‘ಈ ಜನ್ಮದಲ್ಲಿ ರಾಯಣ್ಣ ಬ್ರಿಗೆಡ್ ಒಪ್ಪಲ್ಲ’ ಅಂದ್ರು ಯಡಿಯೂರಪ್ಪ, ಮಲೇಷ್ಯಾ ಮಾಸ್ಟರ್ಸ್ ಪ್ರಶಸ್ತಿ ಗೆದ್ದ ಸೈನಾ, ರೈಲು ದುರಂತಕ್ಕೆ 36 ಬಲಿ, ಜಲ್ಲಿಕಟ್ಟು ವೇಳೆ ಇಬ್ಬರ ಮರಣ

ಬೆಂಗಳೂರಿನ ಟೌನ್ ಹಾಲ್ ನಲ್ಲಿ ಸ್ವಾಮಿ ವಿವೇಕಾನಂದ ಅವರ 154ನೇ ಜನ್ಮದಿನ ಅಂಗವಾಗಿ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಪದ್ಮಾವತಿ.

ಡಿಜಿಟಲ್ ಕನ್ನಡ ಟೀಮ್:

ಬ್ರಿಗೆಡ್ ವಿರುದ್ಧ ಯಡಿಯೂರಪ್ಪ ಕಿಡಿ

‘ಈ ಜನ್ಮದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಒಪ್ಪುವುದಿಲ್ಲ’ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನವರಿಗೆ ಸವಾಲೆಸೆದಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಸಭೆಯ ಎರಡನೇ ದಿನವಾದ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಬಿಎಸ್ ವೈ, ‘ಪಕ್ಷದ ಚಟುವಟಿಕೆಗೆ ಯಾರೇ ಧಕ್ಕೆ ತಂದರು ಅಂತಹವರ ವಿರುದ್ಧ ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ. ಬ್ರಿಗೆಡ್ ಚಟುವಟಿಕೆಗೆ ಅವಕಾಶ ನೀಡಿದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದೇ ಕಾರಣಕ್ಕೆ ನಾನು ಬ್ರಿಗೆಡ್ ಸಂಘಟನೆಗೆ ಒಪ್ಪುವುದಿಲ್ಲ. ಈ ಬಗ್ಗೆ ರಾಜ್ಯ ಉಸ್ತುವಾರಿ ಹೊತ್ತಿರುವ ಮುರಳೀಧರ ರಾವ್ ಅವರು ಈಶ್ವರಪ್ಪನವರಿಗೆ ಮನವರಿಕೆ ಮಾಡಿದ್ದಾರೆ’ ಎಂದರು.

ಇದಕ್ಕೆ ಪ್ರತಿಯಾಗಿ ಉತ್ತರ ನೀಡಿರುವ ಈಶ್ವರಪ್ಪ, ‘ಉಚ್ಛಾಟಿತ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಜನವರಿ 26ರಂದು ಕೂಡಲ ಸಂಗಮದಲ್ಲಿ ರಾಯಣ್ಣನ ಬಲಿದಾನದ ಹೆಸರಿನಲ್ಲಿ 10 ಜಿಲ್ಲೆಗಳ ದೊಡ್ಡ ಸಮಾವೇಶ ನಡೆಯಲಿದೆ. ಈ ಸಮಾರಂಭಕ್ಕೆ ವಿವಿಧ ಸಮಾಜಗಳ ಸ್ವಾಮೀಜಿ, 2 ಲಕ್ಷಕ್ಕೂ ಹೆಚ್ಚು ಹಿಂದುಳಿದ ವರ್ಗದ ಜನ ಪಾಲ್ಗೊಳ್ಳಲಿದ್ದಾರೆ’ ಎಂದು ವಿವರಣೆ ನೀಡಿದರು.

