ಮುಂದುವರಿದ ರಾಷ್ಟ್ರಗಳಲ್ಲಿ ಎಲ್ಲರಿಗೂ ಇದೆಯೇ ಬ್ಯಾಂಕ್ ಖಾತೆ? ಭಾರತದಂಥ ಅಭಿವೃದ್ಧಿಶೀಲ ದೇಶಕ್ಕೆ ಮಾತ್ರವೇ ಸೀಮಿತವೇ ಅಸಮಾನತೆ?

hana class

authors-rangaswamyಸರ್ಕಾರ ನೋಟು ಅಮಾನ್ಯ ನಿರ್ಧಾರ ಕೈಗೊಂಡಾಗ ಎದ್ದ ಬೊಬ್ಬೆಗಳಲ್ಲೊಂದು-ಅವೆಷ್ಟೋ ಪ್ರತಿಶತ ಜನರು ಬ್ಯಾಂಕಿನ ಖಾತೆಯನ್ನೇ ಹೊಂದಿಲ್ಲ, ಅವರೇನು ಮಾಡೋದು ಅನ್ನೋದು. ಈ ರೀತಿ ಬ್ಯಾಂಕಿನೊಂದಿಗೆ ವಹಿವಾಟು ಹೊಂದಿರದ ಜನ ಬೇರೆ ದೇಶಗಳಲ್ಲೂ ಇದ್ದಾರಾ? ಮತ್ತು ನಮ್ಮಲ್ಲಿ ಇರುವಂತೆ ಅಸಮಾನತೆ ಮುಂದುವರೆದ ದೇಶಗಳಲ್ಲೂ ಇದೆಯಾ? ಎನ್ನುವ ಪ್ರಶ್ನೆ ಬಂದದ್ದು ಹಣಕಾಸು ವಲಯದಲ್ಲಿ 30 ವರ್ಷ ಕೆಲಸ ಮಾಡಿ ನಿವೃತ್ತಿ ಹೊಂದಿರುವ ಒಬ್ಬ ಹಿರಿಯ ನಾಗರಿಕರಿಂದ. ‘ದೂರದ ಬೆಟ್ಟ ನುಣ್ಣಗೆ ಎಂದು ನನಗೆ ಗೊತ್ತು. ಒಂದಷ್ಟು ಅಂಕಿಅಂಶ ಮಂಡಿಸಿ ವಿವರಿಸಿ’ ಎಂದೂ ಬರೆದಿದ್ದಾರೆ.

ಜಗತ್ತಿನ ಒಟ್ಟು ಜನಸಂಖ್ಯೆ 7.5 ಬಿಲಿಯನ್! ಅಂಕಿಅಂಶದ ಪ್ರಕಾರ  2.5  ಬಿಲಿಯನ್ ಗೂ ಅಧಿಕ ಜನರು ಬ್ಯಾಂಕಿನ ಖಾತೆಯನ್ನ ಹೊಂದಿಲ್ಲ. ಜಗತ್ತಿನ ಅರ್ಧ ಜನಸಂಖ್ಯೆ ಯಾವುದೇ ತೆರನಾದ ಬ್ಯಾಂಕಿನ ಸೇವೆಯನ್ನ  ಪಡೆಯುತ್ತಿಲ್ಲ. ಇದರ ಸಂಖ್ಯೆ ನಿಖರವಾಗಿ ಇಷ್ಟೇ ಎಂದು ಹೇಳಲು ಆಗದು.  ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಅವರ ಫೌಂಡೇಶನ್ ಜಗತ್ತಿನ ದೇಶಗಳ ಸರ್ವೇ ಮಾಡಿ ಈ ಒಂದು ಅಂಕಿ ಅಂಶವನ್ನ ನೀಡಿದೆ. ವರ್ಲ್ಡ್ ಬ್ಯಾಂಕ್ ಈ ಬಗೆ ಕಳವಳ ವ್ಯಕ್ತಪಡಿಸಿ ಶ್ವೇತಪತ್ರವನ್ನ ಹೊರಡಿಸಿದೆ. 200 ಮಿಲಿಯನ್ ಗೂ  ಹೆಚ್ಚು ಸಣ್ಣ ಮತ್ತು ಮಾಧ್ಯಮ ಉದ್ದಿಮೆಗಳು ಕೂಡ ಬ್ಯಾಂಕ್ ಅಕೌಂಟ್ ಹೊಂದಿಲ್ಲ ಎನ್ನುವ ಆಘಾತಕಾರಿ ಮಾಹಿತಿ ಕೂಡ ಸರ್ವೆಯಲ್ಲಿ ಗೊತ್ತಾಗಿದೆ.

ಈ ಜನರನ್ನ ಮುಖ್ಯವಾಹಿನಿಗೆ ಕರೆತರಲು ಐ ಎಂ ಎಫ್ ಮತ್ತು ವರ್ಲ್ಡ್ ಬ್ಯಾಂಕ್ ಜಗತ್ತಿನ ದೇಶಗಳಲ್ಲಿ 25 ದೇಶಗಳನ್ನು ಗುರುತಿಸಿವೆ. ಇವುಗಳನ್ನ ‘ಫೋಕಸ್ ಕಂಟ್ರೀಸ್’ ಎಂದು ಕರೆದಿದೆ. ಅದಕ್ಕೆ ಕಾರಣ ಈ ಇಪ್ಪತೈದು ದೇಶಗಳ ನಡುವೆ 73 ಪ್ರತಿಶತ ಬ್ಯಾಂಕಿನ ಸೇವೆಯಿಂದ ಹೊರಗುಳಿದ ಜನರು ವಾಸಿಸುತ್ತಿದ್ದಾರೆ. 2020ರ ವೇಳೆಗೆ ಈ ಸಂಖ್ಯೆಯನ್ನು ಗಣನೀಯವಾಗಿ ಇಳಿಸುವುದು ಇವುಗಳ ಮುಂದಿನ ಗುರಿ. ನರೇಂದ್ರ ಮೋದಿ ಜಗತ್ತಿನ ಮುಂದುವರೆದ ದೇಶದ ನಾಯಕರ ನಡುವೆ ಅದೇಕೆ ಅಷ್ಟು ಗೌರವಿಸಲ್ಪಡುತ್ತಾರೆ ? ಎನ್ನುವುದಕ್ಕೆ ಅವರ ‘ಜನಧನ್’ ಮುಖ್ಯ ಕಾರಣಗಳಲ್ಲೊಂದು.

