ಅರೆರೆ ಇದೇನಿದು ? ಭೂಮಿಯ ಮೇಲೆ ಮಂಗಳನ ಚಹರೆ!

author-ananthramuನಿಜ, ಮಂಗಳ ಗ್ರಹಕ್ಕೆ ಯಾನಮಾಡಲು ಈಗ ಟ್ರಾಫಿಕ್ ಜ್ಯಾಮ್ ಇಲ್ಲ. ಹಾಗೆಂದು ವ್ಯೋಮನೌಕೆಯಲ್ಲಿ ಸ್ಪೀಡಾಗಿ ಹೋಗಿ ಗುರಿ ತಲುಪಿಯೇಬಿಟ್ಟೆವು ಎಂದು ಸದ್ಯಕ್ಕೆ ಯಾವ ದೇಶವೂ ಹೇಳಲೂ ಸಾಧ್ಯವಿಲ್ಲ. ಏಕೆಂದರೆ ಮಂಗಳ ಗ್ರಹ ಭೂಮಿಗೆ ತೀರ ಸಮೀಪವೆಂದರೆ 56 ದಶಲಕ್ಷ ಕಿಲೋ ಮೀಟರ್ ದೂರದಲ್ಲಿ, ತೀರ ಹತ್ತಿರವೆಂದರೆ 401 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿ ತನ್ನ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದೆ. ಭಾರತ `ಮಂಗಳಯಾನ’ವನ್ನು ಯಶಸ್ವಿಯಾಗಿ ಮಾಡಿದ್ದನ್ನು ನೋಡಿ ನಾವೂ ಏಕೆ ಮಂಗಳನನ್ನು ಮುಟ್ಟಲು ಮಾನವಸಹಿತ ಯಾನವನ್ನು ಮಾಡಬಾರೆಂಬ ಕನಸನ್ನು ಹೊತ್ತ ಅನೇಕ ದೇಶಗಳಿರಬಹುದು. ಆದರೆ ಅದು ಸುಲಭಸಾಧ್ಯವಲ್ಲ. ಈಗ ಅಮೆರಿಕದ ನಾಸಾ ಸಂಸ್ಥೆ, ಯೂರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ಭಾರತದ ಇಸ್ರೋ ಮಾನವಸಹಿತ ಮಂಗಳನತ್ತ ಯಾನಮಾಡಲು ತಯಾರಿನಡೆಸಿವೆ. ವಾಸ್ತವವಾಗಿ ಇದೂ ಕೂಡ ಸ್ಪರ್ಧೆಯಲ್ಲ. ಅಮೆರಿಕದ ನೀಲ್ ಆರ್ಮ್‍ಸ್ಟ್ರಾಂಗ್ ಚಂದ್ರನ ಮೇಲೆ ಕಾಲೂರಿ ನಿಂತಂತೆ ಮಂಗಳನ ಮೇಲೂ ಮನುಷ್ಯ ಕಾಲೂರಿ ನಿಲ್ಲಲು ಅನೇಕ ದಶಕಗಳ ಕಾಲ ತಯಾರಿ ಬೇಕಾಗುತ್ತದೆ. ಈ  ಅಂಗವಾಗಿ ಅಮೆರಿಕದ ನಾಸಾ ಮತ್ತು ಯೂರೋಪಿಯನ್ ಸ್ಪೇಸ್ ಏಜೆನ್ಸಿ ಈಗಾಗಲೇ ತಯಾರಿ ನಡೆಸಿವೆ. ಅತಿರೇಕದ ಅಲ್ಲಿನ ಪರಿಸರಕ್ಕೆ ಹೇಗೆ ಮನುಷ್ಯ ಹೊಂದಿಕೊಳ್ಳಬೇಕು ಎಂದು ತಿಳಿಯಲು ಭೂಮಿಯ ಮೇಲೆ, ಮಂಗಳನ ವಾತಾವರಣವಿರುವ ನಾಲ್ಕು ಸ್ಥಳಗಳನ್ನು ಆಯ್ಕೆಮಾಡಿಕೊಂಡು ಅಲ್ಲಿ ಪ್ರಯೋಗಮಾಡುತ್ತಿವೆ. `ನ್ಯೂ ಸೈಟಿಂಸ್ಟ್’ ಪತ್ರಿಕೆ ಈ ಬಿಸಿಬಿಸಿ ಸುದ್ದಿಯನ್ನು ಕಳೆದ ವಾರವಷ್ಟೇ ಬಹಿರಂಗಪಡಿಸಿದೆ.