ಸೈನಾ ಮುಡಿಗೆ ಮಲೇಷ್ಯಾ ಮಾಸ್ಟರ್ಸ್

ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಲೇಷ್ಯಾ ಮಾಸ್ಟರ್ಸ್ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಮತ್ತೆ ಜಯದ ಹಾದಿಗೆ ಮರಳಿದ್ದಾರೆ. ಆ ಮೂಲಕ 7 ತಿಂಗಳ ನಂತರ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ ತಮ್ಮ ಪ್ರತಿಸ್ಪರ್ಧಿ ಥಾಯ್ಲೆಂಡಿನ ಪೊನ್ವಾರ್ವಿ ಚೊಚುವಾಂಗ್ ವಿರುದ್ಧ 22-20, 22-20 ಗೇಮ್ ಗಳ ಅಂತರದಲ್ಲಿ ಜಯಿಸಿದರು. ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಗೆದ್ದ ಬಳಿಕ ಗಾಯದ ಸಮಸ್ಯೆಗೆ ಸಿಲುಕಿದ್ದ ಸೈನಾ ನೆಹ್ವಾಲ್, ರಿಯೋ ಒಲಿಂಪಿಕ್ಸ್ ನಲ್ಲೂ ಆರಂಭಿಕ ಹಂತದಲ್ಲೇ ನಿರ್ಗಮಿಸಿದ್ದರು. ಈಗ ಚೇತರಿಸಿಕೊಂಡಿರುವ ಸೈನಾ ಮತ್ತೆ ತಮ್ಮ ಜಯದ ಲಯ ಕಂಡುಕೊಂಡಿದ್ದಾರೆ.

ರೈಲು ದುರಂತ: 36 ಸಾವು

ಜಗ್ದಲ್ ಪುರ ಮತ್ತು ಭುವನೇಶ್ವರ ನಡುವಣ ಹೀರಾಖಂಡ್ ಎಕ್ಸಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ 36 ಮಂದಿ ಸಾವನ್ನಪ್ಪಿದ ದುರ್ಘಟನೆ ಆಂಧ್ರ ಪ್ರದೇಶದ ವಿಜಿಯಾನಗರಂನಲ್ಲಿ ಸಂಭವಿಸಿದೆ. ರೈಲಿನ ಇಂಜಿನ್ ಹಾಗೂ 9 ಬೋಗಿಗಳು ಹಳಿ ತಪ್ಪಿದ ಪರಿಣಾಮ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರನ್ನು ರಾಯಘಡ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಮೃತರ ಕುಟುಂಬಕ್ಕೆ ತಲಾ ₹ 2 ಲಕ್ಷ, ಗಾಯಗೊಂಡಿರುವವರಿಗೆ ₹ 50 ಸಾವಿರ ಪರಿಹಾರ ನೀಡಲು ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಘೋಷಣೆ ಮಾಡಿದ್ದಾರೆ.

ಜಲ್ಲಿಕಟ್ಟು ಆಚರಣೆ: ಇಬ್ಬರು ಸಾವು

ಸುಗ್ರೀವಾಜ್ಞೆ ಮೂಲಕ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆ ಮಾಡಲಾಗಿದ್ದು, ಈ ಆಚರಣೆ ವೇಳೆ ಗೂಳಿ ತಿವಿತಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಮಧುರೈನ ಆಲಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಆಚರಣೆಗೆ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಚಾಲನೆ ನೀಡಲು ನಿಗದಿಯಾಗಿತ್ತು. ಆದರೆ ಈ ಜಲ್ಲಿಕಟ್ಟು ಆಚರಣೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂಬ ಬೇಡಿಕೆಯೊಂದಿಗೆ ಪ್ರತಿಭಟನೆ ಮುಂದುವರಿದ ಪರಿಣಾಮ ಜಲ್ಲಿಕಟ್ಟು ಆಚರಣೆಯನ್ನು ದಿಂಡಿಗಲ್ಲಿಗೆ ಸ್ಥಳಾಂತರಿಸಲಾಯಿತು. ಪುದುಕೊಟ್ಟಾಯಿನ ರಾಕೂಸಲ್ ಪ್ರದೇಶದಲ್ಲಿ ನಡೆದ ಜಲ್ಲಿಕಟ್ಟು ಆಚರಣೆ ವೇಳೆ ಗೂಳಿ ತಿವಿತಕ್ಕೆ ಮೋಹನ್ ಹಾಗೂ ರಾಜು ಎಂಬುವವರು ಬಲಿಯಾಗಿದ್ದು, ಮತ್ತೊಬ್ಬ ಯುವಕ ಗಂಭೀರ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಇನ್ನು ಈ ಆಚರಣೆಗೆ ಮುಂದಿನ ದಿನಗಳಲ್ಲಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಪೇಟಾ ಸಂಸ್ಥೆಯನ್ನು ನಿಷೇಧಗೊಳಿಸಬೇಕೆಂದು ಒತ್ತಾಯಿಸಿ ಚೆನ್ನೈನ ಮರಿನಾ ಬೀಚ್ ನಲ್ಲಿ ಪ್ರತಿಭಟನೆ ಮುಂದುವರಿದಿದೆ.

