ರಷ್ಯಾ ಜತೆ ಟ್ರಂಪ್ ಸ್ನೇಹ ಬೆಳೆಸುತ್ತಿರೋದು ಭಾರತಕ್ಕೇಕೆ ಶುಭ ಸುದ್ದಿ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ನಿರೀಕ್ಷೆಯಂತೆ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದ್ದಂತೆ ಸಾಂಪ್ರದಾಯಿಕ ಎದುರಾಳಿ ಎಂದೇ ಬಿಂಬಿತವಾಗಿದ್ದ ರಷ್ಯಾ ಜತೆ ಸ್ನೇಹ ವೃದ್ಧಿಗೆ ಮುಂದಾಗಿದ್ದಾರೆ. ಈ ಎರಡು ಪ್ರಬಲ ರಾಷ್ಟ್ರಗಳ ಸ್ನೇಹ ಬೆಳೆಯುತ್ತಿರೋದು ಪರೋಕ್ಷವಾಗಿ ಭಾರತಕ್ಕೆ ಶುಭ ಸುದ್ದಿ!

ಅರೆ, ಎಣ್ಣೆ ಸೀಗೆಕಾಯಿಯಂತಿದ್ದ ಅಮೆರಿಕ- ರಷ್ಯಾ ನಡುವೆ ಸ್ನೇಹ ಬೆಳೆಯುತ್ತಿದೆಯೇ? ಅದು ಹೇಗೆ? ಆ ಎರಡು ದೇಶಗಳ ಸ್ನೇಹ ವೃದ್ಧಿಯಾದ್ರೆ ಭಾರತಕ್ಕೇನು ಲಾಭ? ಎಂಬೆಲ್ಲಾ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತದೆ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ.

ಮೊದಲಿಗೆ ಅಮೆರಿಕ ಮತ್ತು ರಷ್ಯಾ ನಡುವಣ ಸ್ನೇಹ ವೃದ್ಧಿಯ ಸೂಚನೆಗಳೇನು ಎಂಬುದನ್ನು ನೋಡೋಣ. ಕಳೆದ ವರ್ಷ ನಡೆದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್ ಅವರ ಇ-ಮೇಲ್ ಗಳಿಗೆ ಕನ್ನ ಹಾಕಲಾಗಿತ್ತು. ಇದು ಚುನಾವಣೆ ಮೇಲೂ ಪರಿಣಾಮ ಬೀರಿದ್ದು, ಹಿಲರಿ ಕ್ಲಿಂಟನ್ ಸೋಲಿಗೆ ಇದೇ ಪ್ರಮುಖ ಕಾರಣ ಅಂತಲೂ ವಿಶ್ಲೇಷಣೆ ಮಾಡಲಾಗಿದೆ. ಈ ಸೈಬರ್ ಕಳ್ಳತನ ಪ್ರಕರಣದ ತನಿಖೆ ನಡೆಸಿದ ಅಮೆರಿಕ ತನಿಖಾ ಸಂಸ್ಥೆ ಸಿಐಎ, ಇದರ  ಹಿಂದೆ ರಷ್ಯಾ ಪಾತ್ರ ಪ್ರಮುಖವಾಗಿದ್ದು, ರಷ್ಯಾ ವಿರೋಧಿ ನೀತಿ ಹೊಂದಿರುವ ಹಿಲರಿ ಕ್ಲಿಂಟನ್ ಅವರನ್ನು ಚುನಾಣೆಯಲ್ಲಿ ಸೋಲಿಸಬೇಕೆಂಬ ಕಾರಣಕ್ಕೆ ಈ ಕಳ್ಳತನ ಮಾಡಲಾಗಿದೆ ಎಂದು ವರದಿ ನೀಡಿತ್ತು. ತಕ್ಷಣವೇ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ರಷ್ಯಾ ವಿರುದ್ಧ ಬಿಗಿ ನಿಲುವು ತೆಗೆದುಕೊಂಡು, ರಷ್ಯಾದ 35 ಅಧಿಕಾರಿಗಳನ್ನು ದೇಶದಿಂದ ಹೊರಗಟ್ಟಿದ್ದರು. ಜತೆಗ ರಷ್ಯಾ ವಿರುದ್ಧ ಪ್ರತಿಬಂಧವನ್ನು ಹೇರಿದ್ದರು.

