ಸಿಬಿಐ ನೂತನ ನಿರ್ದೇಶಕರಾಗಿ ಆಯ್ಕೆಯಾದ್ರು ಅಲೋಕ್ ವರ್ಮಾ, ಈ ಆಯ್ಕೆಗೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನಗೊಂಡಿರೋದೇಕೆ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ತೆರವಾಗಿದ್ದ ಸಿಬಿಐ ನಿರ್ದೇಶಕ ಸ್ಥಾನಕ್ಕೆ ದೆಹಲಿ ಪೊಲೀಸ್ ಆಯುಕ್ತ ಅಲೋಕ್ ವರ್ಮಾ ಅವರನ್ನು ನೇಮಿಸಲಾಗಿದೆ. ಈ ಆಯ್ಕೆ ನಡೆದ ಕೆಲವೇ ಹೊತ್ತಿನಲ್ಲಿ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯ್ಕೆ ಸಮಿತಿಯ ಭಾಗವಾಗಿದ್ದ ಖರ್ಗೆ ಅವರು ಆಯ್ಕೆ ಸಭೆಯಲ್ಲೇ ಲಿಖಿತ ರೂಪದಲ್ಲಿ ತಮ್ಮ ಭಿನ್ನಾಭಿಪ್ರಾಯವನ್ನು ದಾಖಲಿಸಿದ್ದರು.

ಕಳೆದ ವರ್ಷ ಡಿಸೆಂಬರ್ 2ರಂದು ಸಿಬಿಐ ನಿರ್ದೇಶಕರಾಗಿದ್ದ ಅನಿಲ್ ಸಿನ್ಹಾ ಅವರು ನಿವೃತ್ತಿಯಾದ ಹಿನ್ನೆಲೆಯಲ್ಲಿ ಈ ಹುದ್ದೆ ತೆರವಾಗಿತ್ತು. ಈಗ ನೂತನವಾಗಿ ಆಯ್ಕೆಯಾಗಿರುವ ಅಲೋಕ್ ವರ್ಮಾ ಈ ಹಿಂದೆ ಜಾಗೃತ ಪಡೆಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಆ ಮೂಲಕ ಈ ಹುದ್ದೆಗೆ ತಾಂತ್ರಿಕವಾಗಿ ಅರ್ಹತೆ ಪಡೆದುಕೊಂಡಿದ್ದರು. 1979ನೇ ಇಸವಿಯ ಐಪಿಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದ ಅಲೋಕ್ ವರ್ಮಾ, ತಿಹಾರ್ ಜೈಲಿನ ಪ್ರಧಾನ ನಿರ್ದೇಶಕರಾಗಿಯೂ ಕಾರ್ಯನಿರ್ವಸಿದ್ದರು.

ಸಿಬಿಐ ನಿರ್ದೇಶಕ ಹುದ್ದೆಯ ಆಯ್ಕೆ ಸಮಿತಿಯು ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೆಹೆರ್ ಅವರನ್ನೊಳಗೊಂಡಿತ್ತು. ಈ ಸಮಿತಿಯ ಭಾಗವಾಗಿದ್ದ ಖರ್ಗೆ ಅವರೇ ಈ ನೇಮಕದ ಬಗ್ಗೆ ಈಗ ಅಪಸ್ವರ ಎತ್ತಿದ್ದಾರೆ.

ಈ ಆಯ್ಕೆ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಖರ್ಗೆ, ‘ಈ ಆಯ್ಕೆ ವಿಷಯದಲ್ಲಿ ನನ್ನ ಅಭಿಪ್ರಾಯದ ಬಗ್ಗೆ ಪತ್ರದ ಮೂಲಕ ವಿವರಣೆ ನೀಡಿದ್ದೆ. ಈ ಸ್ಥಾನಕ್ಕೆ ಆಯ್ಕೆಯಾಗುವವರು ಎಲ್ಲ ರೀತಿಯ ಅರ್ಹತೆಯನ್ನು ಹೊಂದಿರಬೇಕು. ಸುದೀರ್ಘ ಸೇವೆ ಸಲ್ಲಿಸಿರಬೇಕು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಪಾಲಿಸಬೇಕು. ಸಿಬಿಐನಲ್ಲಿ ಭ್ರಷ್ಟಾಚಾರ ಪ್ರಕರಣಗಳನ್ನು ನಿಭಾಯಿಸಿರುವ ಅಧಿಕಾರಿ ಈ ಹುದ್ದೆಗೆ ಆಯ್ಕೆಯಾಗಬೇಕು ಎಂದು ತಿಳಿಸಿದ್ದೆ. ಆದರೆ ನನ್ನ ಸಲಹೆಯನ್ನು ಕಡೆಗಣಿಸಲಾಗಿದೆ’ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಕಳೆದ ಸೋಮವಾರ ಈ ಆಯ್ಕೆ ಸಮಿತಿ ಸಭೆ ಸೇರಿದ್ದ ಸಂದರ್ಭದಲ್ಲಿ ಖರ್ಗೆ ಅವರು ಸಿಬಿಐನಲ್ಲಿ ಕಾರ್ಯ ನಿರ್ವಹಿಸಿದ ವ್ಯಕ್ತಿಯೇ ಈ ಸ್ಥಾನಕ್ಕೆ ನೇಮಕವಾಗಬೇಕು ಎಂದು ವಾದಿಸಿದ್ದರು. ಆ ಮೂಲಕ ಸಿಬಿಐ ಹೆಚ್ಚುವರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಆರ್.ಕೆ ದತ್ತಾ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಬೇಕು  ಎಂದು ಹೇಳಿದ್ದರು. ಆದರೆ ಆಯ್ಕೆ ಸಮಿತಿ ಹೊರಗಿನವರನ್ನು ತಂದು ನಿರ್ದೇಶಕ ಸ್ಥಾನದಲ್ಲಿ ಕೂರಿಸಿದೆ ಎಂದು ಹೇಳಿದ್ದಾರೆ.

ಅಲೋಕ್ ವರ್ಮಾ ಮುಂದಿನ ಎರಡು ವರ್ಷಗಳ ಕಾಲ ಸಿಬಿಐ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ಐಟಿಬಿಪಿ ಪ್ರಧಾನ ನಿರ್ದೇಶಕರಾದ ಕೃಷ್ಣ ಚೌಧರಿ ಹಾಗೂ ಮಹಾರಾಷ್ಟ್ರದ ಡಿಜಿಪಿ ಎಸ್.ಸಿ ಮಾತುರ್ ಈ ಸ್ಥಾನಕ್ಕೆ ಅರ್ಹರಾಗಿದ್ದ ಇತರೆ ಅಭ್ಯರ್ಥಿಗಳಾಗಿದ್ದರು.

1 COMMENT

Leave a Reply