‘ಬೋಧನೆ ಹೊರತಾಗಿ ಶಿಕ್ಷಕರಿಗೆ ಹೆಚ್ಚುವರಿ ಜವಾಬ್ದಾರಿ ನೀಡಬಾರ್ದು’- ಪ್ರಧಾನಿ ನೇಮಿತ ಸಮಿತಿ ಶಿಫಾರಸ್ಸು, ಇನ್ನಾದರೂ ತಪ್ಪುವುದೇ ಶಿಕ್ಷಕರ ಬವಣೆ?

ಡಿಜಿಟಲ್ ಕನ್ನಡ ಟೀಮ್:

‘ಶಿಕ್ಷಕರು ಕೇವಲ ಬೋಧನೆಯತ್ತ ಮಾತ್ರ ಗಮನಹರಿಸಬೇಕು… ಅವರಿಗೆ ಯಾವುದೇ ಪಠ್ಯೇತ್ತರ ಜವಾಬ್ದಾರಿ ನೀಡಬಾರದು…’ ಇದು ಪ್ರಧಾನಿ ನರೇಂದ್ರ ಮೋದಿ ಅವರು ನೇಮಿಸಲ್ಪಟ್ಟ ಸಮಿತಿ ನೀಡಿರುವ ವರದಿಯ ಪ್ರಮುಖ ಅಂಶ. ಸಮಿತಿಯ ಈ ಶಿಫಾರಸ್ಸಿನಿಂದಾದರೂ ಇನ್ನು ಮುಂದೆ ಶಿಕ್ಷಕರ ಬವಣೆ ತಪ್ಪುವುದೇ ಎಂಬ ನಿರೀಕ್ಷೆ ಹುಟ್ಟುಕೊಂಡಿದೆ.

ಶಾಲಾ ಶಿಕ್ಷಕರ ಗುಣಮಟ್ಟ ಹೆಚ್ಚಿಸುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಕಾರ್ಯದರ್ಶಿಗಳ ಸಮಿತಿಯನ್ನು ರಚಿಸಿ ವರದಿ ನೀಡುವಂತೆ ಸೂಚಿಸಿದ್ದರು. ಈ ಸಮಿತಿ ಅಧ್ಯಯನ ನಡೆಸಿ ತನ್ನ ವರದಿಯನ್ನು ಸಲ್ಲಿಸಿದ್ದು, ‘ಸದ್ಯ ಶಾಲಾ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದ ಜತೆಗೆ ಅವರು ಮಕ್ಕಳ ಶುಲ್ಕ ಸಂಗ್ರಹಿಸುವುದು, ಲೆಕ್ಕಿಗರ ಜವಾಬ್ದಾರಿ ಯಿಂದ ಶಾಲಾ ಬಸ್ ಗಳಲ್ಲಿ ತೆರಳಿ ಮಕ್ಕಳನ್ನು ಸುರಕ್ಷತವಾಗಿ ಮನೆಗೆ ಬಿಡುವಂತಹ ಇನ್ನಿತರ ಬೋಧಕೇತರ ಸಿಬ್ಬಂದಿಗಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಇದರಿಂದ ಅವರ ಮೂಲ ಕರ್ತವ್ಯದ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಅಭಿಪ್ರಾಯ ಪಟ್ಟಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ತಿಳಿಸಿದೆ.

