ಮೆರಿಲ್ ಸ್ಟ್ರಿಪ್ ವರ್ಸಸ್ ಟ್ರಂಪ್ ಸುದ್ದಿಯಾಗುತ್ತಿರುವಾಗ ಸಿನಿಮಾ ಮೂಲಕ ಅಮೆರಿಕವನ್ನು ಬೆಸೆದ ಸಿಡ್ನಿ ಪೊಯಟರ್ ಕಥೆ

author-ssreedhra-murthyಹಾಲಿವುಡ್ ಜಗತ್ತಿನ ಸಿನಿಮಾದ ಸೌಂದರ್ಯದ ಕಲ್ಪನೆಯೇ ಬದಲಾಯಿಸಿತು ಎನ್ನುವ ಗಂಭೀರ ಆರೋಪವನ್ನು ಜಾಗತಿಕ ಮಟ್ಟದಲ್ಲಿ ಚಿಂತಕರು ಮಾಡುತ್ತಲೇ ಬಂದಿದ್ದಾರೆ. ತೆಳ್ಳಗೆ-ಬೆಳ್ಳಗೆ ಇರುವುದೇ ಸೌಂದರ್ಯ ಎನ್ನುವ ಕಲ್ಪನೆ ಹಾಲಿವುಡ್‍ನಿಂದ ಬಾಲಿವುಡ್ ಪ್ರವೇಶಿಸಿ ಮುಂದೆ ಭಾರತೀಯ ಚಿತ್ರರಂಗ, ಕೊನೆಗೆ ಕಿರುತೆರೆ ಧಾರಾವಾಹಿಗಳನ್ನೂ ದಾಟಿ ರಿಯಾಲಿಟಿ ಶೋಗಳನ್ನು ಕೂಡ ಆಕ್ರಮಿಸಿದೆ. ಗೂನು ಬೆನ್ನಿನ ಮೆಳ್ಳಗಣ್ಣಿನ ಗಾಯಕಿಯೊಬ್ಬಳು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಉದಾಹರಣೆ ಭಾರತೀಯ ಟಿ.ವಿ.ಲೋಕದಲ್ಲೇ ಇಲ್ಲ. ಆದರೆ ಹಾಲಿವುಡ್‍ನಲ್ಲೇ ಇಂತಹ ಸೌಂದರ್ಯದ ಕಲ್ಪನೆಗೆ ಸವಾಲು ಎಸೆದು ಗೆದ್ದ ಕಲಾವಿದ ಸಿಡ್ನಿ ಪೊಯಟಿರ್. ಅವರು ಚಿತ್ರರಂಗಕ್ಕೆ ಬರುವ ಮೊದಲು ಕೆರೆಬಿಯನ್ನರು, ಬ್ಲಾಕಿಗಳು ರೌಡಿಗಳ ತಂಡದ ನಾಯಕರೋ ಸದಸ್ಯರೋ ಆಗಿ, ಗಲಭೆಕೋರರಾಗಿ, ಜಾಜ್ ಗಾಯಕರ ಗುಂಪಿನವರಾಗಿ ಮಾತ್ರ ಪಾತ್ರಗಳನ್ನು ನಿರ್ವಹಿಸುವುದು ಸಾಧ್ಯವಿತ್ತು. ಪೊಯಟಿರ್ ಹಾಲಿವುಡ್‍ನಲ್ಲಿ ಪೂರ್ಣ ಪ್ರಮಾಣದ ಬೇಡಿಕೆಯ ನಾಯಕರಾದರು, ಆಸ್ಕರ್ ಗೆದ್ದ ಮೊದಲ ಬ್ಲಾಕಿ ಎನ್ನಿಸಿಕೊಂಡರು. ವಿನ್ಸಂಟ್ ಕ್ಯಾಂಬಿ ಗುರುತಿಸಿರುವಂತೆ ಅವರು ಎಂದಿಗೂ ಚಿತ್ರಗಳನ್ನು ಮಾಡಲಿಲ್ಲ. ಮೈಲುಗಲ್ಲುಗಳನ್ನು ಸ್ಥಾಪಿಸುತ್ತಾ ಸಾಗಿದರು.  1965ರಲ್ಲಿ ಅಮೆರಿಕಾದಲ್ಲಿ ಜನಾಂಗೀಯ ದ್ವೇಷದ ವಿರುದ್ದದ ಚಳುವಳಿ ತೀವ್ರವಾಗಿದ್ದ ಕಾಲ,  ‘ದಿ ಪ್ಯಾಚ್ ಆಫ್ ದಿ ಬ್ಲ್ಯೂ’ ಚಿತ್ರದಲ್ಲಿ ಪೊಯಟರ್ ಶ್ವೇತವರ್ಣದ ನಾಯಕಿಯನ್ನು ಚುಂಬಿಸುವ ದೃಶ್ಯವಿತ್ತು. ಇತಿಹಾಸಕಾರರು ಗುರುತಿಸಿದಂತೆ ಅದು ನಿಜವಾದ ಕ್ರಾಂತಿಯಾಗಿತ್ತು. 1968ರ ಏಪ್ರಿಲ್ 4ರಂದು ಮಾರ್ಟಿನ್ ಲೂಥರ್ ಕಿಂಗ್ ಅವರ ಹತ್ಯೆಯಾಯಿತು. 8ರಂದು ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭವಿತ್ತು. ಅದರ ವಿರುದ್ದ ಹೋರಾಡಿ ಮುಂದೂಡುವಂತೆ ಮಾಡುವಲ್ಲಿ ಪೊಯಟಿರ್ ಯಶಸ್ವಿಯಾದರು. ಇತಿಹಾಸದಲ್ಲೇ ಆಸ್ಕರ್ ‍ಪ್ರಶಸ್ತಿ ಪ್ರಧಾನ ಸಮಾರಂಭ ಎಂದಿಗೂ ಮಂದೂಡಲ್ಪಟ್ಟರಿಲಿಲ್ಲ.

