ನಾನು ಕುರಿಯಲ್ಲ… ಕುರುಬ ಎಂದ ಈಶ್ವರಪ್ಪ, ಜಲ್ಲಿಕಟ್ಟು ಸುಪ್ರೀಂ ತೀರ್ಮಾನದ ವಿರುದ್ಧ ತಮಿಳಿಗರ ಆಕ್ರೋಶ, ನೋಟು ಅಮಾನ್ಯ: ಸಂಸದೀಯ ಸಮಿತಿ ಮುಂದೆ ಉರ್ಜಿತ್ ಪಟೇಲ್ ಹೇಳಿದ್ದೇನು? ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಬೆಟ್ಟೇಗೌಡ ಆಯ್ಕೆ

ಕಿಡ್ಸ್ ಫಾರ್ ಟೈಗರ್ಸ್ ಸಂಸ್ಥೆ ವತಿಯಿಂದ ಕಬ್ಬನ್ ಪಾರ್ಕಿನ ಬಾಲಭವನದಲ್ಲಿ ಆಯೋಜಿಸಲಾಗಿದ್ದ  ಅಂತರ ಶಾಲಾ ಮಟ್ಟದ ಹುಲಿ ವೇಷ ಫೇಸ್ ಪೇಂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು…

ಡಿಜಿಟಲ್ ಕನ್ನಡ ಟೀಮ್:

ಬಿಎಸ್ ವೈ ವಿರುದ್ಧ ಈಶ್ವರಪ್ಪ ಕಿಡಿ

‘ನಾನು ಕುರುಬ… ಕುರಿಯಲ್ಲ… ಬಟ್ಟಂಗಿಗಳ ಮಾತಿಗೆ ಕಿವಿಕೊಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ನಾಯಕರನ್ನು ಕಡೆಗಾಣಿಸುತ್ತಿದ್ದಾರೆ…’ ಇದು ಮಾಜಿ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಆಕ್ರೋಶ.

ಬುಧವಾರ ಪಕ್ಷದಲ್ಲಿನ ಆಂತರಿಕ ಪರಿಸ್ಥಿತಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಈಶ್ವರಪ್ಪ ಹೇಳಿದಿಷ್ಟು…

‘ಯಡಿಯೂರಪ್ಪ ಇನ್ನೂ ಸರಿದಾರಿಗೆ ಬಂದಿಲ್ಲ. ತಮ್ಮ ಸುತ್ತಲಿನ ನಾಲ್ಕು ಜನರ ಮಾತೇ ಅಂತಿಮವಾಗಿದೆ. ಆ ಪ್ರವೃತ್ತಿ ಬಿಡದಿದ್ದರೆ, ಪಕ್ಷವನ್ನು ದೇವರೇ ಕಾಪಾಡಬೇಕು. ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದರು. ಅಲ್ಲಿ ಏನು ನಡೆಯಲಿಲ್ಲ. ಕಡೆಗೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಪಕ್ಷಕ್ಕೆ ಹಿಂತಿರುಗಿದರು. ಪಕ್ಷಕ್ಕೆ ಮರಳಿದಾಗ ಅವರಿಗೆ ಅಧ್ಯಕ್ಷ ಸ್ಥಾನಮಾನ ನೀಡಿ, ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದರೂ ಅವರಿಗೆ ಎಲ್ಲೊ ಭಯ ಕಾಡುತ್ತಿದೆ. ಅವರ ಬಟ್ಟಂಗಿಗಳು ತಮ್ಮ ಸ್ವಾರ್ಥಕ್ಕೆ ರಾಜ್ಯಾಧ್ಯಕ್ಷರನ್ನು ತಮಗಿಷ್ಟ ಬಂದಂತೆ ಆಡಿಸುತ್ತಿದ್ದಾರೆ. ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾದ ನಂತರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಪಕ್ಷದ ನಾಯಕರು. ಕಾರ್ಯಕರ್ತರ ಜತೆ ಮಾತುಕತೆ ನಡೆಸುತ್ತಿಲ್ಲ. ರಾಜ್ಯದ ಜನ ಯಡಿಯೂರಪ್ಪ, ಈಶ್ವರಪ್ಪನವರನ್ನು ನೋಡಿ ಮತ ಹಾಕುವುದಿಲ್ಲ. ಪಕ್ಷವನ್ನು ನೋಡಿ ಮತ ಹಾಕುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ನಿರ್ಣಾಮವಾಗಿಬಿಡುತ್ತದೆ. ನಾನು ಎಂದಿಗೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಲ್ಲ. ಪಕ್ಷದ ಏಳ್ಗೆಗೆ ಸಕ್ರಿಯ ಕಾರ್ಯಕರ್ತನಾಗಿ ಶ್ರಮಿಸಿದ್ದೇನೆ. ನಾನು ಕುರುಬ, ಆದರೆ ಕುರಿಯಲ್ಲ. ಪಕ್ಷ ತಲೆ ತಗ್ಗಿಸುವ ಕೆಲಸ ಮಾಡುವುದಿಲ್ಲ.’

