ಬರಾಕ್ ಒಬಾಮ ಹೆಸರಿನ ಮೀನು-ಹೇನು… ಡೊನಾಲ್ಡ್ ಟ್ರಂಪ್ ಹೆಸರಿನ ಪತಂಗ… ವಿಜ್ಞಾನಕ್ಕೇಕೆ ರಾಜಕೀಯದ ಸಂಗ?

author-ananthramuನಿನ್ನೆ ತಾನೇ ಅಮೆರಿಕದ 44ನೇ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮ ವೈಟ್ ಹೌಸ್ ನಿಂದ ನಿರ್ಗಮಿಸಿದ್ದಾರೆ. ಡೊನಾಲ್ಡ್ ಟ್ರಂಪ್, 45ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಮೆರಿಕ ಇಬ್ಬರ ನಡೆಯನ್ನೂ ಸೂಕ್ಷ್ಮವಾಗಿ ಗಮನಿಸಿ `ಅಭಿಪ್ರಾಯದ ತಕ್ಕಡಿಯಲ್ಲಿ’ ತೂಗಿ ನೋಡಿದೆ. ಅವರ ರಾಜಕೀಯ ಸಾಧನೆಗಳೇನೇ ಇರಲಿ, ಬದಲಾಗುತ್ತಿರುವ ಹವಾಗುಣದ ಬಗ್ಗೆ ತಮ್ಮ ಅಧಿಕಾರಾವಧಿಯ ಉದ್ದಕ್ಕೂ ಒಬಾಮ ಆತಂಕ ವ್ಯಕ್ತಪಡಿಸುತ್ತಲೇ ಬಂದರು. ಅದು ಜಾಗತಿಕ ಸಮಸ್ಯೆ ಎಂದು ಒಪ್ಪಿದ್ದರು- ಬಿಂಬಿಸಿದ್ದರು. ಇದಕ್ಕೆ ವಿರುದ್ಧವೆಂಬಂತೆ ಡೊನಾಲ್ಡ್ ಟ್ರಂಪ್ `ಇದೆಲ್ಲ ವಿಜ್ಞಾನಿಗಳ ಬುರುಡೆ’ ಎಂದು ಹೇಳುತ್ತಲೇ, ಅಧಿಕಾರಕ್ಕೆ ಬರುವ ಮುನ್ನವೇ ತೈಲೋತ್ಪಾದಕರಿಗೆ ಅಭಯ ಕೊಟ್ಟರು.

ಬರಾಕ್ ಒಬಾಮ ಅವರ ಆಸ್ತಿಯ ಬಗ್ಗೆಯಾಗಲಿ, ನಿಜವಾಗಲೂ `ಬಿಸಿನೆಸ್ ಮನ್’ ಆಗಿರುವ ಟ್ರಂಪ್ ಆಸ್ತಿಯ ಬಗ್ಗೆಯಾಗಲಿ ವಿಜ್ಞಾನಿಗಳಿಗೆ ಸಂಬಂಧವಿಲ್ಲ. ಅವರ ಅಧ್ಯಯನ ಕ್ಷೇತ್ರವೂ ಅದಲ್ಲ. ಆದರೆ ವೈಟ್ ಹೌಸ್ ನಲ್ಲಿ ತೆಗೆದುಕೊಳ್ಳುವ ನಿಲುವುಗಳು ಆ ದೇಶದ ವಿಜ್ಞಾನದ ಅಭಿವೃದ್ಧಿಯ ಮೇಲೆ ಬಾರಿ ಪರಿಣಾಮಬೀರುತ್ತವೆ. ಅನೇಕ ವೇಳೆ ಜಗತ್ತಿನ ಆರ್ಥಿಕ ಕ್ಷೇತ್ರಗಳ ಮೇಲೂ ಅದರ ಛಾಯೆ ಇರುತ್ತದೆ. ವಿಶೇಷವಾಗಿ ಜೀವಿ ಸಂರಕ್ಷಣೆಯ ಪ್ರಸ್ತಾಪ ಬಂದಾಗ ಸರ್ಕಾರದ ನಿರ್ಧಾರ, ಅದರ ಅಳಿವು ಉಳಿವನ್ನು ನಿರ್ಧರಿಸುತ್ತದೆ.

