‘ನಿಮ್ಮ ದೂರು ಏನೇ ಇರಲಿ, ನೇರವಾಗಿ ನಮ್ಮ ಬಳಿಯೇ ಹೇಳಿ…’ ಯೋಧರಿಗೆ ಸೇನಾ ಮುಖ್ಯಸ್ಥರ ಕಿವಿಮಾತು

ಡಿಜಿಟಲ್ ಕನ್ನಡ ಟೀಮ್:

‘ನಿಮ್ಮ ದೂರುಗಳು ಏನೇ ಇರಲಿ, ಅದನ್ನು ನಮಗೆ ನೇರವಾಗಿ ತಿಳಿಸಿ. ನಮ್ಮ ಸೇನೆಯಲ್ಲಿ ದೂರು ಸಲ್ಲಿಕೆಗೆ ಒಂದು ವ್ಯವಸ್ಥೆ ಇದೆ. ಅದನ್ನು ಪಾಲಿಸಿ…’ ಇದು ಭಾರತೀಯ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜೆನರಲ್ ಬಿಪಿನ್ ರಾವತ್, ಸಾಮಾಜಿಕ ಜಾಲ ತಾಣಗಳ ಮೂಲಕ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವ ಯೋಧರಿಗೆ ನೀಡಿರುವ ಸಲಹೆ.

ಇತ್ತೀಚೆಗಷ್ಟೇ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್, ‘ಗಡಿಯಲ್ಲಿನ ಸೈನಿಕರಿಗೆ ಹಿರಿಯ ಅಧಿಕಾರಿಗಳು ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ…’ ಎಂದು ದೂರಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸಿಆರ್ ಪಿಎಫ್ ಯೋಧನೊಬ್ಬ ತಮಗೆ ಇನ್ನಷ್ಟು ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದ. ಹೀಗೆ ಒಂದರ ಹಿಂದೆ ಒಂದರಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸೈನಿಕರು ದೂರು ದುಮ್ಮಾನಗಳನ್ನು ವ್ಯಕ್ತಪಡಿಸುತ್ತಿರುವುದನ್ನು ತಪ್ಪಿಸಲು ಸ್ವತಃ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮುಂದಾಗಿದ್ದಾರೆ.

ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಪಿನ್ ರಾವತ್, ‘ಮಾಧ್ಯಮಗಳ ಮೂಲಕ ನಮ್ಮ ಎಲ್ಲ ವರ್ಗದ ಸೈನಿಕ ಮಿತ್ರರಿಗೆ ನಾನು ಹೇಳುವುದಿಷ್ಟೆ. ನಿಮ್ಮಲ್ಲಿ ಏನೇ ದೂರುಗಳಿರಬಹುದು. ಅದನ್ನು ನೇರವಾಗಿ ನನ್ನ ಗಮನಕ್ಕೆ ತನ್ನಿ. ನಮ್ಮಲ್ಲಿ ದೂರುಗಳನ್ನು ಸಲ್ಲಿಸುವುದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ಇದೆ. ಯಾವುದೇ ಹಂತ, ಯಾವುದೇ ಸೇವೆಯಲ್ಲಿರುವ ಯೋಧನಾದರೂ ಸರಿಯೇ ನಿಮ್ಮ ದೂರನ್ನು ನನ್ನ ಬಳಿ ನೇರವಾಗಿ ಹೇಳಿಕೊಳ್ಳಬಹುದು. ಅದಕ್ಕೆ ನಾನು ಸ್ಪಂದಿಸುತ್ತೇನೆ. ಅದರ ಬದಲಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ನಿಮ್ಮ ದೂರುಗಳನ್ನು ಹೇಳಿಕೊಳ್ಳಬೇಡಿ. ನೀವು ದೂರು ಕೊಟ್ಟಿರುವ ವಿಚಾರ ಗೌಪ್ಯವಾಗಿ ಇಡಲಾಗುವುದು’ ಎಂದು ಭರವಸೆ ನೀಡಿದರು.

ಇನ್ನು ದೇಶದ ಭದ್ರತೆ ವಿಷಯವಾಗಿಮಾತನಾಡಿದ ಅವರು, ‘ನಾವು ಕದನ ವಿರಾಮ ಉಲ್ಲಂಘನೆ, ಭಯೋತ್ಪಾದನೆಯಂತಹ ಗಂಭೀರದ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇವು ದೇಶದ ಏಕತೆಗೂ ಧಕ್ಕೆಯಾಗುತ್ತಿವೆ. ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿಯು ನಮ್ಮ ಯೋಧರ ಪರಿಶ್ರಮದಿಂದ ನಿಯಂತ್ರಣಕ್ಕೆ ಬಂದಿದೆ’ ಎಂದರು.

ಸೇವೆಯಲ್ಲಿ ಹಿರಿಯರಾದರೂ ಸೇನಾ ಮುಖ್ಯಸ್ಥರಾಗಿ ಆಯ್ಕೆಯಾಗದ ಬಗ್ಗೆ ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜೆನರಲ್ ಪ್ರವೀಣ್ ಭಕ್ಷಿ ಅಸಮಾಧಾನ ಹೊಂದಿದ್ದಾರೆ ಎಂಬ ವಂದಂತಿಗಳಿಗೆ ಸ್ಪಷ್ಟನೆ ನೀಡಿದ ರಾವತ್, ‘ಈ ಬಗ್ಗೆ ನಾವಿಬ್ಬರೂ ಮಾತನಾಡಿದ್ದೇವೆ. ಸರ್ಕಾರದ ನಿರ್ಧಾರವನ್ನು ಗೌರವಿಸುವುದಾಗಿ ಮತ್ತು ಸೇನೆಯಲ್ಲಿ ಅಂತಿಮ ಕ್ಷಣದವರೆಗೂ ನನಗೆ ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದರು.

Leave a Reply