ಸಂಸದೀಯ ಸಮಿತಿಗೆ ಉತ್ತರ ಕೊಟ್ಟ ಉರ್ಜಿತ್

ನೋಟು ಅಮಾನ್ಯ ನಿರ್ಧಾರ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕಿನ ಉರ್ಜಿತ್ ಪಟೇಲ್ ಬುಧವಾರ ಸಂಸದೀಯ ಸಮಿತಿಗೆ ಪೂರ್ಣ ವಿವರಣೆ ನೀಡಿದ್ದಾರೆ. ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಹಳೇಯ ₹ 500 ಮತ್ತು 100 ಮುಖಬೆಲೆಯ ನೋಟು ನಿಷೇಧಗೊಳಿಸಿದ ನಂತರ ಒಟ್ಟು ₹ 15.44 ಲಕ್ಷ ಕೋಟಿ ಮೌಲ್ಯದ ಮೊತ್ತ ಅಮಾನ್ಯಗೊಂಡಿತ್ತು. ನಂತರ ಈ ವರೆಗೂ ಆರ್ಬಿಐ ಸುಮಾರು ₹ 9.2 ಲಕ್ಷ ಕೋಟಿಯಷ್ಟು ಹಣವನ್ನು ಹೊಸ ₹ 2000 ಮತ್ತು 500 ನೋಟುಗಳ ಮೂಲಕ ಚಲಾವಣೆಗೆ ತರಲಾಗಿದೆ. ಇನ್ನು ನೋಟು ಅಮಾನ್ಯ ನಿರ್ಧಾರ ಹಾಗೂ ನಗದು ಅಭಾವ ಪರಿಸ್ಥಿತಿಯಿಂದ ಆರ್ಥಿಕತೆ ಮೇಲಿನ ಪರಿಣಾಮದ ಬಗ್ಗೆಯೂ ಸಮಿತಿಗೆ ವಿವರಿಸಿದರು. ಈ ವೇಳೆ ಹಳೇ ನೋಟಿನ ರೂಪದಲ್ಲಿ ಎಷ್ಟು ಮೊತ್ತ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿವೆ ಎಂಬ ಮಾಹಿತಿ ನೀಡಲು ಪಟೇಲ್ ನಿರಾಕರಿಸಿದರು.

ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಬೆಟ್ಟೇಗೌಡ

ರಾಜ್ಯ ಒಕ್ಕಲಿಗರ ಸಂಘದಲ್ಲಿ ಬುಧವಾರ ನಡೆದ ನೂತನ ಪದಾಧಿಕಾರಿಗಳ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಡಿ.ಎನ್.ಬೆಟ್ಟೇಗೌಡ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡಿದ್ದ ಅಪ್ಪಾಜಿಗೌಡ ಕಣದಿಂದ ಹಿಂದೆ ಸರಿದಿದ್ದರು. ಇನ್ನು ಬಂಡಾಯ ಬಣದಲ್ಲಿ ಗುರುತಿಸಿಕೊಂಡಿದ್ದ ಮಹದೇವ್ ತಮ್ಮ ಬಣ ಬದಲಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರಾದರೂ ಜಯ ಸಾಧಿಸುವಲ್ಲಿ ವಿಫಲರಾದರು. ಈ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಆ.ದೇವೇಗೌಡ, ಡಾ.ಬಿ.ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಟಿ.ಎನ್ ರಾಮಚಂದ್ರ ಹಾಗೂ ಖಜಾಂಚಿಯಾಗಿ ಎನ್.ರಮೇಶ್ ಆಯ್ಕೆಯಾಗಿದ್ದಾರೆ.

ಜಲ್ಲಿಕಟ್ಟಿಗಾಗಿ ಒಗ್ಗಟ್ಟು ಪ್ರದರ್ಶಿಸಿದ ತ.ನಾ

ಜಲ್ಲಿಕಟ್ಟು ಆಚರಣೆಯ ಮೇಲಿನ ನಿಷೇಧವನ್ನು ತೆರವುಗೊಳಿಸಿ ಸಾಂಪ್ರದಾಯಿಕ ಆಚರಣೆಗೆ ಅವಕಾಶ ಮಾಡಿಕೊಡಬೇಕೆಂಬ ತಮಿಳುನಾಡಿನ ಜನರ ಬೇಡಿಕೆ ದಿನೇ ದಿನೇ ತೀವ್ರತೆ ಪಡೆಯುತ್ತಿದೆ. ಕಳೆದ 10 ದಿನಗಳಿಂದ ಈ ಬಗ್ಗೆ ಕೂಗು ಎದ್ದಿದ್ದು, ಬುಧವಾರ ಚೆನ್ನೈನ ಮರಿನಾ ಬೀಚ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಇವರಿಗೆ ಚಿತ್ರ ನಟರು ಬೆಂಬಲ ಸೂಚಿಸಿದ್ದು, ಐಟಿ ಉದ್ಯೋಗಿಗಳು ಸಹ ತಮ್ಮ ಕೆಲಸವನ್ನು ಬಿಟ್ಟು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಆ ಮೂಲಕ ಜಲ್ಲಿಕಟ್ಟು ಆಚರಣೆಗೆ ಇಡೀ ತಮಿಳುನಾಡು ಒಗ್ಗಟ್ಟು ಪ್ರದರ್ಶಿಸುತ್ತಿದೆ.

ಸಲ್ಮಾನ್ ನಿರಪರಾಧಿ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ನಿರಪರಾಧಿ ಎಂದು ನ್ಯಾಯಾಲಯ ಬುಧವಾರ ತೀರ್ಮಾನಿಸಿದೆ. 1998ರಿಂದ ಈ ಪ್ರಕರಣದ ವಿಚಾರಣೆ ನಡೆಸಿದ ಜೋಧ್ ಪುರದ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದ್ದು, ಸಲ್ಮಾನ್ ಖಾನ್ ಆರೋಪ ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಕೋರ್ಟ್ ತಿಳಿಸಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ ನೋಡಿ.

Leave a Reply