ದೇವರಿಗೆ ಧನ್ಯವಾದ ಹೇಳಲು ಕಲಿಯುತ್ತಿದ್ದ ಚಿಣ್ಣರ ಬದುಕನ್ನು ಸಾವು ಸಹಿಸದಾಯಿತು…

ಚೈತನ್ಯ ಹೆಗಡೆ

ಉತ್ತರ ಪ್ರದೇಶದ ಎಟಾ ಎಂಬಲ್ಲಿ ನಿನ್ನೆ ಬೆಳಗ್ಗೆ ಎಂಟು ಗಂಟೆಗೆ ಶಾಲೆಯ ಬಸ್ಸು ಮತ್ತು ಟ್ರಕ್ಕು ಮುಖಾಮುಖಿ ಗುದ್ದಿಕೊಂಡು 12 ಮಕ್ಕಳು ತೀರಿಹೋದರೆಂಬುದು ಸುದ್ದಿ. ಬಸ್ಸು ಚಾಲಕನ ಸಾವನ್ನೂ ಸೇರಿಸಿ ಮೃತರ ಸಂಖ್ಯೆ 15ಕ್ಕೆ ಏರಿದೆ ಎನ್ನುತ್ತದೆ ಶುಕ್ರವಾರದ ವರದಿ.

ಇದು ಸಂಖ್ಯೆಗಳಲ್ಲಿ ಕಟ್ಟಿಡಬಹುದಾದ ದುಃಖವಲ್ಲ…

ಎಟಾ- ಅಲಿಗಂಜ್ ರಸ್ತೆಯಲ್ಲಿ ಬಸ್ಸು ಓಡುತ್ತಿತ್ತು. ಶಾಲೆ ಬಸ್ಸು ಎಂದಮೇಲೆ ಕಿಕ್ಕಿರಿದು ತುಂಬಿಸಲಾಗಿತ್ತು ಎಂಬ ವಾಕ್ಯವನ್ನು ಪ್ರತ್ಯೇಕವಾಗಿ ಹೇಳುವುದು ಬೇಡವಷ್ಟೆ. ಎಂಟು ವರ್ಷದ ಅಲೋಕನಿಗೆ ಪಕ್ಕ ಕುಳಿತ ಗೆಳೆಯ ಕಿಶನ್ ಪದ್ಯವೊಂದನ್ನು ಹೇಳುತ್ತಿದ್ದ….

ಥ್ಯಾಂಕ್ಯೂ ಗಾಂಡ್ ಫಾರ್ ದಿ ವರ್ಲ್ಡ್ ಸೋ ಸ್ವೀಟ್/ ಥ್ಯಾಂಕ್ಯೂ ಗಾಡ್ ಫಾರ್ ಫುಡ್ ವಿ ಈಟ್/ ಥ್ಯಾಂಕ್ಯೂ ಗಾಡ್ ಫಾರ್ ಬರ್ಡ್ ದ್ಯಾಟ್ ಸಿಂಗ್/ ಥ್ಯಾಂಕ್ಯೂ ಗಾಡ್ ಫಾರ್ ಎವರಿಥಿಂಗ್…

ದೇವರೇ ನೀ ಕೊಟ್ಟ ಜಗ ಎಷ್ಟೊಂದು ಸೊಗಸು/ ಹಸಿವನಾರಿಸಲಿಹುದು ಏನೆಲ್ಲ ತಿನಿಸು/ ಪುಳಕ ನೀನಿಟ್ಟಿರುವ ಹಕ್ಕಿ ಹಾಡಿಗೆ/ ಹರುಷದಿ ಸ್ಮರಿಸುವೆ ನಿನ್ನೆಲ್ಲ ಕೊಡುಗೆ…

ದೇವರು ಈ ಕವಿತೆಯನ್ನು ಒಪ್ಪಿಸಿಕೊಂಡು ಅವಸರದಿಂದ ಮುಂದೆ ಹೊರಡಲು ಅನುವಾದನೋ ಎಂಬಂತೆ ಮರುಕ್ಷಣದಲ್ಲಿ ಆ ಚಿಣ್ಣರ ಜಗತ್ತೇ ಪತರಗುಟ್ಟಿತು.