ವಿಜ್ಞಾನಿಗಳಲ್ಲೊಂದು ಲಿಖಿತ ಸೂತ್ರವೇ ಇದೆ. ಯಾವುದೇ ಒಂದು ಜಾತಿಯ ಪಶುಪಕ್ಷಿ, ಗಿಡಮರ, ಕ್ರಿಮಿಕೀಟವಿರಲಿ ಅವಕ್ಕೆ ಹೆಸರಿಡುವ ಸಂಪ್ರದಾಯ. ಸ್ವೀಡನ್ನಿನ ಕಾರ್ಲ್ ಲಿನೆಯಸ್ 1735ರಲ್ಲಿ ಇದನ್ನು ಪ್ರಾರಂಭಿಸಿದ. ದ್ವಿನಾಮಕರಣ ಪದ್ಧತಿಯೆಂದೇ ಇದು ಖ್ಯಾತವಾಯಿತು. ಇದರಿಂದಾಗಿ ಸ್ಥಳೀಯ ಹೆಸರುಗಳನ್ನಿಟ್ಟು ಅದರಿಂದಾಗುತ್ತಿದ್ದ ಗೊಂದಲ ನಿವಾರಣೆಯಾಯಿತು. ಉದಾ: ನಮ್ಮ ಹುಣಸೇ ಮರವನ್ನು ನಮ್ಮ ದೇಶದಲ್ಲೇ ಅವೆಷ್ಟು ಹೆಸರಿನಿಂದ ಕರೆಯುತ್ತಿದ್ದೇವೆ. `ಟ್ಯಾಮರಿಂಡಸ್ ಇಂಡಿಕಾ’ ಎನ್ನುವುದು ಇದರ ವೈಜ್ಞಾನಿಕ ಹೆಸರು. ಮೊದಲನೆಯದು ಅದರ ಜಾತಿಸೂಚಕ, ಎರಡನೆಯದು ಪ್ರಭೇದಸೂಚಕ (ಸ್ಪೀಸೀಸ್). ಜಗತ್ತಿನ ಯಾವುದೇ ಭಾಗದಲ್ಲಿ ಈ ಹೆಸರು ಕೇಳಿದೊಡನೆ ಥಟ್ಟನೆ ಭಾರತ ಮೂಲದ ಹುಣಿಸೇಮರ ಎಂಬುದನ್ನು ಯಾರು ಬೇಕಾದರೂ ಗುರುತಿಸುತ್ತಾರೆ.

