ಉದ್ಯೋಗದ ದೌಡಿನಲ್ಲಿ ದೇಹ ಸುಸ್ಥಿತಿಯಲ್ಲಿರೋರೆ ನುಜ್ಜುಗುಜ್ಜು, ಉಳಿದವರದ್ದೇನು ಕತೆ? ಇಲ್ಲಿದೆ ಶಾಂತಿಯ ಉತ್ತರ

ಡಿಜಿಟಲ್ ಕನ್ನಡ ಟೀಮ್:

ಸಾಧನೆಗೆ ವಿಕಲಾಂಗತೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈಗಾಗಲೇ ನಮ್ಮ ಮುಂದೆ ಹಲವಾರು ಉದಾಹರಣೆಗಳಿವೆ. ವಿಕಲಚೇತನರಿಗೆ ಅಗತ್ಯ ತರಬೇತಿ ನೀಡಿದರೆ ಅವರೂ ಸಾಮಾನ್ಯರಂತೆ ಯಾರ ಹಂಗೂ ಇಲ್ಲದೆ ಸ್ವಾವಲಂಬಿಯಾಗಿ ಜೀವಿಸಬಲ್ಲರು ಎಂಬುದನ್ನು ಸಾಬೀತುಪಡಿಸಿದೆ ಬೆಂಗಳೂರಿನ ‘ಎನ್ಎಬಲ್ ಇಂಡಿಯಾ’ ಎಂಬ ಸಂಸ್ಥೆ. ಆರ್ಥಿಕತೆ, ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯ ವೃದ್ಧಿಯಂತಹ ವಿಷಯಗಳು ಹೆಚ್ಚು ಚರ್ಚೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಈ ಎನ್ಎಬಲ್ ಇಂಡಿಯಾದ ಸಾಧನೆಯ ಹಾದಿ ಈ ವಾರಾಂತ್ಯದ ನಿಮ್ಮ ಸ್ಫೂರ್ತಿದಾಯಕ ಓದಿಗೆ.

ವಿಕಲಚೇತನರು ತಮ್ಮ ಕಾಲ ಮೇಲೆ ನಿಂತು ಸಮಾಜದಲ್ಲಿ ಯಾರ ಮೇಲೂ ಅವಲಂಬಿತರಾಗದೇ ಸ್ವಾವಲಂಬಿಗಳಾಗುವಂತೆ ಮಾಡಲು ಎನ್ಎಬಲ್ ಇಂಡಿಯಾ ಶ್ರಮಿಸುತ್ತಿದೆ. 1999 ರಲ್ಲಿ ಶಾಂತಿ ರಾಘವನ್ ಹಾಗೂ ದೀಪೇಶ್ ಸುತಾರಿಯಾ ದಂಪತಿ ಸ್ಥಾಪಿಸಿದ ಈ ಸಂಸ್ಥೆ ಇಂದು ಸಾವಿರಾರು ವಿಕಲಚೇತನರು ತಮ್ಮ ಕಾಲಿನ ಮೇಲೆ ತಾವು ನಿಲ್ಲುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ವಿಕಲಚೇತನರು ಇತರರಂತೆ ಕೆಲಸ ಮಾಡುವ ಸಾಮರ್ಥ್ಯ, ಕೌಶಲ್ಯಗಳನ್ನು ಹೊಂದಿದ್ದಾರೆ. ಅವರಿಗೆ ಆ ಕೆಲಸ ಮಾಡಲು ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೂಕ್ತ ಅವಕಾಶ ನೀಡಬೇಕು ಎಂಬ ಉದ್ದೇಶದೊಂದಿಗೆ ಈ ಸಂಸ್ಥೆ ಕಳೆದ 18 ವರ್ಷಗಳಿಂದ ಶ್ರಮಿಸುತ್ತಿದೆ.

ಸುದೀರ್ಘ ವರ್ಷಗಳ ಹಾದಿಯಲ್ಲಿ ಈ ಎನ್ಎಬಲ್ ಸಂಸ್ಥೆ ಮಾಡಿರುವ ಸಾಧನೆ ಏನು ಎಂಬುದನ್ನು ನೋಡುವುದಾದರೆ, ಈವರೆಗೂ ಸಂಸ್ಥೆಯಿಂದ 1,32,076 ವಿಕಲಚೇತನರು ಲಾಭ ಪಡೆದು ತಮ್ಮಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಕೊಂಡಿದ್ದಾರೆ. 27 ಕ್ಷೇತ್ರದ 600 ಕಂಪನಿಗಳು ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಶೇ48 ರಷ್ಟು ವಿಕಲಚೇತನರಿಗೆ ಉದ್ಯೋಗವನ್ನು ನೀಡಿದೆ. ಈ ಉದ್ಯೋಗ ಪಡೆದವರು ಸಾಮಾನ್ಯರಂತೆಯೇ ಕೆಲಸ ಮಾಡಿ ಪ್ರಶಂಸೆಗೂ ಪಾತ್ರರಾಗಿದ್ದಾರೆ. ಉಳಿದ ವಿಕಲಚೇತನರು ತಮ್ಮ ಪ್ರಯತ್ನದಲ್ಲೇ ಬೇರೆ ಕಡೆಗಳಲ್ಲಿ ಉದ್ಯೋಗ ಪಡೆದಿದ್ದಾರೆ.

