ವಿಶ್ವಬ್ಯಾಂಕ್, ಐಎಂಎಫ್ ಹೇಗೆ ಭಿನ್ನ? ಏನಿವುಗಳ ಕಾರ್ಯ ವೈಖರಿ

authors-rangaswamyನಿಮ್ಮ ಕಳೆದ ವಾರದ ಅಂಕಣದಲ್ಲಿ ವರ್ಲ್ಡ್ ಬ್ಯಾಂಕ್ ಮತ್ತು ಐಎಂಎಫ್ ಗಳ ಉಲ್ಲೇಖವಿದೆ. ವರ್ಲ್ಡ್ ಬ್ಯಾಂಕ್ ಮತ್ತು ಐಎಂಎಫ್ ಎರಡೂ ಬೇರೆ ಸಂಸ್ಥೆಗಳ? ಹೌದಾದರೆ ಅವುಗಳ ಕಾರ್ಯ ಹೇಗೆ ಭಿನ್ನವಾಗಿದೆ ? ತಿಳಿಸಿ. ನನ್ನದು ಅತ್ಯಂತ ಬಾಲಿಶ ಪ್ರಶ್ನೆ ಅಂತ ಅನಿಸಿದರೆ ಮಿಚಂಚೆಯಲ್ಲೇ ಉತ್ತರಿಸಿ ಅಂಕಣದಲ್ಲಿ ಬರೆಯುವುದು ಬೇಡ ಅಂತ ಕೂಡ ಬರೆದವರು ತುಮಕೂರಿನ ನಾಗರಾಜು ಅವರು.

ಮೊದಲಿಗೆ ನಿಮ್ಮ ಪ್ರಶ್ನೆ ಬಾಲಿಶ ಅಲ್ಲವೇ ಅಲ್ಲ. ವರ್ಲ್ಡ್ ಬ್ಯಾಂಕ್ ಮತ್ತು ಐಎಂಎಫ್ ಗಳ ನಡುವಿನ ವ್ಯತ್ಯಾಸ ತಿಳಿಯದೆ ಇರುವರ ಸಂಖ್ಯೆ ಜಗತ್ತಿನಲ್ಲಿ ಅತಿ ಹೆಚ್ಚು. ಕೇವಲ ಒಂದಷ್ಟು ಜನ ಮಾತ್ರ ಇವೆರೆಡು ಬೇರೆ ಸಂಸ್ಥೆಗಳು ಎನ್ನುವ ಬಗ್ಗೆ ನಿಖರ ಜ್ಞಾನ ಹೊಂದಿದ್ದಾರೆ. ಉಳಿದಂತೆ ನಾನು ನಿಮಗೆ ಒಂದು ಸಣ್ಣ ಘಟನೆ ಹೇಳುತ್ತೇನೆ. John Maynard Keynes ಇವೆರೆಡು ಸಂಸ್ಥೆಗಳ ಸ್ಥಾಪಕ ಸದಸ್ಯ, ಇಪ್ಪತ್ತನೇ ಶತಮಾನ ಕಂಡ ಅತ್ಯಂತ ಪ್ರತಿಭಾವಂತ ಆರ್ಥಿಕ ತಜ್ಞ ಐಎಂಎಫ್ ಉದ್ಘಾಟನಾ ಸಮಾರಂಭದಲ್ಲಿ ವರ್ಲ್ಡ್ ಬ್ಯಾಂಕ್ ಮತ್ತು ಐಎಂಎಫ್ ಗಳ ಹೆಸರಿನ ನಡುವೆ ಗೊಂದಲಗೊಂಡು ಫಂಡ್ ಅನ್ನು ಬ್ಯಾಂಕ್ ಎಂದು ಮತ್ತು ಬ್ಯಾಂಕ್ ಅನ್ನು ಫಂಡ್ ಎಂದು ಉಲ್ಲೇಖಿಸಿದ ನಿದರ್ಶನ ನಮ್ಮ ಮುಂದಿದೆ. ಇವುಗಳ ನಡುವಿನ ವ್ಯತ್ಯಾಸಕ್ಕಿಂತ ಸಾಮ್ಯತೆ ಹೆಚ್ಚಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.  ಹೀಗಾಗಿ ಇವೆರೆಡರ ನಡುವಿನ ವ್ಯತ್ಯಾಸ ತಿಳಿಯವದರ ಸಂಖ್ಯೆ ಅತಿ ಹೆಚ್ಚು.

ಇವುಗಳ ಪ್ರತಿಯೊಂದು ಕಾರ್ಯಗಳ ಬಗ್ಗೆ ಇಲ್ಲಿ ಬರೆಯುವುದಿಲ್ಲ ಸ್ತೂಲವಾಗಿ ಇವುಗಳ ನಡುವಿನ ವ್ಯತ್ಯಾಸ ಹೇಳಿಬಿಡುತ್ತೇನೆ.

