ಪ್ರವೀಣ್ ಕುಮಾರ್
ನೋಟು ಅಮಾನ್ಯ ಸಂಬಂಧದ ಸಾರ್ವಜನಿಕ ಹಿತಾಸಕ್ತಿ ಆಲಿಸುತ್ತಿದ್ದಾಗ ಸುಪ್ರೀಂಕೋರ್ಟ್ ಪೀಠ ಕೇಂದ್ರ ಸರ್ಕಾರದ ವಿರುದ್ಧ ಡೈಲಾಗುಬಾಜಿಗಿಳಿದು ಹೇಳಿತ್ತು- ಜನ ಬೀದಿಗಿಳಿದು ದಂಗೆ ಎದ್ದಾರು ಎಚ್ಚರ! ನೋಟು ಅಮಾನ್ಯದ ಅವ್ಯವಸ್ಥೆ ಸರಿಪಡಿಸುವಂತೆ ಕೇಂದ್ರಕ್ಕೆ ತಾಕೀತು ಮಾಡುವ ಎಲ್ಲ ಅಧಿಕಾರವೂ ಸುಪ್ರೀಂಕೋರ್ಟಿಗಿದೆ ನಿಜ. ಆದರೆ ಆ ದಿಸೆಯಲ್ಲಿ ಅದು ಬಳಸಿದ ಭಾಷೆ ಎಂಥಾದ್ದು? ವಾಸ್ತವದಲ್ಲಿ ಅದು ಹಿಂಸೆಗೆ ಪ್ರಚೋದನೆ ನೀಡುವಂಥದ್ದು. ಇಂಥ ಕೋಮಿನವರು ಬೀದಿಗಿಳಿದು ಬುದ್ಧಿ ಕಲಿಸುತ್ತಾರೆ ಎಚ್ಚರ ಎಂಬರ್ಥದಲ್ಲಿ ರಾಜಕಾರಣಿ ಮಾತನಾಡಿದಾಗ ಅದನ್ನು ಪ್ರಚೋದನಾತ್ಮಕ ಎಂದು ವ್ಯಾಖ್ಯಾನಿಸುವಾಗ, ಅಸಮಧಾನಗಳ ಹೊರತಾಗಿಯೂ ದೇಶದ ಯಾವ ಮೂಲೆಯಲ್ಲೂ ಜನರು ಕ್ರುದ್ಧರಾಗದೇ ನಡೆದುಕೊಳ್ಳುತ್ತಿದ್ದಾಗ, ಅವರ ಹೆಗಲ ಮೇಲೆ ಬಂದೂಕಿಟ್ಟು ‘ಜನ ದಂಗೆ ಏಳ್ತಾರೆ’ ಎಂಬ ಗುಂಡನ್ನು ಕೇಂದ್ರದತ್ತ ಹಾರಿಸುವ ಕ್ಷುಲ್ಲಕ ರೋಚಕತೆಯನ್ನು ಸುಪ್ರೀಂಕೋರ್ಟ್ ಪ್ರದರ್ಶಿಸಬೇಕಿರಲಿಲ್ಲ.
ಈಗೇನಾಗಿದೆ ನೋಡಿ. ಪೇಟಾದ ಅರ್ಜಿ ಇಟ್ಟುಕೊಂಡು, ಜಲ್ಲಿಕಟ್ಟು ನಿಷೇಧಿಸಿರುವ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ತಮಿಳುನಾಡಿನ ಜನ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬೀದಿಗೆ ಬಂದು ನಿಂತಿದ್ದಾರೆ. ಈಗ ತನ್ನ ಅಹಮಿಕೆಯನ್ನು ಸುಪ್ರೀಂಕೋರ್ಟ್ ನುಂಗಿಕೊಳ್ಳುತ್ತದಾ? ಏಕೆಂದರೆ ಇದ್ಯಾವ ರಾಜಕೀಯ ಪಕ್ಷದವರು ಸಂಘಟಿಸಿರುವ ಹೋರಾಟವೂ ಅಲ್ಲ. ಜನ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತ ಬೀದಿಗೆ ಬಂದಿದ್ದಾರೆ.