ಅದೇ ಮಾರ್ಗದಲ್ಲಿ ಸೈಕಲ್ಲಿನಲ್ಲಿ ಶಾಲೆಗೆ ಹೊರಟಿದ್ದ ಸಹೋದರಿಯರಿಬ್ಬರನ್ನು ತಪ್ಪಿಸುವ ಕಾರಣಕ್ಕೆ ಎದುರಿನ ಟ್ರಕ್ ತುಸು ತನ್ನ ಪಥ ಬದಲಾಯಿಸಬೇಕಾಯಿತಂತೆ. ಅಷ್ಟಾಗಿ ಅದು ಆ ಸಹೋದರಿಯರನ್ನೂ ಉಳಿಸಲಿಲ್ಲ, ಮೇಲಿಂದ ಬಸ್ಸಿಗೆ ಗುದ್ದುವುದನ್ನೂ ತಪ್ಪಿಸಲಾಗಿಲ್ಲ. ಅಷ್ಟೇ… ಆನಂದಲೋಕವೊಂದು ಅಸುನೀಗಿದೆ. ಕವಿತೆ ಹೇಳುತ್ತಿದ್ದ ಕಿಶನ್ ಸತ್ತ ಚಿಣ್ಣರ ಪೈಕಿ ಒಬ್ಬ. ಗಾಯಗೊಂಡು ಬದುಕುಳಿದಿರುವ ಅಲೋಕ ಈ ಕವಿತೆಯನ್ನಿಟ್ಟುಕೊಂಡು ಅದ್ಯಾವ ದೇವರಿಗೆ ಕೃತಜ್ಞತೆ ಹೇಳುವುದಕ್ಕೆ ಶಕ್ತನಾಗುವುನೋ ಗೊತ್ತಿಲ್ಲ. ತನ್ನ ಬರ್ತಡೆ ಅಂತ ಹಸಿರಂಗಿ ಉಟ್ಟು, ಗೆಳೆಯರಿಗೆ ಕೊಡಲು ತಿಂಡಿ ಡಬ್ಬಿ ತುಂಬಾ ಚಾಕಲೇಟ್ ತುಂಬಿಕೊಂಡಿದ್ದ ಹತ್ತು ವರ್ಷದ ಪ್ರೇರಣಾ ಆಸ್ಪತ್ರೆಯಲ್ಲಿದ್ದಾಳೆ. ಆಕೆ ಜೀವಮಾನದಲ್ಲಿ ಚಾಕಲೇಟು ಸವಿದಾಳಾ, ಮುಂದೆ ಹುಟ್ಟಿದ ದಿನ ಆಚರಿಸುವಾಗ ಖುಷಿಯ ಜಾಗದಲ್ಲಿ ಆವರಿಸಿಕೊಳ್ಳುವುದು ಭಯ- ವಿಷಾದಗಳ ಮೋಡವಾ… ಗೊತ್ತಿಲ್ಲ.

‘ಜಜ್ಜಿಹೋದ ಮುಖದ ಮಗನ ಮೃತದೇಹವನ್ನು ನೋಡಲೇ ಆಗುತ್ತಿಲ್ಲ, ಅವನ ಪುಸ್ತಕಗಳನ್ನು ಕೊಡಿ, ಇಟ್ಟುಕೊಳ್ತೇನೆ’ ಅಂತ ಬೊಬ್ಬೆಯಿಟ್ಟಿದ್ದಾನೆ ಐದೂವರೆ ವರ್ಷದ ವಿಕಾಸನ ತಂದೆ ರಾಂ ಸೇವಕ್.

