ವಿಜ್ಞಾನವನ್ನು ಹೀಗೆಲ್ಲ ರಸಭರಿತವಾಗಿ ಹೇಳಲು ಸಾಧ್ಯವೇ ಎಂಬಂತೆ ಅಂದು ಚೆಂದದ ಮಾತಿಗಿಳಿದಿದ್ದರು ವಿಶ್ವೇಶ್ವರರು…

ಚೈತನ್ಯ ಹೆಗಡೆ

ಎರಡು ದಿನಗಳ ಹಿಂದೆ ತೀರಿಕೊಂಡ ವಿಜ್ಞಾನಿ ಸಿ. ವಿ. ವಿಶ್ವೇಶ್ವರರನ್ನು ವರ್ಷಗಳ ಹಿಂದಿನ ಸಾಯಂಕಾಲವೊಂದರಲ್ಲಿ ಮಾತಿಗೆಳೆಯುವ ಸೌಭಾಗ್ಯ ಡಿಜಿಟಲ್ ಕನ್ನಡಕ್ಕೆ ಸಿಕ್ಕಿತ್ತು. ಆಗ ಟಿ.ಆರ್. ಅನಂತರಾಮು ಅವರೊಂದಿಗಿನ ಸಂದರ್ಶನದಲ್ಲಿ ವಿಶ್ವೇಶ್ವರರಿಂದ ಹರಿದಿದ್ದ ಮಾತಿನ ಜಲಕುಗಳು…

  • ಕಾಲದಲ್ಲಿ ಹಿಂದಕ್ಕೆ ಹೋಗ್ಬಹುದು ಅನ್ನೋದು ಕಲ್ಪನೆ ಅಷ್ಟೆ. ಅಲ್ಲೊಂದು ಗ್ರಾಂಡ್ ಪಾ ಪ್ಯಾರಡಾಕ್ಸ್ ಎದುರಾಗುತ್ತೆ. ವ್ಯಕ್ತಿಯೊಬ್ಬ ಕಾಲದಲ್ಲಿ ಹಿಂದಕ್ಕೆ ಚಲಿಸಿ ತನ್ನ ಅಜ್ಜನ್ನ ಕೊಲೆ ಮಾಡಿಬಿಟ್ಟ ಅಂದ್ಕೋಳಿ. ಹಾಗಾದರೆ ತಾತನಿಗೆ ಮಕ್ಕಳು ಹುಟ್ಟೋದು ಹ್ಯಾಗೆ, ಇಂವ ಬಂದಿದ್ದು ಹೇಗೆ ಅಂತೆಲ್ಲ ಪ್ರಶ್ನೆ ಎದುರಾಗುತ್ತೆ. ಹೀಗಾಗಿ ವರ್ಮ್ ಹೋಲ್ ಇರೋದಿಕ್ಕೆ ಸಾಧ್ಯ ಇಲ್ಲ ಅಂತ ಹಲವರ ಪ್ರತಿಪಾದನೆ.
  • ಕ್ವಾಸಿ ನಾರ್ಮಲ್ ಮೋಡ್ ಕಂಡು ಹಿಡಿದವ ನಾನೆನ್ನುತ್ತಾರೆ. ಕ್ವಾಸಿ ನಾರ್ಮಲ್ ಅಂದ್ರೆ ತರಂಗಗಳು ಒಂದೇ ಪಾರದಲ್ಲಿರದೇ ಏರಿಳಿತದಲ್ಲಿರೋದು. ಹಾಗೆಂದೇ ಅದಕ್ಕೀಗ ರಿಂಗ್ ಡೌನ್ ಎಂದು ಕರೀತಿದ್ದಾರೆ. ಅಂದರೆ ಗಂಟೆ ಹೊಡೆದಾಗ ತರಂಗಗಳು ಒಂದೇ ಪಾರದಲ್ಲಿ ಬಂದರೂ ಕಿವಿಗೆ ಜೋರಾಗಿ ಬಡಿದು ನಂತರ ಕ್ಷೀಣವಾಗುತ್ತದೆ. ಹೀಗಾಗಿ ನಾನು ಮುಂದೆ ನನ್ನ ಕಾವ್ಯನಾಮವನ್ನು ಲೂಯಿಸ್ ಕ್ವಾಸಿಮಾಡೊ ಅಂತಿಟ್ಕೋತೀನಿ. ಕ್ವಾಸಿಮಾಡೊ ಏಕೆಂದರೆ ಕ್ವಾಸಿ ನಾರ್ಮಲ್ ಮೋಡ್ ಕಂಡು ಹಿಡಿದಿದ್ದಕ್ಕೆ. ಲೂಯಿಸ್ ನಲ್ಲಿ ಎಲ್ಒಯು ಅಂತಂದ್ರೆ ಲಾರ್ಡ್ ಆಪ್ ಯುನಿವರ್ಸ್. ಅರ್ಥಾತ್ ವಿಶ್ವೇಶ್ವರ. ನಂತರ ಉಳಿಯೋದು ಈಸ್. ಹೀಗಾಗಿ ವಿಶ್ವೇಶ್ವರನ ಹೆಸರು ಕ್ವಾಸಿಮಾಡೊ.
  • ‘ಹೌದ್ಹೌದು…ಬಬಲ್ ಬಾತ್ ತುಂಬ ಚೆನ್ನಾಗಿರುತ್ತೆ. ಹೀಗಾಗಿ ಅದೇ ರೂಪಕದಲ್ಲಿ ವಿವರಿಸಿದ್ದೀನಿ. ಮೂರನೇ ಪುಸ್ತಕ ‘ಲೈಫ್ ಇನ್ ದಿ ಯುನಿವರ್ಸ್- ಎಕ್ಸ್ಟ್ರಾ ಟೆರಿರಿಸ್ಟ್ರಿಯಲ್ ಇನ್ ಮೈ ಬಬಲ್ ಬಾತ್” ಅಂತೇನೋ ಬರೆಯುವಾಸೆ… ವಿಜ್ಞಾನದ ಸತ್ಯಗಳೇ ಇರ್ತವೆ. ಆದರೆ ಅದನ್ನು ಕತೆಯಲ್ಲಿ ಕಟ್ಟಿಕೊಡೋದು. ಕಥಾನಾಯಕನಿಗೆ ಐನ್ ಸ್ಟೀನ್ ರಿಂದಲೇ ಒಂದು ಬಬಲ್ ಬಾತ್ ಸಿಕ್ಕಿರುತ್ತೆ. ಅದರಲ್ಲಿ ಕುಳಿತಾಗ ಅವರೊಂದಿಗೆ ಬೆಳಗ್ಗೆ ಚರ್ಚಿಸಿದ್ದ ಥಿಯರಿಯೇ ಜೀವ ಪಡೆದುಕೊಳ್ಳುತ್ತೆ…
  • ಬೆಂಗಳೂರಿನ ತಾರಾಮಂದಿರ ರೂಪಿಸುವ ಹೊಣೆ ಬಂದಾಗ ನಾನು ಒಂದಂಶ ಹೇಳಿದ್ದೆ. ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ ಉರು ಹೊಡೆಸುವ ಕೆಲಸ ಇದ್ದೇ ಇರುತ್ತದೆ. ಆದರೆ ಈ ಸಂಸ್ಥೆ ಅವಕ್ಕಿಂತ ಭಿನ್ನವಾಗಿರಬೇಕು ಅಂತ. ಇಷ್ಟು ಚೆನ್ನಾಗಿ ಬೆಳೆದಿರೋದು ಖುಷಿ ಸಂಗತಿ.

Leave a Reply