಣೆಗೆ ಮತ್ತೆ ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಜತೆಗೆ ಸಂಕ್ರಾಂತಿ ಹಬ್ಬಕ್ಕೂ ಮುನ್ನ ಈ ಬಗ್ಗೆ ತೀರ್ಪು ಪ್ರಕಟಿಸಬೇಕು ಎಂಬ ಮನವಿಯನ್ನು ಮಾಡಲಾಗಿತ್ತು. ಈ ಬಗ್ಗೆ ಗುರುವಾರ ಈ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ‘ಈ ಕುರಿತು ಕರಡನ್ನು ರಚಿಸಲಾಗಿದೆ. ಆದರೆ ಶನಿವಾರದ ಒಳಗೆ ತೀರ್ಪು ನೀಡಲು ಸಾಧ್ಯವಿಲ್ಲ’ ಎಂದಿದೆ. ಇದರೊಂದಿಗೆ ಈ ವರ್ಷವೂ ಜಲ್ಲಿಕಟ್ಟು ಆಚರಿಸುವ ತಮಿಳುನಾಡಿನ ಜನರ ಆಸೆ ಬಹುತೇಕ ಕಮರಿದಂತಾಗಿದೆ.

ಸಹರಾ ಮುಖ್ಯಸ್ಥನಿಗೆ ಸುಪ್ರೀಂ ಎಚ್ಚರಿಕೆ

ಫೆಬ್ರವರಿ 6ರ ಒಳಗಾಗಿ ₹ 600 ಕೋಟಿಯನ್ನು ಸಹರಾದ ಸೆಬಿ ಮರು ಪಾವತಿ ಖಾತೆಗೆ ನೀಡಿ, ಇಲ್ಲವಾದರೆ ಜೈಲಿಗೆ ಹೋಗಿ… ಇದು ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ ಸುಪ್ರೀಂ ಕೋರ್ಟ್ ನೀಡಿರುವ ಎಚ್ಚರಿಕೆ. ಸಹರಾ ರಿಯಲ್ ಎಸ್ಟೇಟ್ ಸಮೂಹ ಹಾಗೂ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಕಂಪನಿಗಳು ಹೂಡಿಕೆದಾರರಿಂದ ₹ 17600 ಕೋಟಿಯನ್ನು ಸಂಗ್ರಹಿಸಿತ್ತು. ಆದರೆ ಅವರಿಗೆ ಹಣ ಪಾವತಿ ಮಾಡದೇ ಅಪರಾದ ಎಸಗಿತ್ತು ಈ ಹಿನ್ನೆಲೆಯಲ್ಲಿ ಸುಬ್ರತಾ ರಾಯ್ ಅವರನ್ನು 2014 ಮೇ 4ರಂದು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಸಹರಾ ಕಂಪನಿಯು ತನ್ನ ಹೂಡಿಕೆದಾರರಿಗೆ ಶೇ.15 ರಷ್ಟು ಬಡ್ಡಿಯೊಂದಿಗೆ ಅವರ ಹಣ ಹಿಂತಿರುಗಿಸುವಂತೆ ಹೇಳಿದೆ. ಸಹರಾ ಈವರೆಗೂ ಸುಮಾರು ₹ 18 ಸಾವಿರ ಕೋಟಿಯಷ್ಟು ಹಣವನ್ನು ಮರುಪಾವತಿ ಮಾಡಿದೆ. ಈಗ ಇದರ ಭಾಗವಾಗಿ ಫೆ.6ರ ಒಳಗಾಗಿ ಸಹರಾ ₹ 600 ಕೋಟಿಯನ್ನು ಮರುಪಾವತಿ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಹೊಗಳಿದ ಗೌಡರು

ಆದಿಚುಂಚನಗಿರಿಯ ಪೀಠಾಧ್ಯಕ್ಷರಾಗಿದ್ದ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಅನ್ನ, ಅಕ್ಷರ ಸೇರಿದಂತೆ ಸಮಾಜಕ್ಕೆ ನೀಡಿರುವ ಕೊಡುಗೆ ಸೂರ್ಯ- ಚಂದ್ರರಿರುವವರೆಗೂ ಚಿರಸ್ಥಾಯಿಯಾಗಿರುತ್ತದೆ ಎಂದು ಶ್ಲಾಘಿಸಿದ್ದಾರೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಬಿಜಿಎಸ್ ಹೆಲ್ತ್ ಅಂಡ್ ಎಜುಕೇಷನ್ ಸಿಟಿಯಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ದೇವೇಗೌಡರು, ‘ಎಲ್ಲ ಸಮುದಾಯದವರು ಸುಖ-ಶಾಂತಿಯಿಂದ ಬಾಳಬೇಕೆಂದು ಬಯಸಿ ಕೊನೆಗಳಿಗೆವರೆಗೂ ಶ್ರೀಗಳು ಶ್ರಮಿಸಿದರು. ಗ್ರಾಮೀಣ ಭಾಗದ ಬಡ ವಿದ್ಯರ್ಥಿಗಳಿಗೆ ಅನ್ನದಾಸೋಹ, ವಿದ್ಯಾ ದಾಸೋಹ ಒದಗಿಸಲು ಹಳ್ಳಿ ಹಳ್ಳಿಗಳಿಗೆ ಸುತ್ತಿ ಶ್ರೀಗಳು ಕಷ್ಟ ಪಟ್ಟು ಮಠವನ್ನು ಎತ್ತರಕ್ಕೆ ಬೆಳೆಸಿದ್ದಾರೆ’ ಎಂದು ಸ್ಮರಿಸಿದರು.

Leave a Reply