ಐಟಿ ದಾಳಿಗೆ ಸಿದ್ದರಾಮಯ್ಯ ಬೇಸರ, ಯಡಿಯೂರಪ್ಪನವರದು ಹಿತ್ತಾಳೆ ಕಿವಿ: ಸೋಮಣ್ಣ, ಜಲ್ಲಿಕಟ್ಟು ತೀರ್ಪು ಮುಂದೂಡಿದ ಸುಪ್ರೀಂ ಕೋರ್ಟ್

ಜಲ್ಲಿಕಟ್ಟು ಆಚರಣೆ ಮೇಲಿನ ನಿಷೇಧ ತೆರವುಗೊಳಿಸುವಂತೆ ಚೆನ್ನೈನ ಮರಿನಾ ಬೀಚ್ ಬಳಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ತಮಿಳು ಚಿತ್ರರಂಗದ ಖ್ಯಾತ ನಟರು ಸಾಥ್ ನೀಡಿದ್ದು, ಶುಕ್ರವಾರ ನಟ ಅಜಿತ್ ಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇವರ ಜತೆಗೆ ರಜಿನಿಕಾಂತ್, ಕಮಲ್ ಹಾಸನ್, ಧನುಶ್ ಸೇರಿದಂತೆ ಇತರೆ ತಾರೆಯರು ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. 

ಡಿಜಿಟಲ್ ಕನ್ನಡ ಟೀಮ್:

ಐಟಿ ದಾಳಿ ಬಗ್ಗೆ ಸಿಎಂ ಬೇಸರ

ಕಾಂಗ್ರೆಸ್ ಮುಖಂಡರು ಹಾಗೂ ಸಚಿವರ ಮನೆ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕಾಂಗ್ರೆಸ್ ಗುರಿಯಾಗಿಸಿಕೊಂಡು ದಾಳಿ ಮಾಡುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ನೋಟು ಅಮಾನ್ಯದ ನಂತರ ಇದನ್ನೇ ಮುಂದಾಗಿಟ್ಟುಕೊಂಡು ಕೇವಲ ಕಾಂಗ್ರೆಸ್ ಮುಖಂಡರ ಹಾಗೂ ಬೆಂಬಲಿಗರ ಮೇಲೆ ತೆರಿಗೆ ಇಲಾಖೆ ದಾಳಿ ಮಾಡುತ್ತಿದೆ. ಯಾರು ತಪ್ಪು ಮಾಡಿದರೂ ತಪ್ಪೇ. ಹಾಗೆಂದು ಕೇವಲ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿರುವುದನ್ನು ರಾಜಕೀಯ ಎಂದು ಹೇಳದೇ ಮತ್ತೇನು ಹೇಳುವುದು. ಬಿಜೆಪಿ ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ಸಿಗೆ ಲಾಭವಾಗುತ್ತದೋ ಬಿಡುತ್ತದೋ ಎಂಬುದು ಬೇರೆ ವಿಚಾರ. ಆದರೆ ಪಕ್ಷದ ಐದು ವರ್ಷಗಳ ಆಡಳಿತದಲ್ಲಿ ಮಾಡಿರುವ ಸಾಧನೆಗಳನ್ನು ಮುಂದಿಟ್ಟುಕೊಂಡು ನಾವು ಜನರ ಮುಂದೆ ಹೋಗುತ್ತೇವೆ’ ಎಂದರು.

ಯಡಿಯೂರಪ್ಪ ವಿರುದ್ಧ ಸೋಮಣ್ಣ ಬೇಸರ

ಯಡಿಯೂರಪ್ಪನವರದ್ದು ಹಿತ್ತಾಳೆ ಕಿವಿ. ಅದನ್ನು ಅವರು ಬದಲಿಸಿಕೊಳ್ಳಬೇಕು… ಇದು ಬಿಜೆಪಿ ನಾಯಕ ವಿ.ಸೋಮಣ್ಣ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧದ ಅಸಮಾಧಾನದ ಮಾತುಗಳು. ಇದರೊಂದಿಗೆ ಇಷ್ಟು ದಿನಗಳ ಕಾಲ ಯಡಿಯೂರಪ್ಪನವರ ಏಕಪಕ್ಷೀಯ ನೀತಿಯ ಬಗ್ಗೆ ಬುಸುಗುಟ್ಟುತ್ತಿದ್ದವರ ಸಾಲಿಗೆ ಹೊಸ ಸೇರ್ಪಡೆಯಾಗಿದೆ.

