ಬಂದೂಕು ಹಿಡಿದಿರುವ ಹುಡುಗರು ಹೀರೋಗಳಾಗುತ್ತಾರೆ ಅಂತಾದ್ರೆ ದಂಗಾಲ್ ಹುಡುಗಿಯನ್ನೇಕೆ ಆದರ್ಶ ಅಂತ ಒಪ್ಪಿಕೊಳ್ಳಬಾರ್ದು? – ಮನಗೆದ್ದ ಮೆಹಬೂಬಾ ಮುಫ್ತಿ ಮಾತು!


ಡಿಜಿಟಲ್ ಕನ್ನಡ ಟೀಮ್:

ದಂಗಲ್ ಚಿತ್ರದಲ್ಲಿ ಕುಸ್ತಿಪಟು ಗೀತಾ ಕುಮಾರಿ ಪೋಗಟ್ ಬಾಲ್ಯದ ಹಂತದ ಪಾತ್ರ ನಿಭಾಯಿಸಿ ಮೆಚ್ಚುಗೆ ಪಡೆದಿರುವ ಜರಿಯಾ ವಾಸೀಮ್ ಈಗ ಸುದ್ದಿಯಲ್ಲಿದ್ದಾರೆ.

ಜಮ್ಮು-ಕಾಶ್ಮೀರದ ಈ ಹುಡುಗಿಯ ನಟನಾ ಚಾತುರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತ, ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಭಾನುವಾರವಷ್ಟೇ ತಮ್ಮ ನಿವಾಸದಲ್ಲಿ ಈಕೆ ಮತ್ತವರ ಕುಟುಂಬವನ್ನು ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಜರಿಯಾ ವಾಸೀಮ್ ಮುಖ್ಯಮಂತ್ರಿಯನ್ನು ಯಾವ ಉದ್ದೇಶವಿಟ್ಟುಕೊಂಡು ಭೇಟಿಯಾದಳು ಎಂದೆಲ್ಲಾ ಮೂದಲಿಕೆಗಳು ಶುರುವಾದವು. ಎಷ್ಟರಮಟ್ಟಿಗೆ ಎಂದರೆ ಸೋಮವಾರ ಹಲವು ವಾಹಿನಿಗಳಲ್ಲಿ ಕಾಣಿಸಿಕೊಂಡ ಜರಿಯಾ ವಾಸೀಮ್, ‘ನನ್ನನ್ನು ಖಂಡಿತ ಯಾರೂ ಆದರ್ಶವಾಗಿ ಸ್ವೀಕರಿಸಬೇಕಿಲ್ಲ. ನಾನು ಚಿತ್ರದಲ್ಲಿ ನಟಿಸಿದ್ದೇನಷ್ಟೆ. ಅದು ಮಹಿಳಾ ಬಲವರ್ಧನೆ ಸಂದೇಶ ಹೊತ್ತಿದೆ ಎಂಬುದೂ ವಿಶೇಷವಾದರೂ ಅದರಾಚೆಗೆ ಹೊರಜಗತ್ತಿನಲ್ಲಿ ನಾನು ಯಾವುದೇ ಮಾದರಿ ಪಟ್ಟಕ್ಕೆ ಆಶಿಸಿಲ್ಲ. ನನಗಿಂತ ಪ್ರತಿಭಾವಂತರು ಬೇಕಷ್ಟು ಮಂದಿಯಿದ್ದಾರೆ. ಅವರೆಲ್ಲ ನನ್ನನ್ನು ಮಾದರಿಯಾಗಿರಿಸಿಕೊಳ್ಳದೇ ಅವರವರ ದಾರಿಯಲ್ಲಿ ಯಶ ಕಾಣಲಿ’ ಅಂತ ಸ್ಪಷ್ಟೀಕರಣ ನೀಡಬೇಕಾಯಿತು.

ಕಾರಣವಿಷ್ಟೆ. ಪ್ರತ್ಯೇಕತಾವಾದಿ ಮನಸ್ಥಿತಿಗಳಿಗೆ ಭಾರತ ಮುಖ್ಯವಾಹಿನಿಯೊಂದಿಗೆ ಬೆರೆತುಕೊಳ್ಳುವ ರೀತಿಯಲ್ಲಿ ಚಿತ್ರಿತವಾಗಿರುವ ಯಾರೊಬ್ಬರೂ ಅವರ ಆದರ್ಶವಾಗುವುದು ಬೇಕಿಲ್ಲ!

