ರಾಜು ಕಾಗೆ ನ್ಯಾಯಾಂಗ ಬಂಧನ, ರಮೇಶ್ ಜಾರಕಿಹೊಳಿ- ಲಕ್ಷ್ಮಿ ಹೆಬ್ಬಾಳ್ಕರ್ ಮನೆ ಮೇಲೆ ಐಟಿ ದಾಳಿ, ಜೆಡಿಎಸ್ ಕಚೇರಿ ಉದ್ಘಾಟನೆಗೆ ವಾಸ್ತುದೋಷ ಅಡ್ಡಿ? ಜಲ್ಲಿಕಟ್ಟು ನಿಷೇಧ ತೆರವಿಗೆ ವ್ಯಾಪಕ ಬೆಂಬಲ

ಬೆಂಗಳೂರಿನ ಟೌನ್ ಹಾಲ್ ನಲ್ಲಿ ಗುರುವಾರ ನಡೆದ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಮತ್ತು ಉಪಾಧಿವಂತರ ಒಕ್ಕೂಟದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ಅರ್ಚಕರು.

ಡಿಜಿಟಲ್ ಕನ್ನಡ ಟೀಮ್:

ನ್ಯಾಯಾಂಗ ಬಂಧನಕ್ಕೆ ಶಾಸಕ ರಾಜು ಕಾಗೆ

ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಶಾಸಕ ರಾಜು ಕಾಗೆ ಅವರನ್ನು ಜ.23ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರ್ಟ್ ಆದೇಶ ನೀಡಿದೆ. ಜನವರಿ 1ರಂದು ರಾಜು ಕಾಗೆ, ಅವರ ಕುಟುಂಬ ಸದಸ್ಯರು ಹಾಗೂ ಕೆಲ ಕಾರ್ಯಕರ್ತರು ವಿವೇಕ್ ಶೆಟ್ಟಿ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು 13 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈವರೆಗೂ 6 ಮಂದಿಯನ್ನು ಬಂಧಿಸಿದ್ದಾರೆ. ಇಂದು ವಿಚಾರಣೆ ನಡೆಸಿದ ಬಳಿಕ ರಾಜು ಕಾಗೆ ಅವರನ್ನು ಸಂಜೆ ವೇಳೆಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ರಾಜು ಕಾಗೆ ಜತೆಗೆ ಅವರ ಪುತ್ರಿ ತೃಪ್ತಿ ಹಾಗೂ ಸಹೋದರನ ಪತ್ನಿ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಸೂಚಿಸಿದೆ.

ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿ

ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ಮತ್ತು ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕಾಂಗ್ರೆಸ್ ನಾಯಕರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ದಾಳಿ ಮಾಡಿದ್ದು, ಭಾರಿ ಪ್ರಮಾಣದ ಆಸ್ತಿ ಹಾಗೂ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಜಾರಕಿಹೊಳಿ ಅವರ ಗೋಕಾಕ್ ನಿವಾಸ, ಸಹೋದರ ಲಖನ್ ಜಾರಕಿಹೊಳಿ ನಿವಾಸ, ಬೆಂಬಲಿಗರಾದ ಜಾವೆದ್ ಮುಲ್ಲಾ ನಿವಾಸ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆಳಗಾವಿಯ ಕುವೆಂಪು ನಗರದ ನಿವಾಸದ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಚಿವ ಜಾರಕಿಹೊಳಿ ಅವರು ಇತ್ತೀಚೆಗೆ ತಮ್ಮ ಪುತ್ರಿಯ ವಿವಾಹವನ್ನು ಅದ್ದೂರಿಯಾಗಿ ಮಾಡಿದ್ದರು. ಇವರು ಅಕ್ರಮ ಆಸ್ತಿ ಹೊಂದಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇತ್ತೀಚೆಗೆ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದರು. ಇವರ ಹೆಸರಿನಲ್ಲಿ ಕೆಲವು ಸಚಿವರು ಮತ್ತು ಪ್ರಭಾವಿ ರಾಜಕಾರಣಿಗಳು ಉದ್ದಿಮೆ ಸ್ಥಾಪಿಸಲು ಬಂಡವಾಳ ಹೂಡಿಕೆ ಮಾಡಿದ್ದಾರೆ. ಅಲ್ಲದೆ ಹೆಬ್ಬಾಳ್ಕರ್ ಬೆಳಗಾವಿಯ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುತ್ತಿದ್ದಾರೆ. ಜತೆಗೆ ಸೌರ ವಿದ್ಯುತ್ ಉತ್ಪಾದನಾ ಘಟಕಗಳಲ್ಲೂ ಭಾರಿ ಪ್ರಮಾಣದ ಬಂಡವಾಳ ಹೂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಮಾಹಿತಿ ಬಂದಿವೆ.

