ಪ್ರೇಮ ಕಾವ್ಯದ ಕಹಿ ಬರಹ… ವಿಜಯನಾರಸಿಂಹ ಎಂಬ ಮೂಕ ಹಕ್ಕಿಯ ಹಾಡು

ಖ್ಯಾತ ಗೀತ ರಚನೆಕಾರರಾದ ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಮತ್ತು ವಿಜಯನಾರಸಿಂಹ ಅವರ ಅಪರೂಪದ ಚಿತ್ರ…

author-ssreedhra-murthyಕನ್ನಡ ಚಿತ್ರಗೀತೆಗಳ ರತ್ನತ್ರಯರಲ್ಲಿ ಒಬ್ಬರಾದ ವಿಜಯನಾರಸಿಂಹ ಉಳಿದಿಬ್ಬರಾದ ಜಯಗೋಪಾಲ್ ಮತ್ತು ಉದಯಶಂಕರ್ ಅವರಿಗಿಂತಲೂ ಭಿನ್ನವಾಗಿದ್ದರು. ಅಷ್ಟೇ ಪ್ರಮುಖರೂ ಆಗಿದ್ದರು. ಕಾರಣ ಖಚಿತವಾಗಿ ಹೇಳಲಾಗದಿದ್ದರೂ ಅವರ ಕುರಿತು ನಡೆದ ಚರ್ಚೆಗಳು ಕಡಿಮೆ. ಪುಟ್ಟಣ್ಣ ಕಣಗಾಲರ ಚಿತ್ರಗಳಿಗೆ ಜೀವ ತುಂಬಿದ ವಿಜಯನಾರಸಿಂಹ ಬಾಲ್ಯದಲ್ಲಿಯೇ ಕಾದಂಬರಿಕಾರರಾಗಿ ಪ್ರಸಿದ್ಧರಾಗಿದ್ದರು. ಮೊದಲ ಹಾಡು ‘ಈ ದೇಹದಿಂದ ದೂರವಾದೆ ಏಕೆ ಆತ್ಮನೆ’ ಸೂಪರ್ ಹಿಟ್ ಆದರೂ ಅವರಿಗೇನು ದೊಡ್ಡ ಪ್ರಮಾಣದ ಅವಕಾಶಗಳು ದೊರೆತಿರಲಿಲ್ಲ. ಮದ್ರಾಸು ವಾಸದಲ್ಲಿ ಜೀವನಕ್ಕೆ ಇಂಧನ ನೀಡಿದ್ದು ಪತ್ರಿಕೆಗಳಿಗೆ ಬರೆಯುತ್ತಿದ್ದ ವರದಿಗಳೇ,  ಕರ್ಮವೀರ, ಸುಧಾ ವಾರ ಪತ್ರಿಕೆಗಳಿಗೆ ಆಗ ಅವರು ವಿಶೇಷ ವರದಿಗಾರರು. ಈ ಕಾಲದಲ್ಲೇ ಜಯಲಲಿತಾ ಜೀವನ ಚರಿತ್ರೆ ಅವರು ಉದ್ಯೋಗದ ಭಾಗವಾಗಿಯೇ ಬರೆದಿದ್ದರು. ಮಡದಿ ಹಿಂದಿ ಶಿಕ್ಷಕಿಯಾಗಿ ಬಾಳಿಗೆ ಜೊತೆ ನೀಡಿದ್ದರು. ವಿಜಯನಾರಸಿಂಹ  ಅವರ ಮನೆಗೆ ಚೇರು ಫ್ಯಾನ್‍ಗಳು ಬಂದಿದ್ದು ‘ಮಿಸ್ ಲೀಲಾವತಿ’ ಚಿತ್ರದ ಸಂಭಾವನೆಯಿಂದ. ತಮ್ಮ ಹಾಡುಗಳು ಜನಪ್ರಿಯವಾಗಿ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದರೂ ಇವರ ಬಳಿ ರೇಡಿಯೋ ಇರಲಿಲ್ಲ. ಕೊನೆಗೆ ‘ಆಸೆಯ ಭಾವ ಒಲವಿನ ಜೀವ’ ಹಾಡು ಸೂಪರ್ ಹಿಟ್ ಆದಾಗ ದೊರೆತ ಸ್ಪೆಷಲ್ ರಾಯಲ್ಟಿಯಿಂದ ರೇಡಿಯೋ ಬಂತು. ಅದಕ್ಕೆ ‘ಒಲವಿನ ಜೀವ’ ಎಂದೇ ವಿಜಯನಾರಸಿಂಹ ಹೆಸರಿಟ್ಟಿದ್ದರು. ‘ಮಂಗಳ ಮಹೂರ್ತ” ಚಿತ್ರಕ್ಕೆ ಸಂಭಾಷಣೆ-ಗೀತೆಗಳನ್ನು ಬರೆದಾಗ ದೊರೆತ ಹತ್ತು ಸಾವಿರ ರೂಪಾಯಿಗಳು ಅವರು ಜೀವನದಲ್ಲಿ ಕಂಡ ದೊಡ್ಡ ಮೊತ್ತ. ಆಗ ನೂರೆಂಟು ಕನಸುಗಳು ಚಿಗುರಿದ್ದವು. ಚಿತ್ರಕ್ಕೇನೋ ರಾಷ್ಟ್ರಪ್ರಶಸ್ತಿ ದೊರಕಿತು, ಆದರೆ ವಿಜಯನಾರಸಿಂಹ ಅವರ ಚೆಕ್ ಬೌನ್ಸ್ ಆಯಿತು. ಇಂತಹ ಅನುಭವಗಳು ವೃತ್ತಿ ಜೀವನದಲ್ಲಿ ಹತ್ತಾರು!

