ರಾಜ್ಯ ಬಿಜೆಪಿಯಲ್ಲಿ ಆರಂಭವಾಯ್ತು ಪತ್ರ ಸಮರ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ? ಖಾದಿ ಕ್ಯಾಲೆಂಡರ್ ನಲ್ಲಿ ಗಾಂಧಿ ಬದಲಿಗೆ ಮೋದಿ ಚಿತ್ರದ ವಿವಾದ

ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಭರದಿಂದ ಸಾಗಿರುವ ಹೂ ವ್ಯಾಪಾರ…

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟು ಉಲ್ಬಣ

ರಾಜ್ಯ ಬಿಜೆಪಿಯಲ್ಲಿನ ಅಸಮಾಧಾನದ ಬಿಕ್ಕಟ್ಟು ದಿನೇ ದಿನೇ ಹೆಚ್ಚಾಗುತ್ತಿದೆ. ಪರಿಣಾಮ ಈಗ ಈ ಬಿಕ್ಕಟ್ಟು ಪತ್ರ ಸಮರದ ಹಂತ ತಲುಪಿದೆ. ಒಂದೆಡೆ ಪಕ್ಷದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನವರ ವರ್ತನೆ ಎಲ್ಲೆ ಮೀರುತ್ತಿದ್ದು, ತಕ್ಷಣವೇ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಇನ್ನು ಈಶ್ವರಪ್ಪನವರ ಆಪ್ತ ಭಾನು ಪ್ರಕಾಶ್ ಹಾಗೂ ಶಿವಯೋಗಿಸ್ವಾಮಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದು, ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಚರ್ಚಿಸಲು ಸಭೆ ಕರೆಯಬೇಕು ಎಂದು ಆಗ್ರಹಿಸಿದ್ದಾರೆ.

ಯಡಿಯೂರಪ್ಪನವರು ಅಮಿತ್ ಶಾ ಅವರಿಗೆ ಸುದೀರ್ಘ 10 ಪುಟಗಳ ಪತ್ರ ಬರೆದಿದ್ದು, ‘ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಪರಿಸ್ಥಿತಿಯನ್ನು ನಿಮ್ಮ ಮುಂದೆ ಇಟ್ಟಿರಲಿಲ್ಲ. ಆದರೆ, ದಿನೇ ದಿನೇ ಈಶ್ವರಪ್ಪನವರು ಶಿಸ್ತು ಉಲ್ಲಂಘನೆ ಮಾಡುವುದರ ಜತೆಗೆ, ತನಗೆ ಯಾರೂ ಏನು ಮಾಡಲು ಸಾಧ್ಯವಿಲ್ಲ ಎಂಬ ಮನೋಭಾವ ತೋರುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಲ್ಲಿ ಪಾಲ್ಗೊಳ್ಳಬಾರದು ಎಂದು ರಾಜ್ಯ ಉಸ್ತುವಾರಿ ಹೊತ್ತಿರುವ ಮುರಳಿಧರ ರಾವ್, ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷ ಅರುಣ್ ಸಿಂಗ್ ಹಾಗೂ ಮುಖಂಡರಾದ ರಾಮ್ ಲಾಲ್ ಸೂಚನೆ ನೀಡಿದ್ದರೂ ಈಶ್ವರಪ್ಪನವರು ಬ್ರಿಗೇಡ್ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಅಥವಾ ಆ ಅಧಿಕಾರವನ್ನು ನನಗೆ ಕೊಡಿ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ಭವಿಷ್ಯವಿದೆ. ಆದರೆ, ಈಶ್ವರಪ್ಪನವರ ನಡೆಯಿಂದ ಸಾರ್ವಜನಿಕವಾಗಿ ಗೊಂದಲ ಉದ್ಭವಿಸಿದೆ. ಪಕ್ಷಕ್ಕೆ ಇದು ಮಾರಕವಾಗಬಹುದು. ಅಷ್ಟೇ ಅಲ್ಲದೆ ಈಶ್ವರಪ್ಪನವರು ಪಕ್ಷದಲ್ಲಿ ನನ್ನ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಇತರರ ಬೆಂಬಲ ಸಿಕ್ಕಿರುವುದು ದುರಾದೃಷ್ಟಕರ’ ಎಂದು ವಿವರಿಸಿದ್ದಾರೆ. ಪತ್ರದ ಜತೆಗೆ ಬ್ರಿಗೇಡ್ ಸಂದರ್ಭದಲ್ಲಿ ಈಶ್ವರಪ್ಪನವರ ಭಾಷಣ ಸಿಡಿ, ಬ್ಯಾನರ್, ಬಂಟಿಂಗ್ಸ್ ಸೇರಿದಂತೆ ಇತರೆ ದಾಖಲೆಗಳನ್ನು ರವಾನಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಮತ್ತೊಂದೆಡೆ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟನ್ನು ಚರ್ಚಿಸುವ ಸಲುವಾಗಿ ಪಕ್ಷದ ಉನ್ನತ ಮಟ್ಟದ ಸಭೆ ಕರೆಯಬೇಕು ಎಂದು ಪತ್ರ ಬರೆಯಲಾಗಿದೆ. ‘ಜಾತಿ ಸಮಾವೇಶಗಳಿಗೆ ರಾಜಕಾರಣಿಗಳು ಹೋಗಬೇಕಾಗುತ್ತದೆ. ಈಶ್ವರಪ್ಪನವರು ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೆ ಹೋದರೆ ತಪ್ಪೇನು? ಇದು ಯಡಿಯೂರಪ್ಪನವರ ದ್ವಿಮುಖ ನೀತಿ. ಅಷ್ಟೇ ಅಲ್ಲದೆ ಹತ್ತಾರು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಈ ಪತ್ರದ ಮೂಲಕ ಕಾರ್ಯಕರ್ತರಿಗೆ ನ್ಯಾಯ ಒದಗಿಸಿಕೊಡುವ ಪ್ರಯತ್ನ ನಡೆಸುತ್ತಿದ್ದೇನೆ’ ಎಂದು ಭಾನುಪ್ರಕಾಶ್ ಹೇಳಿದ್ದಾರೆ.

ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸದಸ್ಯ ಬೇವಿನಮರದ್ ಜತೆಗೆ ಆರ್ಎಸ್ಸೆಸ್ ಬೆಂಬಲಿತ ಶಾಸಕರು, ಮಾಜಿ ಶಾಸಕರು ಯಡಿಯೂರಪ್ಪನವರಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಮಾಹಿತಿ ಬಂದಿವೆ.

ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ?

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. 30 ಕಿ.ಮೀ ಉದ್ದದ ಮಾರ್ಗಕ್ಕೆ ₹ 6 ಸಾವಿರ ಕೋಟಿ ವೆಚ್ಚವಾಗಲಿದ್ದು, ಈ ಕಾಮಗಾರಿಗೆ ತಗಲುವ ವೆಚ್ಚದ ಶೇ.50 ರಷ್ಟನ್ನು ಕೇಂದ್ರ ಭರಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಕೇಂದ್ರ ಹಣಕಾಸು ರಾಜ್ಯ ಸಚಿವ ಜಯಂತ್ ಸಿನ್ಙಾ ಶುಕ್ರವಾರ ವಿಧಾನ ಸೌಧದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದರು. ಈ ಸಭೆಯ ವೇಳೆ ರಾಜ್ಯ ಸರ್ಕಾರ ಈ ಪ್ರಸ್ತಾವನೆಯನ್ನು ನೀಡಿದೆ. ವಿಮಾನ ನಿಲ್ದಾಣ ಮಾರ್ಗದಲ್ಲಿರುವ ಸಂಚಾರಿ ದಟ್ಟಣೆ ನಿಯಂತ್ರಿಸಲು ಮೆಟ್ರೋ ಮಾರ್ಗ ಅನಿವಾರ್ಯ. ಈ ಮೊದಲು ಬುಲೆಟ್ ರೈಲು ಅಥವಾ ಮೋನೊ ರೈಲು ಸಂಪರ್ಕನೀಡಲು ಉದ್ದೇಶಿಸಲಾಗಿತ್ತು. ಆದರೆ ವೆಚ್ಚ ಹೆಚ್ಚಾಗುವ ಹಿನ್ನೆಲೆಯಲ್ಲಿ ಮೆಟ್ರೋ ಸಂಪರ್ಕ ಉತ್ತಮವಾಗಲಿದೆ. ರಾಜ್ಯ ಮತ್ತು ಕೇಂದ್ರದ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಸಲು ಕೇಂದ್ರ ಸಚಿವರು ಸಮ್ಮತಿ ನೀಡಿದ್ದಾರೆ. ನಾವು ಮಾರ್ಗದ ನಕ್ಷೆ ನೀಡಿದ ನಂತರ ಕೇಂದ್ರದ ಒಪ್ಪಿಗೆ ಅಧಿಕೃತವಾಗಿ ಹೊರಬೀಳಲಿದೆ ಎಂದಿದ್ದಾರೆ ಸಚಿವ ಜಾರ್ಜ್.