ಮೌನಲೋವ ಜ್ವಾಲಾಮುಖಿಯ ಬಾಯಿಯ ಬಳಿ

ಮೌನಲೋವ ಎಂಬುದು ಹವಾಯಿ ದ್ವೀಪದಲ್ಲಿರುವ ಅತಿ ಎತ್ತರದ ಜ್ವಾಲಾಮುಖಿ. ಇದರ ಇಳಿಜಾರಿನಲ್ಲಿ ಅಂದರೆ 2,500 ಮೀಟರ್ ಎತ್ತರದಲ್ಲಿ ಆರು ಮಂದಿ ಸಂಶೋಧಕರು 366 ದಿನಗಳ ಕಾಲ ಸತತವಾಗಿ, 111 ಚದರ ಮೀಟರ್ ಗುಮ್ಮಟದಲ್ಲಿ ಶೋಧನೆಯಲ್ಲಿ ತೊಡಗಬೇಕು. ಸ್ಪೇಸ್ ಸೂಟ್ ಧರಿಸಿದರೆ ಮಾತ್ರ ಅವರು ಗುಮ್ಮಟ ಬಿಟ್ಟು ಹೊರಬರಲು ಅನುಮತಿ ಸಿಕ್ಕುತ್ತದೆ. ಹತ್ತಿರದಲ್ಲಿ ಏನೇನಿದೆ ಎಂದು ಸಮೀಕ್ಷೆ ಮಾಡಬಹುದು. ಇಡೀ ತಂಡದಲ್ಲಿ ಈ ಆರು ಮಂದಿಯ ಸಂಶೋಧಕರನ್ನು ಬಿಟ್ಟು ಹೊರಗಿನ ಒಂದು ನರಪಿಳ್ಳೆಯೂ ಇರುವುದಿಲ್ಲ. ಇವರಿಗೆ ಕಳಿಸುವ ಸಂದೇಶಗಳು 20ನಿಮಿಷ ತಡವಾಗಿ ತಲಪುತ್ತದೆ-ಮಂಗಳನಿಂದ ಅಥವಾ ಭೂಮಿಯಿಂದ ಸಂದೇಶ ತಲಪಲು ಇಷ್ಟೇ ಸಮಯಬೇಕು. ಇದೂ ಒಂದು ಬಗೆಯ ಜೈಲೇ ಸರಿ. ಸಂಶೋಧಕರು ಎಲ್.ಇ.ಡಿ. ಬಲ್ಬ್ ಬಳಸಿ, ಆ ಬೆಳಕಿನಲ್ಲಿ ಅತಿ ಕಡಿಮೆ ನೀರು ಬಳಸಿ ಕೆಂಪು ಮೂಲಂಗಿಯಂಥ ತರಕಾರಿ ಬೆಳೆಯಬೇಕು. ಯೋಗಟ್, ಚೀಸ್ ಮುಂತಾದ ಹುದುಗಿನ ಪದಾರ್ಥವನ್ನು ಅದೇ ಗುಮ್ಮಟದಲ್ಲಿ ತಯಾರಿಸಬೇಕು.

ಈ ತಂಡ ಒಂದೋ ಎರಡೋ ಸಂಭ್ರಮ ಅಥವಾ ರಜೆಯನ್ನು ಆಚರಿಸಬಹುದು. ಬೇರೆ ಯಾವ ಗ್ರಹಕ್ಕೆ ಹೋದರೂ ಅಲ್ಲಿ ಕ್ರಿಸ್‍ಮಸ್ ಆಚರಣೆಯಂಥ ಸಂಭ್ರಮಕ್ಕೆ ಅರ್ಥವೇ ಇರುವುದಿಲ್ಲ. ಏಕೆಂದರೆ ನಮ್ಮ ಕ್ಯಾಲೆಂಡರ್ ಆಧರಿಸಿದ ಹಬ್ಬಗಳಿಗೂ ಮಂಗಳನ ಕ್ಯಾಲೆಂಡರ್‍ಗೂ ಹೊಂದಾಣಿಕೆಯಾಗುವುದಿಲ್ಲ. ಮುಂದೆ `ಮಂಗಳನಲ್ಲಿ ಮಾನವ ಇಳಿದ ದಿನ’ ಎಂಬುದನ್ನು ಆಚರಿಸಬಹುದೋ ಏನೋ, ಅದು ಕೈಗೂಡಿದಾಗ. ಇದು ಶನ್ಯ ಗಿಫೋರ್ಡ್ ಎಂಬ ಈ ತಂಡದ ಮುಖ್ಯಸ್ಥೆ, ವೈದ್ಯೆ ಮಾತು.

