ಇದು ಭಾರತದ ಬಾಕ್ಸಿಂಗ್ ವನಿತೆಯರ ದಂಗಾಲ್! ಎದುರಾಳಿ, ಕೆಟ್ಟ ಹವಾಮಾನ ಎರಡನ್ನು ಎದುರಿಸಿ 6 ಪದಕ ಬಾಚಿದರು!

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ ದಂಗಾಲ್ ಹಾಗೂ ಇತರೆ ಮಹಿಳಾ ಹಾಗೂ ಕ್ರೀಡೆ ಆಧಾರಿತ ಸಿನಿಮಾಗಳಿಂದ ಸ್ಫೂರ್ತಿ ಪಡೆಯುತ್ತಿರುವ ಸಂದರ್ಭದಲ್ಲೇ ಭಾರತದ ಮಹಿಳಾ ಬಾಕ್ಸರ್ ಗಳು ಕಠಿಣ ಪರಿಸ್ಥಿತಿಗಳ ನಡುವೆಯೂ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ 6 ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.

ಹೌದು, ಇತ್ತೀಚೆಗಷ್ಟೇ ಸರ್ಬಿಯಾದ ವರ್ಬ್ಸ್ ನಲ್ಲಿ ನಡೆದ ನೇಷನ್ಸ್ ಕಪ್ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಹಿಳಾ ಬಾಕ್ಸರ್ ಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ 1 ಚಿನ್ನ, 4 ಬೆಳ್ಳಿ, 1 ಕಂಚಿನ ಪದಕ ಸೇರಿದಂತೆ ಒಟ್ಟು 6 ಪದಕಗಳನ್ನು ಬಾಚಿಕೊಂಡಿದ್ದಾರೆ.

ಭಾರತೀಯ ಬಾಕ್ಸರ್ ಗಳು ಈ ಟೂರ್ನಿಯಲ್ಲಿ ಕೇವಲ ಅಖಾಡದಲ್ಲಿ ಎದುರಾಳಿಗಳ ವಿರುದ್ಧ ಮಾತ್ರ ಹೋರಾಡಿಲ್ಲ. ಈ ಟೂರ್ನಿಗೆ ಪ್ರಯಾಣ ಆರಂಭಿಸಿದಾಗಿನಿಂದ ಹಿಡಿದು ಟೂರ್ನಿ ಮುಕ್ತಾಯಗೊಳ್ಳುವವರೆಗೂ ವಿವಿಧ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಅವುಗಳನ್ನು ಗೆದ್ದು, ಪದಕಗಳನ್ನು ತಂದಿದ್ದಾರೆ. ಭಾರತೀಯ ಮಹಿಳಾ ಬಾಕ್ಸರ್ ಗಳು ಎದುರಿಸಿದ ಪರಿಸ್ಥಿತಿಗಳೇನು ಎಂಬುದು ಇಲ್ಲಿದೆ ನೋಡಿ.

10 ಮಹಿಳಾ ಬಾಕ್ಸರ್ ತಂಡ ಈ ಟೂರ್ನಿಗೆ ಪ್ರಯಾಣ ಬೆಳೆಸಿತು. ಯೂರೋಪಿನಲ್ಲಿ ಅತಿಯಾದ ಹಿಮ ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿಮಾನ ಹಾರಾಟ ರದ್ದಾಗಿದ್ದವು. ಈ ಹಿನ್ನೆಲೆಯಲ್ಲಿ ಭಾರತದ ಬಾಕ್ಸರ್ ಗಳ ತಂಡ ವಿಮಾನ ನಿಲ್ದಾಣದಲ್ಲೇ ಸಾಕಷ್ಟು ಸಮಯ ಕಾಯಬೇಕಾಯಿತು. ನಂತರ ಭಾರತೀಯ ಬಾಕ್ಸಿಂಗ್ ಫೆಡರೇಷನ್ ಬೇರೆ ವಿಮಾನ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ಟೂರ್ನಿ ಆರಂಭದ ಹಿಂದಿನ ರಾತ್ರಿ ಭಾರತ ತಂಡ ಕ್ರೀಡಾಕೂಟದ ಸ್ಥಳವನ್ನು ತಲುಪಿತು. ಇದರಿಂದ ಸುದೀರ್ಘ 24 ತಾಸುಗಳ ಪ್ರಯಾಣದಿಂದ ಬಾಕ್ಸರ್ ಗಳು ಹೈರಾಣಾಗಿದ್ದರು.

