ಡೊನಾಲ್ಡ್ ಟ್ರಂಪ್ ಜತೆ ನರೇಂದ್ರ ಮೋದಿ ಹೋಲಿಕೆ ಎಷ್ಟು ಸರಿ?

ಡಿಜಿಟಲ್ ಕನ್ನಡ ವಿಶೇಷ:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನಡುವೆ ಹೋಲಿಕೆಯ ಮಾತುಗಳನ್ನು ಹೆಚ್ಚಾಗಿ ಕೇಳುತ್ತಿದ್ದೇವೆ. ಈ ಹೋಲಿಕೆ ಎಷ್ಟು ಸರಿ ಎನ್ನುವುದಕ್ಕೆ ಮುಂಚೆ ಇಂಥದ್ದಕ್ಕೆ ಆಸ್ಪದ ಮಾಡಿರುವ ಅಂಶಗಳ್ಯಾವವು ಗಮನಿಸಬೇಕಾಗುತ್ತದೆ.

ಉಗ್ರವಾದ ಮತ್ತು ಆರ್ಥಿಕ ಕನಸುಗಳ ಎರಡಂಶಗಳೇ ಬಹುಮುಖ್ಯವಾಗಿ ಹೋಲಿಕೆಗೆ ಜಾಗ ನೀಡಿವೆ.

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸುವುದಕ್ಕೆ ಮುಂಚಿನ ಪ್ರಚಾರಾಂದೋಲನದಲ್ಲಿ ಬಿತ್ತಿದ್ದು ಒಳ್ಳೇದಿನಗಳ ಕನಸನ್ನು. ಇದನ್ನು ಬಡತನ ನಿವಾರಣೆ ಎಂಬ ಹಳೆಯ ಪದಗುಚ್ಛದಲ್ಲಿ ಇಡದೇ ಉದ್ಯೋಗ ನೀಡುವ, ಭಾರತದಲ್ಲೇ ಉತ್ಪಾದಿಸಿ, ಬಂಡವಾಳ ಆಹ್ವಾನಿಸಿ ಉದ್ಯೋಗ ಸೃಷ್ಟಿಸುವ ಮಾತುಗಳಲ್ಲಿ ಇಡಲಾಯಿತು. ಜಗತ್ತು ಆರ್ಥಿಕತೆಯ ಪದಗುಚ್ಛಗಳಲ್ಲೇ ಮಾತನಾಡುವಾಗ ನಾವಿನ್ನೂ ಸಿದ್ಧಾಂತಗಳ ಮಾತಾಡುತ್ತ ಕುಳಿತರೆ ಎಲ್ಲಿ ಹಿಂದೆ ಉಳಿಯುತ್ತೇವೋ ಎಂಬ ಆತಂಕವು ಯುವಜನರು ಅಪಾರ ಪ್ರಮಾಣದಲ್ಲಿ ಮೋದಿ ಬೆಂಬಲಕ್ಕೆ ನಿಲ್ಲಲ್ಲು ಕಾರಣ ಒದಗಿಸಿತು. ಅದಲ್ಲದೇ ಮೋದಿಗೆ ಹೊರೆಸಲಾಗಿದ್ದ ಹಿಂದುತ್ವದ ಇಮೇಜ್ ಮಾತ್ರವೇ ಆ ಪ್ರಮಾಣದಲ್ಲಿ ಬಹುಮತ ನೀಡುತ್ತಿರಲಿಲ್ಲ. ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಧಾರ್ಮಿಕ ಬಲಪಂಥೀಯರ ಸಾಂಪ್ರದಾಯಿಕ ಶಕ್ತಿಗೆ ಆರ್ಥಿಕ ಬಲಪಂಥೀಯರ ಬಲ ಸೇರಿಕೊಂಡಿದ್ದು ನಿರ್ಣಾಯಕವಾಯಿತು.