ಸದ್ಯದಲ್ಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದ ಬೆನ್ನಲ್ಲೇ, ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಸೋಮಣ್ಣ, ‘ಬಿಜೆಪಿ ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ. ಹೀಗಾಗಿ ನಾನೇಕೆ ಪಕ್ಷ ಬಿಡಬೇಕು. ನಾನು ಬಿಜೆಪಿ ತೊರೆಯುವುದಿಲ್ಲ. ಕೆಲವರು ಗುಲ್ಲು ಹಬ್ಬಿಸಿದ್ದಾರೆ. ಯಡಿಯೂರಪ್ಪ ಅವರು ನಮ್ಮ ನಾಯಕರು. ಆದರೆ ಅವರದು ಹಿತ್ತಾಳೆ ಕಿವಿ. ತಮ್ಮ ಜತೆಗಿರುವ ನಾಲ್ವರ ಮಾತನ್ನು ಮಾತ್ರ ಕೇಳುತ್ತಾರೆ. ಈ ಪ್ರವೃತ್ತಿಯನ್ನು ಅವರು ಬದಲಿಸಿಕೊಳ್ಳಬೇಕು. ಯಡಿಯೂರಪ್ಪನವರೆ ನಿಮ್ಮ ಮನೆ ಹತ್ರ ಇರುವ ನಾಲ್ಕು ಜನರನ್ನು ದೂರ ಮಾಡಿ’ ಎಂದು ತಮ್ಮ ಅತೃಪ್ತಿ ಹೊರ ಹಾಕಿದ್ದಾರೆ.

ನಿನ್ನೆಯಷ್ಟೇ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತೀರಾ ಎಂಬ ಪ್ರಶ್ನೆಗೆ ‘ಇಲ್ಲ ಎಂದು ಹೇಳಲಾಗುವುದಿಲ್ಲ’ ಎಂದು ಹೇಳುವ ಮೂಲಕ ಸೋಮಣ್ಣ ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದರು. ಇದರ ಬೆನ್ನಲ್ಲೇ ಸೋಮಣ್ಣ ಅವರು ಪಕ್ಷ ತೊರೆಯುವ ಬಗ್ಗೆ ಸಾಕಷ್ಟು ಸುದ್ದಿ ಹರಡಿತ್ತು. ಇದಕ್ಕೆ ಪಕ್ಷದ ವರಿಷ್ಠರು ಸಹ ರಾಜ್ಯ ನಾಯಕರಿಗೆ ಸೋಮಣ್ಣ ಯಾವುದೇ ಕಾರಣಕ್ಕೂ ಪಕ್ಷ ತೊರೆಯದಂತೆ ನೋಡಿಕೊಳ್ಳಿ ಎಂಬ ಸೂಚನೆ ರವಾನಿಸಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಶುಕ್ರವಾರ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರು ಸೋಮಣ್ಣ ಜತೆ ಮಾತುಕತೆ ನಡೆಸಿ ಮನವೊಲೈಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಮೇಕೆದಾಟು ಅಣೆಕಟ್ಟಿನ ಕಾನೂನು ತೊಡಕು ನಿವಾರಣೆಗೆ ಮುಂದಾದ ಸರ್ಕಾರ

