ಬದಲಾಗುತ್ತಿದೆಯೇ ಬಾಲಿವುಡ್ ಟ್ರೆಂಡ್? ಹೌದು ಎನ್ನುತ್ತಿವೆ ವರ್ಷಾರಂಭದಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರಗಳ ಟ್ರೇಲರ್!

ಡಿಜಿಟಲ್ ಕನ್ನಡ ಟೀಮ್:

ಪ್ರಸಕ್ತ ಸಾಲಿನ ಆರಂಭದಲ್ಲೇ ಸಿನಿಮಾ ರಸಿಕರಲ್ಲಿ ಕೂತೂಹಲ ಮೂಡಿಸಿರುವ ಮೂರು ಟ್ರೇಲರ್ ಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿವೆ. ದ ಘಾಜಿ ಅಟ್ಯಾಕ್, ರಂಗೂನ್ ಮತ್ತು ಜಗ್ಗ ಜಾಸೂಸ್ ಸಿನಿ ರಸಿಕರ ಗಮನ ಸೆಳೆದಿರುವ ಬಾಲಿವುಡ್ ನ ಮೂರು ಸಿನಿಮಾಗಳು.

ಸದ್ಯ ಬಾಲಿವುಡ್ ನಲ್ಲಿ ನೈಜ್ಯ ಘಟನೆ ಆಧಾರಿತ ಟ್ರೆಂಡ್ ಹವಾ ಎಬ್ಬಿಸುತ್ತಿದೆ. ದಂಗಾಲ್ ಚಿತ್ರದ ಯಶಸ್ಸಿನ ಬೆನ್ನಲ್ಲೇ ಈಗ ಮತ್ತಷ್ಟು ನೈಜ್ಯ ಘಟನೆ ಆಧಾರಿತ ಚಿತ್ರಗಳು ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿವೆ. ಪ್ರೀತಿ, ಪ್ರೇಮ, ಪ್ರಣಯದ ಚಿತ್ರಗಳನ್ನೇ ಮಾಡುತ್ತಾ ಬಂದಿರುವ ಕರಣ್ ಜೋಹರ್ ಸಹ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧಕ್ಕೂ ಮುನ್ನ ನಡೆದ ಘಟನೆಯೊಂದನ್ನು ಆಧಾರವಾಗಿಸಿ ದ ಘಾಜಿ ಅಟ್ಯಾಕ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ರೀತಿಯದ ಆ್ಯಕ್ಷನ್ ಹಾಗೂ ಯುದ್ಧದ ಹಿನ್ನೆಲೆಯ ಚಿತ್ರವನ್ನು ಕರಣ್ ಜೋಹರ್ ಮಾಡಲು ಮುಂದಾಗಿರೋದು ಬಾಲಿವುಡ್ ಮಾರುಕಟ್ಟೆ ಬದಲಾಗುತ್ತಿರುವುದಕ್ಕೆ ಸಾಕ್ಷಿಯಾಗುತ್ತಿದೆ. ಇದೇ ವೇಳೆ ಕಾಲ್ಪನಿಕ ಪ್ರೇಮ ಕಥೆಯ ಚಿತ್ರಗಳನ್ನು ಪ್ರೇಕ್ಷಕರು ಒಪ್ಪಿಕೊಳ್ಳುವುದು ಕಡಿಮೆಯಾಗಿ ಕರಣ್ ಜೋಹರ್ ಈ ರೀತಿಯ ಸಿನಿಮಾ ಪ್ರಯತ್ನಕ್ಕೆ ಕೈ ಹಾಕುವಂತೆ ಮಾಡಿದೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ. ಈ ಚಿತ್ರ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬತಿ ಮತ್ತು ತಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಟ್ರೇಲರ್ ಇಲ್ಲಿದೆ ನೋಡಿ…

ದ ಘಾಜಿ ಅಟ್ಯಾಕ್ ಚಿತ್ರದ ಜತೆಗೆ ಬಿಡುಗಡೆಯಾಗಿರುವ ರಂಗೂನ್ ಚಿತ್ರ ಸಹ ಇದೇ ರೀತಿ ನೈಜ್ಯ ಘಟನೆಯ ಎಳೆಯ ಆಧಾರದ ಮೇಲೆ ನಿರ್ಮಾಣವಾಗುತ್ತಿದೆ. ಎರಡನೇ ಮಹಾ ಯುದ್ಧ ಹಾಗೂ ಭಾರತ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿನ ಘಟನೆಗಳನ್ನು ಚಿತ್ರದ ತಿರುಳಾಗಿ ಬಳಸಲಾಗಿದ್ದು, ಚಿತ್ರದಲ್ಲಿ ರೊಮ್ಯಾಂಟಿಕ್ ಸ್ಪರ್ಶವೂ ಕಂಡುಬಂದಿದೆ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಶಾಹಿದ್ ಕಪೂರ್, ಸೈಫ್ ಅಲಿ ಖಾನ್ ಹಾಗೂ ಕಂಗನಾ ರನಾವತ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ವಿಭಿನ್ನವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಮನ ಗೆದ್ದಿದೆ. ಈ ಚಿತ್ರದ ಟ್ರೇಲರ್ ಇಲ್ಲಿ ನೋಡಬಹುದು.

ಈ ಎರಡು ನೈಜ್ಯ ಘಟನೆ ಆಧಾರಿತ ಚಿತ್ರಗಳ ನಡುವೆ ಈ ವರ್ಷ ತೆರೆಗೆ ಬರುವ ನಿರೀಕ್ಷೆ ಹುಟ್ಟಿಸಿರುವ ಮತ್ತೊಂದು ಚಿತ್ರ ಜಗ್ಗಾ ಜಾಸೂಸ್. ಸತ್ಯದ ಘಟನೆ ಆಧಾರಿತ ಚಿತ್ರಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಸ್ತವದ ಹಂಗಿಲ್ಲದೇ ಬೇರೆಯದೇ ಪ್ರಪಂಚಕ್ಕೆ ಕರೆದುಕೊಂಡು ಹೋಗುವ ಭರವಸೆಯನ್ನು ಬರ್ಫಿ ಚಿತ್ರ ಖ್ಯಾತಿಯ ಅನುರಾಗ್ ಬಸು ಮುಂದುವರಿಸಿಕೊಂಡು ಹೋಗಿದ್ದಾರೆ. ರಣ್ಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಟ್ರೇಲರ್ ಚಿತ್ರದ ಮೂಲ ತಿರುಳನ್ನು ಯಾವುದೇ ಹಂತದಲ್ಲೂ ಬಿಟ್ಟುಕೊಡದೆ ಕುತೂಹಲವನ್ನು ಮೂಡಿಸಿದೆ. ಈ ಚಿತ್ರದ ಟ್ರೇಲರ್ ಇಲ್ಲಿದೆ.

Leave a Reply