ಅಮೆರಿಕದಲ್ಲಿ ಟ್ರಂಪ್ ಗೆ ಒದಗಿರುವ ಬೆಂಬಲ ಇದೇ ನೆಲೆಯದ್ದು. ಅಮೆರಿಕದಲ್ಲಿ ಆತಂಕಕ್ಕೆ ಒಳಗಾಗಿದ್ದ ಮಧ್ಯಮ ವರ್ಗವನ್ನು ಅವರು ಉದ್ಯೋಗ ಸೃಷ್ಟಿ, ಆರ್ಥಿಕ ಪುನಶ್ಚೇತನಗಳ ಕನಸಿನ ಮೂಲಕ ಸೆಳೆದಿದ್ದಾರೆ. ಅಧಿಕಾರ ಸ್ವೀಕಾರದ ಭಾಷಣದಲ್ಲೂ ಅದನ್ನೇ ಮುಖ್ಯವಾಗಿ ಬಿಂಬಿಸಿದ್ದಾರೆ. ‘ಹೊಸ ಅಮೆರಿಕವನ್ನು ಅಮೆರಿಕದ ಶ್ರಮಿಕರ ಕೈಯಲ್ಲೇ ಕಟ್ಟಲಾಗುವುದು’ ಎಂಬ ವಾಕ್ಯ ಹೊಸೆದಿರುವ ಟ್ರಂಪ್, ಅಮೆರಿಕದಿಂದ ಹೊರಹೋಗುತ್ತಿರುವ ಉದ್ಯೋಗಗಳಿಗೆ ಕಡಿವಾಣ ಹಾಕಿ, ಅವನ್ನೆಲ್ಲ ದೇಶೀಯರಿಗೇ ಸಿಗುವಂತೆ ಮಾಡುವುದಾಗಿ ಪುನರುಚ್ಛರಿಸಿದ್ದಾರೆ. ಕನಿಷ್ಠ ಕೌಶಲದ ಉದ್ಯೋಗಗಳಲ್ಲಷ್ಟೇ ಈ ನೀತಿ ಪಾಲಿಸಬಹುದೆಂಬುದು ವಾಸ್ತವವಾಗಿದ್ದರೂ ಈ ವ್ಯಾಪ್ತಿಗೆ ಬರುವವರ ಸಂಖ್ಯೆ ಹೆಚ್ಚಿರುವುದರಿಂದ ಈ ಆಸೆಗೆ ಬೆಲೆ ಬಂದಿದೆ.

ಅವರ ವಿರೋಧಿಗಳು ಆರೋಪಿಸುವ ಕಟ್ಟರ್ ಧ್ವನಿಯಲ್ಲೇನೂ ಪ್ರಧಾನಿ ನರೇಂದ್ರ ಮೋದಿ ಇಸ್ಲಾಂ ತೀವ್ರವಾದದ ಬಗ್ಗೆ ಮಾತನಾಡಿಲ್ಲ. ವಾಸ್ತವದಲ್ಲಿ ಇಸ್ಲಾಂ ತೀವ್ರವಾದ ಎಂಬ ಪದಬಳಕೆಯನ್ನೇ ಅವರು ಮಾಡುತ್ತಿಲ್ಲ. ಆದರೆ ಜಾಗತಿಕ ವೇದಿಕೆಗಳಲ್ಲಿ ನಿರಂತರವಾಗಿ ಪಾಕಿಸ್ತಾನದ ವಿರುದ್ಧ ಬೇರೆ ರಾಷ್ಟ್ರಗಳನ್ನು ಸಂಘಟಿಸುತ್ತಿರುವ ರೀತಿಯಿಂದ, ಮೋದಿ ಪಾಕಿಸ್ತಾನ ಪ್ರೇರಿತ ಧರ್ಮಾಧಾರಿತ ಉಗ್ರವಾದ ತೊಡೆದುಹಾಕುವುದಕ್ಕೆ ಕಂಕಣಬದ್ಧರಾಗಿದ್ದಾರೆಂಬುದು ಸ್ಪಷ್ಟವಾಗಿದೆ.

