ಅಡುಗೆ ಅನಿಲ ಕಾಳದಂಧೆ- ಕೇಂದ್ರ ಪೆಟ್ರೋಲಿಯಂ ಸಚಿವ ಪ್ರಧಾನ್ ಸಹೋದರನ ಏಜೆನ್ಸಿ ಮೆಲೆ ದಾಳಿ, ಕಾಂಗ್ರೆಸ್ ನಲ್ಲಿ ಸಿಧು ಎರಡನೇ ಇನಿಂಗ್ಸ್, ಬೋಟ್ ಅಪಘಾತ- 24 ಸಾವು

ಖ್ಯಾತ ಕವಿ ತಿರುವಳ್ಳುವರ್ ಅವರ ಜನ್ಮದಿನದ ಅಂಗವಾಗಿ ಬೆಂಗಳೂರಿನ ಆರ್ ಬಿ ಎನ್ ಎಂ ಎಸ್ ಕ್ರೀಡಾಂಗಣದಲ್ಲಿರುವ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

ಡಿಜಿಟಲ್ ಕನ್ನಡ ಟೀಮ್:

ಭ್ರಷ್ಟಾಚಾರ ನಿಗ್ರಹ ಸಂಸ್ಥೆ ದಾಳಿ

ಕಾಳಸಂತೆಯಲ್ಲಿ ಪೆಟ್ರೋಲ್ ಹಾಗೂ ಅಡುಗೆ ಅನಿಲ ಮಾರಾಟ ಜಾಲವನ್ನು ಪತ್ತೆ ಹಚ್ಚುವ ಸಲುವಾಗಿ ಒಡಿಶಾದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಅಧಿಕಾರಿಗಳು ಪೆಟ್ರೋಲ್ ಬಂಕ್, ಅಡುಗೆ ಅನಿಲ ಏಜೆನ್ಸಿಗಳ ಮೇಲೆ ದಾಳಿ ನಡೆಸಿವೆ. ಆ ಪೈಕಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಹೋದರನ ಏಜೆನ್ಸಿಗಳ ಮೇಲೂ ದಾಳಿ ಮಾಡಲಾಗಿದೆ.

ಈ ಏಜೆನ್ಸಿಗಳು ಕಾಳ ಸಂತೆಯಲ್ಲಿ ಪೆಟ್ರೋಲ್, ಅಡುಗೆ ಅನಿಲಗಳನ್ನು ಮಾರಾಟ ಹಾಗೂ ಕಲಬೆರಕೆ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಶನಿವಾರ ಈ ದಾಳಿ ಮಾಡಿತ್ತು. ‘ಕೊರಾಪಟ್, ನವರಂಗಪುರ, ಭುವನೇಶ್ವರ್, ಬೆರ್ಹಂಪುರ, ಬಲ್ಸೋರೆ, ಸಾಂಬ್ಲಾಪುರ, ಬರ್ಘರ್, ಅಂಗುಲ್ ಮತ್ತು ಕಟಕ್ ಪ್ರದೇಶಗಳಲ್ಲಿ ದಾಳಿ ನಡೆಸಿದ್ದು, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಹೋದರ ಅವರ ಏಜೆನ್ಸಿಯ ಮೇಲೂ ಶೋಧ ಕಾರ್ಯ ನಡೆಸಲಾಗಿತ್ತು’ ಎಂದು ಸಂಸ್ಥೆ ಮಾಹಿತಿ ಕೊಟ್ಟಿದೆ.

