ಯಾವುದು ಅಶ್ಲೀಲ? ಇದು ಮನೆ, ಶಾಲೆ, ಮಾಧ್ಯಮಗಳ ಹೊಣೆಗಾರಿಕೆಯ ಕಾಲ

author-geetha‘ಸುಧಾ ವಾರಪತ್ರಿಕೆಯಲ್ಲಿ ಕಾಮಧೇನು ಅಂತ ಒಂದು ಕಾಲಂ ಇತ್ತು. ಯಾರು ಬೇಕಾದರೂ ಲೇಖನ ಬರೆಯಬಹುದಿತ್ತು. ಸ್ತ್ರೀ ಸಂಬಂಧಿತವಾಗಿ ಇರಬೇಕಿತ್ತು ಅಷ್ಟೇ…’

‘ಹುಂ.. ಗೊತ್ತು..’

‘ಮುವತೈದೋ… ಮೂವತ್ತಾರೋ ವರ್ಷಗಳ ಹಿಂದೆ ನನ್ನ ಮೊದಲ ಲೇಖನ ಅಲ್ಲಿ ಪ್ರಕಟಗೊಂಡಿತ್ತು.’

‘ವಿಷಯ ಏನು? ಸೀರೆ ಉಡುವುದು ಹೇಗೆ? ಕಾಡಿಗೆ ಹರಡದಂತೆ ಹಚ್ಚಿಕೊಳ್ಳುವುದು ಹೇಗೆ.. ಅಂತಲೋ?’

‘ಯಾಕೆ ನನಗೆ ಬೇರೆ ವಿಷಯವೇ ಹೊಳೆಯುವುದಿಲ್ಲವೇ? ಕಾಡುವುದಿಲ್ಲವೇ?’

‘ವುಮೆನ್ಸ್ ಎರಾ’ ಅಂತ ಒಂದು ಇಂಗ್ಲೀಷ್ ನಿಯತಕಾಲಿಕೆ ಬರ್ತಾ ಇತ್ತು. ಈಗಲೂ ಇದೆಯೋ ಇಲ್ಲವೋ ಗೊತ್ತಿಲ್ಲ. ಅದು ಹೆಣ್ಣು ಮಕ್ಕಳಿಗೇ ಮೀಸಲಾದ ಪಾಕ್ಷಿಕವಾಗಿತ್ತು. ಅದರಲ್ಲಿ ಬರುತ್ತಿದ್ದ ಲೇಖನಗಳೆಲ್ಲಾ ಹಾಗೇ ಇರುತ್ತಿತ್ತು. ಅಲಂಕಾರ ಮಾಡಿಕೊಳ್ಳುವುದು ಹೇಗೆ? ಸುಂದರವಾಗಿ ಕಾಣುವುದು ಹೇಗೆ? ಅಡಿಗೆ ಮಾಡುವುದು ಹೇಗೆ? ಗಂಡನ ಸೇವೆ ಮಾಡುವುದು ಹೇಗೆ? ಮಕ್ಕಳನ್ನು ಬೆಳೆಸುವುದು ಹೇಗೆ? ಬೊಜ್ಜು ಕರಗಿಸುವುದು ಹೇಗೆ? ಅದರ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು ಬರಹಗಳೆಲ್ಲಾ…’

ನನ್ನ ಏತಿ ಪ್ರೇತಿ ಬುದ್ಧಿ ಜಾಗೃತವಾಯಿತು.