1-min

ಕಡು ಶೀತಲ ವಾತಾವರಣದಲ್ಲಿ

ಮಂಗಳ ಗ್ರಹದಲ್ಲಿ ಉಷ್ಣತೆಯೂ ಅತಿರೇಕ, ಶೈತ್ಯವೂ ಅತಿರೇಕ. ಎರಡರ ಸರಾಸರಿ ತೆಗೆದುಕೊಂಡರೆ ಮೈನಸ್ 55 ಡಿಗ್ರಿ ಸೆಂ. ಈ ಗ್ರಹದಲ್ಲಿ ಮನುಷ್ಯನಿಗೆ ಸವಾಲೊಡ್ಡುವುದೇ ಈ ಪರಮಶೈತ್ಯ (ಅಂಟಾರ್ಕ್‍ಟಿಕ್ ಖಂಡದಲ್ಲಿ ರಷ್ಯದ ವೋಸ್ತೋಕ್ ಎಂಬ ಕೇಂದ್ರದಲ್ಲಿ ಮೈನಸ್ 79 ಡಿಗ್ರಿ ಸೆಂ. ದಾಖಲಾಗಿತ್ತು). ದೀರ್ಘಕಾಲ ಏಕಾಂತದಲ್ಲಿದ್ದರೆ ಮರಗಟ್ಟುವ ಶೈತ್ಯಕ್ಕೆ ಒಡ್ಡಿಕೊಳ್ಳಬೇಕು, ಧುತ್ತೆಂದು ಎದುರಾಗುವ ಚಳಿಗಾಲದ ಕತ್ತಲೆಯನ್ನು ಎದುರಿಸಬೇಕು. ಇವೆಲ್ಲ ಮಂಗಳ ಗ್ರಹದ ಯಾತ್ರಿ ಅನುಭವಿಸಲೇಬೇಕು. ಅದಕ್ಕಾಗಿಯೇ ಕಳೆದ ವರ್ಷ ಅಂಟಾರ್ಕ್‍ಟಿಕದ ಕಾನ್‍ಕರ್ಡ್ ಕೇಂದ್ರದಲ್ಲಿ (ಫ್ರಾನ್ಸ್ ಮತ್ತು ಇಟಲಿ 2005ರಲ್ಲಿ ಇದನ್ನು ಜಂಟಿಯಾಗಿ ಸ್ಥಾಪಿಸಿವೆ. ಇಲ್ಲಿಂದ ದಕ್ಷಿಣ ಭೂಗೋಳಿಕ ಧ್ರುವ 1,670 ಕಿಲೋ ಮೀಟರ್ ದೂರದಲ್ಲಿದೆ) 13 ಮಂದಿ ಇಡೀ ಚಳಿಗಾಲವನ್ನು ಕಳೆದಿದ್ದಾರೆ. ಪ್ರತಿಯೊಬ್ಬರ ಕೈಲೂ ಪತ್ತೇದಾರಿ ವಾಚು. ಎದುರುಬದುರಾದರೆ ಅವರ ನಡುವೆ  ಯಾವ ಬಗೆಯ ಮಾತುಗಳೂ ವಿನಿಮಯವಾಗುತ್ತವೆ ಎನ್ನುವುದೂ ದಾಖಲೆಯಾಗುತ್ತದೆ. ಧ್ರುವದ ಕತ್ತಲೆ ಎಂದರೆ ನೂರು ದಿನಗಳ ದೀರ್ಘ ಅವಧಿಯದು. ಈ ಅವಧಿಯಲ್ಲಿ ಯಾರು ನಿದ್ರಿಸುತ್ತಿದ್ದರು, ಯಾರು ಎಚ್ಚರಗೊಂಡಿದ್ದರು ಎಂಬುದೂ ದಾಖಲಾಗುತ್ತದೆ. ಇಡೀ ಈ ತಂಡದ ನೇತಾರೆಯಾಗಿದ್ದು ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ವೈದ್ಯೆ ಬೆತ್‍ ಹೀಲೀ ಎಂಬಾಕೆ. ಇಲ್ಲಿ ಕೃತಕ ಬೆಳಕಿನ ಸೌಕರ್ಯವನ್ನೂ ನೀಡಲಾಗಿತ್ತು. ಕೆಲವರಿಗೆ ನಿದ್ದೆಯ ತೊಂದರೆ, ಇನ್ನು ಕೆಲವರಿಗೆ ಕುಂಭಕರ್ಣ ನಿದ್ದೆ. ಆದರೆ `ಊಟಕ್ಕೆ ಮಾತ್ರ ಫಿಕ್ಸೆಡ್ ಟೈಂ’ ಏಳಲೇಬೇಕಾಗಿತ್ತು. ಈ ತಂಡದ ಸದಸ್ಯರ ನಡುವಿನ ವಿಡಿಯೋ ಸಂಭಾಷಣೆಯನ್ನು ಪರಿಶೀಲಿಸಲಾಗಿತ್ತು. ಜೊತೆಗೆ ಬ್ರೈನ್ ಸ್ಕ್ಯಾನಿಂಗ್  ಬೇರೆ.

