ಕಪ್ಪುಕುಳಿ ಮನುಷ್ಯನೆಂದೇ ಖ್ಯಾತರಾಗಿದ್ದ ಕನ್ನಡಿಗ ವಿಜ್ಞಾನಿ ವಿಶ್ವೇಶ್ವರರು ಗತಿಸಿರುವ ಹೊತ್ತಿನಲ್ಲಿ ನಾವು ಸಲ್ಲಿಸಲೇಬೇಕಾದ ಗೌರವವಿದು!

ಡಿಜಿಟಲ್ ಕನ್ನಡ ಟೀಮ್:

ಇದು ಜನವರಿ 16ರಂದೇ ಘಟಿಸಿದ ವಿಷಾದ. ‘ಬ್ಲಾಕ್ ಹೋಲ್ ಮ್ಯಾನ್ ಆಫ್ ಇಂಡಿಯಾ’ ಎಂದೇ  ವಿಶ್ವಮಟ್ಟದಲ್ಲಿ ಪ್ರಸಿದ್ಧರಾಗಿದ್ದ ವಿಜ್ಞಾನಿ, ಕನ್ನಡಿಗ ಸಿ. ವಿ. ವಿಶ್ವೇಶ್ವರರು ಇಹಲೋಕಯಾತ್ರೆ ಮುಗಿಸಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಮೃತರಾದ ಅವರಿಗೆ 78 ವರ್ಷ ವಯಸ್ಸಾಗಿತ್ತು. ಕಪ್ಪುಕುಳಿಗಳಿಗೆ ಆ ಹೆಸರು ಬರುವುದಕ್ಕೂ ಮುಂಚೆಯೇ ಆ ಬಗ್ಗೆ ಅಧ್ಯಯನ ನಡೆಸಿದವರು ಇವರು.

ವರ್ಷಗಳ ಹಿಂದೆ ‘ಡಿಜಿಟಲ್ ಕನ್ನಡ’ ಇವರ ವಿಡಿಯೋ ಸಂದರ್ಶನ ಮಾಡಿತ್ತು. ಬಹುಶಃ ಕನ್ನಡದಲ್ಲಿ ವಿಶ್ವೇಶ್ವರರನ್ನು, ಅವರ ಆಲೋಚನೆಗಳನ್ನು ವಿಸ್ತಾರವಾಗಿ ದಾಖಲಿಸಿದ ಅಪರೂಪದ ವಿಡಿಯೋ ಇದು ಎಂಬುದು ನಮ್ಮ ಅನಿಸಿಕೆ. ವರ್ಷಗಳ ಹಿಂದೆ ಗುರುತ್ವ ಅಲೆಗಳ ಇರುವಿಕೆ ದೃಢಗೊಂಡ ಹಿನ್ನೆಲೆಯಲ್ಲಿ  ಖ್ಯಾತ ವಿಜ್ಞಾನ ಬರಹಗಾರರಾದ ಟಿ. ಆರ್. ಅನಂತರಾಮು ಅವರು ವಿಶ್ವೇಶ್ವರರನ್ನು ಮಾತನಾಡಿಸಿದ್ದರು. ಇದು ಬಹುಮುಖ್ಯ ಸಂದರ್ಶನ ಏಕೆಂದರೆ, 35 ವರ್ಷಗಳ ಹಿಂದೆಯೇ ಗುರುತ್ವ ಅಲೆಗಳಿಗೆ ಸಂಬಂಧಿಸಿದಂತೆ ‘ಕ್ವಾಸಿ ನಾರ್ಮಲ್ ಮೋಡ್’ ಸಿದ್ಧಾಂತವನ್ನು ಗಣಿತದ ಚೌಕಟ್ಟಿನಲ್ಲಿ ಪ್ರತಿಪಾದಿಸಿದ್ದ ವಿಜ್ಞಾನಿ ಇವರಾಗಿದ್ದರು. ಆಗ ಅವರು ಥಿಯರಿ ಕಟ್ಟಿಕೊಡುವಾಗ ಯಾವ ಲೆಕ್ಕಾಚಾರದ ಗ್ರಾಫ್ ಗಳನ್ನು ಹಾಕಿ ಕ್ವಾಸಿ ನಾರ್ಮಲ್ ಮೋಡ್ ಚಿತ್ರಣ ಕೊಟ್ಟಿದ್ದರೋ, ಫಲಿತಾಂಶದ ಗ್ರಾಫ್ ಸಹ ಅದಕ್ಕೆ ಸರಿಹೊಂದುವಂತಿತ್ತು. ಅರ್ಥಾತ್ ಥಿಯರೆಟಿಕ್ ಆಗಿದ್ದದ್ದೇ ಪ್ರಯೋಗಾತ್ಮಕವಾಗಿ ಸಹ ನಿಜವಾಯಿತು ಹಾಗೂ ಇಂಥದೊಂದು ಕ್ಷಣಕ್ಕೆ ಸಿ. ವಿ. ವಿಶ್ವೇಶ್ವರರು ಸಾಕ್ಷಿಯಾಗಿದ್ದರು ಎಂಬುದೇ ನಾವೆಲ್ಲ ಬೆರಗುಗೊಳ್ಳಬೇಕಾದ ವಿದ್ಯಮಾನ.

ಸಂದರ್ಶನದ ಸಂದರ್ಭದಲ್ಲಂತೂ ನಮಗೆಲ್ಲ ಅವರ ವಿದ್ವತ್ತು, ವಿನಮ್ರತೆ ಹಾಗೂ ಅದಮ್ಯ ಜೀವನೋತ್ಸಾಹ ಅಚ್ಚರಿಗೆ ದೂಡಿತ್ತು. ವಿಜ್ಞಾನ ಅಂತಲ್ಲ, ಕಲೆ-ಸಾಹಿತ್ಯ, ವಿಶ್ವ ಪ್ರವಾಸದ ಅನುಭವಗಳು, ಫಿಲಾಸಫಿ… ಒಂದೇ ಎರಡೇ ಆ ಮಾಗಿದ ಜೀವದ ಮಾತುಗಳಲ್ಲಿ!

ಡಿಜಿಟಲ್ ಕನ್ನಡದ ವಿಡಿಯೋ ವೀಕ್ಷಿಸಿದ್ದೇ ಆದಲ್ಲಿ ಈ ಎಲ್ಲ ರೋಮಾಂಚನಗಳು ನಿಮ್ಮೆದೆಯನ್ನೂ ಸವರುತ್ತವೆ. ವಿಡಿಯೋ ಸುದೀರ್ಘವೆನಿಸಿದರೂ ಇಡಿ ಇಡಿಯಾಗಿ ಉಳಿಸಿಕೊಂಡಿರುವುದಕ್ಕೆ ಕಾರಣವೂ ಸ್ಪಷ್ಟ. ಕನ್ನಡಿಗರು ಹೆಮ್ಮೆ ಪಡಬೇಕಾದ, ವಿಶ್ವಕ್ಕೇ ಸ್ಫೂರ್ತಿಯಾಗಿರುವ ಇಂಥದೊಂದು ಜೀವದ ಬಗ್ಗೆ ತಿಳಿದುಕೊಳ್ಳುವ ಅವಕಾಶಗಳಿರದಿದ್ದರೆ ಅದಕ್ಕಿಂತ ನೋವಿನ ಸಂಗತಿ ಇನ್ನೊಂದಿಲ್ಲ. ಈ ವಿಡಿಯೋವೇ ಆ ಮಹಾಚೇತನಕ್ಕೊಂದು ನುಡಿನಮನ.

 

Leave a Reply