ಸರ್ಕಾರ, ಕೋರ್ಟು ಮತ್ಯಾವುದೇ ಪರಮೋಚ್ಛ ವ್ಯವಸ್ಥೆಯಾಗಿದ್ದರೂ ಅದಕ್ಕೂ ಆಗಾಗ ಆತ್ಮವಿಮರ್ಶೆಗೆ ಸಮಯವಿರಬೇಕು. ಜಲ್ಲಿಕಟ್ಟು ನಿಷೇಧದ ಕುರಿತ ಜನಾಕ್ರೋಶವು ತಾನು ಎಷ್ಟರಮಟ್ಟಿಗೆ ಜನಜೀವನ ಹಸ್ತಕ್ಷೇಪದಿಂದ ದೂರವಿರಬೇಕು ಎಂಬುದನ್ನು ನ್ಯಾಯದಾನದ ವಲಯ ಅರ್ಥ ಮಾಡಿಕೊಳ್ಳುವುದಕ್ಕೆ ಸಕಾಲ. ಜಲ್ಲಿಕಟ್ಟು ಪರ ವಹಿಸಿಕೊಂಡು ಜನರು, ಗಣ್ಯವರ್ಗವೆಲ್ಲ ಈ ಪರಿ ಏಕಕಂಠ ಪ್ರದರ್ಶಿಸುತ್ತಿರುವುದಕ್ಕೆ ನಿಖರ ಕಾರಣಗಳಿವೆ.
- ಸಂಪ್ರದಾಯದ ಹೆಸರಲ್ಲಿ ಜಲ್ಲಿಕಟ್ಟು ಉಳಿಸಿಕೊಳ್ಳುವುದಾದರೆ ಸತಿ ಪದ್ಧತಿಯನ್ನು ಉಳಿಸಿಕೊಳ್ಳಬೇಕಾಗುತ್ತಲ್ಲವೇ ಅಂತ ತನ್ನ ಅತಿ ಬುದ್ಧಿವಂತಿಕೆ ಪ್ರದರ್ಶಿಸುತ್ತದೆ ಸುಪ್ರೀಂಕೋರ್ಟ್. ಇದೇ ಹೋಲಿಕೆ ಇಟ್ಟುಕೊಂಡು ನೋಡುವುದಾದರೂ ಎರಡೂ ಕಡೆ ಇರುವುದು ಜೀವದ ಪ್ರಶ್ನೆ. ಪತಿ ಸತ್ತನೆಂದು ಮಡದಿಯನ್ನು ಚಿತೆಗೆ ದೂಡುವ ಜೀವವಿರೋಧಿ ಆಚರಣೆ ನಿಲ್ಲಿಸಿದ್ದು ಸರಿ. ಜಲ್ಲಿಕಟ್ಟು ಇರದಿದ್ದರೆ ಈ ಗೂಳಿಗಳೆಲ್ಲ ಹುಟ್ಟಿ ಕೆಲವೇ ತಿಂಗಳುಗಳಲ್ಲಿ ಕಸಾಯಿಖಾನೆ ಸೇರುತ್ತವೆ. ಏಕೆಂದರೆ ಹಾಲು ಕೊಡದ ಅವನ್ನು ಸಾಕುವ ಉಪಯುಕ್ತತೆಯೇ ಸಮುದಾಯಕ್ಕಿಲ್ಲ. ಆದರೆ ಪೊಂಗಲ್ ನಲ್ಲಿ ಒಂದು ಬಾರಿ ಸಾಹಸಕ್ರೀಡೆಗೆ ಬಳಕೆಯಾಗುವ ಕಾರಣಕ್ಕೆ ಈ ಗೂಳಿಗಳನ್ನು ವರ್ಷವಿಡೀ ಜತನದಿಂದ ನೋಡಿಕೊಳ್ಳಲಾಗುತ್ತದೆ. ಯಥೇಚ್ಛ ಆಹಾರ-ಮೇವು ನೀಡಿ ಪೈಲ್ವಾನನಂತೆ ಸಾಕಲಾಗುತ್ತದೆ. ಅಷ್ಟಾಗಿ ಜಲ್ಲಿಕಟ್ಟು ಹೋರಿಯನ್ನು ಹಿಡಿದು ಕೊಲ್ಲುವ ಆಟವೇನಲ್ಲವಲ್ಲ. ಮತ್ತೆ ಆ ಗೂಳಿ ಮುಂದಿನ ಋತುವಿನಾಟಕ್ಕೆ ಸಜ್ಜಾಗುತ್ತದೆ, ಜೀವನ ಕಂಡುಕೊಳ್ಳುತ್ತದೆ. ಪೇಟಾ ಅಥವಾ ತೀರ್ಪು ಬರೆದ ನ್ಯಾಯಮೂರ್ತಿಗಳು, ಬುದ್ಧಿಜೀವಿಗಳ್ಯಾರೂ ಇವನ್ನು ಸಾಕುವುದಿಲ್ಲವಲ್ಲ?