ಈ ಹೆಚ್ಚುವರಿ ಜವಾಬ್ದಾರಿಗಳು ಶಿಕ್ಷಕರ ಮೇಲಿನ ಹೊರೆಯನ್ನು ಹೆಚ್ಚಿಸುತ್ತಿದ್ದು, ಅದು ಫಲಿತಾಂಶದ ಮೇಲೂ ಪರಿಣಾಮ ಬೀರುತ್ತಿದೆ. ಇದು ಕೇವಲ ಸರ್ಕಾರಿ ಶಾಲೆಗಳ ಶಿಕ್ಷಕರ ಪರಿಸ್ಥಿತಿಯಲ್ಲ, ಖಾಸಗಿ ಶಾಲೆಗಳಲ್ಲೂ ಶಿಕ್ಷಕರ ಮೇಲೆ ಇದೇ ರೀತಿಯಾದ ಹೆಚ್ಚುವರಿ ಜವಾಬ್ದಾರಿ ಹೇರಲಾಗುತ್ತಿದೆ. ಇದೇ ಕಾರಣಕ್ಕಾಗಿಯೇ ಕಳೆದ ವರ್ಷ ಸಿಬಿಎಸ್ಇ ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲಾ ಶಾಲೆಗಳಿಗೂ ಸೂಚನೆಯನ್ನು ಹೊರಡಿಸಿ, ‘ಬೋಧಕೇತ್ತರ ಕೆಲಸಗಳನ್ನು ಶಿಕ್ಷಕರ ಮೇಲೆ ಹೇರಬಾರದು’ ಎಂದು ತಿಳಿಸಿತ್ತು.

2009ರ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಶಾಲಾ ಶಿಕ್ಷಕರು ಬೋಧನೆಯ ಜತೆಗೆ ಜನಗಣತಿ, ವಿಪತ್ತು ಹಾಗೂ ಚುನಾವಣೆ (ಕೇವಲ ಮತದಾನ ಹಾಗೂ ಮತಏಣಿಕೆ ದಿನದಂದು) ಕೆಲಸಗಳಿಗೆ ಮಾತ್ರ ಬಳಸಿಕೊಳ್ಳಬಹುದು ಎಂಬ ಅವಕಾಶ ನೀಡಿದೆ. ಆದರೆ ಇವುಗಳ ಜತೆಗೆ ಕೆಲವು ಶಾಲೆಗಳಲ್ಲಿ ಮಕ್ಕಳ ಪಾಲನೆ, ಅವರಿಗೆ ಆಹಾರ ತಯಾರಿಸುವಂತಹ ಕೆಲಸಗಳನ್ನು ಶಿಕ್ಷಕರೇ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಶಿಕ್ಷಕರ ಮೇಲಿನ ಈ ಒತ್ತಡದ ಬಗ್ಗೆ ಅಧ್ಯಯನ ನಡೆಸಲು ಮಾನವ ಸಂಪನ್ಮೂಲ ಇಲಾಖೆ ಕಳೆದ ವರ್ಷ ನಿರ್ಧರಿಸಿತ್ತು. ಇನ್ನು ಶಿಕ್ಷಕರಲ್ಲಿ ಸಂಶೋಧನೆ, ಯೋಜನೆ ಮತ್ತು ಶಿಕ್ಷಣ ನಿರ್ವಹಣೆಯ ಕೌಶಲ್ಯ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ರಾಷ್ಟ್ರೀಯ ವಿಶ್ವವಿದ್ಯಾಲಯ ಶಿಕ್ಷಣ ಮತ್ತು ಆಡಳಿತ ಸಂಸ್ಥೆಗೆ ಮಾನವ ಸಂಪನ್ಮೂಲ ಇಲಾಖೆ ಸೂಚಿಸಿತ್ತು.

ಈಗ ಪ್ರಧಾನಿ ಅವರು ನೇಮಿಸಿದ್ದ ಸಮಿತಿ ತನ್ನ ವರದಿಯನ್ನು ನೀಡಿದೆ. ಈ ವರದಿಯಲ್ಲಿನ ಶಿಫಾರಸ್ಸುಗಳ ಬಗ್ಗೆ ಮಾನವ ಸಂಪನ್ಮೂಲ ಇಲಾಖೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದೆ. ಇದರಿಂದ ಇನ್ನು ಮುಂದಾದರೂ ಶಾಲಾ ಶಿಕ್ಷಕರು ಇತರೆ ಕೆಲಸಗಳ ಜವಾಬ್ದಾರಿಯಿಂದ ಮುಕ್ತರಾಗಿ ಬೋಧನೆಯತ್ತ ಹೆಚ್ಚು ಗಮನಹರಿಸುವಂತಾಗುವುದೇ ಎಂಬುದನ್ನು ಕಾದು ನೋಡಬೇಕು.

Leave a Reply