ಬರಾಕ್ ಒಬಾಮ ಎರಡು ಬಾರಿ ಅಮೆರಿಕದ ಅಧ್ಯಕ್ಷರಾಗಿದ್ದರು (2008-2016). ಈ ದೀರ್ಘಾವಧಿಯಲ್ಲಿ ವಿಜ್ಞಾನ ತಂತ್ರಜ್ಞಾನ ಆ ಮೂಲಕ ಅಂತಾರಾಷ್ಟ್ರೀಯ ಸಂಬಂಧ ಬೆಸೆಯುವ ನೀತಿಗಳನ್ನು ಅನುಷ್ಠಾನಕ್ಕೆ ತಂದರು. ವಿಶೇಷವಾಗಿ ಜೀವಿವಿಜ್ಞಾನ ಅವರ ವೈಜ್ಞಾನಿಕ ಪ್ರೀತಿಯನ್ನು ಬೇರೆ ರೀತಿಯಲ್ಲೇ ಸ್ಮರಿಸುತ್ತಿದೆ. ಹೊಸದಾಗಿ ಪತ್ತೆಹಚ್ಚಿದ ಜೀವಿಗಳಿಗೆ ಅವರ ಹೆಸರನ್ನು ನೀಡಿ ಗೌರವಿಸಿದೆ. ಅಂದರೆ ಒಬಾಮ ಹೆಸರಿನಲ್ಲಿ ಕೆರೆದಿರುವ ಕ್ರಿಮಿಕೀಟ, ಪಕ್ಷಿಗಳೆಲ್ಲವೂ ಮನುಷ್ಯನಿಗೆ ಬೇಕಾದ್ದವೆಂದೇನಲ್ಲ. ಉದಾ: ಒಬಾಮ ಹೆಸರಿನಲ್ಲಿ ಒಂದು ಹೇನು ಇದೆ. ಮಿಡತೆಗಳ ತಲೆಯೊಳಗೆ ಅವುಗಳ ಬಾಳು. ವಿಶೇಷವೆಂದರೆ ಅವೆಲ್ಲವೂ ಹೆಣ್ಣೇ. ಗಂಡಿನ ಸಂಗವೇ ಬೇಡ-ಅವೇ ಹೋಳಾಗಿ ಹೊಸ ಬಾಳು ಪ್ರಾರಂಭಿಸುತ್ತವೆ. ಈ ಬಗೆಯ ಹೇನು ಕೀನ್ಯದ ಬಳಿ ಮೊದಲು ಪತ್ತೆಯಾಯಿತು. ಒಬಾಮ ಅವರ ಅಪ್ಪ, ಮಲತಾಯಿಯ ಅಜ್ಜಿಯ ಊರು ಇಲ್ಲಿಂದ ಬರೀ 19 ಕಿಲೋಮೀಟರ್ ದೂರ. ಇದನ್ನು ಪತ್ತೆಹಚ್ಚಿದ ಜೀವವಿಜ್ಞಾನಿ ಆ ಹೇನಿಗೆ `ಪ್ಯಾರಗಾರ್ಡಿಯಸ್ ಒಬಾಮೈ’ ಎಂದು ಕರೆದ. ಈ ವಿಚಾರ ಒಬಾಮ ಅವರ ಗಮನಕ್ಕೂ ಬಂತು. ಅವರದೇನೂ ತಕರಾರಿರಲಿಲ್ಲ. ರೋಮವಿರುವ, ಬೇಟೆಯನ್ನು ಗುಂಡಿಗೆ ಸೆಳೆದು ಸ್ವಾಹ ಮಾಡುವ ಒಂದು ಜೇಡದ ಹೆಸರು `ಅಪ್ಟೋಸ್ಟಿಕಸ್ ಬರಾಕ್ ಒಬಾಮೈ’. ಬಣ್ಣಬಣ್ಣದ, ಟೆನಿಸೇ ನದಿಯ ಕಡು ಶೈತ್ಯದಲ್ಲಿ ಆರಾಮವಾಗಿ ಈಜುವ ಸಣ್ಣ ಮೀನೊಂದರ ಹೆಸರು `ಎತಿಯೊಸ್ಟೋಮ ಒಬಾಮ’. ಈಗಾಗಲೇ ಭೂಮಿಯಿಂದ ಸಂಪೂರ್ಣವಾಗಿ ನಿರ್ಗಮಿಸಿರುವ ಕೀಟಾಹಾರಿ ಹಲ್ಲಿಯ ಒಂದು ಪ್ರಭೇದದ ಹೆಸರು `ಒಬಾಮಾಡಾನ್ ಗ್ರಾಸಿಲಿಸ್’. ಮಲೇಷ್ಯದ ಸಿಹಿನೀರಿನಲ್ಲಿ ವಾಸಿಸುವ ಆಮೆಯ ರಕ್ತದಲ್ಲಿ ಬಾಳುವೆ ಮಾಡುವ ಒಂದು ಪರೋಪಜೀವಿಯ ಹೆಸರು `ಬರಕ್ ಟ್ರೆಮಾ ಒಬಾಮೈ’. ಗುಬ್ಬಚ್ಚಿ ಗಾತ್ರದ, ಹೆಚ್ಚು ಕಡಿಮೆ ಅದನ್ನೇ ಹೋಲುವ ವಿಶಿಷ್ಟ ಧ್ವನಿ ಹೊರಡಿಸುವ ಅಮೆಜಾನ್ ಕಾಡಿನ ಪುಟ್ಟ ಹಕ್ಕಿಯ ಹೆಸರು `ನಿಸ್ಟಾಲಸ್ ಒಬಾಮೈ’. ಜೀವಿ ಸಂರಕ್ಷಣೆಗೆ ಒಬಾಮ ತೆಗೆದುಕೊಂಡ ನಿಲುವೇ ವಿಜ್ಞಾನಿಗಳಿಗೆ ಈ ಹೆಸರು ಕೊಡಲು ಪ್ರೇರಣೆಯಾಯಿತು. ಆಫ್ರಿಕದ ಕಾಂಗೋದಲ್ಲಿ ಈವರೆಗೂ ಯಾರ ಕಣ್ಣಿಗೂ ಕಾಣಿಸದಿದ್ದ ಮತ್ಸ್ಯ ಪ್ರಭೇದವೊಂದು ಪತ್ತೆಯಾಯಿತು. ಅದರ ಹೆಸರು `ಟೀಲಿಯೋಗ್ರಾಮ ಒಬಾಮೋರಮ್’ ಇದೊಂದಕ್ಕೇ ಏಕೆ ಬಹುವಚನ? ಆಫ್ರಿಕ ಪರಿಸರದ ಸಂರಕ್ಷಣೆಗೆ ಅನುವಾಗುವಂತಹ ವಿಜ್ಞಾನ ಶಿಕ್ಷಣಕ್ಕೆ ಮಿಷೆಲ್ ಕೂಡ ಬೆಂಬಲಿಸಿದ್ದಳಂತೆ, ಅದಕ್ಕಾಗಿ.