2-min

ಮಹಾ ಬೋರೆನ್ನಿಸುವ ಮರುಭೂಮಿ

ಮಂಗಳಗ್ರಹದ ಯಾವ ಭಾಗವೇ ಆಗಲಿ (ಧ್ರುವದ ಹಿಮಟೊಪ್ಪಿಗೆಯನ್ನು ಹೊರತುಪಡಿಸಿ) ಥೇಟ್ ಅದು ಮರುಭೂಮಿಯೇ. ಶುಷ್ಕ ವಾತಾವರಣ, ಜಿಗುಪ್ಸೆ ಹುಟ್ಟಿಸುವ ದೃಶ್ಯಗಳು. ಅಚ್ಚರಿ ಏನು ಗೊತ್ತೆ? ನಮ್ಮ ಭೂಮಿಯಲ್ಲೇ ಇಂಥ ಜಾಗಗಳು ಬೇಕಾದಷ್ಟಿವೆ. ಅಮೆರಿಕದ ಊಥಾ (ಪಶ್ಚಿಮ ಅಮೆರಿಕ) ರಾಜ್ಯದ ಮೂಲೆಯಲ್ಲಿ ಮಂಗಳನ ಮರುಭೂಮಿಯ ಪ್ರತಿರೂಪ ಕಾಣಬಹುದು. ಈಗ ಅಲ್ಲಿ `ಮಾರ್ಸ್ ಡೆಸರ್ಟ್ ರಿಸರ್ಚ್ ಸ್ಟೇಷನ್’ ಬಹು ಗಂಭೀರ ಸಂಶೋಧನೆಯಲ್ಲಿ ತೊಡಗಿದೆ. ಇದೊಂದು ನರಕಸದೃಶ ಜಾಗ ಎಂದು ಕೆನಡದ ಮ್ಯೂಸಿಯಂ ತಜ್ಞ, ಜೀವವಿಜ್ಞಾನಿ ಪಾಲ್ ಸೊಕೋಲ್ಫ್ ಹೇಳಿದ್ದು ಸುಳ್ಳೇನಲ್ಲ. ಇಲ್ಲಿ `ಮಾರ್ಸ್ ಸೊಸೈಟಿ’ ಎಂಬ ಸಂಶೋಧಕ ಸಂಸ್ಥೆ ಸಿಲಿಂಡರ್ ರೂಪದ ಕುಟೀರಗಳನ್ನು ನಿರ್ಮಿಸಿದೆ. ಏರ್ ಲಾಕ್ ಆಗಿರುವ ಸಣ್ಣ ಕೂಪದಿಂದ ಜಂಪ್ ಸೂಟ್ ಧರಿಸಿ ಗುಳ್ಳೆ ಏಳುವ ಹೆಲ್ಮೆಟ್ ಧರಿಸಿ, ಸ್ಲೋಮೋಷನ್ ಸಿನಿಮಾದಲ್ಲಿ ತೋರಿಸುವ ಹಾಗೆ ನೆಗೆಯುತ್ತ ಹೋಗಬಹುದು. ಈ ಭಾಗದಲ್ಲಿ ಯಾವಾಗಲಾದರೂ ಒಮ್ಮೆ ಮಳೆ ಬೀಳುವುದುಂಟು. ಸಣ್ಣ ಸಣ್ಣ ಪೊದೆಗಳೂ ಬೆಳೆಯುವುದುಂಟು. ಆದರೆ ಇಲ್ಲಿನ ತಂಡ ಹುಡುಕುವುದು ಸೂಕ್ಷ್ಮಜೀವಿಗಳನ್ನು. ನೆಲದ ಮಣ್ಣಿನಲ್ಲಿ ಇಂಥ ಅತಿರೇಕದ ಪರಿಸ್ಥಿತಿಯಲ್ಲಿ ಅವುಗಳನ್ನೇನಾದರೂ ಪತ್ತೆಮಾಡುವುದಾದರೆ ಅದು ಮಂಗಳನಲ್ಲೂ ಇರಲು ಸಾಧ್ಯ ಎಂಬ ನಿರೀಕ್ಷೆ ಹುಟ್ಟಿಸುತ್ತದೆ.

