ಭಾರತೀಯ ಸೈನಿಕರ ರಕ್ಷಣೆಗಾಗಿ ನೆಲಬಾಂಬ್ ಪತ್ತೆ ಹಚ್ಚುವ ಡ್ರೋನ್ ಕಂಡು ಹಿಡಿದ 14 ವರ್ಷದ ಪೋರ!

ಡಿಜಿಟಲ್ ಕನ್ನಡ ಟೀಮ್:

ಗುಜರಾತಿನ ಹರ್ಷವರ್ದನ್ ಜಾಲಾ ಎಂಬ 14 ವರ್ಷದ ಹುಡುಗನೊಬ್ಬ ಈಗ ದೇಶದ ಗಮನವನ್ನು ತನ್ನತ್ತ ಸೆಳೆದಿದ್ದಾನೆ. ಅದೂ ಯುದ್ಧಭೂಮಿಯಲ್ಲಿ ನಮ್ಮ ಸೈನಿಕರ ಪ್ರಾಣಕ್ಕೆ ಕುತ್ತು ತರುವ ನೆಲಬಾಂಬುಗಳನ್ನು ಪತ್ತೆ ಹಚ್ಚುವ ಡ್ರೋನ್ ಅನ್ನು ಕಂಡು ಹಿಡಿಯುವ ಮೂಲಕ. ಅಷ್ಟೇ ಅಲ್ಲ ತನ್ನ ಈ ಸಂಶೋಧನೆಯ ಮುಂದಿನ ಹಂತವಾಗಿ ಗುಜರಾತ್ ಸರ್ಕಾರದ ಜತೆ ಈತ ₹ 5 ಕೋಟಿ ಮೌಲ್ಯದ ಒಪ್ಪಂದಕ್ಕೂ ಸಹಿ ಹಾಕಿದ್ದಾನೆ.

ನೆಲಬಾಂಬ್ ಪತ್ತೆ ಹಚ್ಚುವ ಡ್ರೋನ್ ನಿರ್ಮಾಣಕ್ಕೆ ಈ ಹುಡುಗನಿಗೆ ತಗುಲಿರುವ ವೆಚ್ಚ ₹ 5 ಲಕ್ಷ. ವಿಜ್ಞಾನ ಹಾಗೂ ಸಂಶೋಧನೆಗಳ ಬಗ್ಗೆ ಮೊದಲಿನಿಂದಲೂ ಸಾಕಷ್ಟು ಆಸಕ್ತಿ ಹೊಂದಿದ್ದ ಹರ್ಷವರ್ದನನಿಗೆ ಪೋಷಕರಿಂದ ಉತ್ತಮ ಪ್ರೋತ್ಸಾಹ ದೊರೆತಿದ್ದು, ಆತನ ಈ ಸಾಧನೆಗೆ ಬೆನ್ನೆಲುಬಾಗಿದ್ದಾರೆ. ಆರಂಭದಲ್ಲಿ ಹರ್ಷವರ್ದನನ ಸಂಸ್ಶೋಧನೆಗೆ ಆತನ ಪೊಷಕರು ₹ 2 ಲಕ್ಷ ನೀಡಿದ್ದರು. ನಂತರ ಗುಜರಾತ್ ಸರ್ಕಾರ ಆತನಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು ಉಳಿದ ಮೊತ್ತವನ್ನು ನೀಡಿದೆ.

ಚಿಕ್ಕ ವಯಸ್ಸಿನಲ್ಲೇ ಇಷ್ಟು ದೊಡ್ಡ ಸಂಶೋಧನೆ ಮಾಡಿರುವ ಹರ್ಷವರ್ದನ್ ಈಗ ತನ್ನದೇ ಆದ ಏರೋಬೊಟಿಕ್ಸ್7 ಟೆಕ್ ಸೊಲ್ಯೂಷನ್ಸ್ ಎಂಬ ಕಂಪನಿಯನ್ನೂ ಆರಂಭಿಸಿದ್ದಾನೆ. ಕೇವಲ 10ನೇ ತರಗತಿ ಓದುತ್ತಿರುವ ಈ ಪೋರನ ಸಾಧನೆ ಈಗ ಎಲ್ಲರ ಮನ ಗೆದ್ದಿದೆ.

