ನಕ್ಸಲ್ ಪೀಡಿತ ಪ್ರದೇಶದಲ್ಲಿ ಖಾಕಿ ತೊಟ್ಟ ಮೊದಲಿಗ ಮಹಿಳಾ ಅಧಿಕಾರಿ, ಉಷಾ ಕಿರಣರ ಉದಾತ್ತ ಗುರಿ

ಡಿಜಿಟಲ್ ಕನ್ನಡ ಟೀಮ್:

ನಕ್ಸಲರಿಂದ ತತ್ತರಿಸಿರುವ ಛತ್ತೀಸಘಡದ ಬಸ್ತರ್ ಪ್ರದೇಶದಲ್ಲಿ ಮಾವೋವಾದಿಗಳ ನಿಗ್ರಹಕ್ಕೆ ಸಿಆರ್ ಪಿಎಫ್ ಉಷಾ ಕಿರಣ್ ಎಂಬ ಮಹಿಳಾ ಅಧಿಕಾರಿಯನ್ನು ನೇಮಕ ಮಾಡಿದೆ. ಆ ಮೂಲಕ ನಕ್ಸಲರ ಅಬ್ಬರ ಹೆಚ್ಚಿರುವ ಈ ಪ್ರದೇಶದಲ್ಲಿ ನೇಮಕವಾಗಿರುವ ಮೊದಲ ಮಹಿಳಾ ಅಧಿಕಾರಿ ಎಂಬ ಖ್ಯಾತಿಯನ್ನು ಸಂಪಾದಿಸಿದ್ದಾರೆ.

ಮಾವೋವಾದಿಗಳ ಅತಿಹೆಚ್ಚು ಪ್ರಭಾವ ಹೊಂದಿರುವ ಬಸ್ತರ್ ಪ್ರದೇಶಕ್ಕೆ ಉಷಾ ಕಿರಣ್ ಅವರ ಆಯ್ಕೆಯ ಹಿಂದೆ ಒಂದು ಪ್ರಬಲ ಕಾರಣವೇ ಇದೆ. ಇಲ್ಲಿ ಸಿಆರ್ ಪಿಎಫ್ ಭದ್ರತಾ ಸಿಬ್ಬಂದಿಗೆ ನಕ್ಸಲರನ್ನು ಮೆಟ್ಟಿ ನಿಲ್ಲುವುದರ ಜತಗೆ ಅಲ್ಲಿನ ಸ್ಥಳೀಯರ ವಿಶ್ವಾಸ ಹಾಗೂ ಬೆಂಬಲ ಪಡೆಯುವುದು ಮುಖ್ಯ. ಕಾರ್ಯಾಚರಣೆ ಸಂದರ್ಭದಲ್ಲಿ ಸ್ಥಳೀಯರ ಮನೆಗಳ ತಪಾಸಣೆಯನ್ನೂ ನಡೆಸಬೇಕಾಗುತ್ತದೆ. ಇಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ಬುಡಕಟ್ಟು ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಾರೆ, ಲೈಂಗಿಕ ಕಿರುಕುಳ ನೀಡುತ್ತಾರೆ ಎಂಬ ಆರೋಪಗಳಿವೆ. ಇದರಿಂದ ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಇಲ್ಲಿನ ಜನರು ಭಯದಿಂದ ತತ್ತರಿಸುತ್ತಾರಲ್ಲದೇ ಭದ್ರತಾ ಪಡೆ ಬಗ್ಗೆ ಶಂಕೆ ಹೊಂದಿದವರಾಗಿದ್ದಾರೆ.

ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಕೆಲ ದಿನಗಳ ಹಿಂದಷ್ಟೇ ಸಿಆರ್ ಪಿಎಫ್ ಮೇಲೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ (ಎನ್ಎಚ್ಆರ್ ಸಿ) ಗಂಭೀರ ಆರೋಪವನ್ನು ಮಾಡಿತ್ತು. 2015ರ ಅಕ್ಟೋಬರ್ ತಿಂಗಳಲ್ಲಿ ನಡೆದ ನಕ್ಸಲರ ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ಛತ್ತೀಸಘಡದ ಆದಿವಾಸಿ ಮತ್ತು ಬುಡಕಟ್ಟಿನ 16 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬುದು ಮಾನವ ಹಕ್ಕು ಆಯೋಗದ ಆರೋಪ. ಇಂಥ ವಿರಳ ಘಟನೆಗಳಿದ್ದಿರಬಹುದಾದರೂ ಸಿಆರ್ ಪಿಎಫ್ ನವರನ್ನು ಅತ್ಯಾಚಾರಿಗಳಂತೆ ಚಿತ್ರಿಸಿ ಪ್ರಚಾರ ಮಾಡುತ್ತಿರುವುದರಲ್ಲಿ ನಕ್ಸಲರ ಕುತಂತ್ರವಿದೆ ಎಂಬುದು ಭದ್ರತಾ ಪಡೆಯ ಪ್ರತಿಪಾದನೆ.

