ಎಟಿಎಂ ಹಣ ಡ್ರಾ ಮಿತಿ ಹೆಚ್ಚಿಸಿದ ಆರ್ಬಿಐ, ಮಂತ್ರಿ ಮಾಲ್ ಗೋಡೆ ಕುಸಿತ, ದೆಹಲಿಯಲ್ಲಿ ಕಾಮುಕನ ಬಂಧನ, ಅಖಿಲೇಶಗೆ ಸೈಕಲ್

ಬೆಂಗಳೂರಿನಲ್ಲಿ ಸೋಮವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್.

ಡಿಜಿಟಲ್ ಕನ್ನಡ ಟೀಮ್:

ಮಾಲ್ ಗೋಡೆ ಕುಸಿತ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್ ಮೂರನೇ ಅಂತಸ್ಥಿನ ಹಿಂಭಾಗದ ಗೋಡೆ ಕುಸಿದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಈ ಗೋಡೆ ಕುಸಿತಕ್ಕೆ ಸ್ಪಷ್ಟ ಕಾರಣವೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಮೂರನೇ ಅಂತಸ್ಥಿನಲ್ಲಿದ್ದ ರಾಜಧಾನಿ ಹೊಟೇಲಿನ ಫಾಲ್ ಸೀಲಿಂಗ್ ಗೋಡೆ ಕುಸಿದ ಪರಿಣಾಮ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಮಹಿಳೆಯ ತಲೆಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬೆನ್ನಲ್ಲೇ ಮಾಲ್ ನಲ್ಲಿನ ನಡೆಯುತ್ತಿದ್ದ ಚಿತ್ರ ಪ್ರದರ್ಶನಗಳನ್ನು ಅರ್ಧಕ್ಕೆ ನಿಲ್ಲಿಸಿ, ಜನರನ್ನು ಮಾಲ್ ನಿಂದ ಹೊರಗೆ ಕಳುಹಿಸಲಾಯಿತು. ಸ್ಥಳಕ್ಕೆ ಬಿಬಿಎಂಪಿ ಮೇಯರ್ ಪದ್ಮಾವತಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಈ ಬಗ್ಗೆ ತನಿಖೆಗೂ ಸೂಚನೆ ನೀಡಲಾಗಿದ್ದು, ಸಾರ್ವಜನಿಕರ ಹಿತಾದೃಷ್ಟಿಯಿಂದ ತಾತ್ಕಾಲಿಕವಾಗಿ ಮಾಲ್ ಅನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಗೋಡೆ ಕುಸಿತದಿಂದ ಪಕ್ಕದಲ್ಲೇ ಇರುವ ಮೆಟ್ರೋ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಎಂದಿನಂತೆ ಮೆಟ್ರೋ ಸಂಚರಿಸಲಿದೆ ಎಂದು ಮೇಯರ್ ಮಾಹಿತಿ ನೀಡಿದರು.

ಅಖಿಲೇಶ್ ಪಾಲಾದ ಸೈಕಲ್

ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಮುಲಾಯಂ ಸಿಂಗ್ ಹಾಗೂ ಅಖಿಲೇಶ್ ಯಾದವ್ ನಡುವಣ ಕಾದಾಟಲ್ಲಿ ಅಖಿಲೇಶ್ ಯಾದವ್ ಸದ್ಯಕ್ಕೆ ಮೇಲುಗೈ ಸಾಧಿಸಿದ್ದಾರೆ. ಮುಂದಿನ ತಿಂಗಳಿನಿಂದ ಏಳು ಹಂತದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸೈಕಲ್ ಗುರುತು ತಮಗೆ ಸಿಗಬೇಕು ಎಂದು ಈ ಇಬ್ಬರು ನಾಯಕರ ಬಣಗಳು ಬೇಡಿಕೆ ಇಟ್ಟಿದ್ದವು. ಈ ಅಪ್ಪ ಮಗನ ಕಾದಾಟದಲ್ಲಿ ಸೈಕಲ್ ಯಾರಾ ಪಾಲಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಈ ಬಗ್ಗೆ ಚುನಾವಣ ಆಯೋಗ ಸೋಮವಾರ ತನ್ನ ನಿರ್ಧಾರ ಪ್ರಕಟಿಸಿದ್ದು ಸೈಕಲ್ ಗುರುತನ್ನು ಅಖಿಲೇಶ್ ಯಾದವ್ ಅವರಿಗೆ ನೀಡಿದೆ. ಇದರೊಂದಿಗೆ ಮುಲಾಯಂ ಸಿಂಗ್ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದೆ.