- ಇದು ಕೇವಲ ಗೂಳಿಯ ಪ್ರಶ್ನೆ ಅಲ್ಲ. ಹೀಗೆ ಕಸಾಯಿಖಾನೆಗೆ ಸಾಗುವುದೇ ಗಂಡುಗರುಗಳ ಕರ್ಮವಾಗಿಬಿಟ್ಟರೆ ಇಡೀ ಗೋತಳಿ ಅಭಿವೃದ್ಧಿಗೇ ಅದು ಮಾರಕವಾಗಿ ಪರಿಣಮಿಸುತ್ತದೆ.
- ಪ್ರಾಣಿದಯೆ ಹೆಸರಲ್ಲಿ ಆಟವನ್ನು ನಿಷೇಧಿಸುವುದಿದ್ದರೆ ಮೊದಲು ಪ್ರಾಣಿಗಳನ್ನು ಆಹಾರಕ್ಕಾಗಿ ವಧಿಸುವುದನ್ನು ನಿಲ್ಲಿಸಬೇಕು. ಇಲ್ಲೆಲ್ಲ ಆಹಾರದ ಹಕ್ಕನ್ನು ಜಳಪಳಿಸುವ ಬುದ್ಧಿಜೀವಿ ಸಮೂಹವೇ ಜಲ್ಲಿಕಟ್ಟುವಿನಲ್ಲಿ ಪ್ರಾಣಿಹಿಂಸೆಯಾಗುತ್ತದೆ ಅಂತ ಖ್ಯಾತೆ ತೆಗೆಯುತ್ತದೆ. ಅದೇ ಉಸಿರಲ್ಲಿ ಬಕ್ರೀದಿಗೆ ಕುರಿ ಕಡಿಯೋದನ್ನು ವಿರೋಧಿಸಿ ಎಂದರೆ ಇದೇ ಬುದ್ಧಿಜೀವಿಗಣ ಕ್ರುದ್ಧವಾಗುತ್ತದೆ.
- ಸದ್ಗುರು ಜಗ್ಗಿ ವಾಸುದೇವರು ಕೇಳುವಂತೆ- ಯಾವುದನ್ನೋ ನಿಷೇಧಿಸುವ ಮೊದಲು ಆ ನಿರ್ವಾತ ತುಂಬುವುದಕ್ಕೆ ನೀವೇನು ಕೊಟ್ಟಿರಿ ಎಂಬುದು ಮುಖ್ಯವಾಗುತ್ತದೆ. ಜಲ್ಲಿಕಟ್ಟು ಬದಲು ಇತರ ಕ್ರೀಡೆಗಳಲ್ಲಿ ತೊಡಗಿಕೊಳ್ಳಿ ಎನ್ನುವುದು ಸುಲಭ. ಆದರೆ ನೀವು ಮೈದಾನಗಳನ್ನು ಒದಗಿಸಿದ್ದೀರಾ? ಸಮುದಾಯಗಳೆಲ್ಲ ಫುಟ್ಬಾಲ್ ಆಡುವುದಕ್ಕೆ ಬೇಕಾದ ಎಷ್ಟು ಬಯಲು ಕೊಡಲು ಸಾಧ್ಯ? ಇವಕ್ಕೆಲ್ಲ ಉತ್ತರ ನೀಡದೇ ಏಕಾಏಕಿ ನಿಷೇಧಕ್ಕೆ ಹೋದಾಗ, ಅವರ ಜೀವನದ ಭಾಗ ಕಸಿಯುವುದಕ್ಕೆ ಹೋದಾಗ ಜನ ಬೀದಿಗೆ ಬರುವುದು ಸಹಜವೇ.
- ಜಲ್ಲಿಕಟ್ಟು ಸಂದರ್ಭದಲ್ಲಿ ಹಿಂಸೆ ಆಗುತ್ತಿದ್ದರೆ, ಜೂಜಾಟದ ಪ್ರಚೋದನೆಗಳು ಹುಟ್ಟಿಕೊಂಡಿದ್ದರೆ ಅದನ್ನು ತಡೆಯಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಜಲ್ಲಿಕಟ್ಟು ಸಂಪೂರ್ಣ ನಿಷೇಧ ಅದಕ್ಕೆ ಉತ್ತರವಲ್ಲ. ಏಕೆಂದರೆ ಮೇಲಿನ ಅಪಸವ್ಯಗಳು ಕಪ್ಪುಚುಕ್ಕೆಗಳ ರೀತಿ ಅಲ್ಲಲ್ಲಿ ಕಂಡುಬಂದಿರಬಹುದಾದರೂ ಉಳಿದಂತೆ ಜಲ್ಲಿಕಟ್ಟು ಎಂಬುದು ಸಮುದಾಯದ ಸಾಂಪ್ರದಾಯಿಕ ಕ್ರೀಡೆಯಾಗಿಯೇ ಉಳಿದುಕೊಂಡಿದೆ.