ದಲಿತ ವಿದ್ಯಾರ್ಥಿಗೆ ಥಳಿಸಿ ವೇಮುಲನ ನೆನಕೆ! ಇದು ದಲಿತಪರ ಎನ್ನುವ ಎಸ್ಎಫ್ಐ ಕೇರಳ ಘಟಕದ ಗೂಂಡಾಗಿರಿ

ಡಿಜಿಟಲ್ ಕನ್ನಡ ವಿಶೇಷ:

ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಲ್ಲಿ ಜನವರಿ 10ರಂದು ಆದ ದೌರ್ಜನ್ಯದ ಘಟನೆಯೊಂದು ಈಗ ಬೆಳಕಿಗೆ ಬಂದಿದೆ. ವಿವೇಕ್ ಕುಮಾರನ್ ಎಂಬ ತತ್ವಶಾಸ್ತ್ರ ವಿದ್ಯಾರ್ಥಿ, ತನ್ನ ಹಾಸ್ಟೆಲ್ ಕೊಠಡಿಗೆ ನುಗ್ಗಿದ ಎಸ್ಎಫ್ಐ (ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ) ಸದಸ್ಯರು ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಸ್ವತಃ ದಲಿತನಾದ ತಮ್ಮ ಮೇಲೆ ಎಸ್ಎಫ್ಐ ದೌರ್ಜನ್ಯವನ್ನು ಪ್ರಶ್ನಿಸಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಕುಮಾರನ್ ಹೀಗೆಲ್ಲ ತಮ್ಮ ಅಳಲು- ಆಕ್ರೋಶ ತೋಡಿಕೊಂಡಿದ್ದಾರೆ.

vivek-kumaran
ವಿವೇಕ್ ಕುಮಾರನ್ (ಫೇಸ್ಬುಕ್ ಚಿತ್ರ)

‘ದಿನಗೂಲಿ ನೌಕರರಾದ ನನ್ನ ಅಪ್ಪ- ಅಮ್ಮನ ಕನಸುಗಳನ್ನು ನೀವು ಹಾಳುಗೆಡವುತ್ತಿದ್ದೀರಿ. ಕೇರಳದಲ್ಲಿ ದಲಿತನಾಗಿ ಬದುಕುವುದು ಎಷ್ಟು ಕಷ್ಟ ಎಂಬುದನ್ನು ಈ ಘಟನೆ ಸಾಬೀತು ಮಾಡುತ್ತಿದೆ. ನನ್ನ ಕುಟುಂಬ ಹಾಗೂ ಸಮುದಾಯಕ್ಕೋಸ್ಕರ ನಾನು ಬದುಕಬೇಕಿದೆ. ಇದೊಂದೇ ಆಲೋಚನೆಯೇ ನನ್ನನ್ನು ಆತ್ಮಹತ್ಯೆಗೆ ಎಳಸದಂತೆ ತಡೆದಿದೆ’ ಅಂತ ಬರೆದುಕೊಂಡಿದ್ದಾರೆ ಕುಮಾರನ್.

ರೋಹಿತ್ ವೇಮುಲ ಆತ್ಮಹತ್ಯೆಯನ್ನು ಸಂಸ್ಥೆಯೇ ಪ್ರೇರೇಪಿಸಿದ ಹತ್ಯೆ ಎಂದು ಪ್ರತಿಭಟಿಸುತ್ತ, ಆ ಸಾವಿನ ವರ್ಷದ ನೆನಪಿನ ಕಾರ್ಯಕ್ರಮ ಆಯೋಜಿಸುವಾಗಲೇ ಎಸ್ಎಫ್ಐ ಇಂಥದೊಂದು ಗೂಂಡಾಗಿರಿ ಮೆರೆದಿರುವುದು ಕ್ರೂರ ವ್ಯಂಗ್ಯ. ದಲಿತ ವಿದ್ಯಾರ್ಥಿಯೊಬ್ಬನ ಎದೆಯಲ್ಲಿ ಮತ್ತೆ ಆತ್ಮಹತ್ಯೆಯ ಆತಂಕ ಬಿತ್ತಿರುವ ಎಡಪಂಥೀಯ ಎಸ್ಎಫ್ಐ ಅದ್ಯಾವ ಸಿದ್ಧಾಂತ ಸಾಧಿಸಲು ಹೊರಟಿದೆ ಎಂಬ ಪ್ರಶ್ನೆ ಎದ್ದಿದೆ.