ಇದೀಗ ಮಹಿಳಾ ಅಧಿಕಾರಿ ಪಡೆಯಲ್ಲಿರುವುದು ಅಲ್ಲಿನ ಸ್ಥಳೀಯರಿಗೆ, ವಿಶೇಷವಾಗಿ ಮಹಿಳೆಯರಿಗೆ ವಿಶ್ವಾಸದಾಯಿ ಕ್ರಮವಾಗಿದೆ. ಮನೆಗಳ ತಪಾಸಣೆ ವೇಳೆ ಮಹಿಳಾ ಅಧಿಕಾರಿ ನೇತೃತ್ವವಿದ್ದಾಗ ಮುಜುಗರ ತಪ್ಪುತ್ತದೆ. ಈ ಉದ್ದೇಶದಿಂದಲೇ ಸಿಆರ್ ಪಿಎಫ್ ಈ ಪ್ರದೇಶಕ್ಕೆ ಉಷಾ ಕಿರಣ್ ಎಂಬ ದಕ್ಷ ಅಧಿಕಾರಿಯನ್ನು ನೇಮಿಸಿದೆ. ಈಗ ಉಷಾ ಕಿರಣ್ 80 ಸೈನಿಕರ ಬೆಟಾಲಿಯನ್ ಅನ್ನು ಮುನ್ನಡೆಸುತ್ತಿದ್ದು, ಬಸ್ತರ್ ಪ್ರದೇಶದಲ್ಲಿ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

‘ಉಷಾ ಕಿರಣ್ ಈ ಪ್ರದೇಶಕ್ಕೆ ನೇಮಕವಾದ ನಂತರ ಇಲ್ಲಿನ ಜನರ ಮನಸ್ಥಿತಿ ಬದಲಾಗಿದೆ. ಉಷಾ ಅವರ ಉಪಸ್ಥಿತಿ ಇಲ್ಲಿನ ಮಹಿಳೆಯರಿಗೆ ನೆಮ್ಮದಿ ತಂದಿದೆ. ಹೀಗಾಗಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಇಲ್ಲಿನ ಜನರು ನಿರಾತಂಕವಾಗಿರುವಂತೆ ಮಾಡಿದೆ’ ಎಂದು ಸ್ಥಳೀಯ ಮಹಿಳೆಯೊಬ್ಬರು ಹೇಳಿಕೆ ನೀಡಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಉಷಾ ಕಿರಣ್ ಅವರ ಹಿನ್ನೆಲೆಯನ್ನು ನೋಡುವುದಾದರೆ, ಈಕೆ ಗುರ್ ಗಾಂವ್ ಮೂಲದವರಾಗಿದ್ದು, ಸಿಆರ್ ಪಿಎಫ್ ಭದ್ರತಾ ಪಡೆಗೂ ಈಕೆಯ ಕುಟುಂಬಕ್ಕೂ ಸಾಕಷ್ಟು ನಂಟಿದೆ. ಕಾರಣ, ಈಕೆಯ ತಂದೆ ಹಾಗೂ ತಾತ ಸಿಆರ್ ಪಿಎಫ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರ ಮಟ್ಟದ ಮಾಜಿ ಅಥ್ಲೀಟ್ ಆಗಿರುವ ಉಷಾ ಕಿರಣ್, ತ್ರಿಪ್ಪಲ್ ಜಂಪ್ ನಲ್ಲಿ ದೆಹಲಿಯನ್ನು ಪ್ರತಿನಿಧಿಸಿದ್ದಾರೆ. ಛತ್ತೀಸಘಡದ ಬಸ್ತಾರ್ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆಯಲ್ಲಿ ಕೇವಲ ಇಬ್ಬರು ಮಹಿಳಾ ಅಧಿಕಾರಿಗಳು ಮಾತ್ರ ನಿಯೋಜನೆಯಾಗಿದ್ದು, ಆ ಪೈಕಿ ಉಷಾ ಕಿರಣ್ ಸಹ ಒಬ್ಬರು. ಮತ್ತೊಬ್ಬರು ಅರ್ಚನಾ ಗೌರಾ. ಇವರು ಕೊಂಡಗಾನ್ ಪ್ರದೇಶಕ್ಕೆ ನಿಯೋಜನೆಯಾಗಿದ್ದು, ಈ ಪ್ರದೇಶದಲ್ಲಿ ನಕ್ಸಲರ ಪ್ರಭಾವ ಕಡಿಮೆ ಮಟ್ಟದಾಗಿದೆ.

