ಫೇಸ್ ಇಲ್ಲದ ಸಮುದಾಯದ ನೆಮ್ಮದಿ ಕದಡಿದನೇ ಫೇಸ್ಬುಕ್ ಶ್ರೀಮಂತ ಜುಕರ್ಬರ್ಗ್?

ಡಿಜಿಟಲ್ ಕನ್ನಡ ಟೀಮ್:

ಫೇಸ್ ಬುಕ್ ನ ಸಿಇಒ ಮಾರ್ಕ್ ಜುಕರ್ ಬರ್ಗ್ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅದು ಹವಾಯಿ ದ್ವೀಪದಲ್ಲಿರುವ ಬುಡಕಟ್ಟು ಮೂಲದ ಸ್ಥಳೀಯ ಜನರ ವಿರುದ್ಧ! ಹೀಗಂತ ಹೊನಲಲು ನಗರದ ಪತ್ರಿಕೆ ಮಾಡಿರುವ ವರದಿಯನ್ನುಲ್ಲೇಖಿಸಿ ಡೈಲಿಮೇಲ್ ಬರೆದಿದೆ.

ಅರೆ, ಜುಕರ್ ಬರ್ಗನಿಗೂ ಈ ಬುಡಕಟ್ಟು ಜನರಿಗೂ ಏನು ಸಂಬಂಧ? ಈತ ಬುಡಕಟ್ಟು ಜನರ ವಿರುದ್ಧ ಕಾನೂನು ಸಮರ ಸಾರಿರೋದೇಕೆ ಎಂಬುದನ್ನು ತಿಳಿದರೆ ನಿಮಗೆ ಅಚ್ಚರಿಯಾಗಲಿದೆ. ಕಾರಣ, ಜುಕರ್ ಬರ್ಗ್ ತನ್ನ ಏಕಾಂತಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನೂರಾರು ಸ್ಥಳೀಯ ಕುಟುಂಬವನ್ನು ನ್ಯಾಯಾಲಯಕ್ಕೆ ಎಳೆದು ತಂದಿದ್ದಾರೆ. ಹೌದು, ಮಾರ್ಕ್ ಜುಕರ್ ಬರ್ಗ್ ಹವಾಯಿ ದ್ವೀಪದಲ್ಲಿ ಒಂದು ಎಸ್ಟೇಟ್ ಅನ್ನು ಖರೀದಿಸಿದ್ದಾನೆ. ಈ ಎಸ್ಟೇಟ್ ಪಕ್ಕದಲ್ಲಿ ಈ ಬುಡಕಟ್ಟು ಜನರಿದ್ದು, ಅವರ ಜಾಗವನ್ನು ತನಗೆ ಮಾರುವಂತೆ ಒತ್ತಡ ಹೇರುತ್ತಿದ್ದಾರೆ.

ಜುಕರ್ ಬರ್ಗ್ ಈ ದ್ವೀಪದಲ್ಲಿ 700 ಎಕರೆ ಪ್ರದೇಶದ ಎಸ್ಟೇಟ್ ಹೊಂದಿದ್ದಾರೆ. ಈತನ ಎಸ್ಟೇಟ್ ಪಕ್ಕದಲ್ಲಿ ಬುಡಕಟ್ಟು ಜನರ 12 ಸಣ್ಣ ಪುಟ್ಟ ಭೂಮಿಗಳಿವೆ. ಈ ಭೂಮಿಗಳನ್ನು ಖರೀದಿಸಿ ತನ್ನ ಎಸ್ಟೇಟ್ ಅಕ್ಕಪಕ್ಕದಲ್ಲಿ ಯಾರೂ ಇಲ್ಲದಂತೆ ಮಾಡಿ ಏಕಾಂತ ಸೃಷ್ಟಿಸಿಕೊಳ್ಳಲು ಇಷ್ಟೆಲ್ಲಾ ಪ್ರಯತ್ನ ಪಡುತ್ತಿದ್ದಾರೆ. ಆದರೆ, 1850 ರಿಂದಲೂ ಈ ಬುಡಕಟ್ಟಿನ ಅನೇಕ ತಲೆಮಾರಿನ ಜನರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇವರ ಪೂರ್ವಜರಿಗೆ ಈ ಭೂಮಿ ಬಳುವಳಿಯಾಗಿ ಬಂದಿದ್ದು, ಆ ಪ್ರದೇಶದ ಕುಲೆನಾ ಕಾಯ್ದೆ ಪ್ರಕಾರ ಅವರು ಆ ಜಾಗದ ಹಕ್ಕುದಾರರಾಗಿದ್ದಾರೆ. ಆದರೆ ಇದನ್ನು ಹೊರತುಪಡಿಸಿ ಅವರ ಬಳಿ ಕಾನೂನಿನ ಪ್ರಕಾರದ ಆಸ್ತಿಯ ದಾಖಲೆಗಳಿಲ್ಲ.

