ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್- ಎಸ್ಪಿ ದೋಸ್ತಿ

ಡಿಜಿಟಲ್ ಕನ್ನಡ ಟೀಮ್:

ಬಹು ನಿರೀಕ್ಷಿತ ಉತ್ತರ ಪ್ರದೇಶ ವಿಧಾನಸಭೆ ಚುನಾವಣಾ ಕಾದಾಟ ದಿನೇ ದಿನೇ ರಂಗೇರುತ್ತಿದೆ. ಸಮಾಜವಾದಿ ಪಕ್ಷದಲ್ಲಿ ಅಪ್ಪ ಮಗನ ಜಗಳದಲ್ಲಿ ಸೈಕಲ್ ಚಿಹ್ನೆ ಅಖಿಲೇಶ್ ಯಾದವ್ ಪಾಲಾದ ಬೆನ್ನಲ್ಲೇ ಈಗ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕೈ ಕೈ ಹಿಡಿದುಕೊಂಡು ನಿಂತಿವೆ.

ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಒಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿವೆ ಎಂಬ ಮಾತುಗಳು ಕೇಳಿ ಬರುತ್ತಲೇ ಇದ್ದವು. ಆದರೆ ಮಂಗಳವಾರ ಈ ಎರಡು ಪಕ್ಷಗಳ ಜಂಟಿ ಸ್ಪರ್ಧೆ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ರಾಜ್ಯದ ಉಸ್ತುವಾರಿ ಹೊತ್ತಿರುವ ಗುಲಾಮ್ ನಬಿ ಅಜಾದ್ ಅಧಿಕೃತ ಮಾಹಿತಿ ನೀಡಿದ್ದಾರೆ. ‘ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಜತೆಯಾಗಿ ಸ್ಪರ್ಧಿಸಲಿವೆ. ಎರಡು ಪಕ್ಷಗಳ ನಡುವಣ ಸೀಟು ಹಂಚಿಕೆ ಹಾಗೂ ಇತರೆ ಮಾಹಿತಿಗಳನ್ನು ಮುಂದಿನ ಎರಡು ಮೂರು ದಿನಗಳಲ್ಲಿ ಪ್ರಕಟಿಸಲಾಗುವುದು’ ಎಂದು ಸುದ್ದಿಗಾರರಿಗೆ ಅಜಾದ್ ಮಾಹಿತಿ ನೀಡಿದ್ದಾರೆ.

ಇತ್ತ ತಂದೆ ಮುಲಾಯಂ ಸಿಂಗ್ ಅವರ ವಿರುದ್ಧವೇ ತೊಡೆ ತಟ್ಟಿ ನಿಂತಿರುವ ಅಖಿಲೇಶ್ ಯಾದವ್, ಕಾಂಗ್ರೆಸ್ ಜತೆಗಿನ ಹೊಂದಾಣಿಕೆ ಬಗೆಗಿನ ಎಲ್ಲ ವಿವರವನ್ನು ಎರಡರಿಂದ ಮೂರು ದಿನಗಳಲ್ಲಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಜತೆಗೆ ಸದ್ಯದಲ್ಲೇ ಅಖಿಲೇಶ್ ಯಾದವ್ ದೆಹಲಿಗೆ ತೆರಳಲಿದ್ದು, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಚರ್ಚೆ ಮಾಡಲಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಹೊಂದಾಣಿಕೆಯನ್ನು ವಿರೋಧಿಸಿ ನವದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಸೂತ್ರದ ಪ್ರಕಾರ ಕಾಂಗ್ರೆಸ್ಸಿಗೆ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಬೇಕಾಗಿ ಬಂದು ಅದು ಕುಬ್ಜವಾಗುತ್ತದೆ ಎಂಬುದು ಕೆಲವು ಕಾರ್ಯಕರ್ತರ ವಾದ.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಎದುರಿಸಲು ಇಂಥ ಒಕ್ಕೂಟದ ಅಗತ್ಯ ಇದ್ದೇ ಇತ್ತು ಎಂಬುದು ರಾಜಕೀಯ ಪರಿಣತರು ಒಪ್ಪುತ್ತಿರುವ ಮಾತು.

Leave a Reply