ಉಷಾ ಕಿರಣ್ ಅವರು ಸಿಆರ್ ಪಿಎಫ್ ಸೇರ್ಪಡೆಯಾದಾಗ ಅವರಿಗೆ ಸೇವೆ ಸಲ್ಲಿಸಲು ಮೂರು ಅವಕಾಶಗಳನ್ನು ನೀಡಲಾಗಿತ್ತು. ಆಗ ಉಷಾ ಕಿರಣ್ ಸ್ವತಃ  ಬಸ್ತರ್ ಪ್ರದೇಶದ ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಮುಂದಾದರು. ನಕ್ಸಲರ ವಿರುದ್ಧದ ಕಾರ್ಯಾಚರಣೆ ಒಂದು ದೊಡ್ಡ ಸವಾಲಾಗಿದ್ದರು ಅದನ್ನೇ ಆಯ್ಕೆ ಮಾಡಿಕೊಂಡ ಬಗ್ಗೆ ಉಷಾ ಕಿರಣ್ ಹೇಳಿರುವುದು ಹೀಗೆ… ‘ಬಸ್ತರ್ ಪ್ರದೇಶದಲ್ಲಿನ ಬುಡಕಟ್ಟು ಜನರು ಮುಗ್ಧರು. ಮಾವೋವಾದಿಗಳ ಹಿಂಸಾಚಾರದಿಂದ ಈ ಪ್ರದೇಶ ಅಭಿವೃದ್ಧಿಯಾಗಿಲ್ಲ. ಇಲ್ಲಿನ ಮಹಿಳೆಯರ ಜತೆ ನಾನು ಆಗಾಗ್ಗೆ ಮಾತನಾಡುತ್ತೇನೆ. ಅವರು ಪುರುಷ ಭದ್ರತಾ ಸಿಬ್ಬಂದಿಗಳನ್ನು ನೋಡಿದರೆ ಭಯಪಡುತ್ತಾರೆ. ಆದರೆ ನನ್ನ ಜತೆ ಆಪ್ತವಾಗಿ ಮಾತನಾಡುತ್ತಾರೆ.’

ಉಷಾ ಕಿರಣ್ ಅವರ ನೇಮಕದ ಬಗ್ಗೆ ಬಸ್ತರ್ ಪ್ರದೇಶದ ಸಿಆರ್ ಪಿಎಫ್ ಡಿಐಜಿ ಸಂಜಯ್ ಯಾದವ್ ಹೇಳುವುದು ಹೀಗೆ…

‘ಮಾವೋವಾದಿ ನಕ್ಸಲ್ ಪೀಡಿತ ಪ್ರದೇಶಗಳ ಕಾರ್ಯಾಚರಣೆ ವೇಳೆ ಉಷಾ ಕಿರಣ್ ಅವರ ಉಪಸ್ಥಿತಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಜತೆಗೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಆರೋಪ ಮಾಡುತ್ತಿರುವ ಮಾವೋವಾದಿಗಳ ಕುತಂತ್ರವನ್ನು ಹಿಮ್ಮೆಟ್ಟಲು ಉಷಾ ಕಿರಣ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.’

ಒಟ್ಟಿನಲ್ಲಿ ಭದ್ರತಾ ಪಡೆಯ ಮೇಲಿನ ಆರೋಪ ಹಾಗೂ ಅಲ್ಲಿನ ಮುಗ್ಧ ಜನರ ವಿಶ್ವಾಸ ಗಳಿಸಲು ಸಿಆರ್ ಪಿಎಫ್ ಉಷಾ ಕಿರಣ್ ಅವರನ್ನು ನೇಮಿಸಿರುವುದು ಉತ್ತಮ ಹೆಜ್ಜೆಯಾಗಿದ್ದು, ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆ ಮತ್ತಷ್ಟು ಪರಿಣಾಮಕಾರಿಯಾಗುವ ಸೂಚನೆಗಳು ವ್ಯಕ್ತವಾಗುತ್ತಿವೆ.

Leave a Reply