ಕಾಮುಕ ಬಂಧನ

ಕಳೆದ 14 ವರ್ಷಗಳಿಂದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದ ದೆಹಲಿ ಮೂಲದ ಕಾಮುಕ ಸುನೀಲ್ ರಸ್ತೋಗಿ ಎಂಬಾತನನ್ನು ಬಂಧಿಸಲಾಗಿದೆ. ಪೊಲೀಸರ ವಿಚಾರಣೆ ವೇಳೆ ಈತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಇದುವರೆಗೂ ತನ್ನಿಂದ ನೊಂದ ಹೆಣ್ಣು ಮಕ್ಕಳ ಸಂಖ್ಯೆ ನಿಖರವಾಗಿ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಮೂರು ಹೆಣ್ಣು ಮಕ್ಕಳು ಸೇರಿದಂತೆ ಐವರು ಮಕ್ಕಳನ್ನು ಹೊಂದಿರುವ ಈತ, ಶಾಲಾ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈತನನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಳ್ಳುವ ಮಿತಿಯನ್ನು ಹೆಚ್ಚಿಸಿದೆ. ಇಷ್ಟು ದಿನಗಳ ಕಾಲ ಇದ್ದ ಮಿತಿಯನ್ನು ₹4500 ರಿಂದ ₹10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇನ್ನು ವಾರದ ಡ್ರಾ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕರಂಟ್ ಅಕೌಂಟಿನಿಂದ ವಾರಕ್ಕೆ ₹1 ಲಕ್ಷ ಡ್ರಾ ಮಾಡಬಹುದಾಗಿದೆ.
  • ಸುಪ್ರೀಂ ಕೋರ್ಟ್ ಕೇವಲ ಬೃಹತ್ ಬೆಂಗಳೂರು ನಗರದಲ್ಲಿನ ಅಕ್ರಮ ಮನೆ ಮತ್ತು ನಿವೇಶನಗಳನ್ನು ಸಕ್ರಮಗೊಳಿಸಬಾರದು ಎಂದು ತಡೆಯಾಜ್ಞೆ ನೀಡಿದೆ. ಹೀಗಾಗಿ ಸುಪ್ರೀಂ ಕೋರ್ಟಿನ ತಡೆಯಾಜ್ಞೆ ರಾಜ್ಯದ ಇತರೆ ಭಾಗಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ ರಾಜಧಾನಿ ಹೊರತುಪಡಿಸಿ ಇತರೆ ನಗರ ಪಾಲಿಕೆ, ನಗರ ಸಭೆ, ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಯೋಜನೆ ಕಾರ್ಯ ಮುಂದುವರಿಯಲಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
  • ಒಡಿಶಾದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಹೋದರನ ಅಡುಗೆ ಅನಿಲ ಏಜೆನ್ಸಿ ಸೇರಿದಂತೆ ಇತರೆ ಪೆಟ್ರೋಲ್ ಬಂಕ್ ಗಳ ಮೇಲೆ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧರ್ಮೇಂದ್ರ ಪ್ರಧಾನ್, ‘ಕಾನೂನಿಗಿಂತ ಮಿಗಿಲಾಗಿ ಯಾರೂ ಇಲ್ಲ. ಕಾನೂನಿ ಪ್ರಕಾರ ರಾಜ್ಯ ಸರ್ಕಾರಗಳು ಈ ರೀತಿಯಾದ ಶೋಧ ಕಾರ್ಯ ನಡೆಸುವ ಅಧಿಕಾರವನ್ನು ಹೊಂದಿವೆ. ಅದೇ ರೀತಿಯಲ್ಲಿ ಈ ದಾಳಿಯು ನಡೆದಿದೆ. ಇಂತಹ ಪ್ರಕರಣಗಳಲ್ಲಿ ತನಿಖಾ ಅಧಿಕಾರಿಗಳು ಪ್ರಕರಣಗಳನ್ನು ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗಲಿದ್ದು, ತಪ್ಪು ಮಾಡಿರುವುದು ಸಾಬೀತಾದರೆ ಅವರು ಯಾರೇ ಆಗಿದ್ದರು ಶಿಕ್ಷೆಗೆ ಗುರಿಪಡಿಸಲಿದ್ದಾರೆ.’
  • ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಸೇನೆಯ ಈ ಕಾರ್ಯಕ್ಕೆ ಸ್ಥಳೀಯರಿಂದಲೇ ಅಡಚಣೆ ಎದುರಾಗಿದ್ದು, ಸೇನೆ ಇದನ್ನು ಸಮರ್ಥವಾಗಿ ನಿಭಾಯಿಸಿ ಕಾರ್ಯಾಚರಣೆ ಪೂರ್ಣಗೊಳಿಸಿದೆ. ಈ ಕುರಿತ ಪೂರ್ಣ ವರದಿಯನ್ನು ಇಲ್ಲಿ ಓದಬಹುದು.

Leave a Reply