ಇತ್ತ ಡೊನಾಲ್ಡ್ ಟ್ರಂಪ್ ಮಾತ್ರ ಉಗ್ರವಾದದ ಬಗ್ಗೆ ಮಾತನಾಡುವಾಗ ಯಾವ ಮುಲಾಜನ್ನೂ ಇರಿಸಿಕೊಂಡಿಲ್ಲ ಹಾಗೂ ಜಗತ್ತು ಎದುರಿಸುತ್ತಿರುವ ಭಯೋತ್ಪಾದನೆ ಇಸ್ಲಾಂ ತೀವ್ರವಾದದ್ದು ಎಂದು ಹೇಳುವಲ್ಲೂ ಹಿಂಜರಿದಿಲ್ಲ. ಈ ಹಿಂದಿನ ಒಬಾಮಾ ಆಡಳಿತವು ತಾನು ಭಯೋತ್ಪಾದನೆ ವಿರುದ್ಧ ಸಮರಕ್ಕೆ ನಿಂತಿರುವುದಾಗಿ ಹೇಳುತ್ತಿದ್ದಾರೂ ಸಿರಿಯಾದಲ್ಲಿ ಐಎಸ್ಐಎಸ್ ಉಗ್ರರು ಬೆಳೆದುಕೊಳ್ಳುವುದಕ್ಕೆ ಪರೋಕ್ಷವಾಗಿ ಅದೇ ಸಹಾಯ ಮಾಡಿತೆಂಬುದು ಗುಟ್ಟಾಗಿ ಉಳಿದಿಲ್ಲ. ಏಕೆಂದರೆ ಐಎಸ್ಐಎಸ್ ಅನ್ನು ಮುಖ್ಯ ಗುರಿಯಾಗಿಸುವ ಬದಲು ಅಲ್ಲಿ ಅಸಾದ್ ನನ್ನು ಕೆಳಗಿಳಿಸುವುದಕ್ಕೇ ಹೆಚ್ಚು ತಲೆ ಕೆಡಿಸಿಕೊಂಡಿತಲ್ಲದೇ, ಅಸಾದ್ ವಿರುದ್ಧ ಹೋರಾಟಕ್ಕೆ ಸಹಕರಿಸುವುದಕ್ಕೆ ಹೋಗಿ ಐಎಸ್ಐಎಸ್ ಉಗ್ರರನ್ನು ಪರೋಕ್ಷವಾಗಿ ಬಲಪಡಿಸಿತು. ಇದೀಗ ಟ್ರಂಪ್, ಐಎಸ್ಐಎಸ್ ನಂಥ ಸಂಘಟನೆಗಳೇ ಮುಖ್ಯ ಗುರಿ ಎಂಬುದನ್ನು ಮುಲಾಜಿಲ್ಲದೇ ಹೇಳುತ್ತಿದ್ದಾರಲ್ಲದೇ ಈ ಉಗ್ರವಾದವನ್ನು ಮಟ್ಟ ಹಾಕುವುದಕ್ಕೆ ಸಾಂಪ್ರದಾಯಿಕ ಎದುರಾಳಿ ರಷ್ಯಾದ ಜತೆ ಸ್ನೇಹ ಹೆಚ್ಚಿಸಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ ಅಂತ ಪ್ರಬಲವಾಗಿ ಪ್ರತಿಪಾದಿಸಿದ್ದಾರೆ. ಹಾಗೆಂದೇ ಇಸ್ಲಾಂ ಉಗ್ರವಾದಕ್ಕೆ ಹೆಚ್ಚಿನ ಬೆಲೆ ತೆತ್ತಿರುವ ಭಾರತ ಈ ವಿಷಯದಲ್ಲಿ ಬಹಳ ನಿರೀಕ್ಷೆಗಳನ್ನು ಇರಿಸಿಕೊಂಡಿದೆ.