ಕೆಆರ್ ರ್ಎಸ್ ಜಲಾಶಯಕ್ಕೆ ಪರ್ಯಾಯವಾಗಿ ಮೇಕೆದಾಟುಬಳಿ ಆಣೆಕಟ್ಟು ನಿರ್ಮಾಣ ಮಾಡಲು ಇರುವ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿಗಳು ಮಾರ್ಚ್ ತಿಂಗಳಲ್ಲಿ ಮಂಡಿಸಲಿರುವ 2017-18ರ ಮುಂಗಡ ಪತ್ರದಲ್ಲಿ ಈ ಯೋಜನೆ ಪ್ರಸ್ತಾಪಿಸಿ ಹಣ ಮೀಸಲಿಡಲು ನಿರ್ಧರಿಸಿದ್ದಾರೆ. ಅದಕ್ಕೂ ಮುನ್ನ ಇದಕ್ಕೆ ಎದುರಾಗಿರು ಕಾನೂನು ತೊಡಕು ಬಗೆಹರಿಸಲು ಕಾನೂನು ಸಚಿವ ಟಿ.ಬಿ ಜಯಚಂದ್ರ ಹಾಗೂ ನೀರಾವರಿ ಸಚಿವ ಎಂಬಿ ಪಾಟೀಲ್ ನಾಳೆ ನವದೆಹಲಿಗೆ ತೆರಳಲಿದ್ದು, ಫಾಲಿ ಎಸ್ ನಾರಿಮನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಹೊಸಬರ ವಿರುದ್ಧ ಈಶ್ವರಪ್ಪ ವಾಗ್ದಾಳಿ

ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ದಿನೇ ದಿನೇ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಪಕ್ಷಕ್ಕೆ ಸೇರ್ಪಡೆಯಾದ ಹೊಸಬರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಪಕ್ಷದಲ್ಲಿ ಸದ್ಯ ಎದ್ದಿರುವ ಸಮಸ್ಯೆಗೆ ಹೊಸಬರೆ ಕಾರಣ’ ಎಂದು ದೂರಿದ್ದಾರೆ. ‘ಪಕ್ಷವನ್ನು ಕಟ್ಟಿ ಬೆಳೆಸಿದವರ ಬಗ್ಗೆ ಕೆಲವರಿಗೆ ಗೊತ್ತೇ ಇಲ್ಲ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಶ್ಯಾಮ ಪ್ರಸಾದ್ ಮುಖರ್ಜಿ ಅವರು ಯಾರೆಂದು ಕೆಲವರಿಗೆ ಪರಿಚಯವೇ ಇಲ್ಲ. ಅವರ ಭಾವ ಚಿತ್ರ ಗುರುತಿಸಲು ಸಾಧ್ಯವಾಗುವುದಿಲ್ಲ. ಪಕ್ಷಕ್ಕಾಗಿ 30 ವರ್ಷಗಳ ಕಾಲ ಶ್ರಮಿಸಿದವರನ್ನು ಈಗ ಮೂಲೆ ಗುಂಪು ಮಾಡಲಾಗುತ್ತಿದೆ. ಪಕ್ಷ ಸರಿಯಾಗಿ ಸಂಘಟನೆಯಾಗಬೇಕು ಎನ್ನುವುದು ನನ್ನ ಉದ್ದೇಶ. ಯಡಿಯೂರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಯಾಕೆ ಹೀಗೆ ವರ್ತಿಸುತ್ತಿದ್ದಾರೊ ಗೊತ್ತಿಲ್ಲ’ ಎಂದು ಯಡಿಯೂರಪ್ಪ ನವರ ವಿರುದ್ಧವೂ ಕಿಡಿ ಕಾರಿದರು.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ಇಡೀ ದೇಶದ ಗಮನವನ್ನೇ ಸೆಳೆದಿರುವ ಜಲ್ಲಿಕಟ್ಟು ನಿಷೇಧದ ಕುರಿತ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಸದ್ಯ ಈ ಆಚರಣೆ ನಿಷೇಧವನ್ನು ತೆರವುಗೊಳಿಸಬೇಕೆಂದು ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆ ಗಣನೀಯವಾಗಿ ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲಿ ಜಲ್ಲಿಕಟ್ಟು ಕುರಿತಾದ ತೀರ್ಪನ್ನು ಈಗಲೇ ಪ್ರಕಟಿಸಬಾರದು ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್, ತೀರ್ಪನ್ನು ಒಂದು ವಾರಕ್ಕೆ ಮುಂದೂಡಿದೆ. ಇದೇ ವೇಳೆ ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಜಲ್ಲಿಕಟ್ಟು ಬಗ್ಗೆ ಸುಗ್ರೀವಾಜ್ಞೆ ಕರಡು ರಚಿಸಿ, ಆ ಮೂಲಕ ಜಲ್ಲಿಕಟ್ಟು ಆಚರಣೆ ಮಾಡಲಾಗುವುದು ಎಂಬ ಭರವಸೆಯನ್ನು ನೀಡಿದರು. ಆದರೂ ತಮಿಳುನಾಡಿನಲ್ಲಿ ಪ್ರತಿಭಟನೆಕಾರರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
  • ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಕೆ.ಎಸ್.ರಂಗಪ್ಪ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿದ್ದಾರೆ. 2018ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ವೇಳೆ ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ರಂಗಪ್ಪನವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ. ಮುಂದಿನ ವರ್ಷದ ಚುನಾವಣೆಗೆ ಜೆಡಿಎಸ್ ಈಗಾಗಲೇ 91 ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಪಟ್ಟಿ ಬಿಡುಗಡೆ ಮಾಡಿ ಅಭ್ಯರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಚುನಾವಣಾ ಸಮರಕ್ಕೆ ಸಜ್ಜಾಗಲು ಸೂಚನೆ ನೀಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
  • ಪೌರ ಕಾರ್ಮಿಕ ಮಕ್ಕಳಿಗೆ ರಾಜ್ಯದ ಪ್ರತಿಷ್ಠಿತ ಶಾಲೆಗಳಲ್ಲಿ ಶೇ.2 ರಷ್ಟು ಮೀಸಲಾತಿ ನಿಗದಿಪಡಿಸಲು ಸರ್ಕಾರ ಮುಂದಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದಲೇ ಇದಕ್ಕೆ ತಗಲುವ ವೆಚ್ಚವನ್ನು ಭರಿಸಲು ಸರ್ಕಾರ ನಿರ್ಧರಿಸಿದೆ. ‘ಆರ್ ಇಟಿ ಯೋಜನೆ ಅಡಿಯಲ್ಲಿ ಶೇ.2ರಷ್ಟು ಪ್ರವೇಶವನ್ನು ಪೌರ ಕಾರ್ಮಿಕ ಮಕ್ಕಳಿಗೆ ಮೀಸಲಿಡುವಂತೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಆಂಜನೇಯ ತಿಳಿಸಿದ್ದಾರೆ.
  • ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಅಡ್ಡ ಮತದಾನ ಮಾಡಿ ಜೆಡಿಎಸ್ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಶಾಸಕ ಕೆ.ಗೋಪಾಲಯ್ಯ ಈಗ ತಪ್ಪೊಪ್ಪಿಗೆ ಪತ್ರವನ್ನು ನೀಡಿದ್ದಾರೆ. ಶುಕ್ರವಾರ ಜೆಡಿಎಸ್ ಶಿಸ್ತು ಪರಿಶೀಲನಾ ಸಮಿತಿ ಅಧ್ಯಕ್ಷ ಎ.ಪಿ.ರಂಗನಾಥ್ ಅವರನ್ನು ಬೇಟಿ ಮಾಡಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಂಗನಾಥ್, ಗೋಪಾಲಯ್ಯನವರು ತಪ್ಪೊಪ್ಪಿಗೆ ಪತ್ರದ ಜತೆಗೆ ತಮ್ಮ ತಪ್ಪಿಗೆ ಪಶ್ಚಾತಾಪ ಪಟ್ಟಿದ್ದಾರೆ. ಅವರಿಗೆ ಅದಕ್ಕಿಂತ ದೊಡ್ಡ ಶಿಕ್ಷೆ ಬೇಕಿಲ್ಲ ಎಂದು ತಿಳಿಸಿದ್ದಾರೆ.
  • ರಾಯಣ್ಣ ಬ್ರಿಗೇಡ್ ವಿಷಯಕ್ಕೆ ಸಂಬಂಧಿಸಿದಂತೆ ಸದ್ಯ ರಾಜ್ಯ ಬಿಜೆಪಿ ಎರಡು ಭಾಗವಾಗಿದೆ. ಈ ಹಂತದಲ್ಲಿ ಶನಿವಾರ ಬಿಜೆಪಿ ಕಾರ್ಯಕಾರಿಣಿ ಸಭೆ ಆರಂಭವಾಗಲಿದೆ. ಈ ಸಭೆಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಬೆಂಬಲಿಗರು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.

Leave a Reply