‘ತಪ್ಪೇನು? ಮನೆ, ಮಕ್ಕಳು, ಸೌಂದರ್ಯ, ಸಂಸಾರ ಕೂಡ ಮುಖ್ಯವಲ್ಲವೇ? ಹೊರಗೆ ಹೋಗಿ ದುಡ್ಡು ಸಂಪಾದಿಸುವುದಷ್ಟೇ ಜೀವನವೇ? ನಮ್ಮಲ್ಲಿ ಅಭಿಮಾನವಿಲ್ಲ… ವೃತ್ತಿಗೌರವ ಇಲ್ಲ… ಈ ಕೆಲಸ ಹೆಚ್ಚು, ಇದು ಕಡಿಮೆ.. ಅದಕ್ಕೆ ಮರ್ಯಾದೆ, ಇದಕ್ಕೆ ಇಲ್ಲ… ದುಡ್ಡು ಹರಿದು ಬಂದರೆ ಗೌರವ… ಹಣದ ಮೌಲ್ಯವಿಲ್ಲದ ಮನೆ ಕೆಲಸ ನಗಣ್ಯ… ಹೀಗೆಲ್ಲಾ ಅಂದುಕೊಂಡೇ ಗಂಡು, ಹೆಣ್ಣು, ಭೇದವಿಲ್ಲದೆ ಎಲ್ಲರೂ ratraceನಲ್ಲಿ ಓಡುತ್ತಿರುವುದು… ದುಡ್ಡು, ಗೌರವ ಇದ್ದರೆ ಸಾಕೇ? ನೆಮ್ಮದಿ ಬೇಡವೇ? ಜೀವನದಲ್ಲಿ ಗುರಿಗಿಂಥ (goal) ಆ ಗುರಿಯನ್ನು ಸೇರಲು ನಾವು ಪಯಣಿಸುವ ಹಾದಿ ಮುಖ್ಯ… ಸಂತಸ, ಸುಖ, ನೆಮ್ಮದಿ ಇರುವುದು ಹಾದಿಯಲ್ಲಿ… ಗುರಿ ತಲುಪಿದ ತಕ್ಷಣ ಮತ್ತೊಂದು ಗುರಿ ಕಾಣುತ್ತದೆ. ತಿರುಗಿ ಹಾದಿ ಸವೆಸಬೇಕು. ಮಕ್ಕಳು, ಮನೆ ಕೂಡ ಮುಖ್ಯ…’

ಕೇಳುತ್ತಿದ್ದವರಿಗೆ ಸಾಕಾಯಿತು… ಮಧ್ಯೆ ಮಾತು ಮರೆಸಿದರು.

‘ನೀವು ನಿಮ್ಮ ಮೊದಲ ಲೇಖನದ ಬಗ್ಗೆ ಹೇಳುತ್ತಲಿದ್ರಿ…’

‘ಹೂಂ… ಹುಡುಕಿದೆ… ಸಿಕ್ಕರೆ ಈ ಬಾರಿ ಅದನ್ನೇ ‘ಚೌಕಟ್ಟಿನಾಚೆ’ಗೆ ಕಳುಹಿಸೋಣ ಅಂತ. ಸಿಗಲಿಲ್ಲ… ಖುಷಿ ಏನಪ್ಪಾ ಅಂದರೆ ಆ ಲೇಖನ, ಮೂವತ್ತಾರು ವರ್ಷಗಳ ಹಿಂದೆ ಬರೆದದ್ದು… ಇಂದಿಗೂ ಪ್ರಸ್ತುತ… ಅಶ್ಲೀಲ ಜಾಹೀರಾತುಗಳು ಮತ್ತು ಅದರ ಪರಿಣಾಮಗಳು ಎಂಬುದು ಲೇಖನದ ತಲೆ ಬರಹ…’

‘ಆಗ ಬಂದಿತ್ತಾ ಅಶ್ಲೀಲ ಜಾಹೀರಾತು? ಯಾವುದು?’

‘ನೆನಪಿಲ್ಲ… ಶ್ಲೀಲ, ಅಶ್ಲೀಲ ಎಂದು ಗೆರೆ ಎಳೆದು ನಿರ್ಧರಿಸುವುದು ತುಂಬಾ ಕಷ್ಟ. ಉಡುಪುಗಳು ಅಷ್ಟೇ ಸುಂದರ… ಎಲ್ಲಿಯವರೆಗೆ, ಅಶ್ಲೀಲ ಯಾವಾಗ, ಅಸಭ್ಯ ಹೇಗೆ ಎಂದೆಲ್ಲಾ ನಿರ್ಧರಿಸುವವರು ಯಾರು?’

‘ಸುಂದರಿ’ ಎಂದು ಹೊಗಳಿದರೆ ತಪ್ಪು ತಿಳಿದುಕೊಳ್ಳುವ ಕಾಲವಿತ್ತು. ಅಷ್ಟು ಧೈರ್ಯವಾಗಿ ಮುಖಕ್ಕೇ ಹೇಳಿದರು ಅಂದರೆ ಅವಳದೇ ತಪ್ಪಿರಬಹುದು ಎಂದು ಮನೆಯಲ್ಲಿ ಬೈಯ್ಯಿಸಿಕೊಳ್ಳುವ ಸಾಧ್ಯತೆಯೂ ಇತ್ತು. ಈಗ ಹಾಗಿಲ್ಲ… ‘You are looking sexy’ ಅಂದರೂ ಅದು ಹೊಗಳಿಕೆಯೇ. ಹೀಗೆ Objectify ಮಾಡಿದಾಗ ಹೆಣ್ಣು ಮಕ್ಕಳು ವಿರೋಧಿಸಬೇಕು… ಹಾಗೆ ಆಗುತ್ತಿಲ್ಲ..’

‘ಹೇಗೆ ಬಟ್ಟೆ ಹಾಕಿಕೊಳ್ಳಬೇಕು ಎಂಬ ಸ್ವಾತಂತ್ರ್ಯ ಇಲ್ಲವೇ? My body, My life, My choice… ನಿಮಗೆ ಬೇರೆ ಕೆಲಸ ಇಲ್ಲವೇ? ಆ ಬಗ್ಗೆ ಬಟ್ಟೆ ಧರಿಸಲು ನಿಮಗೆ ಆಗೊಲ್ಲ… ಹಾಗಾಗಿ ಹೊಟ್ಟೆಕಿಚ್ಚು.’

‘ಹಾಗಲ್ಲ…’

‘ಬಿಡಿ… ನಿಮ್ಮ ಮೊದಲ ಲೇಖನದ ಬಗ್ಗೆ ಹೇಳಿ…’

‘ಅದೇ… ಬೇಕಾದ ಹಾಗೆ ಬಟ್ಟೆ ಹಾಕಿಕೊಳ್ಳುವ ಸ್ವಾತಂತ್ರ್ಯ ಹೆಣ್ಣುಮಕ್ಕಳಿಗಿದೆ. ನೋಡುವ, ಪ್ರತಿಕ್ರಿಯಿಸುವ, ಆಡಿಕೊಳ್ಳುವ ಸ್ವಾತಂತ್ರ್ಯ ಇತರರಿಗಿದೆ. ಇತ್ತೀಚೆಗೆ ಗಂಡು ಮಕ್ಕಳೂ six packs ತೋರಿಸಿಕೊಳ್ಳುತ್ತಾ topless ಓಡಾಡುತ್ತಾರೆ… ಅವರಿಗೆ ನೆಟ್ಟಗೆ ಶರ್ಟು ಹಾಕಿಕೊಳ್ಳಿ ಎಂದು ಯಾರೂ ಸಲಹೆ ಕೊಡುವುದಿಲ್ಲ ಏಕೆ? ಬಟ್ಟೆ ಹಾಕಿಕೊಂಡವರಿಗೆ, ನೋಡುಗರಿಗೆ… ಯಾವುದೇ ಪ್ರಾಬ್ಲಂ ಇಲ್ಲ… ಮಧ್ಯೆ ಮಾತನಾಡುವವರೇ ಹೆಚ್ಚು… ABCL ಎಂಬ ಸಂಸ್ಥೆ ಅದೇ ಅಮಿತಾಭ್ ಬಚ್ಚನ್ ಅವರದು… ಬೆಂಗಳೂರಿನಲ್ಲಿ ಸುಮಾರು ವರ್ಷಗಳ ಹಿಂದೆ ಸೌಂದರ್ಯ ಸ್ಪರ್ಧೆ ನಡೆಸಿತ್ತು. ತುಂಬಾ ಮಂದಿ ಅದನ್ನು ವಿರೋಧಿಸಿದ್ದರು. ‘ಹೇಗೆ ನಡೆಸುತ್ತಾರೆ ನೋಡೋಣ… ಮುಂದಿನ ಸಾಲಿನಲ್ಲಿಯೇ ಕುಳಿತು ವಿರೋಧಿಸೋಣ’ ಎಂಬರ್ಥದ ಚುಟುಕು (ದುಂಡಿರಾಜ್ ಅವರದಿರಬೇಕು..) ಓದಿ ನಕ್ಕು ನಕ್ಕು ಸಾಕಾಗಿತ್ತು.’

‘ಕರೆಕ್ಟು… ಮಧ್ಯೆ ಮಾತನಾಡುವವರು ಸುಮ್ಮನಿರಬೇಕು. ಹಾಕಿಕೊಳ್ಳುವವರಿಗೆ ಪ್ರಾಬ್ಲಂ ಇಲ್ಲ. ನೋಡುವವರಿಗೆ ಪ್ರಾಬ್ಲಂ ಇಲ್ಲ… They want attention… these men give attention ಅಷ್ಟೇ.’