obama

ಕಲ್ಲಿನ ಮೇಲೆ ಬಗೆಬಗೆಯ ಶೈವಲಗಳನ್ನು ನೀವೂ ನೋಡಿರುತ್ತೀರಿ. ಸಾಮಾನ್ಯವಾಗಿ ಕಲ್ಲುಹೂವೆಂದು ಕರೆಯುವುದುಂಟು. ಕ್ಯಾಲಿಫೋರ್ನಿಯ ತೀರದಾಚೆ ಇರುವ ಸಾಂತರೋಜ ದ್ವೀಪದಲ್ಲಿ ಕಿತ್ತಳೆ ಕೆಂಪಿನ ವಿಶಿಷ್ಟ ಶೈವಲ ಪ್ರಭೇದಕ್ಕೆ ನೀಡಿರುವ ಹೆಸರು `ಕ್ಯಾಲೋಪ್ಲಾಕ್ ಒಬಾಮೆ’. `ಕುಕೇಕಿಯ’ ಎಂಬ ಸಾಗರ ರಾಷ್ಟ್ರೀಯ ಉದ್ಯಾನವನವನ್ನು ಒಬಾಮ ಆಡಳಿತ ಕಾಲದಲ್ಲಿ ಸುಮಾರು 15 ಲಕ್ಷ ಚದರ ಕಿಲೋ ಮೀಟರು ವಿಸ್ತರಿಸಲಾಯಿತು. ಈ ಕೃತಜ್ಞತೆಗಾಗಿ ಒಬಾಮ ಹೆಸರು ಹೊತ್ತಿರುವ, ಪಾಟಲ, ನೀಲಿ, ಹಳದಿ ಬಣ್ಣದ ಹವಳ ದ್ವೀಪದ ಪುಟ್ಟ ಮೀನಿನ ಹೆಸರು `ಟೊಸನೋಯಿಡಿಸ್ ಒಬಾಮ’.

ಆದರೆ ಇನ್ನೂ ಅಧಿಕಾರವಹಿಸಿಕೊಂಡು ಒಂದು ದಿನವೂ ಆಗಿಲ್ಲ, ಆಗಲೇ ಡೊನಾಲ್ಡ್ ಟ್ರಂಪ್ ಹೆಸರನ್ನು ಒಂದು ಬಗೆಯ ಪತಂಗಕ್ಕೆ (ಮಾಥ್) ಜೀವಿ ವಿಜ್ಞಾನಿಗಳು ನಾಮಕರಣ ಮಾಡಿದ್ದಾರೆ. ಅದರ ಹೆಸರು `ನಿಯೋಪಾಲ್ಪ ಡೊನಾಲ್ಡ್ ಟ್ರಂಪ್’. ಈ ಪತಂಗಗಳ ಹುರುಪೆ, ಥೇಟ್ ಡೊನಾಲ್ಡ್ ಟ್ರಂಪ್ ಅವರ ಹರಡಿರುವ ತಲೆಗೂದಲನ್ನು ನೆನಪಿಸುತ್ತದಂತೆ. ಇದನ್ನು ಯಾರು ಅವಮಾನ ಎಂದು ತೆಗೆದುಕೊಳ್ಳುವುದಿಲ್ಲ, ಡೊನಾಲ್ಡ್ ಟ್ರಂಪ್ ಕೂಡ. ಈ ಪತಂಗ ಅಮೆರಿಕದ ಕ್ಯಾಲಿಫೋರ್ನಿಯ ಹಾಗೂ ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಬೇರೆಲ್ಲೂ ಅದರ ಆವಾಸ ಇದ್ದಂತಿಲ್ಲ. ಈಗ ಅಲ್ಲಿ ಅದರ ಆವಾಸಕ್ಕೆ ಧಕ್ಕೆ ಬಂದು ಅಳಿವಿನಂಚಿಗೆ ತಲಪಿವೆ. ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಯಲ್ಲಿ ಇದನ್ನು ಸಂರಕ್ಷಿಸಬೇಕು ಎನ್ನುವ ಇರಾದೆ ವಿಜ್ಞಾನಿಗಳದ್ದು.

