1998ರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಸಲ್ಮಾನ್ ಖಾನ್ ನಿರ್ದೋಷಿ

ಡಿಜಿಟಲ್ ಕನ್ನಡ ಟೀಮ್:

ಬಾಲಿವುಡ್ ನಟ ಸಲ್ಮಾನ್ ಖಾನ್ ಬುಧವಾರ ಮತ್ತೊಂದು ಕಾನೂನಿನ ಸಮರದಲ್ಲಿ ಜಯಿಸಿದ್ದಾರೆ. ಬುಧವಾರ 1998ರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದ ವಿಚಾರಣೆಗಾಗಿ ಜೋಧ್ ಪುರ ಕೋರ್ಟಿಗೆ ಆಗಮಿಸಿದ್ದ ಸಲ್ಮಾನ್ ಖಾನ್, ದೋಷ ಮುಕ್ತರಾಗಿ ಹೊರ ಬಂದಿದ್ದಾರೆ.

ಇದೇ ತಿಂಗಳು 9ರಂದು ಪ್ರಕರಣದ ಸಂಪೂರ್ಣ ವಿಚಾರಣೆ ಮುಕ್ತಾಯವಾಗಿತ್ತಾದರೂ ನ್ಯಾಯಾಲಯ ಅಂತಿಮ ತೀರ್ಪನ್ನು ಜ.18ಕ್ಕೆ ಮುಂದೂಡಿತ್ತು. ಇಂದು ಅಂತಿಮ ತೀರ್ಪು ಪ್ರಕಟಿಸಿದ ಕೋರ್ಟ್, ‘ಪ್ರಕರಣದಲ್ಲಿ ಸಲ್ಮಾನ್ ಖಾನ್ ಅಪರಾಧಿ ಎಂದು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದೆ’ ಎಂದು ತಿಳಿಸಿ, ಖಾನ್ ರನ್ನು ನಿರಪರಾಧಿ ಎಂದು ಘೋಷಿಸಿದೆ. ಒಂದು ವೇಳೆ ಸಲ್ಮಾನ್ ಖಾನ್ ತಪ್ಪಿತಸ್ಥರಾಗಿದ್ದರೆ, 7 ವರ್ಷಗಳ ವರೆಗೂ ಜೈಲು ಶಿಕ್ಷೆ ಎದುರಿಸುವ ಸಾಧ್ಯತೆ ಇತ್ತು.

1998ರ ಅಕ್ಟೋಬರ್ 1 ಮತ್ತು 2ರಂದು ಸಲ್ಮಾನ್ ಖಾನ್ ಜೋಧ್ ಪುರದ ಕಂಕಣಿ ಎಂಬ ಪ್ರದೇಶದಲ್ಲಿ 2 ಜಿಂಕೆಗಳನ್ನು ಬೇಟೆಯಾಡಿದ್ದರು. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಪರವಾನಿಗೆ ಇಲ್ಲದಿದ್ದರೂ ಅಕ್ರಮವಾಗಿ .22 ಹಾಗೂ .32 ರಿವಾಲ್ವರ್ ಹೊಂದಿದ್ದರು ಎಂಬ ಆರೋಪ ಹೊರಿಸಿ ಸೆಕ್ಷನ್ 3/25 ಮತ್ತು 3/27 (ಶಸ್ತ್ರಸ್ತ್ರ ಕಾಯ್ದೆ ಹಾಗೂ ವನ್ಯಜೀವಿ ಸಂರಕ್ಷಣೆ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸುದೀರ್ಘ ವಿಚಾರಣೆ ನಂತರ ನ್ಯಾಯಾಲಯ ಸಲ್ಮಾನ್ ಖಾನ್ ರನ್ನು ನಿರಪರಾಧಿ ಎಂದು ಘೋಷಿಸಿದೆ.

ಕಳೆದ ವರ್ಷ ಮಾರ್ಚ್ 10ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಸಲ್ಮಾನ್ ಖಾನ್, ‘ತಾನು ನಿರಪರಾಧಿ, ವಿನಾಕಾರಣ ಅರಣ್ಯ ಇಲಾಖೆ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡುತ್ತಿದೆ’ ಎಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರು.

Leave a Reply