ಆದರೆ ಈಗ, ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಈ ಪ್ರತಿಬಂಧವನ್ನು ತೆಗೆದುಹಾಕುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಡೊನಾಲ್ಡ್ ಟ್ರಂಪ್ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ. ಈ ಸಂದರ್ಶನದಲ್ಲಿ ರಷ್ಯಾ ಮೇಲಿನ ಪ್ರತಿಬಂಧವನ್ನು ತೆರವುಗೊಳಿಸುವ ಕುರಿತಂತೆ ಟ್ರಂಪ್ ನೀಡಿರುವ ಹೇಳಿಕೆ ಹೀಗಿದೆ…

‘ಭಯೋತ್ಪಾದನೆ ನಿಗ್ರಹ ಹಾಗೂ ಇತರೆ ವಿಷಯಗಳಲ್ಲಿ ರಷ್ಯಾ ನಮಗೆ ಸಹಾಯ ಮಾಡುವುದಾದರೆ, ನಾವು ಅವರನ್ನು ದೂರವಿಡುವ ಅಗತ್ಯವಾದರೂ ಏನಿದೆ? ಹೀಗೆ ಅಮೆರಿಕದ ಧ್ಯೇಯಕ್ಕೆ ಬೆಂಬಲವಾಗಿ ಕೈಜೋಡಿಸಲು ಮುಂದಾಗಿರುವವರನ್ನು ನಾವು ಪ್ರತಿಬಂಧ ವಿಧಿಸುವುದು ಸರಿಯಲ್ಲ. ಈ ಬಗ್ಗೆ ನವೆಂಬರ್ 20ರ ನಂತರ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ ಜತೆ ಮಾತುಕತೆ ನಡೆಸುತ್ತೇನೆ.’

ಇದರೊಂದಿಗೆ ಟ್ರಂಪ್ ಆಡಳಿತ ಅವಧಿಯಲ್ಲಿ ಅಮೆರಿಕ ಮತ್ತು ರಷ್ಯಾ ಪರಸ್ಪರ ಹೊಂದಾಣಿಕೆಗೆ ಮುಂದಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಅಮೆರಿಕ ಹಾಗೂ ರಷ್ಯಾ ನಡುವಣ ಈ ಸಂಬಂಧ ವೃದ್ಧಿ ಭಾರತಕ್ಕೆ ಹೇಗೆ ಲಾಭ ಎಂದರೆ, ಭಾರತ ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಹಾಗೂ ರಷ್ಯಾ ಜತೆಗೆ ತನ್ನ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುತ್ತಿದೆ. ಈ ಹಂತದಲ್ಲಿ ಅಮೆರಿಕ ಹಾಗೂ ರಷ್ಯಾ ತಮ್ಮ ದ್ವೇಷವನ್ನು ಪಕ್ಕಕ್ಕಿಟ್ಟು ಪರಸ್ಪರ ಕೈಕುತ್ತಿರುವುದು ಭಾರತಕ್ಕೆ ಶುಭಸೂಚಕ. ಅದು ಹೇಗೆ ಅಂದರೆ…

ಭಾರತ ಮತ್ತು ರಷ್ಯಾ ನಡುವಣ ಸ್ನೇಹ 7 ದಶಕದಷ್ಟು ಹಳೆಯದು. ಹೀಗಾಗಿ ರಷ್ಯಾ ಭಾರತದ ಸಾಂಪ್ರದಾಯಿಕ ಸ್ನೇಹಿ ಎಂದೇ ಪರಿಗಣಿಸಲಾಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಭಾರತ ಅಮೆರಿಕ ಜತೆಗಿನ ಸ್ನೇಹವನ್ನು ಹೆಚ್ಚಿಸಿಕೊಳ್ಳುತ್ತಿದೆ. ಅಮೆರಿಕ ಜತೆಗಿನ ಸ್ನೇಹ ಹೆಚ್ಚುತ್ತಿದ್ದಂತೆ ರಷ್ಯಾ ಭಾರತದ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದೆಯೇ ಎಂಬ ಅನುಮಾನ ಹಲವು ಬಾರಿ ವ್ಯಕ್ತವಾಗಿದೆ. ರಷ್ಯಾ ಭಾರತದ ಜತೆಗಿನ ತನ್ನ ಸ್ನೇಹವನ್ನು ಸಂಪೂರ್ಣವಾಗಿ ಮುರಿದುಕೊಳ್ಳದಿದ್ದರೂ ಭಾರತದ ವಿರೋಧಿ ರಾಷ್ಟ್ರಗಳಾಗಿ ಬಿಂಬಿತವಾಗಿರುವ ಪಾಕಿಸ್ತಾನ ಹಾಗೂ ಚೀನಾದ ಜತೆ ಹಲವು ಬಾರಿ ಕೈಜೋಡಿಸಿದ ಉದಾಹರಣೆಗಳು ಸಿಗುತ್ತವೆ. ಚೀನಾ, ರಷ್ಯಾ ಹಾಗೂ ಪಾಕಿಸ್ತಾನ ಜತೆಯಾಗಿ ಪ್ರತ್ಯೇಕ ಶಕ್ತಿಯಾಗಿ ರೂಪುಗೊಳ್ಳುವ ಪ್ರಯತ್ನಗಳು ನಡೆಯುತ್ತಿರುವ ಸೂಚನೆಗಳು ಕಂಡುಬಂದಿದ್ದವು. ಈ ಎಲ್ಲ ವಿದ್ಯಮಾನಗಳಿಂದ ರಷ್ಯಾ ಭಾರತದ ಜತೆಗಿನ ಸ್ನೇಹವನ್ನು ಹಂತ ಹಂತವಾಗಿ ಕಡಿಮೆ ಮಾಡಿಕೊಳ್ಳುತ್ತಿದೆಯೇ ಎಂಬ ಆತಂಕವೂ ಮೂಡಿತ್ತು.

