ಹೆಸರು ಮಗನದ್ದಾದರೂ ಬಿಜೆಪಿ ಅಪ್ಪಿಕೊಂಡಿರುವುದು ಎನ್ ಡಿ ತಿವಾರಿ ಎಂಬ ವ್ಯಭಿಚಾರಿಯನ್ನೇ…

ಡಿಜಿಟಲ್ ಕನ್ನಡ ಟೀಮ್:

ಇಲ್ಲಿಲ್ಲ… ನಾವು ಬಿಜೆಪಿಗೆ ಸೇರಿಸಿಕೊಂಡಿದ್ದು ಎನ್ ಡಿ ತಿವಾರಿಯನ್ನಲ್ಲ, ಅವರ ಮಗ ರೋಹಿತ್ ಶೇಖರರನ್ನು ಅಂತ ಬುಧವಾರವೇ ಪಕ್ಷ ಸ್ಪಷ್ಟೀಕರಣ ಹೊರಡಿಸಿದೆ.

ಏಕೆಂದರೆ ಎನ್ ಡಿ ತಿವಾರಿ ಬಿಜೆಪಿಗೆ ಸೇರ್ಪಡೆ ಎಂಬ ಸುದ್ದಿಯಿಂದ ಬಿಜೆಪಿ ಬೆಂಬಲಿಗರೇ ವಿಚಲಿತರಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ, ವ್ಯಂಗ್ಯವನ್ನು ದಾಖಲಿಸತೊಡಗಿದರು. ಏಕೆಂದರೆ ಈ ಎನ್ ಡಿ ತಿವಾರಿ ಎಂಬ ವ್ಯಕ್ತಿ ತೀರ ರಾಜಭವನಕ್ಕೆ ವೇಶ್ಯೆಯರನ್ನು ಕರೆಸಿಕೊಂಡ ಕಳಂಕ ಹೊತ್ತವ. ಇದೇ ರೋಹಿತ್ ಶೇಖರ್ ತನ್ನದೇ ಸಂತಾನ ಎಂದು ಒಪ್ಪಿಕೊಳ್ಳುವುದಕ್ಕೆ ಆರು ವರ್ಷ ತೆಗೆದುಕೊಂಡ. ಅದೂ ಆತ ಡಿಎನ್ಎ ಪರೀಕ್ಷೆಗೆ ಕೋರ್ಟ್ ಮೆಟ್ಟಿಲೇರಿ ಪಟ್ಟು ಬಿಡದೇ ಕುಳಿತಾಗ, ಇನ್ನು ತಾನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಅಂತ ಮಗಾ ಅಂತ ಒಪ್ಪಿ- ಅಪ್ಪಿಕೊಂಡ ಭೂಪ ತಿವಾರಿ.

ತಿವಾರಿ ಕತೆ ಬಿಡಿ, ನಾವು ಸೇರಿಸಿಕೊಳ್ಳುತ್ತಿರುವುದು ಅವರ ಮಗ ರೋಹಿತ್ ಶೇಖರರನ್ನು ಎಂಬುದು ಬಿಜೆಪಿ ವರಸೆ. ಆದರೆ ಕತೆ ನಿಂತಿರುವುದೇ ತಿವಾರಿಯ ಮೇಲೆ. ಎನ್ ಡಿ ತಿವಾರಿ ಎಂಬ ವ್ಯಭಿಚಾರಿ ಈ 91ರ ಪ್ರಾಯದಲ್ಲಿ ಸ್ಪರ್ಧಿಸುವುದಕ್ಕೆ ಶಕ್ತವಲ್ಲದ ಸ್ಥಿತಿಯಲ್ಲಿರುವುದರಿಂದ ಮಗನನ್ನು ಸೇರಿಸಿಕೊಂಡು ಟಿಕೆಟ್ ನೀಡುವುದಕ್ಕೆ ಹೊರಟಿದೆ ಬಿಜೆಪಿ.