ನಿಮಗೆ ಸೋಜಿಗವಾಗಬಹುದು. 1933ರಲ್ಲಿ ಆಸ್ಕರ್ ಶೈಬೆಲ್ ಎಂಬ ಜರ್ಮನಿಯ ಜೀವಿವಿಜ್ಞಾನಿ ಜೀರುಂಡೆಯ ಒಂದು ಪ್ರಭೇದವನ್ನು ಮಾರಿದ. ಆಗತಾನೇ ಅಡಾಲ್ಫ್ ಹಿಟ್ಲರ್ ಜರ್ಮನಿಯ ಛಾನ್ಸೆಲ್ಲರ್ ಆಗಿ ಅಧಿಕಾರ ವಹಿಸಿಕೊಂಡಿದ್ದ. ಈ ಜೀರುಂಡೆಗೆ ಕೊಟ್ಟ ಹೆಸರು `ಅನೋಪ್ತಾಲ್ಮಸ್ ಹಿಟ್ಲೆರಿ’. ಈ ಹೆಸರನ್ನು ಅನುವಾದಿಸಿದರೆ ಕಣ್ಣಿಲ್ಲದ ಹಿಟ್ಲರ್ ಎಂದಾಗುತ್ತದೆ. ಇಂಥ ಜೀವಿಗೆ ಅವನ ಹೆಸರು ಇಟ್ಟಿದ್ದಕ್ಕೆ ಹಿಟ್ಲರ್ ಆ ವಿಜ್ಞಾನಿಯ ಕಣ್ಣನ್ನೇ ಕೀಳಬಹುದಾಗಿತ್ತು. ಆದರೆ ಒಮ್ಮೆ ಪ್ರಭೇದವೊಂದಕ್ಕೆ ವೈಜ್ಞಾನಿಕ ನಾಮಕರಣವಾಗಿದೆ ಎಂದರೆ ಅದನ್ನು ಬದಲಿಸುವಂತಿಲ್ಲ. ಆ ಕುರಿತು ವಿಜ್ಞಾನಿಗಳು ಕಟ್ಟುನಿಟ್ಟಿನ ವಿಧೇಯಕವೊಂದನ್ನು ಪಾಲಿಸುತ್ತಾರೆ. ಇದು ಹಿಟ್ಲರ್ ಗಮನಕ್ಕೂ ಬಂದಿತ್ತಂತೆ. ಆತ ಕೂಡ ತೆಪ್ಪಗಾದ.

hitler

ನಮ್ಮ ಪುರಂದರ ದಾಸರು `ಧರ್ಮವೇ ಜಯವೆಂಬ ದಿವ್ಯಮಂತ್ರ’ ಎಂಬ ಕೀರ್ತನೆಯಲ್ಲಿ `ಮೊಸಮಾಡುವವನ ಹೆಸರು ಮಗನಿಗಿಡಬೇಕು’ ಎಂದಿದ್ದಾರೆ. ಅದರ ಗೂಡಾರ್ಥವಿರುವುದು ಯಾರನ್ನೂ ದ್ವೇಷಿಸಬೇಡ ಎಂಬ ಸೂಚನೆಯಲ್ಲಿ. ಜೀವಿವಿಜ್ಞಾನದಲ್ಲಿ ಕುಚೇಷ್ಟೆಗಾಗಿಯೋ, ಯಾರಿಗೋ ಅವಮಾನಮಾಡಲೆಂದೋ ಯಾರೂ ಹೆಸರಿಡುವುದಿಲ್ಲ. ಕನ್ನಡದ ಖ್ಯಾತ ಲೇಖಕ ಬಿ.ಜಿ.ಎಲ್. ಸ್ವಾಮಿ ಅವರು ತಾವು ಪತ್ತೆಹಚ್ಚಿದ ಒಂದು ಸಸ್ಯದ ಪ್ರಭೇದವನ್ನು ಅವರ ಗುರುಗಳಾದ ಪಲಂಜಾನನ ಮಾಹೇಶ್ವರಿ ಹೆಸರಿನಲ್ಲಿ `ಆಸ್ಕರಿನಾ ಮಾಹೇಶ್ವರಿ’ ಎಂದು ಕರೆದಿದ್ದರು. ಇದು ಗುರುಸ್ಮರಣೆಗೆ ಅಷ್ಟೇ.

2 COMMENTS

Leave a Reply