1980ಕ್ಕೆ ವಿಜಯನಾರಸಿಂಹ ಹಲವು ಆಸೆಗಳನ್ನು ಹೊತ್ತು ಬೆಂಗಳೂರಿಗೇ ಬಂದರು. ಆದರೆ ಚಿತ್ರರಂಗ ಅವರ ಕೈಹಿಡಿಯಲಿಲ್ಲ. ಪುಟ್ಟಣ್ಣನವರ ನಂತರ ಅವರ ಪ್ರತಿಭೆಯನ್ನು ಯಾರೂ ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಹಾಗೆ ನೋಡಿದರೆ ಬೆಂಗಳೂರಿನ ವಾಸದಲ್ಲಿ ಅವರನ್ನು ಕಾಪಾಡಿದ್ದು ಭಕ್ತಿಗೀತೆಗಳೇ, ಭಾದ್ರಪದ ಶುಕ್ಲದ ಚೌತಿಯಂದು, ಗಜಮುಖನೇ ಗಣಪತಿಯೇ ಮೊದಲಾದ ಅವರ ಭಕ್ತಿಗೀತೆಗಳು ಇಂದಿಗೂ ಜನಪ್ರಿಯವೇ. ಬೆಂಗಳೂರಿನಲ್ಲಿದ್ದಾಗ ಬೆಳಿಗ್ಗೆ ಎದ್ದು ಶ್ರೀಚಕ್ರ ಪೂಜೆ ಆಗಲೇಬೇಕು. ನಂತರವೇ ಅಗಲವಾದ ಕುಂಕುಮ ಧರಿಸಿ ಮನೆಯಿಂದ ಹೊರಡುತ್ತಿದ್ದರು. ಶ್ರೀಚಕ್ರದ ಕುರಿತು ನೀವು ಏನೂ ಬರೆದಿಲ್ಲವೆ ಎಂದು ಕೇಳಿದ್ದಕ್ಕೆ ‘ಪಂಚಮ ವೇದ ಪ್ರೇಮದ ನಾದ’  ಈ ಕುರಿತೇ ಬರೆದ ಹಾಡು ಕಣಯ್ಯ ಎಂದು ನನ್ನನ್ನು ಬೆರಗಾಗಿಸಿದ್ದರು. ಅದುವರೆಗೂ ಅದನ್ನು ಕೇವಲ ಪ್ರೇಮಗೀತೆಯಾಗಿ ನೋಡಿದ್ದ ನನಗೆ ಅದರಲ್ಲಿನ ಅಧ್ಯಾತ್ಮಿಕ ಅರ್ಥಗಳು ಹೊಳೆದಿದ್ದು ಆಗಲೇ. ತಮ್ಮ ಬರಹದ ಕುರಿತು ಅಪಾರ ವಿಶ್ವಾಸವಿತ್ತು. ‘ಭಾರತ ಭೂಶಿರ ಮಂದಿರ ಸುಂದರಿ’ ಯ ನಾದಮಯತೆ ಕುರಿತು ಯಾರೂ ಮೆಚ್ಚಿಗೆ ಮಾತನ್ನು ಹೇಳಿದಾಗ  ‘ನಾದಮಯತೆ ನಾನು ಸೃಷ್ಟಿಸಿದ ಪದಗಳಲ್ಲೇ ಇದೆ’ ಎಂದಿದ್ದರು ಹೀಗಿದ್ದರೂ ಭಾರವಾದ ಶಬ್ದಗಳನ್ನು ಬರೆಯುತ್ತಾರೆ ಎನ್ನುವುದು ಚಿತ್ರರಂಗ ಅವರನ್ನು ದೂರ ಇಡಲು ಕಂಡುಕೊಂಡಂತಹ ಕಾರಣ.  ‘ಪ್ರೀತಿನೇ ಆ ದ್ಯಾವ್ರು ತಂದ’ ‘ಹನಿ ಹನಿಗೂಡಿದರೆ ಹಳ್ಳ’ ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ’ ಯಂತಹ ಸರಳ ಗೀತೆಗಳನ್ನೂ ಅವರು ಬರೆದಿದ್ದರು ಎನ್ನುವುದನ್ನು ಚಿತ್ರರಂಗ ಮರೆತೇ ಬಿಟ್ಟಿತ್ತು. ‘ಓ ಅಯ್ಯಾ ಅಮ್ಮಯ್ಯಾ’ ದಂತಹ ಭಿಕ್ಷಕರ ಆತ್ಮಾಭಿಮಾನದ ಗೀತೆಯನ್ನು ಬರೆದವರು ವಿಜಯನಾರಸಿಂಹ ಅವರೇ. ಮಂಗಳೂರಿನ ಅಪ್ರಮೇಯ ಸ್ವಾಮಿ ದೇವಸ್ಥಾನಕ್ಕೆ ಹೋದಾಗ ಭಿಕ್ಷಕರ ತಂಡ ಅವರನ್ನು ಗುರುತಿಸಿ ‘ಸ್ವಾಮಿ ನಿಮ್ಮ ಹಾಡಿನಿಂದ ಜೀವನ ನಡೆಯುತ್ತಿದೆ’ ಎಂದು ನಮಸ್ಕರಿಸಿ ತಮ್ಮದೇ ಶೈಲಿಯಲ್ಲಿ ಸನ್ಮಾನಿಸಿದ್ದು ಮರೆಯಲಾಗದ ಘಟನೆ.