ಈಗ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ಅಮೆರಿಕ ಮತ್ತು ರಷ್ಯಾ ನಡುವಣ ಸ್ನೇಹ ಸಾಧ್ಯವಾಗುತ್ತೆ ಎನ್ನುವುದಾದರೆ, ಚೀನಾ ಜತೆ ಗುರುತಿಸಿಕೊಳ್ಳಬೇಕು ಹಾಗೂ ಪ್ರತ್ಯೇಕವಾದ ಶಕ್ತಿಯಾಗಿ ಹೊರಹೊಮ್ಮಬೇಕು ಎಂಬ ರಷ್ಯಾ ಮೇಲಿನ ಒತ್ತಡ ಸಹಜವಾಗಿಯೇ ಕಡಿಮೆಯಾಗುತ್ತದೆ. ಇದರಿಂದ ಚೀನಾ ಹಾಗೂ ಪಾಕಿಸ್ತಾನ ಜತೆಗಿನ ಹೊಂದಣಿಕೆಯ ಬಗೆಗಿನ ಆಸಕ್ತಿಯೂ ಕಡಿಮೆಯಾಗಲಿದೆ. ಆಗ ಭಾರತ ಮತ್ತು ಅಮೆರಿಕದ ಸ್ನೇಹ ಬೆಳೆದರೂ ಭಾರತ ಮತ್ತು ರಷ್ಯಾ ನಡುವಣ ಸ್ನೇಹಕ್ಕೆ ಯಾವುದೇ ರೀತಿಯ ಕುತ್ತು ಎದುರಾಗುವುದಿಲ್ಲ.

ಒಂದು ವೇಳೆ ಅಮೆರಿಕ ಮೇಲಿನ ದ್ವೇಷಕ್ಕೆ ರಷ್ಯಾ ಚೀನಾ ಜತೆ ಕೈಜೋಡಿಸಿ ಪ್ರತ್ಯೇಕ ಶಕ್ತಿಯಾಗಿ ಬೆಳೆದರೆ ಅದು ಕೇವಲ ಅಮೆರಿಕಕ್ಕೆ ಮಾತ್ರವಲ್ಲ, ಭಾರತಕ್ಕೂ ಸಂಕಷ್ಟದ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಿದೆ. ಆಗ ಭವಿಷ್ಯದಲ್ಲಿ ರಷ್ಯಾ ಹಾಗೂ ಭಾರತ ಪರಸ್ಪರ ವಿರೋಧಿಗಳ ಸ್ಥಾನದಲ್ಲಿ ನಿಲ್ಲಬೇಕಾದ ಸಂದರ್ಭ ಎದುರಾಗುವ ಸಾಧ್ಯತೆಗಳಿವೆ. ಆದರೆ ಈಗ ಅಮೆರಿಕ- ರಷ್ಯಾದ ಸಂಬಂಧ ಗಟ್ಟಿಯಾಗುತ್ತಿರುವುದರಿಂದ ಭಾರತ ಭವಿಷ್ಯದಲ್ಲಿ ರಷ್ಯಾವನ್ನು ಎದುರುಹಾಕಿಕೊಳ್ಳುವ ಸಂದರ್ಭವೂ ಉದ್ಭವಿಸುವುದಿಲ್ಲ. ಹೀಗಾಗಿ ಜಾಗತಿಕ ಮಟ್ಟದ ಈ ಎಲ್ಲ ಬೆಳವಣಿಗೆಗಳು ಭಾರತಕ್ಕೆ ಒಳ್ಳೆಯ ಸುದ್ದಿಯಾಗಿದೆ.

Leave a Reply