zuckerbergkauai_carousel

ಹವಾಯಿ ದ್ವೀಪದ ಚಿತ್ರ

ಜುಕರ್ ಬರ್ಗ್ ತನ್ನ ಒಡೆತನದ ವಿವಿಧ ಕಂಪನಿಗಳಾದ ಪಿಲಾ ಇಂಟರ್ ನ್ಯಾಷನಲ್ ಎಲ್ಎಲ್ ಸಿ, ನಾರ್ಥ್ ಶೋರ್ ಕಾಲೊ ಎಲ್ಎಲ್ ಸಿ, ಹೈ ಫ್ಲೈಯರ್ ಎಲ್ಎಲ್ ಸಿ ಮೂಲಕ ಈ ಕಾನೂನು ಸಮರ ಸಾರಿದ್ದಾರೆ. ಈ ಭೂಮಿಯ ಮೇಲೆ ಹಕ್ಕು ಹೊಂದಿದ್ದ ವ್ಯಕ್ತಿಗಳು ಈಗ ಬದುಕುಳಿದಿಲ್ಲ. ಹೀಗಾಗಿ ಈ ಭೂಮಿ ಆ ಜನರಿಗೆ ಸಂಬಂಧಿಸಿದ್ದು ಎಂದು ಸಾಬೀತುಪಡಿಸಲು ಸಾಕ್ಷ್ಯವಿಲ್ಲ ಎಂಬುದು ಜುಕರ್ ಬರ್ಗ್ ಅರ್ಜಿಯಲ್ಲಿ ಮಂಡಿಸಿರುವ ವಾದ.

ಹವಾಯಿಯಲ್ಲಿ ಭೂಮಿ ಮಾರಾಟಕ್ಕೆ ಸಂಬಂಧಿಸಿದಂತೆ ಈ ರೀತಿಯಾದ ಕಾನೂನು ಸಮರ ಸಾಮಾನ್ಯವಾಗಿದೆ. ಈ ರೀತಿಯಾದ ಕಾನೂನು ಸಮರದ ಮೂಲಕ ಈ ಹಿಂದೆ ಹಲವು ಭೂಮಿ ಮಾರಾಟವಾಗಿದ್ದು, ಮಾರುಕಟ್ಟೆ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಭೂಮಿ ಖರೀದಿಸಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಪ್ರಕರಣದಲ್ಲಿ ಜುಕರ್ ಬರ್ಗ್ ಈ ಬುಡಕಟ್ಟು ಜನರಿಗೆ ಉತ್ತಮ ಬೆಲೆಯನ್ನೇ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಲ್ಲದರ ನಡುವೆ ಪೂರ್ವಜರ ಕಾಲದಿಂದಲೂ ಈ ಜನರು ಈ ಭೂಮಿಯ ಮೇಲೆ ಹಕ್ಕು ಹೊಂದಿದ್ದು, ಕಾನೂನಿನ ಸೂಕ್ತ ದಾಖಲೆಗಳಲಿಲ್ಲದಿರುವುದರಿಂದ ಈ ಪ್ರಕರಣದಲ್ಲಿ ಗೆಲ್ಲುವವರಾರು ಎಂಬ ಕುತೂಹಲ ಮೂಡಿದೆ.

Leave a Reply