ಇಷ್ಟಾಗಿಯೂ…

ಇಂಥ ಕೆಲ ಸ್ವಾಮ್ಯಗಳನ್ನು ಇಟ್ಟುಕೊಂಡು ಟ್ರಂಪ್ ಮತ್ತು ಮೋದಿ ಒಂದೇ ರೀತಿ ಎನ್ನುವುದು ಅವಸರದ ನಿರ್ಣಯ. ಇವರಿಬ್ಬರೂ ಬೆಳೆದು ಬಂದ ನೆಲೆಯೇ ತೀರ ವಿಭಿನ್ನ ಎಂಬುದನ್ನು ಗುರುತಿಸಲೇಬೇಕಾಗುತ್ತದೆ. ಡೊನಾಲ್ಡ್ ಟ್ರಂಪ್ ಥರದಲ್ಲಿ ನರೇಂದ್ರ ಮೋದಿ ಉದ್ಯಮಿಯಾಗಿ ಬೆಳಗಿದವರಲ್ಲ. ಆ ನಿಟ್ಟಿನಲ್ಲಿ, ತೀರ ಕಾರ್ಯಕರ್ತನ ಹಂತದಿಂದ ಬೆಳೆದುಬಂದ ನರೇಂದ್ರ ಮೋದಿ ಹೋರಾಟ ಟ್ರಂಪ್ ಅವರಿಗಿಂತ ಉತ್ಕೃಷ್ಟಮಟ್ಟದ್ದು. ತಮ್ಮ ತಮ್ಮ ದೇಶಗಳನ್ನು ಜಾಗತಿಕ ಶಕ್ತಿಯಾಗಿ ರೂಪಿಸುವ ಮಾತುಗಳ ಧಾಟಿಯಲ್ಲಿ ಟ್ರಂಪ್ ಮತ್ತು ಮೋದಿ ಬಹಳ ಹೋಲುತ್ತಾರಾದರೂ, ಟ್ರಂಪ್ ಗೆ ವಿದೇಶಗಳಲ್ಲಿ ಇರುವ ಸ್ವಂತದ ಉದ್ಯಮ ಸಾಮ್ರಾಜ್ಯ ಮೋದಿಗಿಲ್ಲ. ಹೀಗಾಗಿ ಇವತ್ತು ಉತ್ಸುಕತೆಯಲ್ಲಿ ಮಾತನಾಡುವ ಡೊನಾಲ್ಡ್ ಟ್ರಂಪ್ ಅವರಿಗೆ ಕೆಲವು ಹಂತಗಳಲ್ಲಿ ಅವರ ಉದ್ಯಮ ಹಿತಾಸಕ್ತಿ ರಕ್ಷಿಸಿಕೊಳ್ಳುವುದು ಅನಿವಾರ್ಯವಾದೀತು. ನೀತಿ ನಿರೂಪಣೆಗಳನ್ನು ಅದು ಪ್ರಭಾವಿಸೀತು.

ಕುಟುಂಬ, ಹಣ ಹೀಗೆ ಕಳೆದುಕೊಳ್ಳುವ ವಿಷಯದಲ್ಲಿ ಟ್ರಂಪಿಗಿರುವ ಆತಂಕಗಳು ನರೇಂದ್ರ ಮೋದಿಯವರಿಗೆ ವೈಯಕ್ತಿಕ ನೆಲೆಯಲ್ಲಿ ಇಲ್ಲವಾಗಿರುವುದರಿಂದ ಧೈರ್ಯದ ಕ್ರಮಗಳ ಘೋಷಣೆ ಮೋದಿಗೇ ಸಾಧ್ಯ.

ತಕ್ಷಣಕ್ಕೆ ಡೊನಾಲ್ಡ್ ಟ್ರಂಪ್ ಭಾರತದ ಮಟ್ಟಿಗೆ ಒಂದು ಆಶಾಭಾವ ಹಾಗೂ ಇನ್ನೊಂದು ಆತಂಕವನ್ನು ಒಡ್ಡಿದ್ದಾರೆ. ಇಸ್ಲಾಂ ತೀವ್ರವಾದದ ವಿರುದ್ಧ ಹೋರಾಡುವುದಕ್ಕೆ ಅಮೆರಿಕದ ಬಲ ಇನ್ನಷ್ಟು ಸಿಗುತ್ತದೆ ಎಂಬ ಆಶಾಭಾವ ಒಂದೆಡೆ. ಟ್ರಂಪ್ ರಕ್ಷಣಾತ್ಮಕ ನೀತಿಗಳಿಂದ ಅಮೆರಿಕದಲ್ಲಿ ಭಾರತೀಯರಿಗೆ ಕಡಿತವಾಗಲಿರುವ ಉದ್ಯೋಗಾವಕಾಶಗಳ ಆತಂಕ ಇನ್ನೊಂದೆಡೆ.

ಒಬಾಮಾ ಜತೆಗೆ ಸಾಧಿಸಿದ್ದ ಆಪ್ತಭಾವವನ್ನೇ ಟ್ರಂಪ್ ಜತೆಗೂ ಬೆಳೆಸಿಕೊಳ್ಳುವಲ್ಲಿ ಮೋದಿ ಶಕ್ತರಾಗುತ್ತಾರೆಂದು ಆಶಿಸೋಣ.

Leave a Reply