ನಗದು ರಹಿತ ವ್ಯವಹಾರ ಅಳವಡಿಸಿಕೊಂಡ ದೇಶದ ಮೊಟ್ಟ ಮೊದಲ ದ್ವೀಪ ಯಾವುದು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ ನೋಟು ಅಮಾನ್ಯ ನಿರ್ಧಾರ ಜಾರಿಯಾದ ನಂತರ ಪ್ರಬಲವಾಗಿ ಕೇಳಿಬರುತ್ತಿರುವ ವಿಷಯ ನಗದು ರಹಿತ ಆರ್ಥಿಕತೆ. ಈ ವಿಷಯ ಚರ್ಚೆಯ ಜತೆಗೆ ಜತೆಗೆ ‘ನಗದು ರಹಿತ ಆರ್ಥಿಕತೆ ಸಾಧ್ಯವೇ? ಅದೂ ಭಾರತದಂತಹ ದೇಶದಲ್ಲಿ…’ ಎಂಬ ತಿರಸ್ಕಾರದ ವಾದಗಳು ಸಾಕಷ್ಟು ಕೇಳಿ ಬಂದಿವೆ. ಆದರೆ ಭಾರತದ ಈಶಾನ್ಯ ಭಾಗದಲ್ಲಿರುವ ಕಾರಂಗ್ ಎಂಬ ಪುಟ್ಟ ದ್ವೀಪ ಸದ್ಯದಲ್ಲೇ ದೇಶದ ಮೊಟ್ಟ ಮೊದಲ ನಗದು ರಹಿತ ದ್ವೀಪವಾಗಲಿದ್ದು, ಆ ಮೂಲಕ ಭಾರತದಲ್ಲಿ ನಗದು ರಹಿತ ಆರ್ಥಿಕತೆ ನಿರ್ಮಾಣ ಸಾಧ್ಯವಿಲ್ಲ ವಾದವನ್ನು ಸುಳ್ಳಾಗಿಸಲಿದೆ.

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮಣಿಪುರದಲ್ಲಿರುವ ಕಾರಂಗ್ ದ್ವೀಪದಲ್ಲಿ ಡಿಜಿಟಲ್ ಇಂಡಿಯಾ ಯೋಜನೆ ಮೂಲಕ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಿದ್ದು, ಅಲ್ಲಿನ ಜನರು ಸಹ ನಗದು ರಹಿತ ವ್ಯವಹಾರಕ್ಕೆ ಸಂಪೂರ್ಣವಾಗಿ ಬದ್ಧರಾಗುವುದಾಗಿ ತಿಳಿಸಿದ್ದಾರೆ. ಹೀಗಾಗಿ ಸಚಿವಾಲಯ ಈ ದ್ವೀಪವನ್ನು ದೇಶದ ಮೊದಲ ನಗದು ರಹಿತ ಆರ್ಥಿಕತೆ ಅಳವಡಿಸಿಕೊಂಡ ದ್ವೀಪ ಎಂದು ಘೋಷಿಸಿದೆ.

ಈ ದ್ವೀಪದಲ್ಲಿ ವಾಸಿಸುವ ಎಲ್ಲ ಕುಟುಂಬಗಳು ತಮ್ಮ ವ್ಯವಹಾರಗಳನ್ನು ಡಿಜಿಟಲ್ ಮೂಲಕವೇ ಮಾಡಲು ನಿರ್ಧರಿಸಿವೆ. ಹೀಗಾಗಿ ಈ ಕುಟುಂಬಗಳಿಂದ 400 ಮಂದಿ ಡಿಜಿಟಲ್ ವ್ಯವಸ್ಥೆಗೆ ಕಾಲಿಟ್ಟಿದ್ದು, ಆ ಪೈಕಿ 16 ವ್ಯಾಪಾರಿಗಳು, 6 ಬೋಟು ಸೇವೆ ಒದಗಿಸುವವರು ಸೇರಿದ್ದಾರೆ. ಈ ದ್ವೀಪದ ಜನರಿಗೆ ಮುಂದಿನ ಒಂದು ತಿಂಗಳಲ್ಲಿ ಕಾರ್ಡ್ ಸ್ವೈಪಿಂಗ್ ಯಂತ್ರ ಸೇರಿದಂತೆ ಇತರೆ ಡಿಜಿಟಲ್ ವ್ಯವಹಾರಕ್ಕೆ ಬೇಕಿರುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅದರೊಂದಿಗೆ ಕೆಲವೇ ದಿನಗಳಲ್ಲಿ ಕಾರಂಗ್ ದ್ವೀಪ ಶೇ.100 ರಷ್ಟು ನಗದು ರಹಿತ ವ್ಯವಹಾರದಲ್ಲಿ ಸಾಗಲಿದೆ.

ಜನವರಿ 9ರಿಂದ 12ರವರೆಗೂ ಕಾರಂಗ್ ಬೋಟ್ ಸಂಸ್ಥೆ ಮತ್ತು ಪಂತೊಯ್ಬಿ ಖೊಯೊಲ್ ಸ್ಟಾಂಡರ್ಡ್ ಸಂಸ್ಥೆ ನಗದು ರಹಿತ ವ್ಯವಹಾರದ ಬಗ್ಗೆ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಆ ಬಳಿಕ ಇಲ್ಲಿನ ಜನರು, ಸರ್ಕಾರದ ಉದ್ದೇಶಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ ಡಿಜಿಟಲ್ ವ್ಯವಹಾರ ಅಳವಡಿಸಿಕೊಳ್ಳುವುದಾಗಿ ಮಾತು ಕೊಟ್ಟಿದ್ದಾರೆ.

ಜನರ ಆಸಕ್ತಿ, ಭಾಗವಹಿಸುವಿಕೆ, ಸೂಕ್ತ ಸೌಲಭ್ಯ ಹಾಗೂ ತರಬೇತಿ ನೀಡಿದರೆ ನಗದು ರಹಿತ ವ್ಯವಹಾರ ಅಳವಡಿಸಿಕೊಳ್ಳುವುದು ದೊಡ್ಡ ಸವಾಲಿನ ವಿಷಯವಲ್ಲ ಎಂಬುದು ಈ ಮೂಲಕ ರುಜುವಾತಾಗಿದೆ. ಎಲ್ಲ ಕೆಲಸವನ್ನು ಸರ್ಕಾರವೇ ಮಾಡಲಿ ಎಂದು ಮೂಗು ಮುರಿಯುವುದಕ್ಕಿಂತ ಸರ್ಕಾರದ ಪ್ರಯತ್ನಕ್ಕೆ ಕೈಜೋಡಿಸಿದರೆ, ಬದಲಾವಣೆ ಸಾಧ್ಯ ಎಂಬುದನ್ನು ಕಾರಂಗ್ ದ್ವೀಪದ ಮಂದಿ ಸಾಬೀತುಪಡಿಸಿದ್ದಾರೆ. ಜತೆಗೆ ಡಿಜಿಟಲ್ ವ್ಯವಹಾರ ವ್ಯವಸ್ಥೆಗೆ ಒಗ್ಗಿಕೊಳ್ಳುವ ವಿಷಯದಲ್ಲಿ ದೇಶದ ಇತರ ಪ್ರದೇಶಗಳ ಜನರಿಗೂ ಮಾದರಿಯಾಗಿದ್ದಾರೆ.

Leave a Reply