ಟಾಟಾದ ನೂತನ ಮುಖ್ಯಸ್ಥರಾಗಿ ಆಯ್ಕೆಯಾದ್ರು ನಟರಾಜ್ ಚಂದ್ರಶೇಖರನ್

ಡಿಜಿಟಲ್ ಕನ್ನಡ ಟೀಮ್:

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಸಿಇಒ ಆಗಿದ್ದ ನಟರಾಜ ಚಂದ್ರಶೇಖರನ್ ಅವರನ್ನು ಟಾಟಾದ ನೂತನ ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗಿದೆ. ಅದರೊಂದಿಗೆ ಹಲವು ತಿಂಗಳಿನಿಂದ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಟಾಟಾ ಕಂಪನಿ ಈಗ ಹೊಸ ಮುಖ್ಯಸ್ಥರನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ ದೇಶದ ದೊಡ್ಡ ಕಂಪನಿಯ ಮುಖ್ಯಸ್ಥ ಸ್ಥಾನ ಅಲಂಕರಿಸಿದ ಪಾರ್ಸಿಯೇತ್ತರ ಸಮುದಾಯದ ಮೊದಲಿಗ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ ಚಂದ್ರಶೇಖರನ್.

ಕಳೆದ ವರ್ಷ ಅಕ್ಟೋಬರ್ 24 ರಂದು ಸೈರಸ್ ಮಿಸ್ತ್ರಿ ಅವರನ್ನು ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸಿದ ನಂತರ ಟಾಟಾ ಸಮೂಹದಲ್ಲಿ ದೊಡ್ಡ ವಿವಾದ ಎದ್ದಿತ್ತು. ಮಿಸ್ತ್ರಿ ಹಾಗೂ ರತನ್ ಟಾಟಾ ನಡುವಣ ಬಿಕ್ಕಟ್ಟು ಹೆಚ್ಚಾಗಿತ್ತು. ಮಿಸ್ತ್ರಿ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ರತನ್ ಟಾಟಾ ಸಂಸ್ಥೆಯ ಹಂಗಾಮಿ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದರು. ತಮ್ಮನ್ನು ವಜಾಗೊಳಿಸಿದ ನಿರ್ಧಾರವನ್ನು ಪ್ರಶ್ನಿಸಿ ಮಿಸ್ತ್ರಿ ಅವರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣದ ಮೆಟ್ಟಿಲೇರಿದ್ದಾರೆ. ಈ ಕಾನೂನಿನ ಸಮರ ನಡೆಯುತ್ತಿರುವ ಸಂದರ್ಭದಲ್ಲೇ ಕಂಪನಿ ನೂತನ ಮುಖ್ಯಸ್ಥರನ್ನು ಹೊಂದಿದೆ.

ಸಂಸ್ಥೆಯ ಮುಖ್ಯಸ್ಥರಾಗಿದ್ದ ಮಿಸ್ತ್ರಿ ಅವರನ್ನು ವಜಾಗೊಳಿಸಿದ ಬಳಿಕ ನೂತನ ಮುಖ್ಯಸ್ಥರ ಆಯ್ಕೆಯನ್ನು ಫೆಬ್ರವರಿ 24ರ ಒಳಗಾಗಿ ಮಾಡಬೇಕಿತ್ತು. ಗಡುವಿಗೆ ಇನ್ನು ಸಾಕಷ್ಟು ಸಮಯ ಬಾಕಿ ಇರುವಾಗಲೇ ನಟರಾಜ್ ಚಂದ್ರಶೇಖರನ್ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ರತನ್ ಟಾಟಾ ಸೇರಿದಂತೆ ಟಿವಿಎಸ್ ಸಮೂಹದ ಮುಖ್ಯಸ್ಥ ವೇಣು ಶ್ರೀನಿವಾಸನ್, ಬೈನ್ ಕ್ಯಾಪಿಟಲ್ ನ ಅಮಿತ್ ಚಂದ್ರ, ರೋನೆನ್ ಸೇನ್, ಲಾರ್ಡ್ ಕುಮಾರ್ ಭಟ್ಟಾಚಾರ್ಯ ಸೇರಿದಂತೆ ಐವರ ಸಮಿತಿಯು ಟಾಟಾ ಸಮೂಹಕ್ಕೆ ಚಂದ್ರಶೇಖರ್ ಅವರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದೆ.

2009ರಿಂದ ಅಕ್ಟೋಬರ್ 2016ರವರೆಗೂ ಟಿಸಿಎಸ್ ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಚಂದ್ರಶೇಖರನ್, ಈಗ ಮುಖ್ಯಸ್ಥ ಸ್ಥಾನವನ್ನು ಅಲಂಕರಿಸಿದ್ದಾರೆ. ಕಳೆದ ಅಕ್ಟೋಬರ್ ನಿಂತ ಇವರು ಟಾಟಾ ಸನ್ಸ್ ನ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಗ ನಟರಾಜ್ ಚಂದ್ರಶೇಖರನ್ ಅವರು ಮುಖ್ಯಸ್ಥರಾದ ನಂತರ ತೆರವಾದ ಟಿಸಿಎಸ್ ಸಿಇಒ ಸ್ಥಾನಕ್ಕೆ ರಾಜೇಶ್ ಗೋಪಿನಾಥನ್ ಅವರನ್ನು ನೇಮಕ ಮಾಡಲಾಗಿದೆ.

ಈ ಪ್ರತಿಷ್ಠಿತ ಹುದ್ದೆಗೆ ಆಯ್ಕೆಯಾದ ನಂತರ ಮಾತನಾಡಿರುವ ಚಂದ್ರಶೇಖರನ್, ‘ಕಳೆದ 30 ವರ್ಷಗಳಿಂದ ಟಾಟಾ ಸಮೂಹದ ಭಾಗವಾಗಿರುವುದು ಹೆಮ್ಮೆಯಾಗುತ್ತಿದೆ. ಈಗ ಈ ಪ್ರತಿಷ್ಠಿತ ಸ್ಥಾನವನ್ನು ಅಲಂಕರಿಸುತ್ತಿರುವುದು ನನ್ನ ಅದೃಷ್ಟ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply