ಜಮ್ಮು ಕಾಶ್ಮೀರದ ಅನಂತನಾಗ್ ಪ್ರದೇಶದಲ್ಲಿ ಮೂವರು ಉಗ್ರರ ಹತ್ಯೆ, ಸೇನೆ ಕಾರ್ಯಾಚರಣೆಗೆ ಸ್ಥಳಿಯರಿಂದಲೇ ಅಡ್ಡಿ

ಡಿಜಿಟಲ್ ಕನ್ನಡ ಟೀಮ್:

ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅವೂರಾ ಗ್ರಾಮದ ಮನೆಯೊಂದರಲ್ಲಿ ಅಡಗಿ ಕೂತಿದ್ದ ಮೂವರ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರನ್ನು ಭಾರತೀಯ ಸೇನೆ ಸೋಮವಾರ ಹೊಡೆದುರುಳಿಸಿದೆ. ಆದರೆ ಉಗ್ರರ ವಿರುದ್ಧದ ಸೇನೆಯ ಕಾರ್ಯಾಚರಣೆಗೆ ಸ್ಥಳೀಯರು ಅಡ್ಡಿ ಪಡಿಸಿದ್ದು, ಜಮ್ಮು ಕಾಶ್ಮೀರದಲ್ಲಿ ಉಗ್ರರಿಗೆ ಸ್ಥಳೀಯರ ಬೆಂಬಲ ಯಾವ ಮಟ್ಟಿಗೆ ಇದೆ ಎಂಬುದನ್ನು ತೋರುತ್ತದೆ.

ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಸ್ಥಳದಲ್ಲಿ ಸ್ಫೋಟಕಗಳು ಸಿಡಿದ ಶಬ್ದ ಕೇಳಿಸಿತು. ಇದರ ಬೆನ್ನಲ್ಲೇ ಕಾರ್ಯಾಚರಣೆಗಿಳಿದ ಭಾರತೀಯ ಸೇನೆ, ಸತತ 9 ಗಂಟೆಗಳ ಕಾಲ ನಿರಂತರ ಶೋಧ ನಡೆಸಿ ಉಗ್ರರನ್ನು ಹತ್ಯೆ ಮಾಡಿತು.

‘ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ಮಾಡುವಾಗ ಉಗ್ರರನ್ನು ರಕ್ಷಿಸಲು ಕೆಲವು ಸ್ಥಳೀಯರು ಕಲ್ಲು ತೂರಾಟ ನಡೆಸಿ ಸೇನೆ ವಿರುದ್ಧ ಸಂಘರ್ಷಕ್ಕೆ ಮುಂದಾದರು. ಈ ಹಂತದಲ್ಲಿ ಸೇನೆ ಅಶ್ರುವಾಯು ಪ್ರಯೋಗಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ ಈ ಕಾರ್ಯಾಚರಣೆ ಸಂದರ್ಭದಲ್ಲಿ ಸೇನಾ ಪಡೆ ಸುತ್ತುವರಿದ ನಂತರ ಉಗ್ರನೊಬ್ಬ ತನ್ನ ಮನೆಯವರಿಗೆ ಕರೆ ಮಾಡಿ, ‘ನನ್ನನ್ನು ಸೇನೆ ಸುತ್ತುವರಿದಿದ್ದು, ಈಗ ನಾನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿರುವುದಾಗಿ ವರದಿಯಾಗಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ.

Leave a Reply