ಅಭಿಷೇಕನಿಗೆ ಮಾತನಾಡಲೇ ಆಗುತ್ತಿಲ್ಲ. ತಂಗಿಯರಾದ ಶಾಲಿನಿ- ರಾಧಿಕಾಳನ್ನು ಶಾಲೆವರೆಗೆ ಬಿಟ್ಟು ಬಾ ಎಂದಿದ್ದರಂತೆ ಮನೆಯವರು. ಅದೇಕೋ ವ್ಯಸ್ತವಾಗಿದ್ದ ಹುಡುಗ ಒಲ್ಲೆ ಅಂದಿದ್ದಕ್ಕೆ ಇವರು ಬಸ್ಸು ಹತ್ತಿದರು. ಅದೊಂದು ಪಶ್ಚಾತಾಪ ಈ ಹುಡುಗನನ್ನು ಬದುಕಿನುದ್ದಕ್ಕೂ ಕಾಡಿಬಿಟ್ಟೀತಾ?

ಸನ್ನಿ ಎಂಬ ಹುಡುಗನ ತಂದೆ-ತಾಯಿ ನಾಲ್ಕು ವರ್ಷಗಳ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದರು. ಅಜ್ಜ-ಅಜ್ಜಿ ಬಳಿ ಇದ್ದ ಈ ಹುಡುಗ ತಂಗಿಗೆ ಟಾಟಾ ಹೇಳಿ ಬಸ್ಸು ಹತ್ತಿದ್ದ. ಸಾವು ಈತನನ್ನೂ ಅಪಘಾತದ ರೂಪದಲ್ಲೇ ಬೇಟೆಯಾಡಬೇಕೇ? ಅಜ್ಜ-ಅಜ್ಜಿಗೆ ಮಾತೇ ತೋಚುತ್ತಿಲ್ಲ.

ಕಿಂಟರ್ ಗಾರ್ಡನ್ನಿನಿಂದ ಎಂಟನೇ ಕ್ಲಾಸಿನವರೆಗೆ ಇದ್ದ ಚಿಣ್ಣರ ಬದುಕಲ್ಲಿ ಗುರುವಾರ ಬೀಸಿದ ಪ್ರವಾಹವಿದು. ನಿಜ, ಎಚ್ಚರಿಕೆಯಿಂದ ಗಾಡಿ ಓಡಿಸಬೇಕಿತ್ತು ಅಂತ ನಮ್ಮ ತರ್ಕಕ್ಕೆ ಸಿಗಬಹುದಾದ ಮಾತೊಂದನ್ನು ಹೇಳಬಲ್ಲೆವು ಎಂಬುದನ್ನು ಬಿಟ್ಟರೆ ಮತ್ತೇನಾಗದು. ತೀರ ಚಳಿ ಇರುವುದರಿಂದ ಮೂರು ದಿನ ಶಾಲೆ ನಡೆಸುವುದು ಬೇಡವೆಂಬ ಜಿಲ್ಲಾಡಳಿತದ ಸೂಚನೆ ಹೊರತಾಗಿಯೂ ಶಾಲೆ ತೆರೆದಿದ್ದೇಕೆ ಎಂದು ಆಕ್ರೋಶಗೊಳ್ಳಬಹುದಾದರೂ, ಅವೆಲ್ಲ ಕ್ಷುಲ್ಲಕ ಎನಿಸಿಬಿಡುತ್ತವೆ. ಆದರೂ ದುರಂತದ ಹಿನ್ನೆಲೆಯಲ್ಲಿ ಚಿಣ್ಣರ ಕುಟುಂಬದ ಹಲವರ ಧ್ವನಿಯನ್ನು ಹಿಡಿದಿಡುತ್ತ ಇಂಡಿಯನ್ ಎಕ್ಸ್ಪ್ರೆಸ್ ಕಟ್ಟಿಕೊಟ್ಟ ವರದಿ ಓದುತ್ತಿದ್ದರೆ, ಇವೆಲ್ಲವನ್ನೂ ದಾಖಲಿಸದೇ ಇರಲಾಗಲಿಲ್ಲ.

ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 25ಕ್ಕೂ ಹೆಚ್ಚು ಮಕ್ಕಳ ಪರವಾಗಿ ನಮ್ಮದೂ ಪ್ರಾರ್ಥನೆ ಇರಲಿ.

Leave a Reply