ಸಮಾಜದಲ್ಲಿ ಸಕರಾತ್ಮಕ ಬದಲಾವಣೆಗೆ ಕಾರಣವಾಗಿರುವ ಈ ಎನ್ಎಬಲ್ ಸಂಸ್ಥೆಯ ಸ್ಥಾಪನೆ ಹಾಗೂ ಅದು ಬೆಳದು ಬಂದ ಹಾದಿಯೂ ಸಹ ವಿಭಿನ್ನ ಕತೆ.

ಈ ಸಂಸ್ಥೆಯ ರೂವಾರಿಯಾಗಿರುವ ಶಾಂತಿ ರಾಘವನ್ ಅವರ ಸಹೋದರ ಸಹ ವಿಕಲಾಂಗತೆಗೆ ಒಳಗಾದವರು. 15ನೇ ವಯಸ್ಸಿನಲ್ಲಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಎದುರಾದ ಪರಿಣಾಮ ದೃಷ್ಠಿ ಕಳೆದುಕೊಂಡರು. ಆತನಲ್ಲಿ ಸಾಮರ್ಥ್ಯವಿದೆ ಆದರೆ, ಎದುರಾಗುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಆತ ಪರಿಹಾರ ಕಂಡುಕೊಂಡರೆ ಸ್ವಾವಲಂಬಿಯಾಗಿ ಬದುಕಬಲ್ಲ ಎಂಬುದನ್ನು ಅರಿತ ಅಕ್ಕ ಶಾಂತಿ ರಾಘವನ್, ವಿದ್ಯಾಭ್ಯಾಸ ಮುಂದುವರಿಸಲು ಅಗತ್ಯವಾಗಿದ್ದ ಹೊಸ ತಂತ್ರಜ್ಞಾನಗಳ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು. ನಂತರ ಆತ ಎಂಬಿಎ ಪದವಿಯಲ್ಲಿ ಮೊದಲ ಸ್ಥಾನ ಪಡೆದು ಗಮನ ಸೆಳೆದ. ವಿದ್ಯಾಭ್ಯಾಸದ ನಂತರ ಉದ್ಯೋಗ ಹುಡುಕಾಟ ಆತನಿಗೆ ದೊಡ್ಡ ಸವಾಲಾಗಿತ್ತು. ಸಾಮಾನ್ಯರಿಗಿರುವಷ್ಟೇ ಪ್ರತಿಭೆ ಇದ್ದರು ದೃಷ್ಟಿಯ ಸಮಸ್ಯೆಯಿಂದಾಗಿ ಆತನಿಗೆ ಕೆಲಸ ಸಿಗುವುದು ಕಷ್ಟವಾಯಿತು. ಈ ಹಂತದಲ್ಲಿ ಆತ ತನ್ನ ಸಾಮರ್ಥ್ಯದ ಮೇಲೆಯೇ ಕೆಲಸ ಪಡೆಯಲಿ ಎಂಬ ಕಾರಣಕ್ಕೆ ಕುಟುಂಬ ಸದಸ್ಯರು ಸಹಾಯ ನೀಡಲಿಲ್ಲ. ಸುದೀರ್ಘ 70 ಪ್ರಯತ್ನಗಳ ನಂತರ ಆತ ತನ್ನ ಶಕ್ತಿಯಿಂದಲೇ ಕೆಲಸ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ.