vijayanarasimha1

ವಿಜಯನಾರಸಿಂಹ ಶುಚಿ ರುಚಿಯಲ್ಲಿ ಅಪ್ರತಿಮರು. ಬೆಳಿಗ್ಗೆ ಎದ್ದ ಕೂಡಲೇ ಸ್ಟ್ರಾಂಗ್ ಕೋತಾಸ್ ಕಾಫಿಯೇ ಬೇಕು. ಅದೂ ಜಯನಗರದ ಅವರ ಆಯ್ಕೆಯ ಅಂಗಡಿಯಿಂದ ತಂದ ಪುಡಿಯಿಂದ. ಇಷ್ಟ ಪಟ್ಟು ತಿನ್ನುತ್ತಿದ್ದಿದ್ದು ಸಂಗೀತಾ ಹೋಟಲ್‍ನ ಓಪನ್ ದೋಸೆಯನ್ನು ಮಾತ್ರ, ಉಳಿದಂತೆ ಕಟ್ಟುನಿಟ್ಟಾಗಿ ಹೊರಗಿನ ಊಟ-ತಿಂಡಿಗಳಿಂದ ದೂರ. ಬರೆಯುತ್ತಿದ್ದಿದ್ದು ರಾಯಲ್ ಬಾಂಡ್ ಪೇಪರ್‍ನ ಮೇಲೆ ಬಂಗಾರದ ಮೂತಿಯ ಪಾರ್ಕರ್ ಪೆನ್ನಿನಿಂದ. ಅವರ ಭಾವನೆಯ ವೇಗಕ್ಕೆ ಓಡದಿದ್ದರೆ ಹೊಸ ಪೆನ್ನು ಕೂಡ ಕಸದ ಬುಟ್ಟಿ ಸೇರುತ್ತಿತ್ತು. ಉಡುಗೆಯಲ್ಲೂ ಅಪ್ಪಟ ಬಿಳಿ ಬಣ್ಣದ ಜುಬ್ಬವೇ ಆಗ ಬೇಕು,  ಅದೂ ಪ್ಲೆಮಿಂಗೋ ಕಂಪನಿಯದು. ಜುಬ್ಬದ ಮುಂಗೈ ಭಾಗಕ್ಕೆ ಗುಂಡಿ ಇರ ಕೂಡದು. ತೋಳಿನ ಭಾಗಕ್ಕೆ ಸರಿಯಾಗಿ ಕುಳಿತು ಕೊಳ್ಳ ಬೇಕು. ಗಾಂಧಿ ಬಜಾರಿನಲ್ಲಿ ಅವರ ಮನವನ್ನು ಅರಿತ ದರ್ಜಿಯೊಬ್ಬನಿದ್ದ ಬೇರೆ. ಇನ್ನೆಲ್ಲೂ ಅವರು ಹೊಲಿಸುತ್ತಿರಲಿಲ್ಲ.