3-min

ಸಾಗರ ತಳದಲ್ಲಿ ಸ್ಪೇಸ್ ವಾಕ್!

ಮಂಗಳಗ್ರಹದ ಗುರುತ್ವ ಭೂಮಿಯ ಗುರುತ್ವದ ಐದನೆಯ ಒಂದು ಭಾಗ. ಒಂದುವೇಳೆ ಆ ಗ್ರಹದ ಗುರುತ್ವದಿಂದ ಕಿತ್ತು ಹೊರಬರಬೇಕೆಂದು ನೀವು ಬಯಸಿದರೆ, ಸೆಕೆಂಡಿಗೆ ಐದು ಕಿಲೋ ಮೀಟರ್ ವೇಗ ಗಳಿಸಿದರೆ ಸಾಕು. ಅಲ್ಲಿನ ಗಾಳಿಯಲ್ಲಿ ಆಕ್ಸಿಜನ್ ಲಭ್ಯವಿಲ್ಲ, ಬಹುತೇಕ ಕಾರ್ಬನ್ ಡೈ ಆಕ್ಸೈಡ್‍ದೇ ಕಾರುಬಾರು. ಸಮುದ್ರ ತಳದಲ್ಲಿ ಅಕ್ವಾಲಂಗ್ಸ್ ಅಳವಡಿಸಿಕೊಂಡು ಬದುಕುವುದು ಹೇಗೆ ಎಂದು ಅರಿತರೆ ಅದನ್ನು ಮಂಗಳ ಗ್ರಹಕ್ಕೂ ಅನ್ವಯಿಸಬಹುದು. ಅಮೆರಿಕದ ಫ್ಲೋರಿಡಾ ತೀರದಲ್ಲಿ 19 ಮೀಟರ್ ಸಮುದ್ರದಾಳದಲ್ಲಿ ಕಳೆದ ವರ್ಷ ಆರು ಮಂದಿ ಅಕ್ವಾನಾಟ್ಸ್‍ಗಳಾಗಿ (ಜಲಾಂತರ್ಗತವಾಗಿ) ನೀರಿಗಿಳಿದರು. ಇದು ನಾಸಾ ಸಂಸ್ಥೆ ಪ್ರಾಯೋಜಿಸಿದ ಒಂದು ಯೋಜನೆ. ಈ ತಂಡದ ಸದಸ್ಯರನ್ನು ಕೃತಕ ಶ್ವಾಸಕೋಶ ಅಳವಡಿಸಿ ನಡೆಸಿದರು, ಅವರು ಸಾಗರ ತಳದಲ್ಲೇ ಇದ್ದು ಸ್ಪೇಸ್ ವಾಕ್ ಅನುಕರಿಸಿದರು.

4-min

ಮಂಗಳನ ಅಂಗಳ ತಲಪಲು ಎಂಥೆಂಥ ತಯಾರಿ ಮಾಡಿಕೊಳ್ಳಬೇಕು. ಇದೆಲ್ಲ ಏಕೆ ಬೇಕು ಎಂದು ಕೇಳುವ ಮಂದಿಯೂ ನಮ್ಮಲ್ಲಿದ್ದಾರೆ. ಆದರೆ ಒಂದು ಮಾತು, ಇದು ಏಕಾಗಬಾರದು ಎನ್ನುವವರಿಂದಲೇ ಸಾಧನೆಗಳಾಗಿರುವುದು. ಮನುಷ್ಯನದು ಎಂದೂ ಶೋಧಕ ಬುದ್ಧಿ. ನೆನಪಿಡಿ, ಉಪಗ್ರಹಗಳಿಲ್ಲದಿದ್ದರೆ ನಿಮ್ಮ ಮೊಬೈಲ್‍ಗೆ ಜೀವವೇ ಇರುವುದಿಲ್ಲ.  ಅಪ್ರಯೋಜಕ. ಈಗ ಜಿ.ಪಿ.ಎಸ್. ಇಲ್ಲದಿದ್ದರೆ ನಿಜವಾಗಿಯೂ ಹೊಸ ಜಾಗಗಳಲ್ಲಿ ದಾರಿ ತಪ್ಪುತ್ತೀರಿ. ಸಾಧಕರಿಗೊಂದು ನಮಸ್ಕಾರ.

Leave a Reply