ಜೆಡಿಎಸ್ ಕಚೇರಿಗೆ ವಾಸ್ತುದೋಷ

ಜಾತ್ಯಾತೀತ ಜನತಾ ದಳ ಪಕ್ಷದ ಮುಖ್ಯ ಕಚೇರಿ ಕಾಂಗ್ರೆಸ್ ಪಾಲಾದ ನಂತರ ನೂತನ ಕಚೇರಿ ನಿರ್ಮಾಣದ ಬಗ್ಗೆ ನಿಮಗೆಲ್ಲರಿಗೂ ಗೊತ್ತೆ ಇತ್ತು. ಆದರೆ ಈ ನೂತನ ಕಚೇರಿಯ ಉದ್ಘಾಟನೆ ವಿಳಂಬದ ಬಗ್ಗೆ ಪ್ರಶ್ನೆಯೂ ಮೂಡಿತ್ತು. ಆದರೆ ಈಗ ಬಂದಿರುವ ಮಾಹಿತಿ ಏನಂದ್ರೆ, ಸದ್ಯ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ವಾಸ್ತು ದೋಷವಿದೆ ಎಂಬ ಕಾರಣಕ್ಕೆ ಕಚೇರಿಯ ಉದ್ಘಾಟನೆ ಮುಂದೂಡಲಾಗಿದೆ. ಈ ಹಿಂದೆ ನಿಗದಿಯಾದ ಪ್ರಕಾರ ಫೆ.1ರಂದು ಬಿಜೆಪಿಯ ಹಿರಿಯ ಧುರೀಣ ಎಲ್.ಕೆ ಅಡ್ವಾಣಿ ಅವರಿಂದ ಉದ್ಘಾಟನೆ ಮಾಡಿಸಲು ಮಾಜಿ ಪ್ರಧಾನಿ ದೇವೇಗೌಡರು ನಿರ್ಧರಿಸಿದ್ದರು. ಇದಕ್ಕೆ ಅಡ್ವಾಣಿ ಅವರು ಸಹ ಒಪ್ಪಿಗೆ ನೀಡಿದ್ದರು. ಆದರೆ ವಾಸ್ತುದೋಷದ ಬಗ್ಗೆ ಜ್ಯೋತಿಷಿಗಳು ಎಚ್ಚರಿಕೆ ನೀಡಿದ ನಂತರ ಕಟ್ಟಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಹೀಗಾಗಿ ಈ ಕಚೇರಿ ಉದ್ಘಾಟನೆಯನ್ನು ಯುಗಾದಿ ಹಬ್ಬದಂದು ನೆರವೇರಿಸಲು ನಿರ್ಧರಿಸಲಾಗಿದೆ.

ಜಲ್ಲಿಕಟ್ಟು ನಿಷೇಧ ತೆರವಿಗೆ ವ್ಯಾಪಕ ಬೆಂಬಲ

ಸಾಂಪ್ರದಾಯಿಕ ಜಲ್ಲಿಕಟ್ಟು ಆಚರಣೆ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ತಮಿಳುನಾಡಿನ ಜನರು ಒಗ್ಗಟ್ಟು ಪ್ರದರ್ಶಿಸಿ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ವಿವಿಧ ಭಾಗಗಳಿಂದ ವಿವಿಧ ಕ್ಷೇತ್ರದ ಪ್ರಮುಖ ವ್ಯಕ್ತಿಗಳು ತಮಿಳಿಗರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಚಾರದ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ತಮಿಳುನಾಡು ಮುಖ್ಯಮಂತ್ರಿ ಒ.ಪನ್ನೀರ ಸೆಲ್ವಂ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ಸಭೆಯ ಬಳಿಕ ‘ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಆಚರಣೆ ಮೇಲೆ ನಿಷೇಧ ಹೇರಿರುವುದು ಸಾಕಷ್ಟು ಚರ್ಚೆಯಾಗುತ್ತಿದೆ. ತಮಿಳಿಗರ ಸಂಪ್ರದಾಯವನ್ನು ಗೌರವಿಸುತ್ತೇನೆ. ಜತೆಗೆ ಜಲ್ಲಿಕಟ್ಟು ಆಚರಣೆಯ ಮಹತ್ವವನ್ನು ಅರಿತಿದ್ದೇನೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ವಿಷಯ ನ್ಯಾಯಾಲಯದ ಅಂಗಳದಲ್ಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಪನ್ನೀರ್ ಸೆಲ್ವಂ ಅವರ ಭೇಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜಲ್ಲಿಕಟ್ಟು ವಿಚಾರದಲ್ಲಿ ಪರಿಹಾರ ಕಲ್ಪಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಪ್ರತಿಭಟನಾಕಾರರಿಗೆ ನಿರಾಸೆಯಾಗಿದ್ದು, ಚೆನ್ನೈನ ಮರಿನಾ ಬೀಚ್ ನಲ್ಲಿ ಪ್ರತಿಭಟನಾಕಾರರ ಆಕ್ರೋಶ ಹೆಚ್ಚಾಗಿದೆ.