imageಅಷ್ಟಕ್ಕೂ ಈತನಿಗೆ ಈ ಡ್ರೋನ್ ತಯಾರಿಸುವ ಆಲೋಚನೆ ಹೇಗೆ ಬಂದಿತು ಎಂಬುದನ್ನು ಈತ ವಿವರಿಸೋದು ಹೀಗೆ… ‘ನಾನು ಟಿವಿ ನೋಡುತ್ತಿರುವಾಗ ನೆಲಬಾಂಬ್ ಗಳಿಗೆ ಭಾರತೀಯ ಸೈನಿಕರು ಬಲಿಯಾಗುವುದು ಹಾಗೂ ಆ ಅಪಘಾತದಲ್ಲಿ ತೀವ್ರವಾಗಿ ಗಾಯವಾಗುವುದನ್ನು ನೋಡಿದೆ. ಆಗ ನನಗೆ ಇವುಗಳನ್ನು ಪತ್ತೆ ಹಚ್ಚುವ ಡ್ರೋನ್ ನಿರ್ಮಾಣ ಮಾಡುವ ಆಲೋಚನೆ ಬಂದಿತು.’

ಈ ಹುಡುಗ ನಿರ್ಮಾಣ ಮಾಡಿರುವ ಡ್ರೋನ್, ಇಫ್ರಾರೆಡ್ ಸೆನ್ಸಾರ್, ಥರ್ಮಲ್ ಮೀಟರ್ ಮತ್ತು ಆರ್ಜಿಬಿ ಸೆನ್ಸಾರ್ ಮೂಲಕ ಕಾರ್ಯ ನಿರ್ವಹಿಸಲಿದೆ. ಈ ಡ್ರೋನ್ ನಲ್ಲಿ 21 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಲವಡಿಸಲಾಗಿದ್ದು, ಯುದ್ಧ ಹಾಗೂ ನಕ್ಸಲರಂತಹ ತೀವ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ನೆಲಬಾಂಬ್ ಗಳನ್ನು ಪತ್ತೆ ಹಚ್ಚಲು ಈ ಡ್ರೋನ್ ಪ್ರಮುಖ ಪಾತ್ರ ನಿರ್ವಹಿಸಲಿದೆ. ಸದ್ಯ ಹರ್ಷವರ್ದನ್ ತನ್ನ ಸಂಸ್ಥೆ ಹಾಗೂ ತನ್ನ ಡ್ರೋನ್ ನ ಪೇಟೆಂಟ್ ಪಡೆಯಲು ಅರ್ಜಿ ಹಾಕಿದ್ದು, ತನ್ನ ಕಂಪನಿಯನ್ನು ಆಪಲ್ ಮತ್ತು ಗೂಗಲ್ ಗಿಂತಲೂ ಅತಿ ದೊಡ್ಡ ಕಂಪನಿಯಾಗಿ ಬೆಳೆಸಬೇಕೆಂಬ ಗುರಿ ಈ ಬಾಲಕನದು.

ಒಟ್ಟಿನಲ್ಲಿ ಆಡುವ ವಯಸ್ಸಿನಲ್ಲೇ ಸಂಶೋಧನೆ ಕುರಿತಂತೆ ಅಗಾಧ ಆಸಕ್ತಿ ಬೆಳೆಸಿಕೊಂಡು ಸಾಧನೆಯತ್ತ ತನ್ನ ಹೆಜ್ಜೆ ಹಾಕಿರುವ ಹರ್ಷವರ್ದನ್ ನಿಜಕ್ಕೂ ಇತರರಿಗೂ ದೊಡ್ಡ ಸ್ಫೂರ್ತಿಯಾಗಿ ನಿಲ್ಲುವುದರಲ್ಲಿ ಅನುಮಾನವಿಲ್ಲ.

Leave a Reply