ಜನವರಿ 13ಕ್ಕೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವ ಕುಮಾರನ್  ನೀಡಿರುವ ದೂರಿನ ಆಧಾರದಲ್ಲಿ ಎಸ್ಎಫ್ಐನ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜನವರಿ 10ರ ರಾತ್ರಿ 11.30ರ ಸುಮಾರಿಗೆ ಹಾಸ್ಟೆಲ್ಲಿಗೆ ನುಗ್ಗಿದ ಎಸ್ಎಫ್ಐ ಸದಸ್ಯರು ಪ್ರಜ್ಞೆ ತಪ್ಪುವವರೆಗೆ ಮನಬಂದಂತೆ ಥಳಿಸಿದರೆಂದು ದೂರಿದ್ದಾರೆ ಕುಮಾರನ್.

ಹಲ್ಲೆಗೇನು ಕಾರಣವೆಂಬ ಬಗ್ಗೆ ಸ್ಪಷ್ಟ ಉತ್ತರಗಳಿಲ್ಲವಾದರೂ ಇಲ್ಲಿ ದಲಿತರ ಹೆಸರಿನಲ್ಲಿ ನಡೆಯುತ್ತಿರುವ ಐಡೆಂಟಿಟಿ ರಾಜಕೀಯದ ಕಸರತ್ತುಗಳು ಗೋಚರವಾಗುತ್ತವೆ. ‘ನಾನು ಯಾವುದೇ ಸಂಘಟನೆ ಜತೆ ಗುರುತಿಸಿಕೊಳ್ಳದಿದ್ದರೂ ದಲಿತ ವಿಷಯಗಳಲ್ಲಿ ನನ್ನದೇ ಹೋರಾಟ ಮಾಡುತ್ತ ಬಂದಿದ್ದೇನೆ. ನನ್ನ ಸ್ನೇಹಿತವರ್ಗದ ಪೈಕಿ ಕೆಲವರು ಕಟ್ಟರ್ ಅಂಬೇಡ್ಕರ್ ವಾದಿಗಳು. ಇದು ಎಸ್ಎಫ್ಐ ಅಸ್ತಿತ್ವಕ್ಕೆ ಸವಾಲಾಗಿ ಕಾಡಿದ್ದಿರಬಹುದು’ ಎಂಬ ಕುಮಾರನ್ ಮಾತುಗಳಲ್ಲಿ, ದಲಿತ ಹೋರಾಟಗಳೆಲ್ಲ ತನ್ನ ಅಂಕೆಯಲ್ಲೇ ಇರಬೇಕು ಎಂಬ ಎಸ್ಎಫ್ಐನ ಪುರೋಹಿತಶಾಹಿ ಮನಸ್ಥಿತಿ ಗೋಚರವಾಗುತ್ತದೆ.

ಇಡೀ ಘಟನೆ ಬಗ್ಗೆ ಕೇರಳದ ಎಸ್ಎಫ್ಐ ಪ್ರತಿಕ್ರಿಯಿಸುತ್ತಿರುವ ರೀತಿ ವಿಚಿತ್ರದ್ದಾಗಿದೆ. ‘ಕುಮಾರನ್ ಮೇಲೆ ನಮ್ಮವರು ಹಲ್ಲೆ ಮಾಡಿಯೇ ಇಲ್ಲ. ಆತ ಮಾದಕ ವ್ಯಸನಿಯಾಗಿದ್ದ. ಹಾಗಾಗಿ ತಿಳಿಹೇಳಲು ಹೋಗಿದ್ದೆವು’ ಎಂದೊಮ್ಮೆ ಪ್ರತಿಪಾದಿಸುತ್ತ, ‘ಆತನ ಪದವಿ ಮುಗಿದರೂ ಹಾಸ್ಟೆಲ್ ನಲ್ಲೇ ಇದ್ದಾನೆ’ ಎಂದು ಇನ್ನೊಮ್ಮೆ ದೂರುತ್ತಿದೆ.

ತಾನು ಯಾವ ದುಶ್ಚಟವನ್ನೂ ಹೊಂದಿಲ್ಲ. ಇಷ್ಟಕ್ಕೂ ಇವರ ಆರೋಪ ಏನೇ ಇದ್ದರೂ ಅದನ್ನು ವಿಶ್ವವಿದ್ಯಾಲಯದ ಆಡಳಿತದ ಗಮನಕ್ಕೆ ತರಬೇಕಲ್ಲದೇ ತಮ್ಮ ಮೇಲೆ ದಾಳಿ ಎಸಗುವ ಅಧಿಕಾರ ಎಸ್ಎಫ್ಐಗೇನಿದೆ ಎಂಬುದು ಕುಮಾರನ್ ಪ್ರಶ್ನೆ.

ಈ ಪ್ರಕರಣ ಎಸ್ಎಫ್ಐನ ದಲಿತ ಕಾಳಜಿಯೆಂಬುದು ಬೂಟಾಟಿಕೆಯೇ ಎಂಬ ಪ್ರಶ್ನೆಯನ್ನಂತೂ ಹುಟ್ಟುಹಾಕಿದೆ.

Leave a Reply