‘ಅದು ಅಷ್ಟೇ ಅಲ್ಲ… ಹಾಗಾಗಿಯೇ ಪ್ರಾಬ್ಲಂ… ಹೊಕ್ಕಳಿನವರೆಗೆ cleavage ತೋರಿಸಿದ ನಟಿ… ದೂರದ ವೇದಿಕೆ ಮೇಲೆ ಇದ್ದಳು… ಜನರಿಂದ ದೂರ. ಮೊಬೈಲ್ ಹಿಡಿದು, ಫೋಟೋ ತೆಗೆಯುತ್ತಾ ಮುಂದೆ ನುಗ್ಗಲು ಹವಣಿಸುತ್ತಿದ್ದ ಜನರನ್ನು ಹಿಂದಕ್ಕೆ ನೂಕಲು ಅಲ್ಲಿ ಸೆಕ್ಯುರಿಟಿನವರು ಇದ್ದರು. ಅವಳು ವೇದಿಕೆಯ ಮೇಲೆ ಪ್ರದರ್ಶಿಸುತ್ತಾ… ಈ ಲೋಕದ ಕಣ್ಣರಳಿಸಿ ನೋಡುತ್ತಾ ನಿಂತ ಗಂಡಸರ ಪರಿವೆಯೇ ಇಲ್ಲದಂತೆ ವರ್ತಿಸುತ್ತಾ ಇದ್ದಳು, ಹೋದಳು. ಅದೇ ರಸ್ತೆಯಲ್ಲಿ ಅವಳಂತೆ ಬಟ್ಟೆ ಧರಿಸಿ ಹೆಣ್ಣು ಮಕ್ಕಳು ಹೊರಟರೆ ರಕ್ಷಿಸಲು ಯಾರು ಇರುತ್ತಾರೆ? ಆ ಬಗೆಯ ಬಟ್ಟೆ ಹಾಕಿಕೊಳ್ಳದಿದ್ದ ಹೆಣ್ಣುಮಕ್ಕಳಿಗೇ ಕಷ್ಟವಿರುವಾಗ, ರಕ್ಷಣೆಯಿಲ್ಲದಿರುವಾಗ ಅರೆ ನಗ್ನರಾಗಿ ಬಂದರೆ ಹೇಗೆ? ಸಿಕ್ಸ್ ಪ್ಯಾಕ್ ಪ್ರದರ್ಶಿಸುತ್ತಾ ಅರೆ ನಗ್ನನಾಗಿ ಯಾವುದೇ ಹುಡುಗ ರಸ್ತೆಗಿಳಿದರೆ ಹೆಣ್ಣು ಮಕ್ಕಳು ಅವನನ್ನು ಮುಟ್ಟಲು, ಮುದ್ದಾಡಲು ಉದ್ರೇಕಗೊಂಡು ರೇಪ್ ಮಾಡಲು ಹೋಗುವುದಿಲ್ಲ… ಹೋದರೂ ನಾಲ್ಕು ಹುಡುಗಿಯರನ್ನು ದೂರಕ್ಕೆ ತಳ್ಳಿ ರಕ್ಷಿಸಿಕೊಳ್ಳುವ ದೈಹಿಕ ಸಾಮರ್ಥ್ಯ ಆ ಗಂಡಸಿಗೆ ಇರುತ್ತದೆ.. ರಸ್ತೆಯಲ್ಲಿ ಇರುವವರು, ಪೊಲೀಸರು ರಕ್ಷಿಸುತ್ತಾರೆ ಎಂದು ಹೆಣ್ಣು ಭಾವಿಸುವುದು ತಪ್ಪು. ಪೆಪ್ಪರ್ ಸ್ಪ್ರೇ ಹಿಡಿದು ಹೊರಟರೆ.. ಅದನ್ನು ಬಲಶಾಲಿ ಗಂಡಸು ಅಥವಾ ಗಂಡಸರ ಗುಂಪು ಕಿತ್ತುಕೊಳ್ಳಲು ಅಷ್ಟೇನು ಕಷ್ಟಪಡಬೇಕಿಲ್ಲ…’

‘ಹೀಗೆಲ್ಲಾ ಬರೆದಿದ್ರಾ? ಆಗ ಪೆಪ್ಪರ್ ಸ್ಪ್ರೇ ಇತ್ತಾ?’

‘ಇರಲಿಲ್ಲ.. ನಾನು ಹೀಗೇ ಬರೆದಿರಲಿಲ್ಲ… ಈ ಅರ್ಥ ಬರುವ ಹಾಗೆ ಬರೆದಿದ್ದೆ. ಉದ್ರೇಕಕಾರಿ ಜಾಹೀರಾತುಗಳ ದುಷ್ಪರಿಣಾಮದ ಬಗ್ಗೆ ಬರೆದಿದ್ದೆ.

ಜಾಹೀರಾತು ಅಥವಾ ಚಲನಚಿತ್ರಗಳಲ್ಲಿ ಉದ್ರೇಕಕಾರಿ ದೃಶ್ಯಗಳಲ್ಲಿ ನಟಿಸುವ ಹೆಣ್ಣಿಗೆ ಭದ್ರತೆಯಿರುತ್ತದೆ. ಆದರೆ ಅವುಗಳನ್ನು ನೋಡಿ ಹೆಣ್ಣನ್ನು ಒಂದು ವಸ್ತುವಿನಂತೆ ನೋಡುವ ವಿಚಾರ ಬೆಳೆಸಿಕೊಳ್ಳುವ ಸಾಧ್ಯತೆಯ ಬಗ್ಗೆ ಬರೆದಿದ್ದೆ. ಅದರಿಂದಾಗುವ ಕೇಡಿನ ಬಗ್ಗೆ, ಹದಿಹರೆಯದ ಗಂಡು ಮಕ್ಕಳಲ್ಲಿ ಕಾಮನೆ ಕೆರಳುವ ಹಾಗೂ ಅದರ ಪರಿಣಾಮವನ್ನು ಅಮಾಯಕ ಹೆಣ್ಣೊಬ್ಬಳು ಅನುಭವಿಸಬೇಕಾಗಬಹುದಾದ ವಿಪರ್ಯಾಸದ ಬಗ್ಗೆ ಬರೆದಿದ್ದೆ. ಹೆಚ್ಚುತ್ತಿರುವ rape by Juveniles ಬಗ್ಗೆ ನಾವು ಎಚ್ಚರ ವಹಿಸಬೇಕು ಹಾಗೂ ತಡೆಯಬೇಕು. ಅದಕ್ಕೆ ಮಾರಲ್ ಎಜುಕೇಷನ್ನಿನ ಅಗತ್ಯವಿದೆ. ಅದಕ್ಕೆ ಶಾಲೆಯ ಜೊತೆಗೆ ಮನೆಯ ವಾತಾವರಣ ಕೂಡ ಮುಖ್ಯ. ತಾಯಿ ತಂದೆಯ ಪಾತ್ರ ಹಿರಿದು. ಮಿಡಿಯಾ, ಮಾಸ್ ಮಿಡಿಯಾ ಹಾಗೂ ಮನೋರಂಜನೆಯ ಮಾಧ್ಯಮದ ಪಾತ್ರ ಕೂಡ ಕಡೆಗಣಿಸುವಂತಿಲ್ಲ.’

‘ಹೀಗೆಲ್ಲಾ ಬರೆದಿದ್ರಾ?’

‘ನೆನಪಿಲ್ಲ… ಈ ಅರ್ಥ ಬರುವ ಹಾಗೆ ಬರೆದಿದ್ದೆ…’

‘ಓ..’

‘ಮಗನಿಗೆ ಹೇಳಿಕೊಡಬೇಕು ಹೆಣ್ಣು ಮಕ್ಕಳಿಗೆ ಗೌರವಿಸಬೇಕು ಎಂದು. ತಂದೆ ಗೌರವಿಸಿ ತೋರಿಸಬೇಕು. ಇದಕ್ಕೆ ಮೀರಿ ಮನೆಯ ಮಗ, ಅಣ್ಣ, ತಮ್ಮ, ಗಂಡ ಹದ್ದುಮೀರಿ ನಡೆದರೆ ಅವರನ್ನು ಬೆಂಬಲಿಸದೆ ದೂರ ಮಾಡಬೇಕು. ಸಂಬಂಧ ಕಡಿದುಕೊಳ್ಳಬೇಕು.’

‘ಇದು ಕಷ್ಟ… Blood is thicker than water’

‘ಅದೇ… ಅದನ್ನು ಮೀರಬೇಕು. ಕಾನೂನು ಶಿಕ್ಷಿಸಬೇಕು. ಮನೆಯವರು ಹೊರ ಹಾಕಬೇಕು. ಸಮಾಜ ಧಿಕ್ಕರಿಸಬೇಕು. ಹೆಣ್ಣು ಜವಾಬ್ದಾರಿಯುತರಾಗಿ ನಡೆದುಕೊಳ್ಳಬೇಕು.’

‘ಕೊನೆಗೂ ಆ ಲೇಖನದಲ್ಲಿ ಏನು ಬರೆದಿದ್ರಿ ಅಂತ ಹೇಳಲೇ ಇಲ್ಲ!!!’

Leave a Reply