ಆದರೆ ಈ ವಿಷಯದಲ್ಲಿ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿರುವ ರೀತಿ ಮಾತ್ರ ಆಪ್ಯಾಯಮಾನವಾಗಿದೆ. ಅವರು ಜರಿಯಾ ಪರ ನಿಂತು ಸಾಮಾಜಿಕ ತಾಣಗಳ ಟೀಕೆಗಳನ್ನೆಲ್ಲ ಖಂಡಿಸಿದ್ದಷ್ಟೇ ಅಲ್ಲ, ಜಮ್ಮು-ಕಾಶ್ಮೀರದ ತಲೆಮಾರು ಇಂಥದ್ದೇ ಸೃಜನಶೀಲ ಹಾದಿಗಳಲ್ಲಿ ಸಾಗಬೇಕೆಂಬುದನ್ನು ಮುಲಾಜಿಲ್ಲದೇ ಪ್ರತಿಪಾದಿಸಿದ್ದಾರೆ.

‘ಬಂದೂಕು ಹಿಡಿದುಕೊಂಡು ನಾಲ್ಕು ಯುವಕರು ಫೇಸ್ಬುಕ್’ನಲ್ಲಿ ಫೋಟೊ ಹಾಕಿಕೊಂಡರೆ ಹೀರೋಗಳಾಗುತ್ತಾರೆ. ಹೀಗಿರುವಾಗ ನಮ್ಮ ಜಮ್ಮು-ಕಾಶ್ಮೀರದಲ್ಲಿ ವಾಸ್ತವದಲ್ಲಿಯೂ ಹಲವು ಚಿಣ್ಣರು ಕರಾಟೆ ಸ್ಪರ್ಧೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವನ್ನೆಲ್ಲ ಸಂಭ್ರಮಿಸುವುದು ಬೇಡವೇ? ದಂಗಲ್ ನಲ್ಲಿ ಕುಸ್ತಿಪಟು ಪಾತ್ರ ನಿರ್ವಹಿಸಿ ದೇಶದ ಮನಗೆದ್ದಿರುವ ಜರಿಯಾ ಸಹ ಮಾದರಿಯೇ ಸರಿ’ ಎಂದಿದ್ದಾರೆ ಮುಫ್ತಿ!

ಗಮನಿಸಬೇಕಾದ ಅಂಶ ಎಂದರೆ, ಮುಫ್ತಿಯವರ ಈ ಮಾತುಗಳಲ್ಲಿ ಯುವಕರು ಕಲ್ಲುತೂರಾಟ, ಹಿಂಸೆ, ಪ್ರತ್ಯೇಕತೆಗಳಲ್ಲಿ ವ್ಯಸ್ತರಾಗದೇ ಇಂಥ ಸೃಷ್ಟಿಶೀಲ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳಲಿ ಎಂಬ ಅಭಿಪ್ರಾಯವೇ ದಟ್ಟವಾಗಿದೆ. ಮೆಹಬೂಬಾ ಮುಫ್ತಿ ಮತ್ತವರ ಪಿಡಿಪಿ ಆಗೀಗ ಪ್ರತ್ಯೇಕತಾವಾದದ ತಮ್ಮ ಮೂಲ ಸಿದ್ಧಾಂತದ ಮೋಹವನ್ನು ತೋರಿಸುತ್ತಲಿರುತ್ತಾರಾದರೂ, ಇತ್ತೀಚಿನ ಬಹಳಷ್ಟು ಸಂದರ್ಭಗಳಲ್ಲಿ ಅವರು ಹಿಂಸೆ ತೊರೆದು ಭಾರತದೊಂದಿಗೆ ಒಂದಾಗಿರಬೇಕಾದ ಧಾಟಿಯನ್ನೇ ಹೆಚ್ಚಾಗಿ ಪ್ರತಿಪಾದಿಸಿದ್ದಾರೆ.

ಜರಿಯಾಳದ್ದು ಕೇವಲ ನಟನೆಯೇ ಇದ್ದಿರಬಹುದಾದರೂ ಬಂದೂಕು ಹಿಡಿಯುವ ಯುವಕರಿಗಿಂತ ಇವಳೇ ಆದರ್ಶವಾಗುತ್ತಾಳೆ ಎಂಬಂತೆ ಗಟ್ಟಿ ಧ್ವನಿಯಲ್ಲಿ ಮುಖ್ಯಮಂತ್ರಿಯವರು ಬೆಂಬಲಿಸಿರುವ ರೀತಿ ಖಂಡಿತ ಈ ದೇಶದ ಮೆಚ್ಚುಗೆಗೆ ಅರ್ಹ.

Leave a Reply