ಇನ್ನು ಈ ವಿಚಾರದಲ್ಲಿ ಆರ್ಟ್ ಆಫ್ ಲೀವಿಂಗ್ ಮುಖ್ಯಸ್ಥ ರವಿಶಂಕರ್ ಗುರೂಜಿ ಹಾಗೂ ಸದ್ಗುರು ಜಗ್ಗಿ ವಾಸುದೇವ್ ಅವರು ಜಲ್ಲಿಕಟ್ಟು ನಿಷೇಧ ತೆರವಿಗೆ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಈಗಾಗಲೇ ರಜನಿಕಾಂತ್, ಕಮಲ್ ಹಾಸನ್, ವಿಜಯ್ ಸೇರಿದಂತೆ ತಮಿಳು ಚಿತ್ರರಂಗದ ಖ್ಯಾತನಾಮರು ಈ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಯುವಿ- ಧೋನಿ ಅಬ್ಬರಕ್ಕೆ ನಲುಗಿದ ಆಂಗ್ಲರು

ಆಂಗ್ಲರ ಬೌಲಿಂಗ್ ದಾಳಿಯನ್ನು ಮನಬಂದಂತೆ ದಂಡಿಸಿದ ಯುವರಾಜ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಧೋನಿ, ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ತಂಡ 381 ರನ್ ಗಳ ಬೃಹತ್ ಮೊತ್ತ ಕಲೆ ಹಾಕುವಂತೆ ಮಾಡಿದ್ದಾರೆ. ಕಟಕ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಪಡೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಭಾರತಕ್ಕೆ ನೀಡಿತು. ಇದರ ಲಾಭ ಪಡೆದ ಭಾರತ 50 ಓವರ್ ಗಳಲ್ಲಿ  6 ವಿಕೆಟ್ ನಷ್ಟಕ್ಕೆ 381 ರನ್ ದಾಖಲಿಸಿತು.

ಆರಂಭಿಕರಾದ ಕೆ.ಎಲ್ ರಾಹುಲ್ (5), ಶಿಖರ್ ಧವನ್ (11), ವಿರಾಟ್ ಕೊಹ್ಲಿ (8) ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜತೆಯಾದ ಯುವಿ ಹಾಗೂ ಧೋನಿ ತಂಡಕ್ಕೆ ದ್ವಿಶತಕದ ಜತೆಯಾಟ ನೀಡಿದರು. ಟೀಂ ಇಂಡಿಯಾಗೆ ಮರಳಿದ ನಂತರ ಅತ್ಯುತ್ತಮ ಶತಕ ದಾಖಲಿಸಿದ ಯುವರಾಜ್ ತಮ್ಮ ಏಕದಿನ ಕ್ರಿಕೆಟ್ ನ ಶ್ರೇಷ್ಠ ಇನಿಂಗ್ಸ್ ಆಡಿದರು. 2011ರ ವಿಶ್ಆವಕಪ್ ನಲ್ಲಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ ನಂತರ ಯುವರಾಜ್ 6 ವರ್ಷಗಳ ನಂತರ ಶತಕ ಬಾರಿಸಿದ್ದಾರೆ. ಇದು ಏಕದಿನದಲ್ಲಿ ಅವರ 14ನೇ ಶತಕ. ಇನ್ನು ಮಹೇಂದ್ರ ಸಿಂಗ್ ಧೋನಿ ಸಹ ಭರ್ಜರಿ ಬ್ಯಾಟಿಂಗ್ ನಡೆಸಿ ಏಕದಿನದಲ್ಲಿ 9ನೇ ಶತಕ ಬಾರಿಸಿದ್ದಾರೆ. ಉಳಿದಂತೆ ಜಾಧವ್ 22, ಪಾಂಡ್ಯ ಅಜೇಯ 19, ಜಡೇಜಾ ಅಜೇಯ 16 ರನ್ ಗಳಿಸಿದರು. ಆಂಗ್ಲರ ಪರ ವೊಕ್ಸ್ 4, ಪ್ಲಂಕೆಟ್ 2 ವಿಕೆಟ್ ಪಡೆದರು.

Leave a Reply