1995ರಿಂದ ಅವರ ಆರೋಗ್ಯ ಕುಸಿಯುತ್ತಾ ಹೋಯಿತು. ‘ಯಾರಿಗೆಲ್ಲಾ ಕೊಟ್ಟಿತು, ಸರ್ಕಾರ ನನಗೆ ಸೈಟ್ ಕೊಡಲಿಲ್ಲ’ ಎಂಬ ಕೊರಗೂ ವಿಪರೀತ ಕಾಡಲಾರಂಭಿಸಿತು. ಸಕ್ಕರೆ ಕಾಯಿಲೆ ಕುಕ್ಕಿ ತಿನ್ನುತ್ತಿತ್ತು. ಕಣ್ಣನ್ನೂ ಅಪೋಷನ ತೆಗೆದುಕೊಂಡಿತು. ಚಿತ್ರರಂಗವಂತೂ ಮರೆತೇ ಬಿಟ್ಟಿತ್ತು. ಕೊನೆಗೆ ಮೊಮ್ಮಗ ಸಂದೀಪ ಗೆಳಯರೊಡನೆ ಪ್ರಾಜೆಕ್ಟ್ ಹಾಕಿ ತಾತನಿಂದ ಹಾಡು ಬರೆಸಿ ಉತ್ಸಾಹ ತರಲು ಪ್ರಯತ್ನಿಸಿದ. 2001ರ ಅಕ್ಟೋಬರ್ 28ರಂದು ಎಡಿಎದಲ್ಲಿ ಸನ್ಮಾನ ಮುಗಿಸಿಕೊಂಡು ಬಂದು ಆಸ್ಪತ್ರೆ ಸೇರಿದರು. ಅಕ್ಟೋಬರ್ 31 ರಂದು  ಮರುದಿನದ ಕನ್ನಡ ರಾಜ್ಯೊತ್ಸವದ ಕುರಿತು ನೂರೆಂಟು ಯೋಜನೆ ರೂಪಿಸುತ್ತಿದ್ದಾಗಲೇ ಅವರ ಬಾಳ ಪಯಣ ಮುಗಿಯಿತು. ಮುಂದೆ ಕಾಲಚಕ್ರ ವಿಪರೀತ ವೇಗವಾಗಿಯೇ ಉರುಳಿದೆ. ‘ನೀ ನಡೆವ ಹಾದಿಯಲ್ಲಿ ನಗೆ ಹೂವ ಬಾಡದಿರಲಿ’ ಎಂದಿದ್ದ ಮಡದಿ ಸರಸ್ವತಿ, ಬೆಂಬಲವಾಗಿ ನಿಂತಿದ್ದ ಅಳಿಯ ಶಾರದಾ ಪ್ರಸಾದ್, ಕೊನೆಗೆ ತಾತನನ್ನು ಜೀವದಂತೆ ಕಾಪಾಡಿದ್ದ ಮೊಮ್ಮಗ ಸಂದೀಪ ಎಲ್ಲರೂ ಈಗ ಇಹದ ಬದುಕಿಗೆ ವಿದಾಯ ಹೇಳಿದ್ದಾರೆ. ‘ಸರ್ ಖಂಡಿತಾ ನಿಮ್ಮ ಆತ್ಮಕತೆ ಬರೆಯುತ್ತೇನೆ’ ಎಂದು ಅವರಿಗೆ ಪ್ರಾಮಿಸ್ ಮಾಡಿದ್ದೆ ಅದು ಕಾರ್ಯ ರೂಪಕ್ಕೆ ಬರಲೇ ಇಲ್ಲ . ಈಗ ಜನವರಿ 16ಕ್ಕೆ ಅವರ 90ನೇ ಜನ್ಮದಿನ ಬರುತ್ತಿದೆ. ಅವರ ನೆನಪುಗಳನ್ನು ದಾಖಲಿಸಿದ್ದ ಹಾಳೆಗಳು ಚಡಪಡಿಸುತ್ತಿವೆ.

Leave a Reply