ನನ್ನ ಗಂಡ ಅಶಿಸ್ತಿನ ವ್ಯಕ್ತಿಯಾಗಿದ್ದರೆ ಅವನ ಕೈಗೆ ಬಂದೂಕು ಕೊಟ್ಟಿದ್ದೇಕೆ? ಬಿಎಸ್ಎಫ್ ಗೆ ಯೋಧನ ಹೆಂಡತಿ ಪ್ರಶ್ನೆ

ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಮತ್ತು ಪತ್ನಿ ಶರ್ಮಿಳಾ ಯಾದವ್.

ಡಿಜಿಟಲ್ ಕನ್ನಡ ಟೀಮ್:
‘ನನ್ನ ಗಂಡನ ಮಾನಸಿಕ ಸ್ಥಿತಿ ಸರಿ ಇಲ್ಲದಿದ್ದರೆ ಅಥವಾ ಅವರು ಅಶಿಸ್ತಿನ ಸಿಪಾಯಿ ಆಗಿದ್ದರೆ ಆತನ ಕೈಗೆ ಬಂದೂಕು ಕೊಟ್ಟಿರುವುದಾದರೂ ಯಾಕೆ?…’ ಇದು ಯೋಧ ತೆಜ್ ಬಹದ್ದೂರ್ ಯಾದವ್ ಪತ್ನಿ ಶರ್ಮಿಳಾ ಯಾದವ್ ಬಿಎಸ್ಎಫ್ ಹಿರಿಯ ಅಧಿಕಾರಿಗಳಿಗೆ ಹಾಕಿರುವ ಸವಾಲು.

ಮೊನ್ನೆಯಷ್ಟೇ ಬಹದ್ದೂರ್ ಯಾದವ್, ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗಡಿ ಕಾಯುತ್ತಿರುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ಸಿಗುತ್ತಿರುವ ಬಗ್ಗೆ ತನ್ನ ಅಳಲನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ‘ಬಹದ್ದೂರ್ ಯಾದವ್ ಮದ್ಯಪಾನ ವ್ಯಸನಿ, ಸಾಕಷ್ಟು ಬಾರಿ ಕರ್ತವ್ಯದಿಂದ ತಪ್ಪಿಸಿಕೊಳ್ಳುವ ಮೂಲಕ ಅಶಿಸ್ತಿನ ವರ್ತನೆ ತೋರಿದ್ದಾನೆ’ ಎಂದು ಬಿಎಸ್ಎಫ್ ಯಾದವ್ ವರ್ತನೆ ಮೇಲೆ ಕಳಂಕ ಹೊರಿಸಿತ್ತು. ಈ ಬಗ್ಗೆ ಡಿಜಿಟಲ್ ಕನ್ನಡವೂ ವರದಿ ಮಾಡಿತ್ತು.

ಬಿಎಸ್ಎಫ್ ನಿಂದ ತನ್ನ ಗಂಡನ ತೇಜೋವಧೆಯಾಗುತ್ತಿರುವುದನ್ನು ಖಂಡಿಸಿರುವ ಬಹದ್ದೂರ್ ಯಾದವ್ ಪತ್ನಿ ಶರ್ಮಿಳಾ ಯಾದವ್, ಈಗ ಬಿಎಸ್ಎಫ್ ಹಿರಿಯ ಅಧಿಕಾರಿಗಳಿಗೆ ನೇರವಾಗಿ ಪ್ರಶ್ನೆ ಹಾಕಿದ್ದಾಳೆ.

‘ನನ್ನ ಪತಿಯ ಮಾನಸಿಕ ಸ್ಥಿತಿ ಉತ್ತಮವಾಗಿಲ್ಲವಾದರೆ, ಅವರು ಅಶಿಸ್ತಿನ ವರ್ತನೆ ತೋರುತ್ತಿರುವುದು ನಿಜವೇ ಆದರೆ, ಅಂತಹವರ ಕೈಗೆ ಬಂದೂಕು ಕೊಟ್ಟು ಸೂಕ್ಷ್ಮ ಗಡಿ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜಿಸಿರುವುದಾದರೂ ಏಕೆ?