ಬೇರೆ ವಿಮಾನ ನಿಲ್ದಾಣದಿಂದ ವರ್ಬ್ಸ್ ತಲುಪಿದ ಭಾರತೀಯ ಬಾಕ್ಸರ್ ಗಳಿಗೆ ಮತ್ತೊಂದು ಸಮಸ್ಯೆ ಎದುರಾಗಿತ್ತು. ಅದೇನೆಂದರೆ ಆಟಗಾರ್ತಿಯರ ಬಟ್ಟೆ ಹಾಗೂ ವೈದ್ಯಕೀಯ ದಾಖಲೆಗಳಿದ್ದ ಲಗೇಜ್ ಗಳು ವಿಮಾನ ನಿಲ್ದಾಣಕ್ಕೆ ತಲುಪಿರಲಿಲ್ಲ. ಆದರೆ ಅದೃಷ್ಟವಶಾತ್ ಬಾಕ್ಸರ್ ಗಳು ತಮ್ಮ ಬಾಕ್ಸಿಂಗ್ ಗ್ಲೌಸ್ ಹಾಗೂ ಹ್ಯಾಂಡ್ ಕಿಟ್ ಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು. ಈ ಟೂರ್ನಿಗಾಗಿ ಸುದೀರ್ಘ 25 ದಿನಗಳ ಕಾಲ ನಿರಂತರವಾಗಿ ಅಭ್ಯಾಸ ಮಾಡಿದ್ದ ಭಾರತೀಯ ಬಾಕ್ಸರ್ ಗಳು ಪ್ರಯಾಣದ ನಂತರ ವಿಶ್ರಾಂತಿ ಪಡೆಯಲು ಅವಕಾಶ ಸಿಗಲಿಲ್ಲ.

ವೈದ್ಯಕೀಯ ದಾಖಲೆಗಳಿಲ್ಲದೇ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲದಿರುವ ಹಿನ್ನೆಲೆಯಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಟೂರ್ನಿಯ ಆಯೋಜಕರಿಗೆ ಮನವರಿಕೆ ಮಾಡಿದ ನಂತರ ಭಾರತೀಯ ಬಾಕ್ಸರ್ ಗಳಿಗೆ ಸ್ಪರ್ಧೆಯಲ್ಲಿ ಆಡುವ ಅವಕಾಶ ಲಭಿಸಿತು. ಇನ್ನು ಕಳೆದ ವರ್ಷ ವಿಶ್ವ ಚಾಂಪಿಯನ್ ಶಿಪ್ ನಂತರ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಮಹಿಳೆಯ ಆಟದ ಶೈಲಿಯಲ್ಲಿ ಬದಲಾವಣೆ ಮಾಡಿತ್ತು. ಈ ಮುನ್ನ ಇದ್ದ ಎರಡು ನಿಮಿಷಗಳ ನಾಲ್ಕು ಸುತ್ತಿನ ಮಾದರಿಯನ್ನು ಮೂರು ನಿಮಿಷಗಳ ಮೂರು ಸುತ್ತಿಗೆ ಬದಲಾಯಿಸಿತ್ತು.

ಈ ಹೊಸ ಮಾದರಿಯಲ್ಲಿ ಭಾರತೀಯ ಮಹಿಳಾ ಬಾಕ್ಸರ್ ಗಳು ಭಾಗವಹಿಸುತ್ತಿರುವ ಮೊದಲ ಸ್ಪರ್ಧೆ ಇದಾಗಿತ್ತು. ಸುದೀರ್ಘ ಪ್ರಯಾಣದ ನಂತರ ವಿಶ್ರಾಂತಿ ಇಲ್ಲದೆ ಬಳಲಿದ್ದ ಭಾರತೀಯ ಬಾಕ್ಸರ್ ಗಳು ಟೂರ್ನಿಯಲ್ಲಿ ಬಲಿಷ್ಠ ಸ್ಪರ್ಧಿಗಳ ಜತೆ ಸೆಣಸಿದರು. ಇನ್ನು ಅಂತಿಮ ಸುತ್ತಿನಲ್ಲಿ ಕಜಕಸ್ಥಾನ, ರಷ್ಯಾದ ಸ್ಪರ್ಧಿಗಳ ವಿರುದ್ಧ ಕೂದಲೆಳೆಯ ಅಂತರದಲ್ಲಿ ಸೋತು ಚಿನ್ನದ ಪದಕ ವಂಚಿತರಾದರು.

ಈ ಟೂರ್ನಿಯಲ್ಲಿ ತಂಡಗಳ ಪದಕ ಪಟ್ಟಿಯಲ್ಲಿ ಕಜಕಸ್ತಾನ ಹಾಗೂ ರಷ್ಯಾದ ನಂತರ ಭಾರತ ಮೂರನೇ ಸ್ಥಾನ ಪಡೆದುಕೊಂಡಿತು.

ಈ ಟೂರ್ನಿಯಲ್ಲಿ ಹರ್ಯಾಣದ ಬಾಕ್ಸರ್ ನೀರಜಾ (51 ಕೆ.ಜಿ ವಿಭಾಗ) ತಮ್ಮ ಮೊದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲೇ ಚಿನ್ನದ ಪದಕ ಗೆದ್ದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಉಳಿದಂತೆ ಸರ್ಜುಬಾಲದೇವಿ (48 ಕೆ.ಜಿ), ಪ್ರಯಾಂಕ ಚೌಧರಿ (60 ಕೆ.ಜಿ), ಪೂಜಾ (69 ಕೆ.ಜಿ) ಮತ್ತು ಸೀಮಾ ಪುನಿಯಾ ಬೆಳ್ಳಿ ಪದಕ ಪಡೆದರು. ಇನ್ನು ಹಿರಿಯ ಆಟಗಾರ್ತಿ ಕವಿತಾ ಗೊಯತ್ (75 ಕೆ.ಜಿ) ಕಂಚಿನ ಪದಕ ಪಡೆದರು.

Leave a Reply