ಕಾಂಗ್ರೆಸ್ ಸೇರಿದ ಸಿಧು

ಬಿಜೆಪಿಯ ಸಂಸದರಾಗಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ ಸಿಧು, ನಂತರ ಮಾತನಾಡಿ ‘ಇದು ನನ್ನ ಹೊಸ ಇನಿಂಗ್ಸ್ ಆಗಿದ್ದು, ಫ್ರಂಟ್ ಫುಟ್ ಮೂಲಕ ಆರಂಭ ಮಾಡಿದ್ದೇನೆ. ಪಂಜಾಬ್ ರಾಜ್ಯ, ಪಂಜಾಬ್ ರಾಜ್ಯದ ಪ್ರತಿಯೋಬ್ಬರು ಗೆಲ್ಲಬೇಕು. ಹೀಗಾಗಿ ಕಾಂಗ್ರೆಸ್ ಸೇರಿದ್ದೇನೆ’ ಎಂದರು. ಇದೇ ವೇಳೆ ಸಿಧು ಅವರನ್ನು ಸ್ವಾಗತಿಸಿರುವ ಕಾಂಗ್ರೆಸ್ ಪಕ್ಷ, ‘ಸಿಧು ಅವರನ್ನು ಕಾಂಗ್ರೆಸ್ ಕುಟುಂಬಕ್ಕೆ ಸೇರಿಸಿಕೊಳ್ಳಲು ಇಚ್ಛಿಸುತ್ತೇನೆ. ಸಮಾನ ಮನಸ್ಕರನ್ನು ಒಂದುಗೂಡಿಸುವ ರಾಹುಲ್ ಗಾಂಧಿ ಅವರ ದೂರದೃಷ್ಟಿ ಹಾಗೂ ಧ್ಯೇಯಕ್ಕೆ ಧನ್ಯವಾದಗಳು. ನೇರ ಮಾತಿಗೆ ಗುರುತಿಸಿಕೊಂಡಿರುವ ಸಿಧು ಅವರ ಸೇರ್ಪಡೆಯಿಂದ ಪಕ್ಷದ ಬಲ ಹೆಚ್ಚಿದೆ’ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬೋಟ್ ಅಪಘಾತ

ಬಿಹಾರದ ಗಂಗಾ ನದಿಯಲ್ಲಿ ಬೋಟ್ ಮುಳುಗಿ 24 ಮಂದಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮಂಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆಯುತ್ತಿದ್ದ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿ ಜನರನ್ನು ವಾಪಸ್ ಕರೆತರುತ್ತಿದ್ದ ಸಂದರ್ಭದಲ್ಲಿ ಬೋಟ್ ನೀರಿನಲ್ಲಿ ಮುಳುಗಿದ ಪರಿಣಾಮ ದೊಡ್ಡ ಪ್ರಮಾಣದ ಸಾವು ನೋವು ಸಂಭವಿಸಿದೆ. ಈ ಅಪಘಾತದ ಕುರಿತು ತನಿಖೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ₹ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹ 50 ಸಾವಿರ ಪರಿಹಾರವನ್ನು ಘೋಷಿಸಿದ್ದಾರೆ.

ಬಿಪಿನ್ ರಾವತ್ ಎಚ್ಚರಿಕೆ

ಭಾರತೀಯ ಸೈನ್ಯದಲ್ಲಿರುವ ಕುಂದು ಕೊರತೆಗಳ ಬಗೆಗಿನ ದೂರುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ನವದೆಹಲಿಯಲ್ಲಿ ಭಾರತೀಯ ಸೇನಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಪಿನ್ ರಾವತ್ ಅತ್ಯುತ್ತಮ ಸೇವೆ ಸಲ್ಲಿಸಿದ ಯೋಧರಿಗೆ ಪದಕ ವಿತರಿಸಿದರು. ನಂತರ ಮಾತನಾಡಿದ ಅವರು, ‘ಯಾವುದೇ ಯೋಧ ದೂರುಗಳನ್ನು ಹೊಂದಿದ್ದರೆ, ಅಂತಹವರು ತಮ್ಮ ದೂರನ್ನು ಸಲ್ಲಿಸಲು ಸೂಕ್ತ ವೇದಿಕೆ ಕಲ್ಪಿಸಿಕೊಡಲಾಗುವುದು. ಒಂದು ವೇಳೆ ನಿಮ್ಮ ದೂರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ಅಥವಾ ನಿಮಗೆ ತೃಪ್ತಿಯಾಗದಿದ್ದರೆ ನೀವು ನನ್ನನ್ನು ಸಂಪರ್ಕಿಸಿ. ಆದರೆ ನೀವು ಈಗ ನಡೆದುಕೊಳ್ಳುತ್ತಿರುವ ರೀತಿ ಕಾನೂನು ಉಲ್ಲಂಘನೆಯಾಗಿದ್ದು ಅಪರಾಧವಾಗಿದೆ. ಇದಕ್ಕೆ ನೀವು ಶಿಕ್ಷೆಗೆ ಅರ್ಹರಾಗುತ್ತೀರಿ’ ಎಂದರು.

Leave a Reply