ನನ್ನ ಪತಿ ಅನ್ಯಾಯವನ್ನು ಸಹಿಸುವುದಿಲ್ಲ. ಅದರ ವಿರುದ್ಧ ನೇರವಾಗಿ ಮಾತನಾಡುತ್ತಾರೆ. ಇದು ಅವರ ಸಮಸ್ಯೆಯಾಗಿದೆ. ಇದರಿಂದ ಅವರ ಸೇವಾ ಅವಧಿಯಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ. ಈ ಹಿಂದೆ ಅವರು ಸತ್ಯವನ್ನು ನುಡಿದಿದ್ದರ ಪರಿಣಾಮವಾಗಿ ಸಾಕಷ್ಟು ಬಾರಿ ಶಿಕ್ಷೆಯನ್ನು ಪಡೆದಿದ್ದಾರೆ. ಬಿಎಸ್ಎಫ್ ಪಡೆಯು ದೇಶದ ಶಿಸ್ತಿನ ಪಡೆಗಳಲ್ಲಿ ಒಂದಾಗಿದೆ. ಅಲ್ಲಿ ಸಣ್ಣ ಪುಟ್ಟ ತಪ್ಪುಗಳಿಗೂ ಅವಕಾಶವಿರುವುದಿಲ್ಲ. ಹೀಗಿರುವಾಗ ನನ್ನ ಪತಿ ಇಷ್ಟೆಲ್ಲಾ ಅಶಿಸ್ತಿನ ವರ್ತನೆ ತೋರಿದ್ದರೆ ಅವರನ್ನು ಸೇವೆಯಲ್ಲಿ ಉಳಿಸಿಕೊಂಡಿರುವುದಾದರೂ ಯಾಕೆ?

ನನ್ನ ಪತಿ ಈ ಜನವರಿ 31ಕ್ಕೆ 20 ವರ್ಷಗಳ ಕಾಲ ಸೇವೆ ಪೂರೈಸಲಿದ್ದಾರೆ. ಅವರು ಇನ್ನು ಐದು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುವ ಆಸೆ ಹೊಂದಿದ್ದಾರೆ. ಆದರೆ ಹಿರಿಯ ಅಧಿಕಾರಿಗಳು ಅವರಿಗೆ ನಿವೃತ್ತಿ ಪಡೆಯುವಂತೆ ಒತ್ತಡ ಹಾಕುತ್ತಿದ್ದಾರೆ. ಅವರ ವಿಆರ್ಎಸ್ ಅರ್ಜಿಯನ್ನು ಈಗಾಗಲೇ ಅಂಗೀಕರಿಸಲಾಗಿದೆ. ಅವರಿಗೆ ಕಳಪೆ ಆಹಾರ ನೀಡುವ ಬಗ್ಗೆ ಸಾಕಷ್ಟು ಬಾರಿ ನನ್ನೊಂದಿಗೆ ಚರ್ಚೆ ಮಾಡಿದ್ದಾರೆ. ಇದನ್ನು ವಿರೋಧಿಸಿದರೆ ತೊಂದರೆ ಎದುರಾಗಬಹುದು ಎಂದು ಅವರಿಗೆ ಎಚ್ಚರಿಕೆಯನ್ನು ನೀಡಿದ್ದೆ. ಆದರೆ ಅವರು ವಿಡಿಯೋ ಪ್ರಕಟಿಸಿದ ನಂತರ ನನಗೆ ಅಚ್ಚರಿಯಾಯಿತು.

ಅವರ ಫೇಸ್ ಬುಕ್ಕಿನ ಪಾಸ್ ವರ್ಡ್ ನನ್ನ ಬಳಿ ಇತ್ತು. ಜನರು ಆ ವಿಡಿಯೋನ ನೈಜತೆ ಬಗ್ಗೆ ಪ್ರಶ್ನೆ ಮಾಡಿದ್ದರಿಂದ ನಾನು ಅದನ್ನು ದೃಢಪಡಿಸಬೇಕಾಯಿತು.’

ಹೀಗೆ ಶರ್ಮಿಳಾ ಯಾದವ್ ತನ್ನ ಪತಿಯ ಚಾರಿತ್ರ್ಯಕ್ಕೆ ಧಕ್ಕೆ ಮಾಡುತ್ತಿದ್ದ ಬಿಎಸ್ಎಫ್ ಹಿರಿಯ ಅಧಿಕಾರಿಗಳಿಗೆ ನೇರ ಪ್ರಶ್ನೆ ಹಾಕಿರುವುದು ನಿಜಕ್ಕೂ ಗಮನ ಸೆಳೆದಿದೆ. ಕೇಂದ್ರ ಗೃಹ ಇಲಾಖೆ ಈಗಾಗಲೇ ಈ ಪ್ರಕರಣದ ತನಿಖೆಗೆ ಆದೇಶ ನೀಡಿದೆ.

Leave a Reply