ಉ.ಪ್ರದಲ್ಲಿ ಕಾಂಗ್ರೆಸ್-ಎಸ್ಪಿ ಹೊಂದಾಣಿಕೆ

ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ನಡುವಣ ಹೊಂದಾಣಿಕೆಗೆ ಮತ್ತೆ ಜೀವ ಬಂದಿದೆ. ಈ ಮೊದಲು ಹೊಂದಾಣಿಕೆಯಲ್ಲಿ ಕಾಂಗ್ರೆಸ್ ಗೆ 99 ಸೀಟುಗಳನ್ನು ನೀಡಲು ಸಮಾಜವಾದಿ ಪಕ್ಷ ನಿರ್ಧರಿಸಿತ್ತು. ಆದರೆ ಇದಕ್ಕೆ ಕಾಂಗ್ರೆಸ್ ಒಪ್ಪದೆ 120 ಸೀಟುಗಳ ಬೇಡಿಕೆ ಇಟ್ಟಿತ್ತು. ಪರಿಣಾಮ ಈ ಹೊಂದಾಣಿಕೆ ನಡೆಯುವುದು ಅನುಮಾನವಾಗಿತ್ತು. ಆದರೆ ಈಗ ಸಮಾಜವಾದಿ ಪಕ್ಷ ಇನ್ನು 6 ಸೀಟುಗಳನ್ನು ನೀಡಲು ಒಪ್ಪಿದ್ದು, ಆ ಮೂಲಕ ಕಾಂಗ್ರೆಸ್ ಗೆ 105 ಸೀಟುಗಳನ್ನು ನೀಡಿದೆ. ಇದೇ ವೇಳೆ ಭಾನುವಾರ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಟೀಂ ಇಂಡಿಯಾಗೆ ಕಠಿಣ ಸವಾಲು

ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಆತಿಥೇಯ ಭಾರತಕ್ಕೆ 322 ರನ್ ಗಳ ಗುರಿ ನೀಡಿದೆ. ಟಾಸ್ ಗೆದ್ದ ಭಾರತ ಇಂಗ್ಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತು. ಆಂಗ್ಲರ ಪರ ಜೇಸನ್ ರಾಯ್ (65), ಬಿಲ್ಲಿಂಗ್ಸ್ (35), ಬೇರ್ ಸ್ಟೋ (56), ಮೊರ್ಗನ್ (43), ಬಟ್ಲರ್ (11), ಸ್ಟೋಕ್ಸ್ (ಅಜೇಯ 57), ಅಲಿ (2), ವೊಕ್ಸ್ (34) ರನ್ ಗಳಿಸಿದರು. ಭಾರತದ ಪರ ಹಾರ್ದಿಕ್ ಪಾಂಡ್ಯ 3, ಜಡೇಜಾ 2, ಬುಮ್ರಾ 1 ವಿಕೆಟ್ ಪಡೆದರು.

Leave a Reply