ಗಾಂಧಿ ಇಲ್ಲದ ಖಾದಿ ಕ್ಯಾಲೆಂಡರ್ ವಿವಾದ

ಕೇಂದ್ರ ಸರ್ಕಾರ ಸ್ವಾಮ್ಯದ ಖಾದಿ ಮತ್ತು ಗ್ರಾಮೊದ್ಯೋಗ ಸಂಸ್ಥೆಯ ಕ್ಯಾಲೆಂಡರ್ ನಲ್ಲಿ ಮಹಾತ್ಮ ಗಾಂಧಿ ಅವರ ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಬಳಕೆ ಮಾಡಿರುವುದು ಈಗ ಹೊಸ ವಿವಾದವಾಗಿದೆ. ಗಾಂಧಿಜಿ ಅವರ ಬದಲಿಗೆ ಮೋದಿ ಅವರ ಚಿತ್ರವನ್ನು ಪ್ರಕಟಿಸಿರುವುದಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲ ಟೀಕಿಸಿದ್ದಾರೆ. ‘ಖಾದಿ ಹಾಗೂ ಗಾಂಧೀಜಿ ಅವರು ನಮ್ಮ ಇತಿಹಾಸ, ಪರಿಶ್ರಮ ಹಾಗೂ ಸ್ವಾವಲಂಬನೆಯ ಪ್ರತೀಕ. ಗಾಂಧಿಜಿ ಅವರ ಚಿತ್ರವನ್ನು ತೆಗೆದು ಹಾಕಿರುವುದು ದೊಡ್ಡ ಪಾಪ’ ಎಂದು ಟೀಕೆ ಮಾಡಿದ್ದಾರೆ.

ಈ ವಿವಾದಕ್ಕೆ ಕೇಂದ್ರ ಸರ್ಕಾರದಿಂದ ತೆರೆ ಎಳೆಯುವ ಪ್ರಯತ್ನವೂ ನಡೆದಿದ್ದು, ‘ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆ ಕ್ಯಾಲೆಂಡರ್ ನಲ್ಲಿ ಮಹಾತ್ಮ ಗಾಂಧಿ ಅವರ ಚಿತ್ರ ಇರಬೇಕು ಎಂಬ ನಿಯಮಗಳೇನು ಇಲ್ಲ. ಈ ಹಿಂದೆಯೂ ಸಂಸ್ಥೆ ಕ್ಯಾಲೆಂಡರ್ ಗಳಲ್ಲಿ ಅನೇಕ ಬಾರಿ ಗಾಂಧಿ ಅವರ ಚಿತ್ರವನ್ನು ಕೈಬಿಡಲಾಗಿದೆ. 1996, 2002, 2005, 2011, 2013 ಹಾಗೂ 2016ರಲ್ಲಿ ಗಾಂಧಿ ಚಿತ್ರ ರಹಿತ ಕ್ಯಾಲೆಂಡರ್ ಗಳು ಬಂದಿವೆ. ಹೀಗಾಗಿ ಈ ವಿವಾದ ಅನಗತ್ಯ’ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಸ್ಪಷ್ಟನೆ ನೀಡಿದೆ. ಇದರ ಬೆನ್ನಲ್ಲೆ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆ ಮುಖ್ಯಸ್ಥ ವಿ.ಕೆ ಸಕ್ಸೇನಾ ಸಹ ಕ್ಯಾಲೆಂಡರ್ ನಲ್ಲಿ ಪ್ರಧಾನಿ ಅವರ ಚಿತ್ರ ಬಳಕೆಯನ್ನು ಸಮರ್ಥಸಿಕೊಂಡಿದ್ದಾರೆ.

ಬ್ರಿಜೇಶ್ ಕಾಳಪ್ಪ ರಾಜಿನಾಮೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಬ್ರಿಜೇಶ್ ಕಾಳಪ್ಪ ಅವರು ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ನ್ಯಾಯಾಲಯದ ಕಲಾಪಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಿರುವ ಕಾರಣವನ್ನು ನೀಡಿ ರಾಜಿನಾಮೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ರಾಜಿನಾಮೆಯನ್ನು ಅಂಗೀಕರಿಸಿದ್ದಾರೆ. 2015ರಲ್ಲಿ ಬ್ರಿಜೇಶ್ ಕಾಳಪ್ಪ ಅವರನ್ನು ಕಾನೂನು ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದರು. ನಂತರ ಅವರು ಕಾವೇರಿ, ಕೃಷ್ಣ, ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟಿನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.

ಜೆಡಿಎಸ್ ನಿಂದ ರಮೇಶ್ ಬಾಬು

ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ರಮೇಶ್ ಬಾಬು ಸ್ಪರ್ಧಿಸಲಿದ್ದು, ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಶಾಸಕ ವೈ.ಎ.ನಾರಾಯಣಸ್ವಾಮಿ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಫೆ.3ರಂದು ಉಪಚುನಾವಣೆ ನಡೆಯಲಿದೆ.

 

Leave a Reply