ರಾಜ್ಯ ವಿವಿಗಳಲ್ಲಿನ ಭ್ರಷ್ಟಾಚಾರ ತನಿಖೆಗೆ ಆದೇಶ ಎಂದ ಸಚಿವರು, ರಾಜ್ಯಪಾಲರ ವಿರುದ್ಧ ಮುಮಂ ಬೇಸರ, ತಮಿಳುನಾಡಲ್ಲಿ ಶಶಿಕಲಾ ವರ್ಸಸ್ ದೀಪಾ

ಬೆಂಗಳೂರಿನಲ್ಲಿರುವ ಜವಾಹರ್ ಲಾಲ್ ನೆಹರೂ ತಾರಾಲಯದಲ್ಲಿ ನೂತನವಾಗಿ ಅಳವಡಿಸಿರುವ ಹೈಸ್ಪೀಡ್ ಪ್ರೊಜೆಕ್ಟರ್ ಸಿಸ್ಟಮ್ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

ಡಿಜಿಟಲ್ ಕನ್ನಡ ಟೀಮ್:

ವಿಶ್ವ ವಿದ್ಯಾಲಯಗಳಲ್ಲಿ ಅವ್ಯವಹಾರ ತನಿಖೆಗೆ ಆದೇಶ

ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ 17 ವಿಶ್ವವಿದ್ಯಾಲಯಗಳಲ್ಲಿ ₹ 500 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮಾಹಿತಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಸಚಿವರು, ‘ರಾಜ್ಯದ 25 ಸರ್ಕಾರಿ ವಿಶ್ವವಿದ್ಯಾಲಯಗಳ ಪೈಕಿ 17 ವಿಶ್ವವಿದ್ಯಾಲಯಗಳಲ್ಲಿ ಭಾರೀ ಪ್ರಮಾಣದ ಹಣಕಾಸಿನ ಅವ್ಯವಹಾರ ನಡೆದಿದೆ. ಈ ಬಗ್ಗೆ ಆಯಾ ವಿಶ್ವವಿದ್ಯಾಲಯ ವ್ಯಾಪ್ತಿಯ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಆರ್ಥಿಕ ಕಾರ್ಯದರ್ಶಿಗಳನ್ನೊಳಗೊಂಡ ಮೂರು ಸದಸ್ಯರ ಸಮಿತಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ. ಇನ್ನು ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಮೂಲ ಸೌಕರ್ಯ ಕಲ್ಪಿಸಲು ವಿಶ್ವಬ್ಯಾಂಕಿನಿಂದ ₹3500 ಕೋಟಿ ನೆರವು ಪಡೆಯಲಾಗುವುದು. ಮುಂಬರುವ ಜೂನ್ ತಿಂಗಳ ವೇಳೆಗೆ 650 ಉಪನ್ಯಾಸಕರು ಹಾಗೂ 360 ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪೂರ್ಣ ಪ್ರಮಾಣದ ಶಿಕ್ಷಣ ನೀತಿಯನ್ನೇ ಬದಲಿಸಲಾಗುವುದು’ ಎಂದರು.

ಸಿದ್ದರಾಮಯ್ಯ ಬೇಸರ

ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಜವಾಹರ್ ಲಾಲ್ ನೆಹರೂ ತಾರಾಲಯದಲ್ಲಿ ನೂತನವಾಗಿ ಅಳವಡಿಸಿರುವ ಹೈಸ್ಪೀಡ್ ಪ್ರೊಜೆಕ್ಟರ್ ಸಿಸ್ಟಮ್ ಉದ್ಘಾಟಿಸಿದ ನಂತರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಿರಸ್ಕಾರದ ಕಡತ ಸರ್ಕಾರದ ಕೈ ಸೇರಿಲ್ಲ. ಆದರೆ ಆ ಬಗ್ಗೆ ಮಾಹಿತಿ ಇದೆ. ಪ್ರತಿ ಬಾರಿ ಇದೇ ರೀತಿಯಾದರೆ ಏನು ಮಾಡೋದು? ಈ ಬಗ್ಗೆ ಮುಂದೇನು ಮಾಡಬೇಕೆಂಬುದನ್ನು ಸರ್ಕಾರ ನಿರ್ಧರಿಸಲಿದೆ. ಲೋಕಾಯುಕ್ತಕ್ಕೆ ಬಲತುಂಬುವ ಉದ್ದೇಶದಿಂದ ಅರ್ಹರ ಹೆಸರುಗಳನ್ನೇ ಶಿಫಾರಸ್ಸು ಮಾಡಲಾಗುತ್ತಿದೆ. ಆದರೆ ಒಂದಲ್ಲ ಒಂದು ಕಾರಣಗಳಿಂದ ರಾಜಭವನದಿಂದ ಕಡತ ಹಿಂತಿರುಗುತ್ತಿದೆ. ರಾಜ್ಯಪಾಲರೊಟ್ಟಿಗೆ ಸಮಾಲೋಚನೆ ನಡೆಸಿ, ಮತ್ತೊಮ್ಮೆ ಉನ್ನತ ಮಟ್ಟದ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ಶುಶ್ರೂಷಕರನ್ನು ಖಾಯಂಗೊಳಿಸಲು ನಿರ್ಧಾರ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 10 ಸಾವಿರಕ್ಕೂ ಹೆಚ್ಚು ಶುಶ್ರೂಷಕರನ್ನು ಹಂತ ಹಂತವಾಗಿ ಖಾಯಂಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಮಂಗಳವಾರ ನಡೆದ ಇಲಾಖೆಯ ಪರಿಶೀಲನಾ ಸಭೆಯಲ್ಲಿ, ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿರುವ ಶುಶ್ರೂಷಕರನ್ನು ಖಾಯಂಗೊಳಿಸಲು ತೀರ್ಮಾನಿಸಲಾಗಿದೆ. ಸುಪ್ರೀಂ ಕೋರ್ಟಿನ ತೀರ್ಪಿನಿಂದಾಗಿ ಗುತ್ತಿಗೆ ನೌಕರರನ್ನು ನೇರವಾಗಿ ಖಾಯಂಗೊಳಿಸಲು ಸಾಧ್ಯವಿಲ್ಲದ ಕಾರಣ, ಮುಂದಿನ ನೇಮಕಾತಿಯ ವೇಳೆ ಇವರಿಗೆ ಪ್ರತ್ಯೇಕ ಮೀಸಲಾತಿ ನೀಡಿ ವಯೇಮಿತಿ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಸಿಎಂ ಅಧಿಕಾರಿಗಳಿಗೆ ಆದೇಶ ನೀಡಿದರು.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಸಾಲುಗಳು…