hana classಮೊದಲಿಗೆ ವರ್ಲ್ಡ್ ಬ್ಯಾಂಕ್ ಒಂದು ಇನ್ವೆಸ್ಟ್ಮೆಂಟ್ ಬ್ಯಾಂಕ್, ಅಂದರೆ ಠೇವಣಿದಾರರಿಂದ ಹಣ ಪಡೆದು ಬೇಕಾದವರಿಗೆ ಸಾಲ ನೀಡುವುದು ಇದರ ಮುಖ್ಯ ಕೆಲಸ. ಜಗತ್ತಿನ ೧೮೦ ದೇಶಗಳು ಇದರಲ್ಲಿ ಪಾಲುದಾರರು. ಇಂಗ್ಲೆಂಡ್ ಮತ್ತು ಅಮೇರಿಕಾ ದೇಶಗಳು ಹೆಚ್ಚು ಬೇಳೆ ಬೇಯಿಸಿಕೊಳ್ಳುತ್ತವೆ ಎನ್ನುವುದು ಬೇರೆ ಮಾತು. ಯಾವ ದೇಶ ಬೇಕಾದರೂ ಇಲ್ಲಿ ಹಣ ಹೂಡಬಹದು. ಸಾಲವನ್ನ ಇತರ ದೇಶಗಳಿಗೆ ಅಥವಾ ಕಾರ್ಪೊರೇಟ್ ಸಂಸ್ಥೆಗಳಿಗೆ ಅಥವಾ ಇನ್ನ್ಯಾವುದೇ ಖಾಸಗಿ ಸಂಸ್ಥೆಗಳಿಗೆ ಅಥವಾ ವ್ಯಕ್ತಿಗೆ ಕೂಡ ನೀಡಬಹುದಾಗಿದೆ. ಇದರ ಮೂಲ ಉದ್ದೇಶ ಇತರ ಎಲ್ಲಾ ಬ್ಯಾಂಕಿನಂತೆ ಹೂಡಿಕೆದಾರರ ಹಣಕ್ಕೆ ತಕ್ಕ ಲಾಭ ತಂದುಕೊಡುವುದು. ಬಡ ಮತ್ತು ಮುಂದುವರಿಯುತ್ತಿರುವ ದೇಶಗಳು ಸಾಮಾನ್ಯವಾಗಿ ಇಲ್ಲಿಂದ ಸಾಲ ಪಡೆಯುತ್ತವೆ. ಶ್ರೀಮಂತ ದೇಶಗಳು ಇಲ್ಲಿಂದ ಸಾಲ ಪಡೆಯುವುದು ಕಡಿಮೆ.

ಐಎಂಎಫ್ ಒಂದು ಸಹಕಾರಿ ಸಂಸ್ಥೆ ಇದ್ದ ಹಾಗೆ. ಜಗತ್ತಿನ ಬಹುತೇಕ ಎಲ್ಲಾ ದೇಶಗಳು ಇದರ ಸದಸ್ಯರು ಪ್ರತಿ ದೇಶವೂ ತನ್ನ ಶಕ್ತಿಗೆ ಅನುಗುಣವಾಗಿ ಒಂದಷ್ಟು ಹಣವನ್ನ ಇಲ್ಲಿ ಮೆಂಬರ್ ಶಿಪ್ ಫೀಸ್ ಅಥವಾ ದೇಣಿಗೆ ರೂಪದಲ್ಲಿ ನೀಡುತ್ತವೆ. ಜಗತ್ತಿನ ಯಾವುದೇ ರಾಷ್ಟ್ರ ಆರ್ಥಿಕ ಸಂಕಷ್ಟದಲ್ಲಿ ಇದ್ದರೆ ಅಂತಹ ದೇಶಕ್ಕೆ ಸಹಾಯ ಮಾಡುವುದು ಇದರ ಮೂಲ ಉದ್ದೇಶ. ಅಂದರೆ ಅದು ಶ್ರೀಮಂತ ದೇಶ ಅಥವಾ ಬಡ ದೇಶ ಎನ್ನುವ ವ್ಯತ್ಯಾಸ ಇಲ್ಲಿ ಇಲ್ಲ. ತಕ್ಷಣದ ಆರ್ಥಿಕ ಸಂಕಷ್ಟಕ್ಕೆ ನೆರವಾಗುವುದು, ಜಗತ್ತಿನಲ್ಲಿ ಬಡತನ ಹೋಗಲಾಡಿಸುವುದು ಇದರ ಗುರಿ. ಅಲ್ಲದೆ ಜಗತ್ತಿನ ವಿವಿಧ ಕರೆನ್ಸಿ ನಡುವಿನ ವಿನಿಮಯ ದರ ಹೆಚ್ಚು ಏರಿಳಿತ ಕಾಣದಂತೆ ಸಮತೋಲನ ಕಾಪಾಡುವುದು ಕೂಡ ಐಎಂಎಫ್ ನ ಮುಖ್ಯ ಉದ್ದೇಶಗಳಲ್ಲಿ ಒಂದು.

ಮೇಲೆ ಹೇಳಿದಂತೆ ಎರಡೂ ಸಂಸ್ಥೆಗಳ ಉದ್ದೇಶ ಒಂದೇ. ಜಗತ್ತಿನಲ್ಲಿ ಇರುವ ಆರ್ಥಿಕ ಅಸಮತೋಲನ ಕಡಿಮೆ ಮಾಡುವುದು. ಜಗತ್ತಿನ ವಿತ್ತ ಜಗತ್ತು ಜಾರಾದಂತೆ ಕಾಪಾಡುವುದು. ಇವುಗಳ ನಡುವಿನ ಸಾಮ್ಯತೆ ಹೆಚ್ಚು, ಉದ್ದೇಶವೂ ಒಂದೇ ಆದರೆ ಕಾರ್ಯ ನಿರ್ವಹಣೆ, ಜವಾಬ್ಧಾರಿ ಬೇರೆ ಬೇರೆ ಅಷ್ಟೇ.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

Leave a Reply