ಜಗತ್ತು ಮೊಬೈಲ್ ಬ್ಯಾಂಕಿಂಗ್ ನತ್ತ  ಸಾಗುತ್ತಿರುವ ಹೊತ್ತಿನಲ್ಲಿ ಅಮೆರಿಕಾದಂತ ಅಮೇರಿಕಾದಲ್ಲಿ ಪ್ರತಿ ನೂರು ಜನಕ್ಕೆ 7 ಜನ ಬ್ಯಾಂಕಿನ ಸೇವೆ ಪಡೆಯುತ್ತಿಲ್ಲ. ಇದು ತಿರುಚಿದ ಸಂಖ್ಯೆ. ಏಕೆಂದರೆ ಮನೆಯಲ್ಲಿ ನಾಲ್ಕು ಜನರಿದ್ದು ಒಬ್ಬರ ಬಳಿ ಖಾತೆ ಇದ್ದರೂ ಅಂತಹ ಕುಟುಂಬವನ್ನ ಬ್ಯಾಂಕಿನ ಸೇವೆ ಪಡೆಯುತ್ತಿದೆ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿನ ಸದಸ್ಯರಲ್ಲಿ ಯಾರೊಬ್ಬರ ಹತ್ತಿರವೂ ಬ್ಯಾಂಕಿನ ಖಾತೆ ಇಲ್ಲದಿದ್ದರೆ ಅಂಥವರನ್ನ ಬ್ಯಾಂಕಿನ ಸೇವೆ ವಂಚಿತ ಎಂದು ಪರಿಗಣಿಸಲಾಗುತ್ತದೆ. ಈ ಸಂಖ್ಯೆ 20 ಪ್ರತಿಶತ ಎಂದರೆ ಹುಬ್ಬೇರಬಹುದು ಆದರೆ ಇದು ನಿಜ.

finance

ಅಸಮಾನತೆ ಕೂಡ ಮೇಲಿನ ಬ್ಯಾಂಕ್ ಸೇವೆ ವಂಚಿತರ ಸಂಖ್ಯೆಯೊಂದಿಗೆ ತಳುಕು ಹಾಕಿಕೊಂಡಿದೆ. ಅಮೇರಿಕಾ ಹೆಚ್ಚು ಅಸಮಾನತೆ ಹೊಂದಿರುವ ಮುಂದುವರಿದ ದೇಶ. ಭಾರತ ಇನ್ನೂ ಮುಂದುವರಿಯುತ್ತಲೇ ಇರುವ ದೇಶ ಎಂದು ಹೇಳಲಾಗುತ್ತದೆ. ಆದರೆ ಮುಂದುವರೆದ ದೇಶಗಳಲ್ಲೂ ಹಣಕಾಸಿನ ಸಮಾನತೆ ಇಲ್ಲ. ಯೂರೋಪಿನಲ್ಲಿ ಮನೆಯಲ್ಲಿ ಇದ್ದರೆ ಹೀಟರ್ ಹಾಕಬೇಕು, ಹೆಚ್ಚು ವಿದ್ಯುತ್ ಬಿಲ್ ಬರುತ್ತದೆ ಎಂದು ದಿನದ ಮುಕ್ಕಾಲು ಪಾಲು ಮಾಲ್ ನಲ್ಲಿ ಕಳೆಯುವ ಹಿರಿಯ ನಾಗರಿಕರ ಸಂಖ್ಯೆ ಬಹಳ ಹಿರಿದು. ಇದನ್ನು ಕಣ್ಣಾರೆ ಕಂಡು ಹಲವರ ಮಾತನಾಡಿಸಿದ ಅನುಭವ ನನ್ನದು. ಹೀಗೆ ಹಲವು ಉದಾಹರಣೆ ನೀಡಬಹುದು. ಅವು ಅಸಮಾನತೆ ಇದೆ ಎನ್ನುವುದನ್ನ ಪುಷ್ಟೀಕರಿಸುತ್ತವೆ.

ಅಸಮಾನತೆ, ಬಡತನ, ನಿರಕ್ಷರತೆ ಇವುಗಳು ಕೆಮ್ಮು ನೆಗಡಿ ಇದ್ದಂತೆ. ವರ್ಣ, ಗಡಿ, ಭಾಷೆ ಮೀರಿದ ಪಿಡುಗುಗಳು. ಇವು ಒಂಥರಾ ಬೆಸೆದುಕೊಂಡಿವೆ ಒಂದನ್ನ ಕಡಿಮೆ ಮಾಡದೆ ಇನ್ನೊಂದು ಕಡಿಮೆ ಆಗದು. ಈ ಬಗ್ಗೆ ಹೆಚ್ಚೆಚ್ಚು ಅರಿವು ಮೂಡಿಸುವುದಷ್ಟೇ ಇರುವ ಆಯ್ಕೆ.

Leave a Reply