ಅಮೆರಿಕದಲ್ಲಿ ಕೆಲಸ ಮಾಡುತ್ತಾ ಸಹೋದರನ ಬೆಳವಣಿಗೆಗೆ ನೆರವಾದ ಶಾಂತಿ ರಾಘವನ್, ನಂತರ ಭಾರತದಲ್ಲಿನ ಇತರೆ ವಿಕಲಚೇತನರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಬೆಂಗಳೂರಿಗೆ ಮರಳಿ ಎನ್ಎಬಲ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಿಸಿದರು. ಆರಂಭದಲ್ಲಿ ತಮ್ಮ ಕೆಲಸದ ಜತೆಗೆ ಈ ಸಂಸ್ಥೆಯನ್ನು ನಡೆಸಲಾಗುತ್ತಿತ್ತು. 2004ರಲ್ಲಿ ಶಾಂತಿ ರಾಘವನ್ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ಈ ಸಂಸ್ಥೆಗೆ ತಮ್ಮ ಸಮಯ ಮೀಸಲಿಟ್ಟರು. ಕೆಲವು ವರ್ಷಗಳ ನಂತರ ಆಕೆಯ ಪತಿ ದೀಪೇಶ ಸಹ ಈ ಸಂಸ್ಥೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

‘ಸಾಮಾನ್ಯ ಜನರು ಕತ್ತಲಲ್ಲಿ ಕಾಣದಿದ್ದರೆ ಹೇಗೆ ಟಾರ್ಚ್ ಅಥವಾ ಬೆಳಕಿನ ಮೂಲಕ ತಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಡು ತಮ್ಮ ಕೆಲಸ ಮುಂದುವರಿಸುತ್ತಾರೋ, ಅದೇ ರೀತಿ ವಿಕಲಚೇತನರಿಗೂ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಸಿಗಬೇಕು…’ ಎಂಬುದು ಶಾಂತಿ ಅವರ ವಾದ.

ಈ ಸಂಸ್ಥೆಯಿಂದ ತರಬೇತಿ ಪಡೆದ ವಿಕಲಚೇತನರನ್ನು ಕೆಲವು ಕಂಪನಿಗಳು ಆಯ್ಕೆ ಮಾಡಿಕೊಂಡವು. ಹೀಗೆ ಆಯ್ಕೆಯಾದ ಅಭ್ಯರ್ಥಿಗಳು ಸಾಮಾನ್ಯರಿಗಿಂತ ಪರಿಣಾಮಕಾರಿಯಾಗಿ ಕೆಲಸ ಮಾಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಇವರ ಕಾರ್ಯ ನೋಡಿ ಸಹ ಉದ್ಯೋಗಿಗಳಲ್ಲೂ ಸಕಾರಾತ್ಮಕ ಬದಲಾವಣೆ ಕಂಡುಬಂದ ಉದಾಹರಣೆಗಳು ಸಾಕಷ್ಟಿವೆ.

ಕೆಲವು ವರ್ಷಗಳ ನಂತರ ಈ ಕಂಪನಿಗಳು ಹೆಚ್ಚು ಪ್ರಮಾಣದಲ್ಲಿ ಈ ಸಂಸ್ಥೆಯಲ್ಲಿ ತರಬೇತಿ ಪಡೆದವರನ್ನು ಆಯ್ಕೆ ಮಾಡಿಕೊಳ್ಳಲು ಮುಂದಾದರು. ಆರಂಭದಲ್ಲಿ ಸಣ್ಣ ಪ್ರಮಾಣದ ದೇಣಿಗೆ ಮೂಲಕ ನಡೆಯುತ್ತಿದ್ದ ಈ ಸಂಸ್ಥೆ, ಎನ್ಎಬಲ್ ಇಂಡಿಯಾ ಸೊಲ್ಯೂಷನ್ಸ್ ಪ್ರೈ.ಲಿ ಆರಂಭಿಸಿ ಆ ಮೂಲಕ ವಿವಿಧ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡು ವಿಕಲಚೇತನರಿಗೆ ತರಬೇತಿ ನೀಡಿ ಆ ಕಂಪನಿಗಳಿಗೆ ಉದ್ಯೋಗಿಗಳನ್ನು ನೀಡಿತು. ಅದಕ್ಕೆ ಪ್ರತಿಯಾಗಿ ಸಂಸ್ಥೆ ಕಂಪನಿಗಳಿಂದ ಶುಲ್ಕ ಪಡೆದು ಆರ್ಥಿಕವಾಗಿಯೂ ಸ್ವಾವಲಂಬನೆಯಾಗುತ್ತಾ ಸಾಗಿತು.

ಹೀಗೆ ವಿಕಲಾಂಗತೆಯನ್ನು ಸವಾಲೆಂದು ಪರಿಗಣಿಸದೆ ಅಅವರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದು ಸಮಾಜದಲ್ಲಿ ಅವರನ್ನು ಸಮರ್ಥರನ್ನಾಗಿ ಮಾಡುತ್ತಿರುವ ಎನ್ಎಬಲ್ ಇಂಡಿಯಾದ ಈ ಕಾರ್ಯ ನಿಜಕ್ಕೂ ಪ್ರಶಂಸನೀಯ.

Leave a Reply