  • ಶಿನಾ ಬೋರಾ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ತಾಯಿ ಇಂದ್ರಾಣಿ ಮುಖರ್ಜಿ ಹಾಗೂ ಆಕೆಯ ಗಂಡ ಪೀಟರ್ ಮುಖೆರ್ಜಾ ವಿರುದ್ಧವೂ ಕೊಲೆ ಪ್ರಕರಣ ದಾಖಲಾಗಿದೆ. ಮಂಗಳವಾರ ನಡೆದ ವಿಚಾರಣೆ ವೇಳೆ ತಾನು ಪೀಟರ್ ನಿಂದ ವಿವಾಹ ವಿಚ್ಛೇಧನ ಪಡೆಯಲು ನಿರ್ಧರಿಸಿದ್ದಾಗಿ ಇದ್ರಾಣಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
  • ಜಯಲಲಿತಾ ಅವರ ನಿರ್ಗಮನದ ನಂತರ ತಮಿಳುನಾಡಿನ ರಾಜಕೀಯ ಅದರಲ್ಲೂ ಎಐಡಿಎಂಕೆಯಲ್ಲಿ ಹಲವಾರು ವಿದ್ಯಮಾನಗಳು ನಡೆಯುತ್ತಲೇ ಬಂದಿವೆ. ಜಯಲಲಿತಾ ಸಾವಿನ ನಂತರ ಪಕ್ಷದ ಅಧಿಕಾರವನ್ನು ಶಶಿಕಲಾ ವಹಿಸಿಕೊಂಡಿದ್ದು, ಈಗ ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ರಾಜಕೀಯಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಎಐಡಿಎಂಕೆ ಪಕ್ಷಕ್ಕೆ ನನ್ನ ಅಗತ್ಯವಿದೆಯೇ ಹೊರತು ಶಶಿಕಲಾ ಅವರದ್ದಲ್ಲ ಎಂದು ದೀಪಾ ಹೇಳಿಕೆ ನೀಡಿದ್ದಾರೆ. ಪಕ್ಷದಲ್ಲಿ ಶಶಿಕಲಾ ಅಧಿಕಾರ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದ್ದರೂ ದೀಪಾ ಅವರ ಪ್ರವೇಶದಿಂದ ಪಕ್ಷದಲ್ಲಿನ ಬಿಕ್ಕಟ್ಟು ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.
  • ಆದಿಚುಂಚನಗಿರಿಯ ಮಠದಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮಿ ಅವರ 72ನೇ ಜಯಂತಿಯ ಅಂಗವಾಗಿ ಬುಧವಾರ ಅವರ ಹೆಸರಿನ ಬೃಂದಾವನದ ಶಂಕುಸ್ಥಾಪನೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಈ ಶಂಕುಸ್ಥಾಪನೆ ನಡೆಯಲಿದೆ. ಸಿದ್ದಗಂಗಾಮಠದ ಶ್ರೀಗಳಾದ ಡಾ.ಶಿವಕುಮಾರನಾಥ ಸ್ವಾಮೀಜಿ ಹಾಗೂ ಆದಿಚುಂಚನಗಿರಿಯ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜತೆಗೆ ತರಳಬಾಳು ಬೃಹನ್ ಮಠದ ಡಾ.ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ, ಸುತ್ತೂರು ಮಹಾಸಂಸ್ಥಾನ ಮಠದ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಮಠ, ಆಶ್ರಮದ ಹಿರಿಯ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಜತೆಗೆ ಹಲವು ಸಂಖ್ಯೆಯ ಶಾಸಕರು, ಸಂಸದರು ಹಾಗೂ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ.

Leave a Reply