ಇಲ್ಲಿ ರೋಹಿತ್ ಶೇಖರ್ ಗೆ ಅವಕಾಶ ಸಿಗಬಾರದೆಂದಲ್ಲ. ಆದರೆ ರೋಹಿತಗಿರುವ ಐಡೆಂಟಿಟಿ ಯಾವುದು? ತಿವಾರಿ ಸಂತಾನವೆಂಬ ರೋಚಕತೆಯಾಚೆ ರಾಜಕೀಯ ಶ್ರಮದ ಹೆಜ್ಜೆಗಳೇನೂ ಇಲ್ಲ. ಮುಖ ಮಗನದ್ದು ಮುಂದು ಮಾಡಿ, ಅಪ್ಪನನ್ನು ನೆನಪಿಸಿ ಲಾಭ ಮಾಡಿಕೊಳ್ಳುತ್ತೇನೆಂದು ಹೊರಟಿದೆ ಬಿಜೆಪಿ.

ಏನು ಲಾಭ ಅಂತ ಪ್ರಶ್ನಿಸಿದರೆ ಕೇವಲ ಬಿಜೆಪಿ ಬಗೆಗಲ್ಲ, ಸಮಾಜದ ಬಗ್ಗೆಯೂ ಬೇಸರವಾಗುತ್ತದೆ. ಫೆಬ್ರವರಿಯಲ್ಲಿ ಉತ್ತರಾಖಂಡದ ವಿಧಾನಸಭೆ ಚುನಾವಣೆ ನಡೆಯಲಿದೆ. ದುರಂತ ನೋಡಿ. ಈ ಎನ್ಡಿ ತಿವಾರಿ ಎಂಬ ಚಪಲ ಚೆನ್ನಿಗರಾಯ ಉತ್ತರಾಖಂಡದ ಮಟ್ಟಿಗೆ ಜನಪ್ರಿಯನಂತೆ. ಈತನನ್ನು ಮುಂದಿಟ್ಟುಕೊಂಡರೆ ಬ್ರಾಹ್ಮಣ ಸಮುದಾಯದ ಮತಗಳು ಬರಬಹುದೆಂಬ ಲೆಕ್ಕಾಚಾರ ಬಿಜೆಪಿಯದ್ದು!

ಈ ಲೆಕ್ಕಾಚಾರಕ್ಕೆ ವಾಸ್ತವದ ನೆಲೆಗಟ್ಟು ಇದ್ದದ್ದೇ ಹೌದಾದರೆ ಬಿಜೆಪಿ ಜತೆ ಅಲ್ಲಿನ ಬ್ರಾಹ್ಮಣ ಸಮುದಾಯವನ್ನೂ ಜಿಗುಪ್ಸೆಯಿಂದ ನೋಡಬೇಕಾಗುತ್ತದೇನೋ!

ಎನ್ಡಿ ತಿವಾರಿ ಮುಂದಿಟ್ಟುಕೊಂಡು ಹಾಕಿರುವ ರಾಜಕೀಯ ಲಾಭದ ಲೆಕ್ಕಾಚಾರಕ್ಕೆ ಇತಿಹಾಸದ ಬಲವೂ ಇದೆ. ನೆಹರು-ಇಂದಿರಾ ಗಾಂಧಿಗೆ ಆಪ್ತ, ಉತ್ತರ ಪ್ರದೇಶ- ಉತ್ತರಾಖಂಡಗಳ ಮುಖ್ಯಮಂತ್ರಿ ಆಗಿದ್ದ ಅನುಭವ, ಆಂದ್ರ ಪ್ರದೇಶದ ರಾಜ್ಯಪಾಲ ಆಗಿದ್ದ ವ್ಯಕ್ತಿ… ಹಿಂಗೆಲ್ಲ ವಿಶೇಷಗಳಿವೆ. ಇಂಥ ತಿವಾರಿಯನ್ನು ಅಪ್ಪನೆಂದು ಒಪ್ಪಿಸಿದ ಪುತ್ರರತ್ನ ಎಂಬುದು ರೋಹಿತ್ ಶೇಖರಗೆ ಸದ್ಯಕ್ಕಿರುವ ಹಿರಿಮೆ. ಉತ್ತರಾಖಂಡದ ಕುಮಾಂವ್ ಪ್ರಾಂತ್ಯಕ್ಕೆ ಬಿಜೆಪಿಯಿಂದ ಟಿಕೆಟ್ ಸಿಗುವುದು ರೋಹಿತಗೆ ಹೆಚ್ಚು ಕಡಿಮೆ ಪಕ್ಕಾ ಆಗಿದೆ ಎಂಬ ಮಾತುಗಳಿವೆ.