sidney-pointer-oscar

ಪೊಯಟಿರ್‍ನ ಪಾಲಕರು ಟೊಮೇಟೋ ಬೆಳೆಯುತ್ತಿದ್ದ ಕೃಷಿಕರು. ಬಹಮಸ್ ದೇಶಕ್ಕೆ ಸೇರಿದ್ದರೂ ಪೊಯಟಿರ್ ಜನಿಸಿದ್ದು ಮಿಯಾಮಿಯಲ್ಲಿ. ಕಡು ಬಡತನದ ಬಾಲ್ಯವನ್ನು ಕಂಡ ಅವರು ಎರಡನೇ ಮಹಾಯುದ್ದದಲ್ಲಿ ಕೆಲಕಾಲ ಸೇನೆಯಲ್ಲಿ ಕೂಡ ಸೇವೆ ಸಲ್ಲಿಸಿದ್ದರು. ಚಿತ್ರರಂಗಕ್ಕೆ ಪ್ರವೇಶಿಸುವ ಆಸೆ ಇಟ್ಟುಕೊಂಡು ನ್ಯೂಯಾರ್ಕ ನಗರಕ್ಕೆ ಬಂದ ಅವರು ತಮ್ಮ ಕೆರೆಬಿಯನ್ ಉಚ್ಚಾರಣೆಯಿಂದ ಹಲವು ಅವಮಾನಗಳನ್ನು ಎದುರಿಸ ಬೇಕಾಯಿತು. ಮುಂದೆ ಅವರು ಗೆದ್ದಿದ್ದು ತಮ್ಮ ಉಚ್ಚಾರಣೆಯಿಂದಲೇ. ಅವರಷ್ಟು ಸೊಗಸಾಗಿ ಇಂಗ್ಲೀಷನ್ನು ಶ್ವೇತ ವರ್ಣಿಯರೂ ಕೂಡ ಮಾತಾಡಲಾರರು ಎಂಬ ಹೆಗ್ಗಳಿಕೆಯ ಮಾತುಗಳು ಜನಪ್ರಿಯತೆಗೆ ಕಾರಣವಾದವು. 1950ರಲ್ಲಿ ತೆರೆ ಕಂಡ ‘ನೂ ವೇ ಔಟ್‍’ ನಲ್ಲಿ ಸಿಡ್ನಿ ಪೊಯಟರ್ ಶ್ವೇತ ವರ್ಣಿಯರಿಗೆ ಚಿಕಿತ್ಸೆ ನೀಡುವ ವೈದ್ಯರ ಪಾತ್ರ ನಿರ್ವಹಿಸಿದ್ದರು ಮುಂದೆ ಅವರು ಶ್ವೇತ ವರ್ಣಿಯರಿಗೆ ಸೂಕ್ತ ಚಿಕಿತ್ಸೆಯನ್ನೇ ನೀಡಿದರು. ‘ದಿ ಬ್ಲಾಕ್‍ ಯಾರ್ಡ್‍ ಜಂಗಲ್‍’ (1955)ನ ಪ್ರತಿಭಟನೆಕಾರನ ಪಾತ್ರದ ಮೂಲಕ ಪೊಯಟಿರ್ ಜಗತ್ತಿನೆಲ್ಲೆಡೆ ಮನೆಮಾತಾದರು. ಡಿಫಿಯಟ್ ಒನ್ಸ್‍(1960) ಲಿಲ್ಲಿಸ್ ಆಫ್‍ ದಿ ಫೀಲ್ಡ್‍’ (1965), ಗೆಸ್ ಹೂ ಇಸ್ ಕಮಿಂಗ್‍ ಟು ಡಿನ್ನರ್(1967) ದಿಗ್ವಿಜಯವನ್ನೇ ಸಾಧಿಸಿದವು. ಬೇರೆ ಹಾಲಿವುಡ್ ನಟರಂತೆ ಅವರು ಲೈಂಗಿಕವಾಗಿ ಉದ್ರೇಕಕಾರಿ ಎನ್ನಿಸ ಬಲ್ಲ ಪಾತ್ರಗಳನ್ನು ಮಾಡಲಿಲ್ಲ, ಅತಿಮಾನವತೆಯ ಸಾಹಸಮಯ ಪಾತ್ರಗಳನ್ನು ನಿರ್ವಹಿಸಲಿಲ್ಲ. ಶ್ವೇತವರ್ಣಿಯರೂ ಬೆರಗಾಗುವಂತೆ ಗಂಭೀರ ಉಡುಪುಗಳನ್ನು ಧರಿಸಿ, ಸ್ಪಷ್ಟ ಉಚ್ಚಾರಣೆಯೊಂದಿಗೆ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಪಾತ್ರಗಳಲ್ಲಿ ಅವರು ಸಹಜವಾಗಿ ಅಭಿನಯಿಸುತ್ತಾ ಬಂದರು. ಚಿತ್ರರಂಗದಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿದ ಕಾರಣಕ್ಕೆ ಅವರನ್ನು ‘ಬ್ಲ್ಯಾಕ್ ಸೈಂಟ್’ ಎಂದೂ ಕೂಡ ಇತಿಹಾಸಕಾರರು ಕರೆದಿದ್ದಾರೆ. ಜನಾಂಗೀಯ ಸಂಘರ್ಷಕ್ಕೆ ಸವಾಲಾಗಿ ನಿಂತ ಅವರು ಬ್ಲಾಕಿಗಳ ಆತ್ಮವಿಶ್ವಾಸವನ್ನು ಹಿಗ್ಗಿಸಿದರು. ‘ದಿ ಪ್ರೆಷರ್ ಪಾಯಿಂಟ್‍ (1967) ನಲ್ಲಿನ ಅವರ ಅಭಿನಯ ಅಮೆರಿಕಾದ ಬ್ಲಾಕಿಗಳ ಪಾಲಿಗೆ ಅವಿಸ್ಮರಣೀಯ ಎನ್ನಿಸಿಕೊಂಡಿತು. ಅಂಕಲ್ ಟಾಮ್‍, ಮಾಟ್ರಿನಾ ಲೂಥರ್ ಕಿಂಗ್, ಅಬ್ರಹಾಂ ಲಿಂಕನ್ ಪಾತ್ರಗಳನ್ನು ಜೀವಂತಗೊಳಿಸಿದ ಹಾಗೆ ಒಥೆಲೋ, ಹ್ಯಾಮ್ಲೆಟ್ ಪಾತ್ರಗಳಿಗೂ ಅವರು ಜೀವ ತುಂಬಿದ್ದರು.

