‘ಕೊಳಚೆ ಪ್ರದೇಶಗಳಲ್ಲಿ ಗಾಂಧೀಜಿ ಅವರ ಚಿಹ್ನೆ ಬಳಸಬೇಡಿ’- ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ

ಡಿಜಿಟಲ್ ಕನ್ನಡ ಟೀಮ್:

‘ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿತ್ರ ಹಾಗೂ ಚಿಹ್ನೆಗಳನ್ನು ಕೊಳಕು ಸ್ಥಳಗಳಲ್ಲಿ ಬಳಸಬೇಡಿ…’ ಇದು ಕೇಂದ್ರ ರಾಜ್ಯ ಸರ್ಕಾರಗಳಿಗೆ ನೀಡಿರುವ ಸಲಹೆ.

ಎಲ್ಲ ರಾಜ್ಯಗಳ ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿಗಳಿಗೆ ಕೇಂದ್ರ ಸರ್ಕಾರ ಈ ಬಗ್ಗೆ ಸಂದೇಶ ರವಾನಿಸಿದ್ದು, ‘ಸ್ವಚ್ಛ ಭಾರತ ಕಾರ್ಯಕ್ರಮ ಜಾರಿಗೊಳಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ಅವರ ಗುರುತಿನ ಚಿಹ್ನೆಗಳಾದ ಅವರ ಕನ್ನಡಕ, ಚರಕ ಹಾಗೂ ಅವರ ಭಾವಚಿತ್ರಗಳನ್ನು ಗೋಡೆ ಮೇಲೆ, ಶೌಚಾಲಯಗಳ ಬಳಿ, ಕಸ ಹಾಕುವ ಸ್ಥಳಗಳಲ್ಲಿ ಅಥವಾ ಇನ್ಯಾವುದೇ ಕೊಳಚೆ ಪ್ರದೇಶಗಳಲ್ಲಿ ಹಾಕಬೇಡಿ. ಸ್ವಚ್ಛ ಭಾರತ ಕಾರ್ಯಕ್ರಮದ ಮೂಲಕ ಈ ಚಿಹ್ನೆಯನ್ನು ಇಂತಹ ಸ್ಥಳಗಳಲ್ಲಿ ಬಳಸುವ ಮೂಲಕ ಯಾವುದೇ ಜನರ ಭಾವನೆಗೆ ಧಕ್ಕೆಯಾಗುವುದು ಬೇಡ. ಇದನ್ನು ತಕ್ಷಣದಿಂದಲೇ ಜಾರಿಗೊಳಿಸಿ’ ಎಂದು ತಿಳಿಸಿದೆ.

ಛತ್ತೀಸಘಡ ಮೂಲದ ಬದ್ರುದ್ದೀನ್ ಖುರೇಶಿ ಎಂಬುವವರು ಕೊಳಚೆ ಪ್ರದೇಶಗಳಲ್ಲಿ ಗಾಂಧಿ ಅವರ ಚಿಹ್ನೆಗಳನ್ನು ಬಳಸುತ್ತಿರುವ ಬಗ್ಗೆ ಪ್ರಶ್ನಿಸಿ ಹೈಕೋರ್ಟಿನ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ, ‘ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಅವರ ಚಿಹ್ನೆ ಬಳಕೆಯಿಂದ ಅವರಿಗೆ ಅಪಮಾನ ಮಾಡಲಾಗುತ್ತಿದೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರ ಚಿಹ್ನೆಯನ್ನು ಬಳಸುವಾಗ ಎಚ್ಚರಿಕೆಯನ್ನು ವಹಿಸಬೇಕು’ ಎಂದು ಅಭಿಪ್ರಾಯಪಟ್ಟಿತ್ತು.

ನ್ಯಾಯಾಲಯ ಅರ್ಜಿ ತಿರಸ್ಕರಿಸಿದ್ದರೂ ಸಹ ಕೇಂದ್ರ ಸರ್ಕಾರ ಯಾರ ಭಾವನೆಗೂ ಧಕ್ಕೆಯಾಗದಂತೆ ನೋಡಿಕೊಳ್ಳಲು ಮುಂದಾಗಿದೆ. ಹೀಗಾಗಿ ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿಗಳಿಗೆ ಈ ಸೂಚನೆಯನ್ನು ನೀಡಿದ್ದು, ತಮ್ಮ ಜಿಲ್ಲಾ ವ್ಯಾಪ್ತಿಯ ಇಲಾಖೆ ಅಧಿಕಾರಿಗಳಿಗೂ ಸೂಚನೆಯನ್ನು ರವಾನಿಸುವಂತೆ ಹೇಳಲಾಗಿದೆ.

Leave a Reply