ಇದು ಅಲ್ಲೆಲ್ಲೋ ಉತ್ತರಾಖಂಡಕ್ಕೆ ಸೀಮಿತ ಚಿಕ್ಕ ವಿದ್ಯಮಾನವಿದ್ದಿರಬಹುದು. ಆದರೆ ಈ ಮೂಲಕ ಬಿಜೆಪಿ ನೀಡಹೊರಟಿರುವ ಸಂದೇಶವೇನು? ತಳಮಟ್ಟದ ಕಾರ್ಯಕರ್ತರು ಎಂಬುದೆಲ್ಲ ಎಲ್ಲರಂತೆ ನಾವು ಭಾಷಣಕ್ಕೆ ಬಳಸಿಕೊಳ್ಳುವುದಕ್ಕೆ ಇಟ್ಟುಕೊಂಡಿರುವ ಶಬ್ದವಷ್ಟೆ. ಇಲ್ಲಿ ತಿವಾರಿಯಂಥ ವಿವಾದಪ್ರಿಯ ರೋಚಕ ಸಾಮಗ್ರಿಗಳಿಗೆ ಮಾತ್ರ ವೇದಿಕೆ. ಕಾರ್ಯಕರ್ತರದ್ದೇನಿದ್ದರೂ ಕೇರಳದಂಥ ಜಾಗಗಳಲ್ಲಿ ಬಿಜೆಪಿ ಬಾವುಟ ಹಾರಿಸಲು ಹೋಗಿ ಹತ್ಯೆಯಾಗುವುದಷ್ಟೇ… ಎಂಬ ಸಂದೇಶವೊಂದು ಇದರಲ್ಲಿದೆ.

ಉತ್ತರಾಖಂಡದಲ್ಲಿ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇನ್ನೊಮ್ಮೆ ಅಧಿಕಾರಕ್ಕೆ ಬರದಂತೆ ತಡೆಯುವುದಕ್ಕೆ ಬಿಜೆಪಿ ಸಜ್ಜಾಗುತ್ತಿರುವುದು ಹೇಗೆ? ರಾವತ್ ಜತೆ ಮುನಿಸಿಕೊಂಡಿರುವ ಕಾಂಗ್ರೆಸ್ಸಿಗರನ್ನೆಲ್ಲ ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ. ಅಂಥ ಅನೇಕ ವಲಸೆಗಳಾಗಿವೆ. ಅಲ್ಲಿಗೆ ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಐಡಿಯಾ ಅಂತಂದ್ರೆ ಕಾಂಗ್ರೆಸ್ಸಿಗರನ್ನೆಲ್ಲ ಸೇರಿಸಿಕೊಂಡು ದೇಶದಲ್ಲೆಲ್ಲ ಬಿಜೆಪಿ ಬಾವುಟ ಹಾರಿಸುವುದು..

‘ಬಿಜೆಪಿ ಬೆಂಬಲಿಗರೇ.. ರಾಹುಲ್ ಗಾಂಧಿಯನ್ನು ತೀರಾ ಟೀಕಿಸಬೇಡಿ. ನಾಳೆ ಅವರನ್ನೂ ಬಿಜೆಪಿ ನೇತಾರರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ನಕ್ಕಾರು’ ಎಂಬ ಜೋಕ್ ಸಾಮಾಜಿಕ ತಾಣಗಳಲ್ಲಿ ಜೋರಾಗಿ ಹರಿದಾಡಿಕೊಂಡಿರೋದು ಸುಮ್ಮನೆ ಅಲ್ಲ.

Leave a Reply