1960ರ ದಶಕದಲ್ಲಿ ಹಾಲಿವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನಿಸಿಕೊಂಡಿದ್ದ ಅವರು ‘ಟು ಸರ್ ವಿತ್ ಲವ್‍’ ಚಿತ್ರದಲ್ಲಿ ಸಂಭಾವನೆ ಬದಲು ಲಾಭದಲ್ಲಿ ಪಾಲು ಎನ್ನುವ ಸೂತ್ರವನ್ನು ಮುಂದಿಟ್ಟರು. ಇದು ಹಾಲಿವುಡ್‍ನ ಲೆಕ್ಕಾಚಾರವನ್ನೇ ಬದಲಾಯಿಸಿ ಬಿಟ್ಟಿತು. ‘ಸ್ಟಿರ್ ಕ್ರೇಜಿ’ (1980) ಚಿತ್ರದ ಮೂಲಕ ನಿರ್ದೇಶಕರೂ ಆದ ಸಿಡ್ನಿ ಪೊಯಟಿಸ್ ಅಲ್ಲಿಯೂ ತಮ್ಮ ಛಾಪನ್ನು ಮೂಡಿಸಿದರು. ಅವರು ನಿರ್ದೇಶಿಸಿದ ‘ಗೋಸ್ಟ್‍ ಡ್ಯಾಡ್” (1990) ಅಮೆರಿಕದ ಕಪ್ಪು ವರ್ಣಿಯರು ಎದುರಿಸುವ ಲೈಂಗಿಕ ಕಿರುಕಳವನ್ನು ಸಮರ್ಥವಾಗಿ ಬಿಂಬಿಸಿತ್ತು. ಸಾಮಾಜಿಕ ಹೋರಾಟಗಳಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡ ಪೊಯಟಿರ್ ಉತ್ತಮ ಬರಹಗಾರರೂ ಕೂಡ. ಜಪಾನ್ ದೇಶದಲ್ಲಿ ಬಹಮಿನ್ ರಾಯಭಾರಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದ ಅವರಿಗೆ ಹಾಲಿವುಡ್ 2009ರಲ್ಲಿ ಜೀವಮಾನ ಸಾಧನೆಗಾಗಿ ತನ್ನ ಅತ್ಯುಚ್ಚ ಗೌರವವನ್ನು ನೀಡಿತ್ತು. ಇತ್ತೀಚೆಗೆ ಬ್ರಿಟಿಷ್ ಫಿಲಂ ಅಕಾಡಮಿ ತನ್ನ ಜೀವಮಾನದ ಸಾಧನೆಗಾಗಿ ಗೌರವವನ್ನು ನೀಡಿದೆ.

guess-whos-coming-for-the-dinner

ಅಮೆರಿಕಾದ ಬೀದಿಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಮತ್ತೆ ಜನಾಂಗೀಯ ಹಿಂಸಾಚಾರಗಳು ನಡೆಯುತ್ತಿವೆ, ಎಂಟು ವರ್ಷದ ಅಧ್ಯಕ್ಷೀಯ ಪಯಣದ ನಂತರ ಕಪ್ಪು ವರ್ಣದ ಒಬಾಮಾ ಶ್ವೇತ ಭವನಕ್ಕೆ ವಿದಾಯ ಹೇಳಿದ್ದಾರೆ. ಟ್ರಂಪ್ ಆಳ್ವಿಕೆ ಅನುಮಾನದ ನೆರಳಿನಲ್ಲಿಯೇ ಆರಂಭವಾಗಿದೆ. ಇನ್ನೊಂದು ಕಡೆ ಕಳೆದ ಎರಡು ವರ್ಷಗಳಿಂದಲೂ ಆಸ್ಕರ್ ಪ್ರಶಸ್ತಿಗಳಿಂದ ಬ್ಲಾಕಿಗಳು ವಂಚಿತರಾಗಿದ್ದಾರೆ. ಆಯ್ಕೆ ಸಮಿತಿಯಲ್ಲಿ ಜನಾಂಗೀಯ ಪಕ್ಷಪಾತವಿದೆ ಎಂಬ ಅನುಮಾನ ದಟ್ಟವಾಗುತ್ತಿದೆ. ಹಾಲಿವುಡ್‍ನಲ್ಲಿ ಬ್ಲಾಕಿಯೊಬ್ಬರು ನಾಯಕರು ಆಗಲು ಸಾಧ್ಯವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ತೊಂಬತ್ತರ ಹರಯದಲ್ಲೂ ಸಿಡ್ನಿ ಪೊಯಟರ್ ಅವರೇ ಈ ಸಮಸ್ಯೆಯ ವಿರುದ್ದದ ಹೋರಾಟಕ್ಕೆ ನಾಯಕರು. ಹಾಲಿವುಡ್‍ನಂತಹ ಅಪ್ಪಟ ಮನೋರಂಜನಾ ಮಾಧ್ಯಮದಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿದ ಕಾರಣಕ್ಕಾಗಿ, ಜನಾಂಗೀಯ ಹಿಂಸೆಯಿಂದ ತತ್ತರಿಸಿದ್ದ ಅಮೆರಿಕಾವನ್ನು ತಮ್ಮ ಸಿನಿಮಾಗಳಿಂದ ಬೆಸೆದಿದ್ದಕ್ಕಾಗಿ ಸಿಡ್ನಿ ಪೊಯಟರ್ ಸದಾ ಮುಖ್ಯರಾಗುತ್ತಾರೆ. ಸಿನಿಮಾ ಏನನ್ನು ಸಾಧಿಸಬಲ್ಲದು ಎನ್ನುವ ಸರ್ವಕಾಲೀನ ಪ್ರಶ್ನೆಗೆ ಅವರು ಜೀವಂತ ಉತ್ತರ.

Leave a Reply